Ticker

6/recent/ticker-posts

Ad Code

Responsive Advertisement

ಭಾಷಾ ಬೆಳವಣಿಗೆಗೆ ಮಾಧ್ಯಮಗಳ ಕೊಡುಗೆ ಅನನ್ಯ : ಟಿ.ಎಸ್.ನಾಗಾಭರಣ

 ಬೆಂಗಳೂರು: ಕನ್ನಡ ಭಾಷಾ ಬೆಳವಣಿಗೆಗೆ ಮಾಧ್ಯಮಗಳ ಕೊಡುಗೆ ಅನನ್ಯವಾದುದು. ನಾಗರಿಕರು ಪತ್ರಿಕೆಗಳನ್ನು ಓದಿ, ದೃಶ್ಯ ಮಾಧ್ಯಮಗಳ ವರದಿಗಳನ್ನು ಸುದ್ದಿಗಳನ್ನು ನೋಡಿ-ಕೇಳಿ ಕನ್ನಡ ಭಾಷೆಯನ್ನು ಸುಧಾರಿಕೊಳ್ಳಬಹುದಾದ ನಿಟ್ಟಿನಲ್ಲಿ ಮಾಧ್ಯಮಗಳು ಗಮನಹರಿಸುವ ಅನಿವಾರ್ಯತೆ ಇರುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಅಭಿಪ್ರಾಯಪಟ್ಟರು.


  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಅಚ್ಚಳಿಯದೆ ಬೆಳಗಿರುವ ದಿವಂಗತ ಆರ್. ಕಲ್ಯಾಣಮ್ಮನವರ ಜನ್ಮದಿನದ ಅಂಗವಾಗಿ ಮಾರ್ಚ್ 29, 30 ಮತ್ತು 31ರಂದು 3 ದಿನಗಳ ಕಾಲ ರಾಜ್ಯಾದಾದ್ಯಂತ ಹಮ್ಮಿಕೊಳ್ಳಲಾಗಿರುವ “ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ’’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

    ಇಂದಿನ ಮಾಧ್ಯಮಗಳು ಅದರಲ್ಲೂ ವಿಶೇಷವಾಗಿ ದೃಶ್ಯ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ನೀಡುವ ಧಾವಂತದಲ್ಲಿ ಭಾಷೆಯ ಪದಬಳಕೆಯನ್ನು ತಪ್ಪಾಗಿ ಬಳಸುತ್ತಿರುವ ಮತ್ತು ತಪ್ಪಾಗಿ ಉಚ್ಛರಿಸುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ “ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆಯನ್ನು ಹಮ್ಮಿಕೊಂಡಿದ್ದೇವೆ ಎಂದ ಅಧ್ಯಕ್ಷರು, ನಾಡಿನ ಮೂಲೆ ಮೂಲೆಗೂ ಸುದ್ದಿ ಬಿತ್ತರಿಸುವ ಮಾಧ್ಯಮಗಳ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

     ಕರ್ನಾಟಕದ ಜನ ಕನ್ನಡ ಪತ್ರಿಕೆ, ಟಿವಿ ಮತ್ತು ರೇಡಿಯೋ ಮಾಧ್ಯಮಗಳನ್ನು ವಸ್ತುನಿಷ್ಠ ಮಾಹಿತಿಗಾಗಿ ಅವಲಂಭಿಸಿರುತ್ತಾರೆ. ಅಷ್ಟೇ ಮುಖ್ಯವಾಗಿ ತಮ್ಮ ಕನ್ನಡದ ಓದು, ಬರಹ ಕೌಶಲವನ್ನು ಸುಧಾರಿಸಿಕೊಳ್ಳಲು ಕನ್ನಡಿಗರು ಮಾಧ್ಯಮಗಳನ್ನು ಅನುಸರಿಸುತ್ತಾರೆ. ಜನಮಾನ್ಯರು-ಭಾಷೆ-ಮಾಧ್ಯಮ ಪರಸ್ಪರ ಬೆಸುಗೆಯಾಗಿ, ಬದುಕಿನಕೊಂಡಿಯಾಗಿ ನಾಡನ್ನು ಸಮೃದ್ಧಗೊಳಿಸಬೇಕಿದೆ. ಅದಕ್ಕಾಗಿ ಮಾಧ್ಯಮಗಳ ಸಹಕಾರ ಬಹಳ ಮುಖ್ಯವಾಗಿದೆ ಎಂದರು.

