ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯ ಜಯನಗರದಲ್ಲಿರುವ ಅಪೋಲೊ ಆಸ್ಪತ್ರೆಗೆ ಭೇಟಿ ನಿಡಿ ಹೆಲ್ಪ್ ಡೆಸ್ಕ್ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ಪರಿಶೀಲನೆ ನಡೆಸಲಾಗಿದ್ದು, ಆಸ್ಪತ್ರೆ ಹಾಗೂ ನಾಗರಿಕರ ನಡುವೆ ಸಮನ್ವಯ ಕೊಂಡಿಯಾಗಿ ಹೆಲ್ಪ್ ಡೆಸ್ಕ್ ಕಾರ್ಯನಿರ್ವಹಿಸಲಿದೆ ಎಂದು ಮುಖ್ಯ ಆಯುಕ್ತರು ಗೌರವ್ ಗುಪ್ತ ರವರು ತಿಳಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ಅಪೋಲೋ ಆಸ್ಪತ್ರೆ(ಜಯನಗರ)ಯಲ್ಲಿ ನಿರ್ಮಿಸಿರುವ ಹೆಲ್ಪ್ ಡೆಸ್ಕ್, ವಿಲ್ಸನ್ ಗಾರ್ಡನ್ ಹೆರಿಗೆ ಆಸ್ಪತ್ರೆಯಲ್ಲಿ ಟ್ರಾನ್ಸಿಟ್ ಆಕ್ಸಿಜನ್ ಸೆಂಟರ್ ಹಾಗೂ ಕಿದ್ವಾಯಿ ಆಸ್ಪತ್ರೆಯಲ್ಲಿ ಸ್ವಾಬ್ ಪರೀಕ್ಷೆ ಮಾಡುವ ಲ್ಯಾಬ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂಡಿಗೆ ಮುಖ್ಯ ಆಯುಕ್ತರು ರವರು ಮಾತನಾಡಿ, ನಗರದ 50 ಪ್ರಮುಖ ಆಸ್ಪತ್ರೆಗಳಲ್ಲಿ ಹೆಲ್ಪ್ ಡೆಸ್ಕ್ ತೆರಯಲಾಗುತ್ತಿದ್ದು, ಈಗಾಗಲೆ 25 ಆಸ್ಪತ್ರೆಗಳಲ್ಲಿ ಹೆಲ್ಪ್ ಡೆಸ್ಕ್ ಗಳನ್ನು ಪ್ರಾರಂಭಿಸಲಾಗಿದೆ. ಉಳಿದ ಕಡೆಯೂ ಶೀಘ್ರ ಹೆಲ್ಪ್ ಡೆಸ್ಕ್ ತೆರೆಯಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಹೆಲ್ಪ್ ಡೆಸ್ಕ್ಗಳು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದ್ದು, ನಾಗರಿಕರು/ರೋಗಿಗಳು ಆಸ್ಪತ್ರೆಗಳ ಬಳಿ ಹೋದ ವೇಳೆ ಅವರ ಸಮಸ್ಯೆಗಳು ಹಾಗೂ ಅವರಲ್ಲಿರುವ ಗೊಂದಲಗಳು ಬಗೆಹರಿಸುವ ಕಾರ್ಯ ಸಿಬ್ಬಂದಿ ಮಾಡಲಿದ್ದಾರೆ.
ಅಪೋಲೊ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ 47 ಹಾಸಿಗೆಗಳನ್ನು ನೀಡಿದ್ದು, ಪಾಲಿಕೆಯಿಂದ ಹಾಸಿಗೆ ಕಾಯ್ದಿರಿಸುವ ಪ್ರಕ್ರಿಯೆ, ಆಕ್ಸಿಜನ್ ಸಮಸ್ಯೆ ಇದೆಯೇ ಅಥವಾ ಇಲ್ಲವೇ, ಬರುವ ರೋಗಿಗಳಿಗೆ ಟ್ರಯಾಜಿಂಗ್ ಮಾಡುವುದು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ವೈದ್ಯರ ಜೊತೆ ಸಮಾಲೋಚನೆ ನಡೆಸಿದ್ದು, ಯಾವುದೇ ಸಮಸ್ಯೆ ಆಗದಂತೆ ಕ್ರಮವಹಿಸಲು ತಿಳಿಸಲಾಗಿದೆ ಎಂದರು.
