ಪುರಂದರ ಘಡದಲ್ಲಿ ಅವತರಿಸಿದ ನಾರದಾಂಶರೇ ಶ್ರೀನಿವಾಸ ನಾಯಕರು ಶ್ರೀ ಪುರಂದರದಾಸರು.
ಹುಟ್ಟಿದ್ದು : 1484 , ಕ್ಷೇಮಪುರ, ತೀರ್ಥಹಳ್ಳಿ ಹತ್ತಿರ, ಶಿವಮೊಗ್ಗ ಜಿಲ್ಲೆ, ಕರ್ನಾಟಕ.
ಜನ್ಮ ನಾಮ : ಶ್ರೀನಿವಾಸ ನಾಯಕ
ತಂದೆಯ ಹೆಸರು : ವರದಪ್ಪ ನಾಯಕ
ತಾಯಿಯ ಹೆಸರು : ಲಕ್ಷ್ಮೀದೇವಿ
ಹೆಂಡತಿಯ ಹೆಸರು : ಸರಸ್ವತೀಬಾಯಿ
ನಾಲ್ಕು ಜನ ಮಕ್ಕಳು : ಲಕ್ಷ್ಮಣ | ಹೇವಣ (ಹೇಮವರ್ಣದಾಸರು) | ಮಧ್ವಪತಿ | ವರದಪ್ಪ
ದಾಸದೀಕ್ಷೆಯ ನಂತರದ ನಾಮ : ಶ್ರೀಪುರಂದರ ದಾಸರು
ಹರಿಪಾದ ಸೇರಿದ್ದು : 1564, ಪುಷ್ಯಮಾಸ ಬಹುಳ ಅಮಾವಾಸ್ಯೆ, ಹಂಪಿ, ಕರ್ನಾಟಕ
ಇವರ ಮೊದಲ ಹೆಸರು ಶ್ರೀನಿವಾಸ ನಾಯಕ, ಜನ್ಮ ಸ್ಥಳ ಪುರಂದರಗಡ, ತಂದೆ ವರದಪ್ಪನಾಯಕ, ತಾಯಿ ಲಕ್ಷ್ಮಿದೇವಿ. ಪುರಂದರದಾಸರ ತಂದೆ ವರದಪ್ಪ ನಾಯಕ ಲೇವಾದೇವಿ ವೃತ್ತಿಯಲ್ಲಿದ್ದವರು. ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ ತಿರುಪತಿ ಶ್ರೀನಿವಾಸನಿಗೆ ಪ್ರಾರ್ಥನೆ ಸಲ್ಲಿಸಿದ ಮೇಲೆ ಮಗುವಾಯಿತು ಎಂಬ ನಂಬಿಕೆಯಿದೆ. ಇದರಿಂದಲೇ ಅವರು ಮಗನಿಗೆ ಶ್ರೀನಿವಾಸ ಎಂದು ಹೆಸರಿಟ್ಟರಂತೆ.
ಸರ್ವ ಸಂಗ ಪರಿತ್ಯಾಗ ದೊಂದಿಗೆ ವ್ಯಾಸರಾಜರಿಂದ ಪುರಂದರ ವಿಠಲಾಂಕಿತ ಸ್ವೀಕಾರ ಶ್ರೀನಿವಾಸ ನಾಯಕರನ್ನು ಪುರಂದರ ದಾಸರಾಗಿ ಪರಿವರ್ತಿಸಿತು.
ವಿಜಯನಗರದ ಅರಸನ ಬಳಿಗೆ ರತ್ನ ಪರೀಕ್ಷಕರಾಗಿ ಬರುತ್ತಿದ್ದ ನವ ಕೋಟಿ ನಾರಾಯಣ ಶ್ರೀನಿವಾಸ ನಾಯಕರು ಇಂದು ತಂಬೂರಿ ಹಿಡಿದಿದ್ದಾರೆ ಎಂದು ಕೇಳಿದ ರಾಜ.
ಪುರಂದರ ದಾಸರ ಕಾಲದಲ್ಲಿ ಶ್ರೀ ಕೃಷ್ಣ ದೇವರಾಯನು
ವಿಜಯನಗರದ ಸಾರ್ವಭೌಮ ನಾಗಿ ಆಸ್ಥಾನದಲ್ಲಿ ಅನೇಕ ವಿದ್ವಾಂಸರ ಆಶ್ರಯ ದಾತನಾಗಿದ್ದು ಸಂಗೀತ, ಸಾಹಿತ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದನು.
