ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ 2023 - 24 ನೇ ಸಾಲಿನ 3,09,184 ಕೋಟಿ ಬಜೆಟ್ ಶಾಶ್ವತ ಅಭಿವೃದ್ಧಿ ಇಲ್ಲದ, ಸುಳ್ಳು ಭರವಸೆಯ ಮೂಲಕ ವೋಟು ಸೆಳೆಯುವ ಕುತಂತ್ರದ ಬಜೆಟ್ ಆಗಿದೆ.
ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ, ರಾಜ್ಯದ ಜನರ ವಾಸ್ತವಿಕ ಸಮಸ್ಯೆಯ ಬಗ್ಗೆ ಕಿಂಚಿತ್ತು ಅರಿವಿಲ್ಲದಿರುವುದು ಬಜೆಟ್ ನಲ್ಲಿ ಎದ್ದು ಕಾಣುತ್ತಿದೆ. ಜನ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ.
ಸರ್ಕಾರ ಬಜೆಟ್ ಮಂಡಿಸುವಾಗ ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತು. ಆದರೆ ಸರ್ಕಾರಕ್ಕೆ ಈ ಬಗ್ಗೆ ಅರಿವೇ ಇಲ್ಲ ಎಂಬುದನ್ನು ಬಜೆಟ್ ಸಾಬೀತುಪಡಿಸಿದೆ. ರೈತರಿಗೆ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡುವುದಾಗಿ ಘೋಷಿಸಿರುವುದು ಹಾಸ್ಯಾಸ್ಪದ. ಬಹುತೇಕ ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡುವುದನ್ನು ಬಿಟ್ಟು, ಸಾಲ ನೀಡುವುದಾಗಿ ಘೋಷಿಸಿರುವುದು ಅವಾಸ್ತವಿಕ. ರೈತರು ಹಳೆಯ ಸಾಲ ತೀರಿಸದಿರುವುದರಿಂದ ಹೊಸ ಸಾಲ ಪಡೆಯುವ ಅವಕಾಶ ದಿಂದ ವಂಚಿತರಾಗಿದ್ದಾರೆ. ಇನ್ನು ರೈತರ ಬೆಳೆಗಳನ್ನ ಶಾಶ್ವತ ಖರೀದಿ ಕೇಂದ್ರ ಸ್ಥಾಪನೆ ಹಾಗೂ ಬೆಳೆಗಳ ರಕ್ಷಣೆಗೆ ಸೂಕ್ತ ಶಿಥಿಲೀಕರಣ ವ್ಯವಸ್ಥೆ ಇರುವ ಗೋದಾಮುಗಳ ನಿರ್ಮಾಣ ಸರ್ಕಾರದ ಆದ್ಯತೆಯಾಗಿಲ್ಲ.
ಶಿಕ್ಷಣಕ್ಕೆ 37 ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸುವುದಾಗಿ ಹೇಳಲಾಗಿದೆ. ಆದರೆ ಸುಮಾರು ಒಂದೂವರೆ ಲಕ್ಷ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಪ್ರಸ್ತಾಪ ಇಲ್ಲ. ಶಿಕ್ಷಕರೇ ಇಲ್ಲದೆ ಗುಣಮಟ್ಟದ ಶಿಕ್ಷಣ ಸಾಧ್ಯವಿಲ್ಲ ಎಂಬ ಸಾಮಾನ್ಯ ಜ್ಞಾನ ಈ ಸರ್ಕಾರಕ್ಕೆ ಇಲ್ಲ. ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಶೇಕಡ 60 ಕ್ಕಿಂತ ಕಡಿಮೆ ಬೋಧಕರಿದ್ದು, ನೇಮಕಾತಿಗೆ ಆದ್ಯತೆ ನೀಡಬೇಕಾಗಿತ್ತು. ನೇಮಕಾತಿಯನ್ನೇ ಕಡೆಗಣಿಸಿ ಉನ್ನತ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನು ಮತ್ತಷ್ಟು ಕುಸಿಯುವಂತೆ ಮಾಡಲಾಗುತ್ತಿದೆ.
ಕಳೆದ ಮೂರು ವರ್ಷಗಳಿಂದ ವಸತಿ ಯೋಜನೆಗೆ ಹಣ ಬಿಡುಗಡೆ ಮಾಡದ ಬಿಜೆಪಿ ಸರ್ಕಾರ, ಈಗ ಮತ್ತೊಮ್ಮೆ ಐದು ಲಕ್ಷ ಮನೆಗಳನ್ನು ನಿರ್ಮಿಸುತ್ತೇವೆ ಎಂದು ಹೇಳಿರುವುದು ವಿಪರ್ಯಾಸ.
ಸರ್ಕಾರದ ಅವಧಿ ಮೂರು ತಿಂಗಳು ಇದ್ದರೂ, ಲಕ್ಷ ಸರ್ಕಾರಿ ಉದ್ಯೋಗ ಭರ್ತಿಯ ಘೋಷಣೆ ಮಾಡಿರುವುದು ಚುನಾವಣಾ ತಂತ್ರವಾಗಿದೆ. ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಎರಡೂವರೆ ಲಕ್ಷ ಸರ್ಕಾರಿ ಹುದ್ದೆಗಳನ್ನು ಕಳೆದ ಮೂರು ವರ್ಷಗಳಲ್ಲಿ ಭರ್ತಿ ಮಾಡುವ ಪ್ರಯತ್ನ ಮಾಡದ ಬಿಜೆಪಿ ಸರ್ಕಾರ, ಚುನಾವಣಾ ಸಂದರ್ಭದಲ್ಲಿ ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡುತ್ತೇವೆ ಎಂದಿರುವುದು ನಾಚಿಕೆಗೇಡು.