ಸ್ಟೆಪ್ ಡೌನ್ ಆಸ್ಪತ್ರೆ ಪ್ರಾರಂಭ:
ಕೋವಿಡ್ ಸೋಂಕಿತರಿಗೆ ತ್ವರಿತವಾಗಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ಪತ್ರೆಗಳ ಜೊತೆಗೂಡಿ ಹೋಟೆಲ್‌ಗಳಲ್ಲಿ ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ತೆರಯಲಾಗುತ್ತಿದೆ. ಅದರಂತೆ ಅಪೋಲೊ ಆಸ್ಪತ್ರೆ ಸಹಯೋಗದಲ್ಲಿ ಈಗಾಗಲೇ ಹೋಟೆಲ್‌ನಲ್ಲಿ 39 ಹಾಸಿಗೆ ಸಾಮರ್ಥ್ಯದ ಸ್ಟೆಪ್ ಡೌನ್ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದೆ. ಅಪೋಲೊ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು/ಸಿಬ್ಬಂದಿ ಸ್ಟೆಪ್ ಡೌನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಮೆಲೆ ನಿಗಾವಹಿಸಿ ಟ್ರಯಾಜಿಂಗ್ ಮಾಡುತ್ತಿರುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆರೋಗ್ಯ ಸುಧಾರಿಸಿದವರನ್ನು ಸ್ಟೆಪ್ ಡೌನ್ ಆಸ್ಪತ್ರೆಯಲ್ಲಿರಿಸಿದಾಗ, ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅವಶ್ಯಕತೆಯಿರುವವರಿಗೆ ಹೆಚ್ಚು ಅನುಕೂಲಕರವಾಗಲಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಇನ್ನೂ ಹೆಚ್ಚು ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಪ್ರಾರಂಭಿಸಲಾಗುವುದು.
ಟ್ರಾನ್ಸಿಟ್ ಆಕ್ಸಿಜನ್ ಸೆಂಟರ್:
ಬಿಬಿಎಂಪಿ 11 ಹೆರಿಗೆ ಆಸ್ಪತ್ರೆಗಳನ್ನು ಟ್ರಾನ್ಸಿಟ್ ಆಕ್ಸಿಜನ್ ಸೆಂಟರ್‌ಗಳನ್ನಾಗಿ ಮಾಡುತ್ತಿದ್ದು, ಯಾರಿಗಾದರು ಆಕ್ಸಿಜನ್ ಸಮಸ್ಯೆ ಇದ್ದರೆ ಟ್ರಾನ್ಸಿಟ್ ಆಕ್ಸಿಜನ್ ಸೆಂಟರ್‌ಗೆ ಬಂದು ಆಕ್ಸಿಜನ್ ಪಡೆಯಬಹುದು. ಆಕ್ಸಿಜನ್ ಪಡೆಯಲು ಬಂದವರಿಗೆ ಆಕ್ಸಿಜನ್ ಅವಶ್ಯಕತೆಯಿದೆಯೇ ಇಲ್ಲವೇ ಎಂಬುದನ್ನು ವೈದ್ಯರು ಟ್ರಯಾಜಿಂಗ್ ಮೂಲಕ ಖಾತರಿಪಡಿಸಿಕೊಂಡು ಆಕ್ಸಿಜನ್ ನೀಡಿ ಆಸ್ಪತ್ರೆಗೆ ಹೋಗುವ ಅವಶ್ಯಕತೆಯಿದ್ದರೆ ಆಸ್ಪತ್ರೆ ಹೋಗಲು ತಿಳಿಸಲಾಗುತ್ತದೆ. ಈ ನಿಟ್ಟಿನಲ್ಲಿ ವಿಲ್ಸನ್ ಗಾರ್ಡನ್ ಹೆರಿಗೆ ಆಸ್ಪತ್ರೆಯಲ್ಲಿ 24 ಹಾಸಿಗೆ ಸಮಾರ್ಥ್ಯವಿದ್ದು, ಟ್ರಾನ್ಸಿಟ್ ಆಕ್ಸಿಜನ್ ಸೆಂಟರ್ ಗೆ ಮುಖ್ಯ ಆಯುಕ್ತರು ಇಂದು ಭೆಟಿ ನೀಡಿ ಪರಿಶೀಲನೆ ನಡೆಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ 12 ಕೋವಿಡ್ ಆರೈಕೆ ಕೇಂದ್ರಗಳಲ್ಲಿ 2,100 ಹಾಸಿಗೆಗಳಿದ್ದು, 800 ಹಾಸಿಗೆ ಭರ್ತಿಯಾಗಿವೆ. ಇನ್ನೂ 1,200 ಹಾಸಿಗೆಗಳು ಲಭ್ಯವಿದೆ. ಎಲ್ಲಾ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಶೆ. 