ಬೆಂಗಳೂರು: ಕರುನಾಡು ಕಂಡ ಮಹಾನ್ ಚಿತ್ರ ಕಲಾವಿದ ಶ್ರೀ ಬಿ,ಕೆ,ಎಸ್ ವರ್ಮಾ ಅವರು ಇನ್ನಿಲ್ಲ ಎನ್ನುವ ಸುದ್ದಿ ಬರಸಿಡಿಲು ಬಡಿದಂತಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ತಾಯಿ ಭುವನೇಶ್ವರಿಯ ಚಿತ್ರವನ್ನು ರಚಿಸಿ ಕೊಡುವ ಮೂಲಕ ಸಮಸ್ತ ಕನ್ನಡಿಗರ ಹೆಮ್ಮೆಯ ಕನ್ನಡಾಂಬೆಯ ಪರಿಕಲ್ಪನೆಯನ್ನು ನೀಡಿದ ಶ್ರೇಷ್ಟ ಬಣ್ಣದ ಗಾರುಡಿಗ ಅವರು ಎಂದು ಬಣ್ಣಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಕಂಬನಿ ಮಿಡಿದಿದ್ದಾರೆ.
೧೯೪೯ರ ಸೆಪ್ಟೆಂಬರ್ ೫ರಂದು ಬೆಂಗಳೂರಿನ ಅತ್ತಿಗುಪ್ಪೆ ಜನಿಸಿದ್ದ ಬಿ.ಕೆ. ಎಸ್ ವರ್ಮಾ ಅವರು ನಮ್ಮನ್ನಗಲಿದ್ದಾರೆ. ಇಂದು ಎಲ್ಲೆಲ್ಲಿಯೂ ಶೋಭಿಸುತ್ತಿರುವ ಕನ್ನಡ ಮಾತೆಯನ್ನು ಚಿತ್ರಿಸಿ ನೀಡಿದ ಇವರ ಪೂರ್ಣ ಹೆಸರು ಬುಕ್ಕಸಾಗರದ ಕೃಷ್ಣಮಾಚಾರ್ಯ ಶ್ರೀನಿವಾಸ ಎನ್ನುವದಾಗಿ. ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ರಾಜಾ ರವಿವರ್ಮರ ಕಲಾಕೃತಿಗಳನ್ನು ಆರಾಧ್ಯ ಭಾವದಿಂದ ಅನುಭಾವಿಸಿದ ಶ್ರೀನಿವಾಸ ಎಂಬ ಅಂದಿನ ಹುಡುಗನ ಹೃದಯದಲ್ಲಿ, ನಾನೂ ಇಂಥಾ ಕಲಾವಿದನಾಗಬೇಕು ಎಂಬ ಸಂಕಲ್ಪ ಮಿಂಚಿನಂತೆ ಬಂದಿತ್ತು. ಅದರ ಪರಿಣಾಮವೇ ತನ್ನ ಹೆಸರಿಗೆ ವರ್ಮಾ ಎಂಬ ಹೆಸರನ್ನು ಸೇರಿಕೊಳ್ಳುವ ನಿರ್ಧಾರ ಮಾಡಿಕೊಂಡಿದ್ದ. ಅವರಲ್ಲಿ ಅಡಗಿದ್ದ ಕಲಾವಂತಿಕೆಯ ಮೂಲಕವೇ ತನ್ನ ಹೆಸರಿನೊಂದಿಗೆ ವರ್ಮಾ ಎನ್ನುವ ಹೆಸರು ಅರಸಿಕೊಂಡು ಬರುವಂತೆ ಮಾಡಿಕೊಂಡಿದ್ದರು ಎಂದು ನಾಡೋಜ ಡಾ. ಮಹೇಶ ಜೋಶಿ ನೆನೆಸಿಕೊಂಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ನಿಕಟ ಸಂಬಂಧವನ್ನು ಹೊಂದಿದ ಬಿ.ಕೆ.ಎಸ್ ವರ್ಮ ಅವರು “ಇದ್ದುದನ್ನು ಇರುವ ಹಾಗೇ ಬರೆಯುವುದು ಚಾರ್ಟ್, ಅದನ್ನು ಅನುಭವಿಸಿ ಬರೆಯುವುದು ಆರ್ಟ್” ಎಂದು ಮಾರ್ಮಿಕವಾಗಿ ನುಡಿಯುತ್ತಿದ್ದರು. ಕಲೆಯನ್ನು ಅಂತರಂಗದಲ್ಲಿ ತುಂಬಿಕೊಂಡ ಬಿ.