ಬೆಂಗಳೂರು : ನಾಲ್ವಡಿ ಕೃಷ್ಣರಾಜ ಒಡೆಯರ ಅವರು ಜನಪ್ರಿಯತೆ ಹಾಗೂ ಜನಾನುರಾಗ ಹೊಂದಿದ್ದ ಧುರೀಣರಾಗಿದ್ದು, ರಾಮರಾಜ್ಯದ ಪರಿಕಲ್ಪನೆಯನ್ನು ಈ ನಾಡಿಗೆ ತಂದುಕೊಟ್ಟ ಸಾಮಾಜಿಕ ಕಾನೂನಿನ ಹರಿಕಾರ. ಮೀಸಲಾತಿಯ ಕಲ್ಪನೆಯನ್ನು ದೇಶಕ್ಕೆ ತೋರಿಸಿದ ಮೀಸಲಾತಿ ಹರಿಕಾರ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಬಣ್ಣಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ ೧೩೯ನೆಯ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ತಮ್ಮ ಆಡಳಿತ ಕಾಲದಲ್ಲಿ ಯಾರಿಗೂ ಅನ್ಯಾಯ ಆಗಬಾರದು ಎಂಬ ಮಹತ್ವದ ಉದ್ದೇಶವನ್ನು ನಾಲ್ವಡಿಯವರು ಹೊಂದಿದ್ದರು. ಅದಕ್ಕೆ ಅವರ ಕಾಲದಲ್ಲಿ ನೀಡಿದ ಕೆಲವು ನ್ಯಾಯದಾನಗಳು ಇಂದಿನ ದಿನಗಳಲ್ಲಿಯೂ ಮಾದರಿಯಾಗಿದೆ. ಕನ್ನಡ ಶಾಲೆಗಳನ್ನು ಸ್ಥಾಪಿಸಬೇಕು, ಶಿಕ್ಷಣಕ್ಕೆ ಒತ್ತುಕೊಟ್ಟು ೧೯೧೧ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭಿಸಿದರು. ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾಯಿದೆ ಜಾರಿ, ವಯಸ್ಕರಿಗಾಗಿ ೭೦೦೦ ಶಾಲೆ ತೆರೆದರು. ಅಸ್ಪೃಶ್ಯರು, ಹಿಂದುಳಿದ ವರ್ಗದವರಿಗೆ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದರು. ೧೯೧೬ರಲ್ಲಿ ಮೈಸೂರು ವಿಶ್ವವಿದ್ಯಾಲಯ ಪ್ರಾರಂಭಿಸಿದ ನಾಲ್ವಡಿಯವರನ್ನು ಅಕ್ಷರ ಕ್ರಾಂತಿಯ ಜನಕ ಎಂದು ನಾಡೋಜ ಡಾ. ಮಹೇಶ ಜೋಶಿ ಅವರು ಬಣ್ಣಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ʻಕನ್ನಡ ಸಾಹಿತ್ಯ ಪರಿಷತ್ತಿನʼನ ಬಗ್ಗೆ ಕನ್ನಡದ ಮೇಲೆ ಅಪಾರವಾದ ಪ್ರೀತಿ, ಅಭಿಮಾನ ಹೊಂದಿದ್ದ ಮಹಾರಾಜರು ಭಾಗವಹಿಸಿದ ಕೊನೆಯ ಸಾರ್ವಜನಿಕ ಕಾರ್ಯಕ್ರಮವೆಂದರೆ ಕನ್ನಡ ಸಾಹಿತ್ಯ ಪರಿಷತ್ತಿನ ರಜತೋತ್ಸವ ಕಾರ್ಯಕ್ರಮ, ಅವರ ಕೊನೆಯ ಸಾರ್ವಜನಿಕ ಭಾಷಣ ಪರಿಷತ್ತಿನಲ್ಲಿ ಮಾಡಿದ್ದು. ಸಾರ್ವಜನಿಕ ಸಭೆಯಲ್ಲಿ ಅವರು ನುಡಿದ ಕೊನೆಯ ಮಾತೆಂದರೆ ಅದು:ʻಸಿರಿಗನ್ನಡಂ ಗೆಲ್ಗೆʼ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಶ್ರೀ. ಬಿ. ವೀರಪ್ಪ ಅವರು ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನಾಡಿನ ಜನತೆ “ಕೃಷ್ಣರಾಜ ಭೂಪ, ಮನೆ ಮನೆ ದೀಪ” ಎಂದೇ ಗೌರವಿಸುತ್ತಿದ್ದರು. ಅಪ್ರತಿಮ ದೂರದೃಷ್ಟಿಯ ನಾಯಕರು ಅವರು. ಕನ್ನಡ ನಾಡಿನ ಅಭಿವೃದ್ಧಿಯ ಹರಿಕಾರ ಅವರು. ನಾಡಿನ ಶಿಕ್ಷಣ, ನೀರಾವರಿ, -ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಜೊತೆಗೆ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ, ಜಾನಪದ ಇವುಗಳ ಅಭಿವೃದ್ಧಿಗೆ ಒತ್ತು ನೀಡಿದ್ದರು, ಅದರಂತೆ ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯಪರಿಷತ್ತನ್ನು ೧೯೧೫ರಲ್ಲಿ ಸ್ಥಾಪಿಸಿದರು. ನಾವು ಇಂದು ಮಾಡುವ ಹಲವಾರು ಕೆಲಸಗಳನ್ನು ನಾಲ್ವಡಿಯವರು ಹಿಂದೆಯೇ ಮಾಡಿ ಮುಗಿಸಿದ್ದರು ಎಂದು ಹೇಳಿದ್ದರು.
ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಅವರು ಮಾತನಾಡಿ ಮಂಡ್ಯ ಜಿಲ್ಲೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಬಹಳ ವಿಶೇಷವಾದದ್ದು. ಕನ್ನಂಬಾಡಿ ಕಟ್ಟೆಯನ್ನು ಕಟ್ಟುವ ಮೂಲಕ ಜಿಲ್ಲೆಯನ್ನು ಅವರು ಸಮೃದ್ಧವನ್ನಾಗಿಸಿದರು. ಇಲ್ಲಿ ಕಬ್ಬಿನ ಬೆಳೆ ಆರಂಭವಾಗಿದ್ದು ಅವರ ಕಾರಣದಿಂದಲೇ. ಕನ್ನಂಬಾಡಿ ಕಟ್ಟೆ ಕಟ್ಟುವಲ್ಲಿ ಹಣದ ಅಡಚಣೆ ಉಂಟಾದಾಗ ತಮ್ಮ ಪರಿವಾರದ ಒಡುವೆಯನ್ನು ಒತ್ತೆ ಇಟ್ಟು ಹಣವನ್ನು ಹೊಂದಿಸಿದ ಹೆಗ್ಗಳಿಕೆ ಅವರದು ಎಂದು ಎಸ್.ಎಂ.ಕೃಷ್ಣ ಅಭಿಪ್ರಾಯ ಪಟ್ಟರು. ನಮ್ಮ ತಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದರು. ನಾಲ್ವಡಿಯವರ ವಿಚಾರಗಳನ್ನು ಹೊಸ ತಲೆಮಾರಿಗೆ ತಲುಪಿಸುವ ಮುಖ್ಯವಾದ ಕೆಲಸ ಆಗ ಬೇಕಿದೆ ಎಂದೂ ಅವರು ಹೇಳಿದ್ದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತು ವಿಶೇಷ ಉಪನ್ಯಾಸ ನೀಡಲು ಆಗಮಿಸಿದ ಹಿರಿಯ ಬರಹಗಾರರು, ನಿವೃತ್ತ ಪ್ರಧಾನ ಮುಖ್ಯ ಆಯುಕ್ತರಾದ(ಆದಾಯ ಇಲಾಖೆ) ಶ್ರೀ ಕೆ. ಸತ್ಯನಾರಾಯಣ ಮಾತನಾಡಿ ಇವತ್ತಿನ ಬದಲಾವಣೆಯ ಪ್ರಸ್ತುತೆಯನ್ನು ಗಮನದಲ್ಲಿ ಇಟ್ಟುಕೊಂಡು ಅಡಳಿತ ಮಾಡಿದ ಮಾಹಾನ್ ಚೇತನ ಅವರು. ಯಾರಿಗೂ ಹೊಂದಾಣಿಕೆಯನ್ನು ಮಾಡಿ ನೋಡುವುದು ಸಾಧನೆಯಲ್ಲ. ಬದಲಿಗೆ ಯಾರಲ್ಲಿ ಯಾವ ಶಕ್ತಿ ಇದೆ ಎನ್ನುವುದನ್ನು ಗುರುತಿಸಿ ಅದನ್ನು ಬೆಳಸುವ ವ್ಯಕ್ತಿತ್ವ ಅವರಲ್ಲಿತ್ತು. ಪ್ರತಿಭಾವಂತ ದಿವಾನರನ್ನು ನೇಮಕಮಾಡಿಕೊಂಡು ಅವರಿಂದ ಉತ್ತಮ ಕೆಲಸಗಳನ್ನು ಹೊರಗೆ ತೆಗೆಯುವ ಚಾಣಾಕ್ಷತನವನ್ನು ನಾಲ್ವಡಿಯವರು ಹೊಂದಿದ್ದರು. ದೇಶದಲ್ಲಿ ಕಾಂಗ್ರೆಸ್ ಅಸ್ಥಿತ್ವಕ್ಕೆ ಬರುವ ಮುನ್ನವೇ ಪ್ರಜಾಪ್ರತಿನಧಿ ಸಭೆಯನ್ನು ಅವರು ರಚಿಸಿದ್ದರು. ಪಂಚಮ ಶಾಲೆಗಳನ್ನು ಆರಂಭಿಸುವ ಮೂಲಕ ಗಾಂಧೀಜಿ ಅವರ ಕಲ್ಪನೆಗಳಿಗೂ ಪ್ರೇರಣೆಯಾಗಿದ್ದರು ಎಂದು ಹೇಳಿದರು.
