ನವದೆಹಲಿ: ದೆಹಲಿಯಿಂದ- ಮೀರತ್ ಪ್ರಯಾಣದ ಅವಧಿ ಈಗ ಕಡಿಮೆಯಾಗಲಿದೆ. ದೆಹಲಿ-ಮೀರತ್ ಎಕ್ಸ್‍ಪ್ರೆಸ್ ಹೈವೇ ಉದ್ಘಾಟನೆಯಾಗಿದ್ದು, ಪ್ರಯಾಣಿಕರು ಈಗ ಗಂಟೆಯೊಳಗೆ ಪ್ರಯಾಣ ಬೆಳೆಸಬಹುದಾಗಿದೆ. ಪ್ರಸ್ತುತ ದೆಹಲಿಯಿಂದ ಮೀರತ್‍ಗೆ ಪ್ರಯಾಣ ಬೆಳೆಸಲು 2.5 ಗಂಟೆ ಸಮಯ ತಗುಲುತ್ತಿತ್ತು. ಇದೀಗ ಎಕ್ಸ್‍ಪ್ರೆಸ್ ಹೈವೇಯಿಂದಾಗಿ ಈ ಸಮಯ ಕೇವಲ 45 ನಿಮಿಷಕ್ಕೆ ಇಳಿದಿದೆ. ಈ ವಿಷಯವಾಗಿ ಮಾತನಾಡಿರುವ ರಸ್ತೆ ಮತ್ತು ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ದೆಹಲಿಯಿಂದ ಮೀರತ್‍ವರೆಗೆ ಪ್ರಯಾಣದ ಅವಧಿ ಕಡಿಮೆ ಮಾಡುತ್ತೇವೆ ಎಂಬ ನಮ್ಮ ಭರವಸೆಯನ್ನು ಈಡೇರಿಸಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ದೆಹಲಿ- ಮೀರತ್ ಎಕ್ಸ್‍ಪ್ರೆಸ್ ಹೈವೇ ಈಗ ಸಂಪೂರ್ಣವಾಗಿದ್ದು, ಸಂಚಾರಕ್ಕೆ ಮುಕ್ತವಾಗಿದೆ. ದೆಹಲಿ- ಮೀರತ್ ಸಂಚಾರದ ಅವಧಿಯನ್ನು 2.5 ಗಂಟೆಯಿಂದ 45 ನಿಮಿಷಕ್ಕೆ ಇಳಿಸುವುದಾಗಿ ಭರವಸೆ ನೀಡಿದ್ದೇವು. ಅದರಂತೆ ಈಗ ನಮ್ಮ ಭರವಸೆ ಈಡೇರಿಸಿದ್ದೇವೆ ಎಂದು ನಿತಿನ್ ಗಡ್ಕರಿ ಟ್ವೀಟ್ ಮಾಡಿ ತಿಳಿಸಿದ್ದಾರೆ.
96 ಕಿ.ಮೀ. ಉದ್ದದ 14 ಪಥದ ಎಕ್ಸ್‍ಪ್ರೆಸ್ ಹೈವೇ ಮೀರತ್ ಮತ್ತು ದೆಹಲಿ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಿದ್ದು, ಈಗ ಕೇವಲ 45 ನಿಮಿಷದಲ್ಲಿ ಈ ಸ್ಥಳಕ್ಕೆ ತಲುಪಬಹುದಾಗಿದೆ. ಪ್ರಸ್ತುತ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿ 58ರ ಮೂಲಕ ಸಂಚಾರ ಮಾಡಿ ದೆಹಲಿ ತಲುಪುತ್ತಿದ್ದರು. ಈ ಮಾರ್ಗದಲ್ಲಿ 70 ಕಿ.ಮೀ. ಸಂಚರಿಸಲು ಬರೋಬ್ಬರಿ 3 ಗಂಟೆ ಸಮಯ ಹಿಡಿಯುತ್ತಿತ್ತು. ಈ ಎಕ್ಸ್‍ಪ್ರೆಸ್ ಹೈವೇ ಮುಜಾಫರ್‍ನಗರ, ಶಹರಾನ್‍ಪುರ, ಹರಿದ್ವಾರ ಹಾಗೂ ಡೆಹ್ರಾಡೂನ್‍ನಿಂದ ದೆಹಲಿಗೆ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಿದೆ.
ಆಧುನಿಕ ತಂತ್ರಜ್ಞಾನದ ಮೂಲಕ ಹಸಿರು ಎಕ್ಸ್‍ಪ್ರೆಸ್ ಹೆದ್ದಾರಿಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರವು 7 ಲಕ್ಷ ಕೋಟಿ ರೂ. ಖರ್ಚು ಮಾಡುತ್ತಿದೆ. ಇದರಿಂದಾಗಿ ಸ್ಮಾರ್ಟ್ ಸಾರಿಗೆ ಮತ್ತು ಮಾಲಿನ್ಯ ಕಡಿಮೆಯಾಗುತ್ತದೆ. ಈ ಪೈಕಿ ದೆಹಲಿ- ಮುಂಬೈ ಎಕ್ಸ್‍ಪ್ರೆಸ್ ಹೆದ್ದಾರಿ ಒಂದು ವರ್ಷದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಪ್ರಧಾನಮಂತ್ರಿ ಮೋದಿ ಅವರು 111 ಲಕ್ಷ ಕೋಟಿ ರೂ.ಗಳ ರಾಷ್ಟ್ರೀಯ ಮೂಲಸೌಕರ್ಯ ಪೈಪ್‍ಲೈನ್ ಗುರಿಯನ್ನು ಹೊಂದಿದ್ದಾರೆ ಮತ್ತು ಇದು ಹಸಿರು ವಿಧಾನವನ್ನು ಅಳವಡಿಸಿಕೊಳ್ಳಲು ಮತ್ತು "ವಿನಾಶವಿಲ್ಲದೆ ಅಭಿವೃದ್ಧಿ" ಮಾಡಲು ಕೇಂದ್ರ ಸರ್ಕಾರದ ಪ್ರಯತ್ನವಾಗಿದೆ ಎಂದು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 22 ಹಸಿರು ಹೆದ್ದಾರಿ ಕಾರಿಡಾರ್‍ಗಳಲ್ಲಿ, ದೆಹಲಿ- ಮುಂಬೈ ಎಕ್ಸ್‍ಪ್ರೆಸ್ ಹೆದ್ದಾರಿ ಹೊಸ ಜೋಡಣೆಯ ಮೂಲಕ ಎರಡೂ ಮಹಾನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಾರಿನ ಮೂಲಕ 12 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ ಎಂದು ಗಡ್ಕರಿ ಅವರು ಹೇಳಿದರು.



0 Comments