ನವಕೋಟಿ ನಾರಾಯಣ ನೆಂದು ಹೆಸರು ಪಡೆದ ಶ್ರೀನಿವಾಸ ನಾಯಕರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಪುರಂದರ ದಾಸರು ಎಂಬ ಹೆಸರಿನಲ್ಲಿ ಹರಿದಾಸರಾಗಿದ್ದು ಮಹಾರಾಜನಿಗೆ ತಿಳಿದು ಆಶ್ಚರ್ಯಕರವಾಯಿತು.ನಂಬಲಸಾಧ್ಯವೆನಿಸಿತು.
ಅವರ ಮಹಿಮೆಯನ್ನು,,ಅವರ ವೈಭವವನ್ನು ನೋಡಬೇಕೆಂಬ ಆಸೆಯಿಂದ ಶ್ರೀ ವ್ಯಾಸರಾಯರ ಮಠಕ್ಕೆ ಬಂದನು.
ಅದೇ ಸಮಯದಲ್ಲಿ ವ್ಯಾಸರಾಯರು, ಕನಕದಾಸರು, ಪುರಂದರದಾಸರು ಭಜನೆಯಲ್ಲಿ ಮಗ್ನರಾಗಿದ್ದರು.
ಮಹಾರಾಜನು ಅಲ್ಲಿಗೆ ಬಂದಿದ್ದನ್ನು ನೋಡಿ ಜನರು ದೂರ ದೂರಕ್ಕೆ ಸರಿಯುವುದನ್ನು ನೋಡಿ ರಾಜನು ಗದ್ದಲ ಮಾಡಬೇಡಿ ಎಂದು ಸಂಜ್ಞೆಯಿಂದ ತಿಳಿಸಿದರು. ರಾಜನಾದರೂ ಸ್ವಾಮಿಗಳಿಗೆ ನಮಸ್ಕರಿಸಿ ಅಲ್ಲಿಯೇ ಕುಳಿತುಕೊಂಡನು.
ಭಜನೆಯಲ್ಲಿ ಮಗ್ನರಾಗಿದ್ದ ದಾಸರುಗಳು ಭಾವಸಮಾಧಿ ಯಿಂದ ಹೊರಗೆ ಬಂದು ಮಹಾರಾಜನನ್ನು ಕಂಡು ಇದೇನು ಇತ್ತ ಬಂದಿರುವುದು, ಎಂದು ಕೇಳಿದಾಗ ಸುಕೃತ ದಿಂದಲೇ ತಮ್ಮ ದರ್ಶನ ವಾಯಿತು.ಎಂದು ಹೇಳಿದನು. ವ್ಯಾಸರಾಯರು
"ನೋಡಿದಿರಾ ನಮ್ಮ ದಾಸರನ್ನು" ಎಂದು ಕೇಳಿದರು.
ಹೀಗೆ ಸಮಯೋಚಿತವಾದ ಸಂಭಾಷಣೆಗಳನ್ನು ಮಾಡಿ ಶ್ರೀ ಪುರಂದರದಾಸರನ್ನು ತಮ್ಮ ಅರಮನೆಗೆ ಕರೆದುಕೊಂಡು ಅವರ ಅನುಭವಗಳನ್ನು ಕೇಳಿ ಆನಂದಿಸಿದನು ರಾಜ.
ಆಗ ದಾಸರು ಮಹಾರಾಜನೊಡನೆ ವಿನೋದದಿಂದ ಇದು ನಮ್ಮ ಭಾಗ್ಯವೋ ನಿಮ್ಮ ಭಾಗ್ಯವೋ ಎಂದು ಕೇಳಿದರು.
ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ದೊಡ್ಡದೋ//
ಸುಮ್ಮನೆ ಇಬ್ಬರು ಕೂಡಿ ಸಾಟಿ ಮಾಡಿ ನೋಡುವ//
ಸರಕು ತುಪ್ಪ ದವಸ ಧಾನ್ಯ/ ಸವೆದೀತೆಂಬ ಚಿಂತೆಯುಂಟು/
ಹರಿ ನಾಮಾಮೃತಕೆ ಇನ್ನು ಯಾವ ಚಿಂತೆಯಿಲ್ಲವಯ್ಯಾ/೧//
ವ್ಯಾಪಾರ ಉದ್ಯೋಗ ಗಳಿಗಿನ್ನು/ಅಪಾರ ಅಂಜಿಕೆ ಯುಂಟು/
ಗೋಪಾಳ ಬೇಡುವುದಕ್ಕೆ ಆರ ಅಂಜಿಕೆಯಿಲ್ಲವೊ//೨//
ಹೆಣ್ಣು ಹೊನ್ನು ಮಣ್ಣುಗಳಿಗೆ ಕಣ್ಣಿಡುವರಂಜಿಕೆಯುಂಟು/ಪನ್ನಗಶಯನ ನಾಮಕೆ
ಆರ ಅಂಜಿಕೆಯಿಲ್ಲವೊ//೩///
ಕಡಗ ಕಂಠ ಮಾಲೆಗಿನ್ನು ತುಡುಗರ ಅಂಜಿಕೆಯುಂಟು/
ಅಡವಿ ತುಲಸೀ ಮಾಲೆಗಿನ್ನು ಯಾರ ಅಂಜಿಕೆಯಿಲ್ಲವೊ//೪//
ನಿಮ್ಮ ಭಾಗ್ಯ ಲಕ್ಷ್ಮಿದೇವಿ ನಮ್ಮ ಭಾಗ್ಯ ನಾರಾಯಣ
ನಮ್ಮ ನಿಮ್ಮ ಭಾಗ್ಯದೊಡೆಯ ಶ್ರೀ ಪುರಂದರ ವಿಠ್ಠಲನ ಒಮ್ಮನದಿ ಸ್ಮರಿಸುವುದಕ್ಕೆ ಆರ ಅಂಜಿಕೆಯಿಲ್ಲವೊ//೫//.
ಎಂದು ವೈರಾಗ್ಯದ ಹಾಡನ್ನು ಹಾಡಿದಾಗ ರಾಜನಿಗೆ ಸಂತೋಷವಾಗಿ ಅವರನ್ನು ಸತ್ಕರಿಸಿ ಅನೇಕ ವಸ್ತ್ರ, ಆಭರಣಗಳನ್ನು ಕೊಟ್ಟನು.
ದಾಸರು ರಾಜನ ಭಕ್ತಿಯನ್ನು ಹೊಗಳಿ, ರಾಜನಿಂದ ಬಂದ ವಸ್ತುಗಳನ್ನು ಅಲ್ಲಿನ ಬಡವರಿಗೆ ದಾನ ಮಾಡಿದರು ದಾಸರು.
ಈ ವಿಷಯ ರಾಜನಿಗೆ ತಿಳಿದು ಮತ್ತೊಮ್ಮೆ ಅವರನ್ನು ಭೇಟಿ ಮಾಡಿದಾಗ ತಾವು ಕೊಟ್ಟ ವಸ್ತ್ರ ಆಭರಣಗಳು
ಅವರ ಗೌರವಕ್ಕೆ ಸಾಲದಾಯಿತೆಂದು ಶಂಕಿಸಿ ಅವರನ್ನು ವಿಚಾರಿಸಿದಾಗ "ತಾವು ಕೊಟ್ಟ ಬಹುಮಾನ ಶ್ರೀಹರಿಗೆ ಸಮರ್ಪಣೆಯಾಗಿದೆ.
ಅವುಗಳನ್ನು ನಾನು ಧರಿಸಿದ್ದರೆ ಶ್ರೀ ಹರಿಗೆ ಅಷ್ಟು ಪ್ರೀತಿ ಯಾಗುತ್ತಿರಲಿಲ್ಲ" ಎಂದು ಹೇಳಿದಾಗ ಶ್ರೀ ಕೃಷ್ಣ ದೇವರಾಯನಿಗೆ ಶ್ರೀ ಪುರಂದರ ದಾಸರಲ್ಲಿ ಅಧಿಕ ಗೌರವವುಂಟಾಯಿತು.
