ದೇವರು ಯಾಕೆ ನಮ್ಮನ್ನು ಹುಟ್ಟಿಸಿದ?
#ಸೃಷ್ಟಿಯಅವಶ್ಯಕತೆ #ದೇವರಕಾರುಣ್ಯ
#ಜೀವರ_ಕರ್ತವ್ಯ
#ಬಂಧ_ಮೋಕ್ಷ
ಈ ಸೃಷ್ಟಿಯಲ್ಲಿ ನಾವು ಇದ್ದೇವೆ. ನಮಗೆ ನಮ್ಮ ಅಸ್ತಿತ್ವ ಅನುಭವಕ್ಕೆ ಬರುತ್ತಿದೆ. ನಮಗೆ ಜಗತ್ತಿನಲ್ಲಿ ಹಲವಾರು ವಸ್ತುಗಳನ್ನು ಕಾಣುತ್ತಿವೆ. ಅದನ್ನು ಅನುಭವದಿಂದ ತಿಳಿಯುತ್ತೇವೆ ಕೂಡ.
(ಸತ್ವಂಚಾಸ್ಯ ಅನುಭೂತಿತಃ-ಶ್ರೀಮನ್ಮಧ್ವಾಚಾರ್ಯರು)
ಜಗದಲ್ಲಿ ಇರುವ ವಸ್ತುಗಳು ಯಾವುವು ಎಂದು ಈ ಅನುಭವದಿಂದ ಮಾತ್ರ ತಿಳಿಯುತ್ತೇವೆ.
ಮಣ್ಣು ನೀರು ಬೆಂಕಿ ಗಾಳಿ ಆಕಾಶ ಮನಸ್ಸು ಬುದ್ಧಿ ನಾನೆಂಬ ಅಹಂಕಾರಗಳು ಹೀಗೆ.
(ಭೂಮಿರಾಪೋSನಲೋ ವಾಯುಃ ಖಂ ಮನೋ ಬುದ್ಧಿರೇವ ಚ ।
ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ ॥ -ಗೀತೆ)
ಏನೇ ವಸ್ತು ಜಗತ್ತಿನಲ್ಲಿ ಇದ್ದರೂ ಅದು ಈ ಎಂಟು ವಿಧವಾಗಿ ಇರುವ ಜಡಪ್ರಕೃತಿಯಲ್ಲಿ ಸೇರಿದೆ.
ವಿಚಾರ ಮಾಡುವ ಪ್ರವೃತ್ತಿ ಇರುವ ಮನುಜನಿಗೆ ಜಗತ್ತನ್ನು ನೋಡಿ ಪ್ರಶ್ನೆಗಳು ಹೀಗೆ ಹುಟ್ಟುವುದು.
ಈ ವಸ್ತು ಯಾವಾಗ ಹುಟ್ಟಿತು? ಹೇಗೆ ಹುಟ್ಟಿತು? ಇದರ ಆಯಸ್ಸೇನು ಅಂತ್ಯವೇನು? ಇದರ ಸೃಷ್ಟಿ ಮಾಡಿದವನ್ಯಾರು? ಎಂಬೆಲ್ಲಾ ಜಿಜ್ಞಾಸೆ ಮೂಡುವುದು.
(ಅಥಾತೋ ಬ್ರಹ್ಮ ಜಿಜ್ಞಾಸಾ- ಬ್ರಹ್ಮ ಸೂತ್ರ)
ಒಂದು ಮಡಿಕೆ ಮಾಡಲಿಕ್ಕೆ ಕುಂಬರ ಅವಶ್ಯ ಹೇಗೋ ಈ ಬ್ರಹ್ಮಾಂಡ ಸೃಷ್ಟಿಗೆ ಒಬ್ಬ ಕರ್ತ ಇರಬೇಕಲ್ಲ?
ಅವನು ಯಾರು ಎಂದು ವಿಚಾರ ಮಾಡಿದಾಗ ಒಂದು ಪರಶಕ್ತಿಯ ಅಸ್ತಿತ್ವ ಅವನ ಅನುಭವಕ್ಕೆ ಬರುತ್ತದೆ.