ಕೆ. ಎಸ್. ವರ್ಮರು ಮೂರನೆಯ ತರಗತಿಗೆ ಓದು ನಿಲ್ಲಿಸಿ ಮನೆ ಬಿಟ್ಟು ಹೊರಟಾಗ ಅವರಿಗೆ ಕೇವಲ ಎಂಟು ವರ್ಷ ವಯಸ್ಸು. ಮಹಾನ್ ಕಲಾವಿದರಾದ ಶ್ರೀ ಎ.ಸಿ.ಹೆಚ್. ಆಚಾರ್ಯ ಮತ್ತು ಶ್ರೀ ಅ.ನ..ಸುಬ್ಬರಾಯರ ಪ್ರಭಾವವನ್ನು ಪಡೆದು ಚಿತ್ರ ಕಲೆಯಲ್ಲಿ ಡಿಪ್ಲೊಮಾ ಪಧವಿ ಪಡೆದು ೧೫ನೇ ವಯಸ್ಸಿನಲ್ಲಿ ಹಿಂದಿಯ ‘ಆದ್ಮಿ’ ಚಲನಚಿತ್ರಕ್ಕೆ ಸಹಾಯಕ ಕಲಾನಿರ್ದೇಶಕರಾಗಿ ಕೆಲಸ ಮಾಡಿದ್ದರು. ʼದೀಪʼ ಚಿತ್ರಕ್ಕಾಗಿ ಇಡೀ ಹನುಮಂತ ನಗರದ ಗುಡ್ಡವನ್ನು ತಮ್ಮ ಚಿತ್ರಗಳಿಂದ ಸಿಂಗರಿಸಿದ್ದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಒಂದು ವಿಶಿಷ್ಟ ದಾಖಲೆ. ʼಬಂಗಾರದ ಜಿಂಕೆʼ ಚಿತ್ರಕ್ಕಾಗಿ ರೂಪಿಸಿದ್ದ ಬಂಗಾರದ ಜಿಂಕೆ ವಿಶಿಷ್ಟವಾಗಿತ್ತು. ಇಂತಹ ಹಲವು ಅಪರೂಪದ ಪ್ರಯೋಗಗಳನ್ನು ಅವರು ಮಾಡಿದ್ದರು ಎನ್ನುವುದನ್ನು ನೆನಪಿಸಿ ಕೊಂಡ ನಾಡೋಜ.ಡಾ.ಮಹೇಶ ಜೋಶಿಯವರು ಹಲವು ಪತ್ರಿಕೆಗಳಲ್ಲಿ ಕೂಡ ಅವರು ಚಿತ್ರ ಕಲಾವಿದರಾಗಿ ಕೆಲಸ ಮಾಡಿದ್ದನ್ನು ಸ್ಮರಿಸಿದರು.
ಬಿ.ಕೆ.ಎಸ್ ವರ್ಮ ಅವರು ಸರ್ವೇಪಳ್ಳಿ ರಾಧಾಕೃಷ್ಣನ್, ವಿಜಯಲಕ್ಷ್ಮೀ ಪಂಡಿತ್, ಜಯಚಾಮರಾಜೇಂದ್ರ ಒಡೆಯರ್, ಶಿವರಾಮ ಕಾರಂತ, ಕುವೆಂಪು, ರೋರಿಚ್ – ದೇವಿಕಾರಾಣಿ ದಂಪತಿಗಳು, ವರನಟ ಡಾ.ರಾಜ್ಕುೆಮಾರ್, ಎಂ.ಜಿ.ಆರ್, ಅಮಿತಾಬ್ ಬಚ್ಚನ್, ರಜನೀಕಾಂತ ಮುಂತಾದ ಗಣ್ಯರ ಮೆಚ್ಚುಗೆಗೆ ಪಾತ್ರರಾಗಿದ್ದರು. ದೇವತೆಗಳ ಚಿತ್ರದ ಜೊತೆಗೆ ಇವರು ರಚಿಸಿದ ಕನ್ನಡಾಂಬೆಯ ಚಿತ್ರ ನಿತ್ಯ ನೂತನವಾಗಿದೆ. ಪರಿಸರದ ಮಹತ್ವವನ್ನು ತಿಳಿಸಿಕೊಡಲು ತನ್ನ ಕುಂಚವನ್ನು ಬಳಸಿಕೊಂಡ ವರ್ವರು ಶತಾವಧಾನಿ ಆರ್ ಗಣೇಶ್ ಅವರ ಅವಧಾನ ಕಾರ್ಯಕ್ರಮಗಳು, ಹಾಸ್ಯೋತ್ಸವ ಕಾರ್ಯಕ್ರಮಗಳು, ಕಾವ್ಯಗೋಷ್ಠಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಅನೇಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಕೊಂಡವರು. ಸದಾ ಕನ್ನಡದ ಬಗ್ಗೆ ಕಾಳಜಿ ಹೊಂದಿದ್ದ ಅವರು ಕಳೆದ ಕೆಲವು ದಿನಗಳ ಹಿಂದೆ ಅವರು ರಚಿಸಿ ಕೊಡುಗೆಯಾಗಿ ನೀಡಿದ ಕನ್ನಡ ತಾಯಿ ಭುವನೇಶ್ವರಿ ಚಿತ್ರವನ್ನು ಕನ್ನಡ ಸಾಹಿತ್ಯ ಪರಿಷತ್ತು ಅಧಿಕೃತವಾಗಿ ಬಳಸಿಕೊಳ್ಳಲು ತಮ್ಮ ಅಧಿಕೃತ ಒಪ್ಪಿಗೆಯನ್ನು ನೀಡುವ ಮೂಲಕ ತನ್ನ ಚಿತ್ರವನ್ನು ಕನ್ನಡಿಗರ ಅಸ್ಮಿತೆಗೆ ಕಾರಣರಾಗಿದ್ದರು. ಪರಿಷತ್ತಿನೊಂದಿಗೆ ಸದಾ ಒಡನಾಡದಲ್ಲಿ ಇದ್ದ ಬಿ.ಕೆ.ಎಸ್.ವರ್ಮ ಅವರ ಸಾವಿನಿಂದ ಉಂಟಾದ ನಿರ್ವಾತವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹೇಳಿದ್ದರು.
ಬಿ.ಕೆ.ಎಸ್.ವರ್ಮಾ ಅವರ ಕಲಾಸೇವೆಯನ್ನು ಗುರುತಿಸಿ ಬೆಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರದಾನಿಸಿತ್ತು. ಪರಿಸರ ಪ್ರೇಮಕ್ಕೆ ಉದಾಹರಣೆಯಾದ ಅತ್ಯಂತ ಪ್ರಭಾವಿ ವರ್ಣಚಿತ್ರ 'ವೃಕ್ಷಮಾಲಿನಿ'ಗೆ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಸಂದಿತ್ತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜೀವ್ ಗಾಂಧೀ ಪ್ರಶಸ್ತಿ ಸೇರಿಂದತೆ ಇನ್ನೂ ಅನೇಕ ಪ್ರತಿಷ್ಟಿತ ಸಂಸ್ಥೆಗಳ ಗೌರವಗಳಿಗೆ ಭಾಜರಾದ ಅವರನ್ನು ಇತ್ತೀಚೆಗೆ ಹಾವೇರಿಯಲ್ಲಿ ನಡೆದ ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅವರನ್ನು ಸನ್ಮಾನಿಸುವುದಕ್ಕಾಗಿ ಆಹ್ವಾನಿಸಿದ್ದಾಗ ತಮ್ಮ ಅನಾರೋಗ್ಯದ ಕಾರಣ ಭಾಗವಹಿಸಲು ಸಾಧ್ಯವಾಗದ್ದಕ್ಕೆ ವಿಷಾದಿಸಿ ಸಮ್ಮೇಳನಕ್ಕೆ ಶುಭವನ್ನು ಕೋರಿದ್ದರು ಎಂದು ಸ್ಮರಿಸಿದ ನಾಡೋಜ. ಡಾ.ಮಹೇಶ ಜೋಶಿಯವರು, ಅಪಾರ ಕನ್ನಡ ಕಲಾ ಅಭಿಮಾನಿಗಳನ್ನು, ಕಲಾಸಕ್ತರನ್ನು, ಅಕ್ಕರೆಯ ವಿದ್ಯಾರ್ಥಿ ಗಣವನ್ನು ಬಿಟ್ಟು ಹೋಗಿದ್ದಾರೆ. ಮಹನೀಯರ ಆತ್ಮಕ್ಕೆ ಶಾಂತಿ ಸಿಗಲಿ, ಮೃತರ ಕುಟುಂಭಕ್ಕೆ ದು:ಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಸಮಸ್ತ ಕನ್ನಡಿಗರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಕಂಬನಿ ಮಿಡಿಯುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಸಂತಾಪ ಸೂಚಿಸಿದ್ದಾರೆ.
0 Comments