ಪುರಂದರದಾಸರ ಪದಗಳು ಮುಂದೆ ಕರ್ನಾಟಕ ಸಂಗೀತ ಪದ್ಧತಿಯ ಬುನಾದಿಯಾದವು. ಶಾಸ್ತ್ರೀಯ ಸಂಗೀತವನ್ನು ಶ್ರೀ ಸಾಮಾನ್ಯನಿಗೆ ಪರಿಚಯ ಮಾಡಿಕೊಡಲು ಯತ್ನಿಸಿದ ಪುರಂದರದಾಸರು ಮಾಯಾಮಾಳವಗೌಳ ರಾಗದಿಂದ ಹಿಡಿದು ಹೊಸಬರಿಗೆ ಶಾಸ್ತ್ರೀಯ ಸಂಗೀತವನ್ನು ಕಲಿಸಿ ಕೊಡುವ ದಾರಿಯ ಬಗೆಗೆ ಯೋಚಿಸಿದರು. ಈಗಲೂ ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತದ ಪಾಠಗಳು ಪುರಂದರದಾಸರ ಸರಳೆ, ಜಂಟಿ ವರಸೆಗಳೊಂದಿಗೇ ಆರಂಭಿಸಲ್ಪಡುತ್ತವೆ. ಪುರಂದರದಾಸರ ‘ಪಿಳ್ಳಾರಿ ಗೀತೆಗಳು’ (ಉದಾ: ಲಂಬೋದರ ಲಕುಮಿಕರ…., ಕೆರೆಯ ನೀರನು ಕೆರೆಗೆ ಚೆಲ್ಲಿ…..ಇತ್ಯಾದಿ) ಸಂಗೀತದ ಸ್ವರ- ಸಾಹಿತ್ಯ- ತಾಳಗಳ ಸಂಯೋಜನೆಯನ್ನು ಅಭ್ಯಸಿಸಲು ಮೊದಲ ಮೆಟ್ಟಿಲು. ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ ಶ್ರೀ ತ್ಯಾಗರಾಜರು ತಮ್ಮ “ಪ್ರಹ್ಲಾದ ಭಕ್ತಿ ವಿಜಯಮ್” ಎಂಬ ಲೇಖನದಲ್ಲಿ ಶ್ರೀ ಪುರಂದರ ದಾಸರನ್ನು ತಮ್ಮ ಸಂಗೀತ ಗುರುಗಳೆಂದು ಹೇಳಿಕೊಂಡಿದ್ದಾರೆ. ಹರಿನಾಮಸ್ಮರಣೆಯ ರೂಪದಲ್ಲಿ ರಚಿಸಿದ ಅವರ ಕೃತಿಗಳು ದೇವರನಾಮಗಳಾಗಿ ಪ್ರಸಿದ್ಧವಾಗಿವೆ. ಅವರ ಹರಿಭಕ್ತಿ ಹಾಗೂ ಸಂಗೀತದಲ್ಲಿನ ಪಾಂಡಿತ್ಯ ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವಾದ ಸ್ಥಾನವನ್ನು ಪಡೆದು ದಾಸ ಸಾಹಿತ್ಯವನ್ನು ಶ್ರೀಮಂತವಾಗಿಸಿವೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರಾದ ಪುರಂದರದಾಸರ ಸಾಧನೆಯನ್ನು ಕಂಡ ಸರ್ವರೂ ‘ದಾಸರೆಂದರೆ ಪುರಂದರದಾಸರಯ್ಯಾ..!’ ಎಂದು ಕೊಂಡಾಡಿದ್ದಾರೆ. ಇವರ ಎಲ್ಲ ಕೀರ್ತನೆಗಳೂ ಕನ್ನಡ ಭಾಷೆಯಲ್ಲಿದ್ದು, ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ. ಕರ್ನಾಟಕ ಸಂಗೀತಗಾರರಲ್ಲಿ ಪುರಂದರದಾಸರ ಕೀರ್ತನೆಗಳ ಪರಿಚಯ ಇಲ್ಲದವರು ಇಲ್ಲವೇ ಇಲ್ಲವೆನ್ನಬಹುದು. ಶ್ರೀ ಪುರಂದರದಾಸರು 5 ಲಕ್ಷ ಹಾಡುಗಳನ್ನು ರಚನೆ ಮಾಡಬೇಕೆಂಬ ಉದ್ದೇಶವಿಟ್ಟುಕೊಂಡಿದ್ದರು; ಅವರು 4,75,000 ಹಾಡುಗಳನ್ನು ರಚನೆ ಮಾಡಿ ಅವತಾರ ಮುಗಿಸಿದರು; ಅವರ ಮಗ ಮಧ್ವಪತಿದಾಸರು ಉಳಿದ 25,000 ಹಾಡುಗಳನ್ನು ರಚನೆ ಮಾಡಿದರು ಎಂದು ಹೇಳಲಾಗುತ್ತಿದೆ….
ಶ್ರೀಮಧ್ವೇಶಾರ್ಪಣಮಸ್ತು


0 Comments