(ಅಥ ಪುರುಷೋ ಹ ವೈ ನಾರಾಯಣೋಽಕಾಮಯತ ಪ್ರಜಾಃ ಸೃಜೇಯೇತಿ ।- ನಾರಾಯಣೋಪನಿಷದ್)
ಆ ಪರಶಕ್ತಿಗೆ ಸೃಷ್ಟಿಸುವ ಶಕ್ತಿ ಇದೆ ಎಂದ ಮೇಲೆ ಅವನು ಈ ಸೃಷ್ಟಿಗೂ ಮೊದಲು ಇದ್ದವನು ಎಂದಾಯಿತಲ್ಲವೆ?
(ಅಹಂ ಏವೇಕ ಅಗ್ರ ಆಸೀತ್ ನಾನ್ಯತ್ ಕಿಂಚನ ಮಿಷತ್ - ಉಪನಿಷದ್)
ಈ ಸೃಷ್ಟಿಗೂ ಮೊದಲು ಇದ್ದವನಾದ್ದರಿಂದ ಸೃಷ್ಟಿಯ ಹಂಗು ಅವನಿಗಿಲ್ಲ.
(ಸ್ವತಂತ್ರೋ ಭಗವಾನ್ ವಿಷ್ಣುಃ-ತತ್ವ ಸಂಖ್ಯಾನ)
ಅಂದಮೇಲೆ ಈ ಸೃಷ್ಟಿಯ ನಾಶ ಆದ ಮೇಲೂ ಅವನು ಇದ್ದಾನು. ಈ ಸೃಷ್ಟಿ ಲಯಗಳು ಎಷ್ಟೋಬಾರಿ ಆಗಿಹೋಗಿದೆ.
ಹಾಗಿದ್ದಮೇಲೆ ಅವನು ಮೊದಲು ಕೊನೆ ಇಲ್ಲದವನು ಅಲ್ಲವೆ?
ಅಂತಹಾ ಮೊದಲು ಕೊನೆ ಇಲ್ಲದವನು ಈ ಸೃಷ್ಟಿಯ ಕರ್ತ ಎಂದಮೇಲೆ ಅವನಿಗೆ ಹಿಂದೆ ನಡೆದದ್ದು ಮುಂದೆ ನಡೆಯುವುದು ಈಗ ಇರುವುದು ಸಮಗ್ರವೂ ತಿಳಿದಿದೆ. ಹಾಗಿದ್ದರೆ ಅವನು ಸರ್ವಜ್ಞನೇ ತಾನೆ?
(ವೇದಾಹಂ ಸಮತೀತಾನಿ ವರ್ತಮಾನಾನಿ ಚಾರ್ಜುನ ।
ಭವಿಷ್ಯಾಣಿ ಚ ಭೂತಾನಿ ಮಾಂ ತು ವೇದ ನ ಕಶ್ಚನ ॥- ಗೀತೆ)
ಇವನಿಗೆ ಎಲ್ಲವೂ ತಿಳಿದಿದೆ ಎಂದಮೇಲೆ ಸೃಷ್ಟಿಯಲ್ಲಿ ಇರುವ ಎಲ್ಲ ಪ್ರಕೃತಿವೈವಿಧ್ಯಗಳೂ ಇವನ ಅಧೀನ.
ಆಯಾ ಪ್ರಕೃತಿವೈವಿಧ್ಯಗಳನ್ನು ನಿಯಂತ್ರಿಸಲು ಅಲ್ಲೊಂದು ಶಕ್ತಿ ಇರಲೇಬೇಕು. ಪೃಥ್ವಿ ತತ್ವ, ಜಲತತ್ವ, ಅಗ್ನಿ ತತ್ವ ಇತ್ಯಾದಿ ತತ್ವಗಳಿಗೆ ಅಭಿಮಾನಿ ದೇವತೆಗಳು ಇರುತ್ತಾರೆ.