20 ರಷ್ಟು ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗುವುದು. ಇದಲ್ಲದೆ ಅಪಾರ್ಟ್ಮೆಂಟ್ಸ್ನಲ್ಲಿ ಸಹ ಕೋವಿಡ್ ಆರೈಕೆ ಕೇಂದ್ರ ತೆರೆಯುವ ಸಂಬAಧ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ಸಭೆ ನಡೆಸಲಾಗುವುದು. ಇದಲ್ಲದೆ ಟ್ರಯಾಜಿಂಗ್ ಸೆಂಟರ್ ಮಾಡಲಾಗುತ್ತಿದ್ದು, ಯಾರಾದರು ನೇರವಾಗಿ ದಾಖಲಾಗಲು ಬಂದರೆ ಅವರನ್ನು ವೈದ್ಯರು ಟ್ರಯಾಜಿಂಗ್ ಮಾಡಿ ಆರೈಕೆ ಪಡೆಯುವ ಅವಶ್ಯಕತೆಯಿದ್ದರೆ ಕೋವಿಡ್ ಕೇರ್ ಸೆಂಟರ್ ಅಥವಾ ಆಸ್ಪತ್ರೆಗೆ ಕಳುಹಿಸಲಾಗುವುದು. ಯಾವುದೇ ತೊಂದರೆಯಿಲ್ಲವಾದರೆ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಕಿದ್ವಾಯಿ ಆಸ್ಪತ್ರೆಯಲ್ಲಿ ಪ್ರತಿನಿತ್ಯ 20,000 ಕೋವಿಡ್ ಸ್ವಾಬ್ ಪರೀಕ್ಷೆ ಮಾಡುವ ಸಾಮರ್ಥ್ಯವಿದ್ದು, ದಿನಕ್ಕೆ ಸುಮಾರು 6,000 ಸ್ವಾಬ್ ಪರೀಕ್ಷೆ ಮಾಡುತ್ತಿದ್ದಾರೆ. ಕೋವಿಡ್ ಟೆಸ್ಟ್ ವೇಳೆ ಮಾಹಿತಿ ಅಪ್ಲೋಡ್ ಮಾಡುವುದು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಚರ್ಚಿಸಲಾಗಿದ್ದು, ಕಿದ್ವಾಯಿ ಆಸ್ಪತ್ರೆಯಲ್ಲಿ ಎಲ್ಲಾ ಸ್ವಯಂಚಾಲಿತವಾಗಿ ಕಾರ್ಯರ್ವಹಿಸಲಿದ್ದು, ತ್ವರಿತವಾಗಿ ಫಲಿತಾಂಶ ಬರುವ ವ್ಯವಸ್ಥೆಯಿದೆ ಎಂದರು.
ಪರಿಶೀಲನೆ ವೇಳೆ ವಲಯ ಆಯುಕ್ತರು ಶ್ರೀಮತಿ ತುಳಸಿ ಮದ್ದಿನೇನಿ, ವಲಯ ಜಂಟಿ ಆಯುಕ್ತರು ಶ್ರೀ ವೀರಭದ್ರಸ್ವಾಮಿ, ಆರೋಗ್ಯಾಧಿಕಾರಿ ಡಾ. ಶಿವಕುಮಾರ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಟ್ರಾನ್ಸಿಟ್ ಆಕ್ಸಿಜನ್ ಸೆಂಟರ್ ಗಳು:
1. ರಾಜಾಜಿನಗರ ಹೆರಿಗೆ ಆಸ್ಪತ್ರೆ
2. ಕಾವೇರಿಪುರ ಹೆರಿಗೆ ಆಸ್ಪತ್ರೆ
3. ಗವಿಪುರಂ ಗುಟ್ಟಹಳ್ಳಿ ರೆಫರಲ್ ಹೆರಿಗೆ ಆಸ್ಪತ್ರೆ
4. ಆಜಾದ್ ನಗರ ಹೆರಿಗೆ ಆಸ್ಪತ್ರೆ
5. ಪೊಬ್ಬತ್ತಿ ಹೆರಿಗೆ ಆಸ್ಪತ್ರೆ
6. ಮಾಗಡಿ ರಸ್ತೆ ಹೆರಿಗೆ ಆಸ್ಪತ್ರೆ
7. ಆಡುಗೋಡಿ ಹೆರಿಗೆ ಆಸ್ಪತ್ರೆ
8. ತಾವರೆಕೆರೆ ಹೆರಿಗೆ ಆಸ್ಪತ್ರೆ
9. ಹೊಸಕೆರೆಹಳ್ಳಿ ರೆಫರಲ್ ಆಸ್ಪತ್ರೆ
10. ಶಾಂತಿನಗರ ಹೆರಿಗೆ ಆಸ್ಪತ್ರೆ
11. ವಿಲ್ಸನ್ ಗಾರ್ಡನ್ ಹೆರಿಗೆ ಆಸ್ಪತ್ರೆ.

0 Comments