Ticker

6/recent/ticker-posts

Ad Code

Responsive Advertisement

BIG NEWS : ದೊಡ್ಡ ನೆಕ್ಕುಂದಿಯಲ್ಲಿ 11ನೆಯ ಶತಮಾನದ ಅಪರೂಪದ ಮಾಸ್ತಿಗಲ್ಲು ಪತ್ತೆ

ಬೆಂಗಳೂರು ನಗರದ ಎಚ್.ಎ.ಎಲ್. ಸಮೀಪದ ದೊಡ್ಡನೆಕ್ಕುಂದಿಯಲ್ಲಿ ಗಂಗರ ಕಾಲದ 11ನೆಯ ಶತಮಾನದ ಮಹಾಸತಿ ಆಚರಣೆಯ ಅಪರೂಪದ ಮಾಸ್ತಿಗಲ್ಲನ್ನು ಕರ್ನಾಟಕ ಸರ್ಕಾರದ ಭಾಷಾಂತರ ನಿರ್ದೇಶನಾಲಯದ ಉಪ ನಿರ್ದೇಶಕಿ ಡಾ. ಸ್ಮಿತಾರೆಡ್ಡಿಯವರು ಶೋಧಿಸಿದ್ದಾರೆ.  




ಮಹಾಸತಿ ಅಥವಾ ಮಾಸ್ತಿ ಶಿಲ್ಪಗಳು ಕರ್ನಾಟಕದಾದ್ಯಂತ ಹತ್ತನೆಯ ಶತಮಾನದಿಂದಲೇ ದೊರೆಯುತ್ತವೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸಹ ಹನ್ನೆರಡನೆಯ ಶತಮಾನದಿಂದ ಹೆಚ್ಚಾಗಿ ಕಂಡುಬರುತ್ತವೆ. ಆದರೆ ಮಹಾಸತಿ ಆಚರಣೆಯನ್ನು ಸೂಚಿಸುವಂತಹ ಇಂತಹ ಶಿಲ್ಪಗಳು ಕರ್ನಾಟಕದಲ್ಲಿ ತುಂಬಾ ವಿರಳ. ಅದರಲ್ಲೂ ಹೆಗ್ಗಡದೇವನಕೋಟೆಯ ಬೆಳತೂರಿನ ದೇಕಬ್ಬೆಯ ಶಿಲ್ಪವನ್ನು ಬಿಟ್ಟರೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಮಹಾಸತಿ ಆಚರಣೆಯ ವಿವರವನ್ನು ಒಳಗೊಂಡಿರುವ ಪ್ರಾಚೀನ ಶಾಸನ ಇದಾಗಿದೆ. ಇದು ಬೆಂಗಳೂರಿನ ಪರಿಸರದಲ್ಲಿ ಈವರೆಗೆ ದೊರೆತಂತಹ ಮಾಸ್ತಿಗಲ್ಲುಗಳಲ್ಲಿಯೇ ಮೊಟ್ಟ ಮೊದಲನೆಯದು ಮಾತ್ರವಲ್ಲದೆ, ಕರ್ನಾಟಕದಲ್ಲಿ ಸತಿ ಆಚರಣೆಯನ್ನು ಚಿತ್ರಿಸಿರುವ ಕ್ರಿ.ಶ. 1057ರ ದೇಕಬ್ಬೆ ಶಾಸನಕ್ಕಿಂತಲೂ ಪ್ರಾಚೀನವಾದ ಮೊಟ್ಟಮೊದಲ ಶಾಸನವೆಂಬ ಹೆಗ್ಗಳಿಕೆಗೆ ಈ ಮಾಸ್ತಿಗಲ್ಲು ಪಾತ್ರವಾಗುತ್ತದೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಈ ಶಾಸನವು ದೊಡ್ಡ ನೆಕ್ಕುಂದಿಯ ಕೆರೆಯ ಸಮೀಪ ಇದ್ದು, ಇತ್ತೀಚೆಗೆ ಕೆರೆಯನ್ನು ಪುನಶ್ಚೇತನಗೊಳಿಸುವಾಗ ಪತ್ತೆಯಾಗಿದೆ. ಸ್ಥಳೀಯರಾದ ರಾಧಾಕೃಷ್ಣಾರೆಡ್ಡಿಯವರು ಅದನ್ನು ದೇವಾಲಯದ ಬಳಿ ಸುರಕ್ಷಿತವಾಗಿಟ್ಟು ಸಂರಕ್ಷಿಸಿದ್ದಾರೆ. ಈ ಶಿಲ್ಪದ ಶೋಧದಲ್ಲಿ ಸ್ಥಳೀಯರಾದ ಎಸ್. ರಾಹುಲ್ ರೆಡ್ಡಿ, ಗೋಪಾಲರೆಡ್ಡಿ ಆಸಕ್ತಿಯಿಂದ ನೆರವಾಗಿದ್ದು ಶ್ಲಾಘನೀಯವಾದ್ದು. 

