ಭಾರತೀಯ ವಿದ್ಯಾ ಭವನದಲ್ಲಿ ಪ್ರತೀ ಶುಕ್ರವಾರದ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಡಿಯಲ್ಲಿ ವಿದುಷಿ ದೀಪಾ ಭಟ್ ಮತ್ತು ಶಿಷ್ಯೆಯರು ಸಮೂಹ ಭರತನಾಟ್ಯ ಮಾರ್ಗಂ ಪ್ರದರ್ಶಿಸಿದರು. ನಾಟ್ಯಾಂಜಲಿ ಮುಖೇನ ಗಣೇಶ, ಸರಸ್ವತಿ, ವಿಷ್ಣು, ನಟರಾಜ ಹಾಗು ಗುರುಗಳಿಗೆ ವಂದಿಸಿ, ನಂತರ ದೇವಿ ಕೌತ್ವಂದಲ್ಲಿ ಶ್ರೀ ಚಕ್ರದಲ್ಲಿ ನೆಲೆಸಿರುವ ಜಗನ್ಮಾತೆ ಪಾರ್ವತಿಯ ಗುಣಗಾನವನ್ನು ಸುಂದರವಾಗಿ ಪ್ರಸ್ತುತಪಡಿಸಿದರು. ಶ್ರೀ ರಾಮನ ಕುರಿತಾದ ಅಪರೂಪದ ಕನ್ನಡ ಶಬ್ಧಂನಲ್ಲಿ ರಾಮನ ಜನನ, ಸೀತಾ ಸ್ವಯಂವರದ ದೃಶ್ಯಗಳನ್ನು ಸಂಚಾರಿ ಮುಖೇನ ನಿರೂಪಿಸಿದರು.
ಭರತನಾಟ್ಯ ಮಾರ್ಗಂನ ಪ್ರಮುಖ ಬಂಧ ವರ್ಣಂ - ಶ್ರೀಕೃಷ್ಣ ಅಷ್ಟೋತ್ತರದಿಂದ ಆಯ್ದ ಶ್ಲೋಕಗಳಿಂದ ಸಂಯೋಜಿಸಿರುವ ಅತ್ಯಂತ ಪ್ರಸಿದ್ದ ಶ್ರೀ ಕೃಷ್ಣ ಕಮಲಾ ನಾಥೋ ವರ್ಣಂನಲ್ಲಿ ಶ್ರೀ ಕೃಷ್ಣನ ಲೀಲೆಗಳಾದ ಕೃಷ್ಣ ಜನನ, ಪೂತನಾ ಸಂಹಾರ, ಕಾಳಿಂಗ ಮರ್ಧನ, ಗೋವರ್ಧನ ಗಿರಿಧಾರಣೆ, ಗೋಪೀಕಾ ವಸ್ತ್ರಾಪಹರಣ, ರಾಸಲೀಲಾ ಮುಂತಾದ ಪ್ರಸಂಗಗಳನ್ನು ಅತೀ ಸುಂದರವಾಗಿ ಮನೋಹರ ಅಭಿನಯದಿಂದ ಕ್ಷಿಪ್ರಗತಿಯ ವಿಶೇಷ ಭಂಗಿಗಳಲ್ಲಿ ಪ್ರದರ್ಶಿಸಿ ಕಲಾರಸಿಕರಿಗೆ ನವರಸದೌತಣವನ್ನು ನೀಡಿದರು.
ಸುಲಭದಿ ಒದಗದು ಹರಿ ಕರುಣೆ ಎಂಬ ದೇವರನಾಮದಲ್ಲಿ ಶ್ರೀಮತಿ ದೀಪಾ ಭಟ್ ಅವರು ಗಜೇಂದ್ರ ಮೋಕ್ಷ, ನರಸಿಂಹಾವತಾರ, ವಾಮನ ರೂಪಿಯಾಗಿ ಬಲಿ ಗರ್ವ ಭಂಗ, ದ್ರೌಪದಿಯ ಮಾನಭಂಗವಾಗದಂತೆ ಕಾಪಾಡಿದ ಹರಿ ಲೀಲೆಗಳನ್ನು ಸಂದರ್ಭಕ್ಕೆ ಅನುಸಾರವಾಗಿ ತಮ್ಮ ಮನೋಜ್ಞ ಅಭಿನಯ ದಿಂದ ಸಭಿಕರ ಮನಸೂರೆಕೊಂಡರು. ಕಾಪಾಲಿ ಎಂಬ ಶಿವ ಕೀರ್ತನೆ ಹಾಗು ನಟಭೈರವಿ ತಿಲ್ಲಾನದಿಂದ ನೃತ್ಯ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂತು.




0 Comments