ಅವರೇ ತತ್ವಾಭಿಮಾನಿ ದೇವತೆಗಳು.
ಸರ್ವಜ್ಞನಾದ ಸರ್ವಶಕ್ತನಾದ ದೇವರೇ ಇವರನ್ನೂ ನಿಯಮನ ಮಾಡುವವನು. ಇವರೂ ಅವನಿಂದಲೇ ಹುಟ್ಟಿ ಅವನಿಂದಲೆ ನಾಶವಾಗುವವರು.
(ನಾರಾಯಣಾತ್ಪ್ರಾಣೋ ಜಾಯತೇ । ಮನಃ ಸರ್ವೇಂದ್ರಿಯಾಣಿ ಚ ।
ಖಂ ವಾಯುರ್ಜ್ಯೋತಿರಾಪಃ ಪೃಥಿವೀ ವಿಶ್ವಸ್ಯ ಧಾರಿಣೀ ।
ನಾರಾಯಣಾದ್ ಬ್ರಹ್ಮಾ ಜಾಯತೇ । ನಾರಾಯಣಾದ್ ರುದ್ರೋ ಜಾಯತೇ ।
ನಾರಾಯಣಾದಿಂದ್ರೋ ಜಾಯತೇ । ನಾರಾಯಣಾತ್ಪ್ರಜಾಪತಯಃ ಪ್ರಜಾಯಂತೇ ।
ನಾರಾಯಣಾದ್ದ್ವಾದಶಾದಿತ್ಯಾ ರುದ್ರಾ ವಸವಃ ಸರ್ವಾಣಿ ಚ ಛಂದಾꣳಸಿ ।
ನಾರಾಯಣಾದೇವ ಸಮುತ್ಪದ್ಯಂತೇ । ನಾರಾಯಣೇ ಪ್ರವರ್ತಂತೇ । ನಾರಾಯಣೇ ಪ್ರಲೀಯಂತೇ ॥
-ನಾರಾಯಣೋಪನಿಷದ್)
ದೇವರು ಈ ಸೃಷ್ಟಿ ಮಾಡಿದ್ದಾನೆ. ಅದಲಲ್ಲಿ ಜೀವರನ್ನು ಇರಿಸಿದ್ದಾನೆ. ಯಾಕಾಗಿ?
ನಾವು ಬದುಕಿನಲ್ಲಿ ದುಃಖ ಪಟ್ಟಿದ್ದೇ ಹೆಚ್ಚು. ಸುಖ ಅಂತ ಕಂಡಿರುವುದೂ ತಾತ್ಕಾಲಿಕ ಆಗಿರುತ್ತದೆ. ಅನುಭವಿಸಿದ ಸುಖಗಳು ಕಾಲ ಉರುಳಿದಂತೆ ಬೇಸರವಾಗಿ ಮತ್ತೆ ಅದೂ ದುಃಖ. ಆಗ ಅದಕಿಂತ ಮಿಲಾದುದು
ಇನ್ನಷ್ಟು ಮತ್ತಷ್ಟು ಬೇಕೆನಿಸಿ ಅದು ವಿಕೃತಿಗೆ ತಿರುಗಿ ತಪ್ಪುಗಳನ್ನು ಮಾಡುತ್ತೇವೆ. ಅದರ ಫಲವಾಗಿ ಮತ್ತೆ ಕಷ್ಟ ಪಡುತ್ತೇವೆ.ಇದನ್ನೇ ಪಾಪಕರ್ಮಪಲ ಅಂತಾರೆ.ಜಗತ್ತಿನ ನಿಯಂತಾ ಆ ಸೃಷ್ಟಿಕರ್ತನೇ ಪಾಪಕರ್ಮ ಮಾಡಿದವರಿಗೆ ಶಿಕ್ಷೆ ಕೊಡುತ್ತಿದ್ದಾನೆ.