     ಇತ್ತೀಚಿನ ದಿನಗಳಲ್ಲಿ ಬಹುಪಾಲು ಮಾಧ್ಯಮಗಳು ತಮ್ಮ ಹೊಣೆಗಾರಿಕೆಯನ್ನು ಕಡೆಗಣಿಸಿರುವುದು ಗ್ರಾಹಕರಿಗೆ ಬೇಸರವನ್ನುಂಟುಮಾಡಿದೆ. ಕನ್ನಡ ಭಾಷೆಯನನ್ನು ಮಾಧ್ಯಮಗಳು ತಪ್ಪಾಗಿ ಬಳಸುತ್ತಿರುವ ಮತ್ತು ಉಚ್ಛರಿಸುತ್ತಿರುವ ಬಗ್ಗೆ ಓದುಗರು, ಶ್ರೋತೃಗಳು ಮತ್ತು ವೀಕ್ಷಕರು ನಿರಂತರವಾಗಿ ಟೀಕಿಸುತ್ತಲೇ ಬಂದಿದ್ದಾರೆ. ಆದರೆ ಅದೇಕೋ ಗ್ರಾಹಕರೇ ಪ್ರಭುಗಳು ಎಂದು ಭಾವಿಸಬೇಕಾದ ಮಾಧ್ಯಮಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಪ್ರಜ್ಞಾಪೂರ್ವಕ ಉಪೇಕ್ಷೆ ಮಾಧ್ಯಮಗಳ ಮತ್ತು ಕನ್ನಡ ಭಾಷಾ ಬೆಳವಣಿಗೆಯ ಭವಿಷ್ಯಕ್ಕೆ ಮಾರಕವಾಗಿವೆ ಎಂದರು.

    ನಂತರ ರಾಜಧಾನಿಯಲ್ಲಿರುವ ಕನ್ನಡ ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮ ಹಾಗೂ ಶ್ರವ್ಯ ಮಾಧ್ಯಮಗಳ ಮುಖ್ಯಸ್ಥರನ್ನು ಅವರ ಕಚೇರಿಯಲ್ಲಿಯೇ ಪ್ರಾಧಿಕಾರದ ಅಧ್ಯಕ್ಷರು, ನಾಮನಿರ್ದೇಶಿತ ಸದಸ್ಯರುಗಳು ಭೇಟಿ ಮಾಡಿ ಹಕ್ಕೊತ್ತಾಯ ಪತ್ರವನ್ನು ನೀಡಿ, ಕನ್ನಡ ಭಾಷೆಯನ್ನು ಸಶಕ್ತವನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸುವಂತೆ ಮನವಿ ಮಾಡಿದರು.

     ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು, ಮತ್ತಷ್ಟು ಸಮೃದ್ಧ/ವಿಸ್ತಾರಗೊಳಿಸಲು ಕನ್ನಡ ಕಾಯಕ ವರ್ಷಾಚರಣೆ ಸಂದರ್ಭದಲ್ಲಿ ಈಗಾಗಲೇ ಹಲವು ಅಭಿಯಾನಗಳನ್ನು ಹಮ್ಮಿಕೊಂಡಿದ್ದು, ಮುಂದುವರಿದ ಭಾಗವಾಗಿ ಇಂದು “ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ” ಅಭಿಯಾನವನ್ನು ರಾಜ್ಯಾದ್ಯಂತ ನಡೆಯುತ್ತಿದ್ದು, ಇನ್ನೂ ಎರಡು ದಿನಗಳು ನಡೆಯುವುದಾಗಿ ಹೇಳಿದರು.

      ಅಭಿಯಾನದ ನೇತೃತ್ವವನ್ನು ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರುಗಳಾದ ಡಾ.ಕಿಶೋರ್ (ದೃಶ್ಯ ಮಾಧ್ಯಮ), ಗುಬ್ಬಿಗೂಡು ರಮೇಶ್ (ಶ್ರವ್ಯ ಮಾಧ್ಯಮ) ಹಾಗೂ ಅಬ್ದುಲ್ ರೆಹಮಾನ್ ಪಾಷಾ (ಮುದ್ರಣ ಮಾಧ್ಯಮ) ಅವರುಗಳು ವಹಿಸಿದ್ದರು.

  ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಅಭಿಯಾನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರ ಜತೆಗೂಡಿ ಪ್ರಾಧಿಕಾರದ ರಾಜ್ಯ ಮಟ್ಟದ ನಾಮನಿರ್ದೇಶಿತ ಸದಸ್ಯರು, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿ ಸದಸ್ಯರು ಹಾಗೂ ಕನ್ನಡ ಕಾಯಕ ಪಡೆಯ ಸದಸ್ಯರುಗಳು ತಮ್ಮ ವ್ಯಾಪ್ತಿಯಲ್ಲಿ ನಡೆದ ಅಭಿಯಾನದಲ್ಲಿ ಭಾಗವಹಿಸಿದ್ದರು.


Post a Comment

0 Comments

Ad Code

Responsive Advertisement