ಗೌರವ ಕೋಶಾಧ್ಯಕ್ಷರಾದ ಶ್ರೀ ಬಿ.ಎಂ. ಪಟೇಲ್‌ಪಾಂಡು ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು ಅವರು ವಂದಿಸಿದರು. ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ. ರಾಮಲಿಂಗಶೆಟ್ಟಿ ಅವರು ಉಪಸ್ಥಿತರಿದ್ದರು
ನಾಲ್ವಡಿಯವರ ಪುತ್ಥಳಿ ಶೀಘ್ರದಲ್ಲೇ ಮರು ಸ್ಥಾಪನೆ.
ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಈ ಹಿಂದ ಪರಿಷತ್ತಿನ ಕಚೇರಿಯ ಮೊದಲ ಮಹಡಿಯಲ್ಲಿ ಇತ್ತು. ಅಧ್ಯಕ್ಷರ ಭೇಟಿಗೆ ಬಂದವರಿಗೆ ಮಾತ್ರ ನಾಲ್ವಡಿಯವರ ಪುತ್ಥಳಿಯ ದರ್ಶನವಾಗುತ್ತಿತ್ತು. ಕಟ್ಟಡದ ನವೀಕರಣ, ಆಧುನೀಕರಣದ ಹಿನ್ನೆಲೆಯಲ್ಲಿ ಪುತ್ಥಳಿಯನ್ನು ಸುರಕ್ಷಿತವಾಗಿ ಇಡಲಾಗಿದ್ದು. ಈ ಕಾಮಗಾರಿಗಳು ಮುಗಿದ ನಂತರ ಪರಿಷತ್ತಿನ ಆವರಣದಲ್ಲಿರುವ ಧ್ವಜ ಸ್ಥಂಭದ ಪಕ್ಕದಲ್ಲಿ ವಿಶೇಷ ಪೀಠವನ್ನು ಸ್ಥಾಪನೆ ಮಾಡುವ ಮೂಲಕ ನಾಲ್ವಡಿಯವರ ಪುತ್ಥಳಿಯನ್ನು ಮರು ಸ್ಥಾಪಿಸಲಾಗುವುದು, ಜನಸಾಮಾನ್ಯರು ಸುಲಭವಾಗಿ ದರ್ಶನ ಪಡೆದು ಮಹಾರಾಜರಿಗೆ ನಮನಗಳನ್ನು ಸಲ್ಲಿಸಲು ಇದು ನೆರವಾಗಲಿದೆ. ಪುತ್ಥಳಿಯ ಮರು ಸ್ಥಾಪನೆಯ ಕಾರ್ಯಕ್ರಮಕ್ಕೆ ಈಗಾಗಲೇ ಮೈಸೂರು ಅರಸು ವಂಶದವರಾದ ಯದುವೀರ ಒಡೆಯರ್ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ತಿಳಿಸಿದ್ದಾರೆ.
ನಾಲ್ವಡಿ ಸ್ಮರಣೆಗಾಗಿ ದೊಡ್ಡತನ ಮೆರೆದ ಎಸ್.ಎಂ.ಕೃಷ್ಣ
ನಾಲ್ವಡಿ ಕೃಷ್ಣರಾಜ ಒಡೆಯರ ಪರಂಪರೆಯನ್ನು ಈಗಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೊಶಿ ಅವರು ಸಮರ್ಥವಾಗಿ ಮುಂದುವರೆಸುತ್ತಿದ್ದಾರೆ, ಪರಿಷತ್ತು ಈಗ ಪರಂಪರೆಯ ಜೊತೆಗೆ ಆಧುನಿಕರಣಕ್ಕೆ ಕೂಡ ತೆರೆದುಕೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ತು ಈಗ ಜನ ಸಾಮಾನ್ಯರ ಪರಿಷತ್ತು ಆಗುತ್ತಿದೆ. ಪರಿಷತ್ತಿನ ಎಲ್ಲಾ ಚಟುವಟಿಕೆಗಳನ್ನು ಕೂಡಾ ನಾನು ನಿರಂತರವಾಗಿ ಗಮನಿಸುತ್ತಿದ್ದೇನೆ ಹೀಗಾಗಿಯೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯ ವಿಷಯ ತಮ್ಮ ಗಮನಕ್ಕೆ ಬಂದಿತು ಎಂದು ಎಸ್.ಎಂ.ಕೃಷ್ಣ ಹೇಳಿದರು. ತಾವಾಗಿಯೇ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ದೊಡ್ಡತನವನ್ನು ಅವರು ಮೆರೆದು. ಅವರ ಈ ಹಿರಿಯ ಗುಣವನ್ನು ಎಲ್ಲರೂ ಆದರ್ಶ ಜನ ನಾಯಕ ಎಂದು ಎಲ್ಲರೂ ಕೊಂಡಾಡಿದರು.


0 Comments