ಒಳ್ಳೆಯ ಕರ್ಮ ಮಾಡುವವರು ಸುಖ ಪಡುತ್ತಿದ್ದಾರೆ. ಅಂದರೆ ಅವನೇ ಶಿಷ್ಟರನ್ನು ರಕ್ಷಣೆ ಮಾಡುತ್ತಿದ್ದಾನೆ ಕೂಡ.
ನಾವು ಸುಖ ಪಡಲು ಹೋಗಿ ದುಃಖ ಪಡುವೆವು. ಕಷ್ಟಗಳಿಂದಲೂ ದುಃಖವೇ ಪಡುವೆವು. ಹಾಗಿದ್ದರೆ ಈ ಜಗತ್ತಿನಲ್ಲಿ ಯಾವುದರಿಂದಲೂ ಮತ್ತು ಸುಖವಿಲ್ಲ ಯಾರಿಂದಲೂ ಸುಖವಿಲ್ಲ.
ಕೊನೆಯಾಗುವ ಈ ಸುಖ ಯಾರಿಗೆ ಬೇಕು?
ನಮಗೆ ಬೇಕಿರುವುದು ಕೊನೆಗೊಳ್ಳದ ಸುಖವು. ಯಾವುದರಲ್ಲೂ ಪರಿಪೂರ್ಣತೆ ಇಲ್ಲ .ಎಲ್ಲಕ್ಕೂ ಸೀಮಿತ ಪರಿಧಿ ಉಂಟು.
ಸೀಮಿತ ಪರಿಧಿ ಇಲ್ಲದ ಅನಂತವಾದ ಪರಿಪೂರ್ಣವಾದ ವಸ್ತುವನ್ನು ಆಶ್ರಯಿಸಿದರೆ ಮಾತ್ರವೇ ಆ ಸೀಮೆಯಿಲ್ಲ ಆ ಸುಖವುಂಟಾದೀತು.
(ಸೃಷ್ಟಿ ಸಂಹಾರಲೀಲಾವಿಲಾಸಾತತಂ ಪುಷ್ಟಷಾಡ್ಗುಣ್ಯ ಸದ್ವಿಗ್ರಹೋಲ್ಲಾಸಿನಮ್ |
ದುಷ್ಟ ನಿಷ್ಯೇಷಸಂಹಾರಕರ್ಮೋದ್ಯತಂ ಹೃಷ್ಟಪುಷ್ಟಾತಿಶಿಷ್ಟ ಪ್ರಜಾಸಂಶ್ರಯಂ |- ಶ್ರೀಮನ್ಮಧ್ವಾಚಾರ್ಯರು)
ಅವನು ಹೇಳಿದಂತೆ ನಾವು ಬದುಕಿದರೆ ನಮಗೆ ಈ ದುಃಖದಿಂದ ಮೋಕ್ಷ ಕೊಟ್ಟಾನು. ಅವನು ಹೇಳಿದಂತೆ ಬದುಕಿದರೆ ಅವನಿಗೆ ಪ್ರೀತಿಯುಂಟಾಗುವುದು. ಯಾರೇ ಆಗಲಿ ನಾವು ಹೇಳಿದ ಮಾತು ಕೇಳುವವರನ್ನೇ ತಾನೆ ಇಷ್ಟ ಪಡುವುದು. ಅದಕ್ಕೆ ನಾವು ಆವನನ್ನು ಪ್ರೀತಿಗೊಳಿಸಬೇಕು.
(ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾ ಖಂಡಮಂಡನಂ ಪ್ರೀಣಯಾಮೋ ವಾಸುದೇವಂ ||- ದ್ವಾದಶ ಸ್ತೋತ್ರದಲ್ಲಿ ಶ್ರೀಮನ್ಮಧ್ವಾಚಾರ್ಯರು)
ಅವನನ್ನು ನಾವು ಮೆಚ್ಚಿಸಿದರೆ ನಮ್ಮ ಸುಖವನ್ನು ಅವನು ಎಂದೂ ಬತ್ತದಂತೆ ಹೆಚ್ಚಿಸುವನು.
