ಬೆಂಗಳೂರು, ಫೆ.27: ಒಂದು ಲೋಕಸಭೆ ಮತ್ತು ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸುವ ಸಂಬಂಧ ಮುಂದಿನ ವಾರ ವೇಳಾ ಪಟ್ಟಿ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗದ ರಾಜ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗ ನಿನ್ನೆ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು ಆಯಾ ರಾಜ್ಯಗಳಲ್ಲಿ ತೆರವಾಗಿರುವ ಲೋಕಸಭಾ ಕ್ಷೇತ್ರಗಳಿಗೆ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿತ್ತು.
ಬೆಳಗಾವಿ ಲೋಕಸಭೆ, ಸಿಂದಗಿ, ಮಸ್ಕಿ ಮತ್ತು ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ನಿನ್ನೆಯೇ ವೇಳಾ ಪಟ್ಟಿ ಪ್ರಕಟವಾಗಲಿದೆ ಎಂಬ ನಿರೀಕ್ಷೆಗಳಿದ್ದವು. ಆದರೆ ಈ ಮೂರು ಕ್ಷೇತ್ರಗಳ ಚುನಾವಣೆಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸುವುದಾಗಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಸುನೀಲ್ ಅರೋರಾ ಹೇಳಿದ್ದರು.
ಉಪಚುನಾವಣೆಗಳ ವೇಳಾ ಪಟ್ಟಿ ಕುರಿತಂತೆ ಈ ಸಂಜೆಗೆ ಮಾಹಿತಿ ನೀಡಿರುವ ರಾಜ್ಯ ಚುನಾವಣಾ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ್ ಕುಮಾರ್ ಅವರು, ಮುಂದಿನ ವಾರ ವೇಳಾಪಟ್ಟಿ ಪ್ರಕಟವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ಬೆಳಗಾವಿ ಲೋಕಸಭೆ ಕ್ಷೇತ್ರ ತೆರವಾದರೆ, ನಾರಾಯಣರಾವ್ ಅವರ ಸಾವಿನಿಂದ ಬಸವ ಕಲ್ಯಾಣ, ಎಂ.ಸಿ.ಮನಗೋಳಿ ಅವರ ನಿಧನದಿಂದ ಸಿಂದಗಿ ವಿಧಾನಸಭಾ ಕ್ಷೇತ್ರ ತೆರವಾದರೆ, ಪ್ರತಾಪ್‍ಗೌಡ ಪಾಟೀಲ್ ಅವರ ರಾಜೀನಾಮೆಯಿಂದ ಮಸ್ಕಿ ಕ್ಷೇತ್ರ ಖಾಲಿಯಾಗಿವೆ.
ರಾಜಕೀಯ ಪಕ್ಷಗಳಿಗೂ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ. ಹಾಗಾಗಿ ಚುನಾವಣೆಗೆ ಈಗಾಗಲೇ ಸಾಕಷ್ಟು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

0 Comments