ಬೆಂಗಳೂರು : ನೆರೆಯ ರಾಜ್ಯವಾದ ಮಹಾರಾಷ್ಟ್ರ, ಕೇರಳದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಇದರ ನಡುವೆ ಬೆಂಗಳೂರಿನಲ್ಲೂ ಕೊರೋನಾ ಕೇಸ್‍ಗಳು ಹೆಚ್ಚುತ್ತಿದ್ದು, ಸಿಲಿಕಾನ್ ಸಿಟಿ ಮತ್ತೆ ಕೊರೋನಾ ಹಾಟ್‍ಸ್ಪಾಟ್ ಆಗಲಿದೆಯಾ ಎಂಬ ಆತಂಕ ಸೃಷ್ಟಿಸಿದೆ. ಮಹಾರಾಷ್ಟ್ರದ ಬಳಿಕ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಒಂದೇ ಅಪಾರ್ಟ್‍ಮೆಂಟ್‍ನಲ್ಲಿ 10 ಜನರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದರಿಂದ ಅಪಾರ್ಟ್‍ಮೆಂಟ್ ಕಾಂಪ್ಲೆಕ್ಸ್ ಅನ್ನೇ ಸೀಲ್‍ಡೌನ್ ಮಾಡಲಾಗಿದೆ.
ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಅಪಾರ್ಟ್‍ಮೆಂಟ್‍ನಲ್ಲಿ 113 ಜನರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಅದಾದ ಬಳಿಕ ಇದೀಗ ಬೆಳ್ಳಂದೂರಿನ ಅಂಬಲಿಪುರದಲ್ಲಿರುವ ಮತ್ತೊಂದು ಅಪಾರ್ಟ್‍ಮೆಂಟ್‍ನಲ್ಲಿ 10 ಜನರಿಗೆ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬೆಳ್ಳಂದೂರು ಅಪಾರ್ಟ್‍ಮೆಂಟ್ ಅನ್ನು ಸೀಲ್‍ಡೌನ್ ಮಾಡಿದ್ದಾರೆ.
ಬೆಳ್ಳಂದೂರು ವಾರ್ಡ್‍ನ ಅಂಬಲಿಪುರದ ಎಸ್‍ಜೆಆರ್ ವಾಟರ್ ಮಾರ್ಕ್ ಅಪಾರ್ಟ್‍ಮೆಂಟ್‍ನಲ್ಲಿ ಫೆ. 15ರಂದು ಓರ್ವ ವ್ಯಕ್ತಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಅದಾದ ಬಳಿಕ ಇದುವರೆಗೂ ಆ ಪಾರ್ಟ್‍ಮೆಂಟ್‍ನ 10 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.
ಅಪಾರ್ಟ್‍ಮೆಂಟ್‍ನ 10 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಅಪಾರ್ಟ್‍ಮೆಂಟ್‍ನ 9 ಬ್ಲಾಕ್‍ಗಳನ್ನು ಕಂಟೇನ್‍ಮೆಂಟ್ ಜೋನ್‍ಗಳೆಂದು ಘೋಷಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. ಬೆಳ್ಳಂದೂರಿನ ಈ ಅಪಾರ್ಟ್‍ಮೆಂಟ್‍ನಲ್ಲಿ ಒಟ್ಟು 1,500 ಜನರು ವಾಸವಾಗಿದ್ದು, ಈಗಾಗಲೇ 500 ಜನರನ್ನು ಪರೀಕ್ಷೆ ಮಾಡಲಾಗಿದೆ. ಪ್ರಸ್ತುತ ಸೋಂಕು ದೃಢಪಟ್ಟಿರುವ 10 ಮಂದಿಯಲ್ಲಿ ಐವರು 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಸೋಂಕಿತರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದರವನ್ನು ಹೋಮ್ ಐಸೋಲೇಷನ್ ಮಾಡಲಾಗಿದೆ. ಕೇರಳಕ್ಕೆ ಪ್ರವಾಸ ಹೋಗಿ ಬಂದ ವ್ಯಕ್ತಿಯೊಬ್ಬರಿಂದ ಅಪಾರ್ಟ್‍ಮೆಂಟ್‍ನಲ್ಲಿ ಸೋಂಕು ಹರಡಿದೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದಷ್ಟೇ ಬೊಮ್ಮನಹಳ್ಳಿಯ ಬಿಳೇಕಹಳ್ಳಿ ಬಳಿ ಇರುವ ಎಸ್‍ಎನ್‍ಎನ್ ರಾಜ್ ಲೇಕ್ ವ್ಯೂ ಅಪಾರ್ಟ್‍ಮೆಂಟ್‍ನಲ್ಲಿ 113 ಜನರಿಗೆ ಕೊರೋನಾ ಸೋಂಕು ಹರಡಿದ್ದರಿಂದ ಅದನ್ನು ಸೀಲ್‍ಡೌನ್ ಮಾಡಲಾಗಿತ್ತು. ಅದಾದ ಬಳಿಕ ಕಂಟೇನ್‍ಮೆಂಟ್ ಜೋನ್ ಎಂದು ಘೋಷಣೆಯಾಗಿ, ಸೀಲ್‍ಡೌನ್ ಆಗುತ್ತಿರುವ ಬೆಂಗಳೂರಿನ ಎರಡನೇ ಅಪಾರ್ಟ್‍ಮೆಂಟ್ ಇದಾಗಿದೆ.
ಕೇರಳ ಮತ್ತು ಮಹಾರಾಷ್ಟ್ರದ ಬಳಿಕ ಅತ್ಯಧಿಕ ಕೊರೋನಾ ಕೇಸ್‍ಗಳಿರುವ ಮೂರನೇ ರಾಜ್ಯ ಕರ್ನಾಟಕವಾಗಿದೆ. ಹೀಗಾಗಿ, ರಾಜ್ಯದಲ್ಲಿ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ.

0 Comments