ಇದರಿಂದ ಆ ಪರಶಕ್ತಿಗೆ ಆಗುವ ಲಾಭವೇನು?
ಪೂರ್ಣವಾದ ಜ್ಞಾನ ಆನಂದಗಳು ಅವನಿಗೆ ಇದ್ದಮೇಲೆ ಅವನಿ ಯಾವ ಲಾಭದ ನಿರೀಕ್ಷೆ ಇದ್ದೀತು?
(ಪೂರ್ಣಾನಂದಸ್ಯ ತಸ್ಯೇಹ ಪ್ರಯೋಜನಮತಿಃ ಕುತಃ| - ಶ್ರೀಮನ್ಮಧ್ವಾಚಾರ್ಯರ ಬ್ರಹ್ಮಸೂತ್ರಭಾಷ್ಯ)
ಅವನು ಕೇವಲ ಮತ್ತೊಬ್ಬರ ಹಿತಕ್ಕಾಗಿ ಪರಮಕಾರುಣ್ಯದಿಂದ ಈ ಜಗತ್ಸೃಷ್ಟ್ಯಾದಿಗಳನ್ನು ಮಾಡುವನು.
ಉನ್ಮತ್ತರು ಖುಷಿಯಿಂದ ಹಾಡಿ ಕುಣಿಯುವಂದದಲಿ ಆನಂದೋದ್ರೇಕದಿಂದ ಸೃಷ್ಟಿ ಲೀಲೆ ಮಾಡುವನು.
(ಕುರುತೇ ಕೇವಲಾನಂದಾದ್ ಯಥಾ ಮತ್ತಸ್ಯ ನರ್ತನಮ್|-
ಶ್ರೀಮನ್ಮಧ್ವಾಚಾರ್ಯರ ಬ್ರಹ್ಮಸೂತ್ರಭಾಷ್ಯ)
ತನಗೆ ಪ್ರಯೋಜನವಿಲ್ಲದಿದ್ದರೂ ಜೀವರ ಹಿತಕ್ಕೆ ಜಗವನ್ನು ಸೃಜಿಸುವುದು ಅವನ.ಸ್ವಾಭಾವಿಕ ಕ್ರಿಯೆ.
(ದೇವಸ್ಯೈಷ ಸ್ವಭಾವೋಯಮಾಪ್ತಕಾಮಸ್ಯ ಕಾ ಸ್ಪೃಹಾ- ಮಾಡೂಕೋಪನಿಷದ್)
ಜಗವ ಸೃಜಿಸಿ ನಮ್ಮನ್ನು ಈ ಸೃಷ್ಟಿಯಲ್ಲಿ ಇರಿಸಿರುವುದೇ ನಾವು ನಮ್ಮ ಕರ್ಮ ಕಳೆದುಕೊಂಡು ಈ ಬಂಧನದಿಂದ ಮುಕ್ತರಾಗಲಿ ಎಂದು. ತಾನು ಅವತಾರ ಮಾಡಿ ನಮ್ಮನ್ನು ಅವನೆಡೆಗೆ ಸೆಳೆದುಕೊಂಡು ನಮ್ಮಿಂದ ಅವನ ಭಕ್ತಿ ಮಾಡಿಸಿ ನಮಗೇ ಮುಕ್ತಿ ಕೊಟ್ಪು ಕಾಯುವನು.
ಇಂತಹಾ ಕಾರುಣ್ಯವನ್ನು ನೆನೆನೆನೆದು ಅನುದಿನವು ಅವನಲ್ದಿ ಬಗೆಯ ನೆಟ್ಟು ಬದುಕೋಣ
-ಕೃಷ್ಣದಾಸ
ಶ್ರೀಕೃಷ್ಣಾರ್ಪಣಮಸ್ತು
ಶ್ರೀಮನ್ಮಧ್ವಾಚಾರ್ಯರಕೃತಿಯಲ್ಲಿಅಪೂರ್ವ_ವಿಷಯಗಳು

0 Comments