ಮಹಾಸತಿ ಆಚರಣೆಯಲ್ಲಿ ಸಹಗಮನ ಹಾಗೂ ಅನುಗಮನ ಎಂಬ ಎರಡು ವಿಧಾನಗಳಿವೆ. ಸಹಗಮನದಲ್ಲಿ ವೀರನು ಮರಣ ಹೊಂದಿದಾಗ ಅವನ ಸತಿಯೂ ಅವನೊಂದಿಗೆ ಮರಣ ಹೊಂದುತ್ತಾಳೆ. ವೀರನು ಯುದ್ಧರಂಗ ಅಥವಾ ಬೇರೆಲ್ಲೋ ಮರಣ ಹೊಂದಿದಾಗ, ಅವನ ಇಷ್ಟದ ವಸ್ತುವಿನೊಂದಿಗೆ ವೀರನ ಪತ್ನಿ ಚಿತೆಗೇರುವುದನ್ನು ಅನುಗಮನ ಎಂದು ಕರೆಯಲಾಗುತ್ತದೆ. ದೊಡ್ಡ ನೆಕ್ಕುಂದಿಯಲ್ಲಿ ಪತ್ತೆಯಾದ ಮಾಸ್ತಿಗಲ್ಲು ಅನುಗಮನ ಪ್ರಕಾರಕ್ಕೆ ಸೇರುತ್ತದೆ. ಈ ಮಾಸ್ತಿಗಲ್ಲಿನಲ್ಲಿ ಮೂರು ಹಂತಗಳಲ್ಲಿ ಶಿಲ್ಪವಿದ್ದು, ಮೊದಲ ಹಂತದÀÀಲ್ಲಿ ವಾದ್ಯಗಳ ಸಮೇತ ಮೆರವಣಿಗೆಯಲ್ಲಿ ಬಂದಿರುವ ಸತಿ ಜ್ವಲಿಸುತ್ತಿರುವ ಅಗ್ನಿಕುಂಡದಲ್ಲಿ ಕುಳಿತಿದ್ದಾಳೆ. ಆಕೆ ವೀರನೊಟ್ಟಿಗೆ ಸಹಗಮನ ಮಾಡಿಲ್ಲವೆಂಬುದಕ್ಕೆ ವೀರನ ಸಂಕೇತವಾಗಿ ಪಕ್ಕದಲ್ಲಿ ಕುದುರೆಯ ಶಿಲ್ಪವನ್ನು ಬಿಡಿಸಲಾಗಿದೆ. ಎರಡನೆಯ ಹಂತದಲ್ಲಿ ಪ್ರಧಾನವಾಗಿ ವೀರ ಮತ್ತು ಆತನ ಪತ್ನಿಯನ್ನು ಬಿಡಿಸಲಾಗಿದೆ. ವೀರ ಕೈಮುಗಿದುಕೊಂಡು ಕುಳಿತಿದ್ದು ಅವನ ಬಲಭಾಗದಲ್ಲಿ ಪತ್ನಿಯು ಬಲಗೈಯಲ್ಲಿ ಮಂಗಲದ ಸಂಕೇತಗಳಾದ ಕನ್ನಡಿಯನ್ನು ಇನ್ನೊಂದು ಕೈಯಲ್ಲಿ ಗಿಂಡಿಯಂತಹ ವಸ್ತುವನ್ನು ಹಿಡಿದುಕೊಂಡಿದ್ದಾಳೆ. ಮೂರನೆಯ ಹಂತದಲ್ಲಿ ಎಡ ಮತ್ತು ಬಲ ಭಾಗಗಳಲ್ಲಿ ಸಮಾನಾಂತರವಾಗಿ ವೀರನನ್ನು ಮತ್ತು ಸತಿಯನ್ನು ಅಪ್ಸರೆಯರು ಪ್ರತ್ಯೇಕವಾಗಿ ಸ್ವರ್ಗಕ್ಕೆ ಕರೆದೊಯ್ಯುತ್ತಿರುವಂತೆ ಬಿಡಿಸಲಾಗಿದೆ. ಸಾಮಾನ್ಯವಾಗಿ ವೀರ ಮತ್ತು ಅವನ ಸತಿಯನ್ನು ಒಟ್ಟಿಗೆ ಸ್ವರ್ಗಕ್ಕೆ ಕರೆದೊಯ್ಯುವಂತೆ ಬಿಡಿಸುವುದು ಸಾಮಾನ್ಯ. ಆದರೆ ಇಲ್ಲಿ ಅಪರೂಪವಾಗಿ ಅವರಿಬ್ಬರನ್ನೂ ಅಪ್ಸರೆಯರು ಪ್ರತ್ಯೇಕವಾಗಿ ಹೊತ್ತೊಯ್ಯುತ್ತಿರುವುದು ಈ ಶಿಲ್ಪದ ವಿಶೇಷ.

(ಡಾ. ಸ್ಮಿತಾರೆಡ್ಡಿ)


Post a Comment

0 Comments

Ad Code

Responsive Advertisement