ಹಳೆ ಪಿಂಚಣಿ ವ್ಯವಸ್ಥೆ ಜಾರಿಗಾಗೀ ಹೋರಾಡುತ್ತಿರುವ ಸರ್ಕಾರಿ ನೌಕರರ ಬೇಡಿಕೆಗೆ ಸ್ಪಂದಿಸದೆ ಇರುವುದು, ಬಿಜೆಪಿಯ ನೌಕರ ವಿರೋಧಿ ಧೋರಣೆಗೆ ಈ ಬಜೆಟ್ ಸಾಕ್ಷಿಯಾಗಿದೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಬಿಸಿಯೂಟ ಅಡುಗೆ ನೌಕರರು, ಗ್ರಾಮ ಸಹಾಯಕರು ತಮ್ಮನ್ನು ಖಾಯಂ ಗೊಳಿಸುವಂತೆ ಹೋರಾಟ ಮಾಡುತ್ತಿದ್ದರೂ, ಕೇವಲ 1000 ರೂ ವೇತನ ಏರಿಕೆ ಮಾಡಿ ಮೂಗಿಗೆ ತುಪ್ಪ ಹಚ್ಚಲಾಗಿದೆ.
ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಕಲ್ಪಿಸುವುದರ ಬದಲು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದು ಬಾರಿ ಕೇವಲ 2,000 ರೂ ಸಹಾಯಧನ ಘೋಷಿಸಿರುವುದು ಹಾಸ್ಯಾಸ್ಪದ. ಆರ್ಥಿಕ ಅಭಿವೃದ್ಧಿ ಎಂದರೆ ಜನರ ಆದಾಯವನ್ನು ಏರಿಕೆ ಮಾಡುವಂತಹ ಹಾಗೂ ಜೀವನ ಭದ್ರತೆ ಇರುವ ಉದ್ಯೋಗಗಳನ್ನು ಸೃಷ್ಟಿಸುವುದು ಎಂಬ ಪರಿಕಲ್ಪನೆ ಎಲ್ಲಿಯವರೆಗೆ ಸರ್ಕಾರಗಳಿಗೆ ಬರುವುದಿಲ್ಲವೋ ಅಲ್ಲಿಯವರೆಗೆ ಅಭಿವೃದ್ಧಿ ಎಂಬುದು ಪೊಳ್ಳು ಭರವಸೆಯಾಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ಆದಾಯ ಮತ್ತು ನಿಗದಿತ ಸಂಪನ್ಮೂಲ ಇಲ್ಲದಿದ್ದರೂ ಜಿಎಸ್ಟಿ ಹೇರಿ ಜನರನ್ನು ಆರ್ಥಿಕವಾಗಿ ದುರ್ಬಲ ಗೊಳಿಸುತ್ತಿದ್ದಾರೆ.
ಬಡವರು, ರೈತರು ಕಾರ್ಮಿಕರು ಮತ್ತು ದುಡಿಯುವ ಮಹಿಳೆಯರ ದುಡಿಮೆ ಹಣಕ್ಕೆ ಜಿಎಸ್ಟಿ ಮೂಲಕ ಕನ್ನ ಹಾಕಿ 500, 1000 ರೂಗಳ ಸಹಾಯಧನ ಘೋಷಣೆ ಮಾಡುವುದು ಖಂಡನೀಯ. ವೃದ್ಧಾಪ್ಯ, ವಿಧವಾ ಹಾಗೂ ವಿಶೇಷ ಚೇತನರ ಮಾಶಾಸನ ಏರಿಕೆ ಮಾಡದೇ ಈ ವರ್ಗಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ.
ಇಡೀ ಬಜೆಟ್ನಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನ ಖಾಯಂ ಗೊಳಿಸುವ ಅಥವಾ ನೇರ ಪಾವತಿಯ ನಿರ್ಧಾರ ಪ್ರಕಟಿಸದಿರುವುದು, ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಆರೋಗ್ಯ ಮತ್ತು ಪಿಂಚಣಿ ವ್ಯವಸ್ಥೆ ಒದಗಿಸದೆ ಇರುವುದು, ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಮಾಡದಿರುವುದು ಇವರು ನಡೆಸಿದ ಹೋರಾಟಕ್ಕೆ ಸರ್ಕಾರ ಅಪಮಾನ ಮಾಡಿದಂತಾಗಿದೆ.
ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಸೌಲಭ್ಯ ಕಲ್ಪಿಸಲು ಬಜೆಟ್ನಲ್ಲಿ 6000 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಹೇಳಿದ್ದರು ಬಜೆಟ್ನ ಯಾವ ಪುಟದಲ್ಲಿಯೂ ದಾಖಲಾಗದಿರುವುದು ಬಿಜೆಪಿಯ ಸುಳ್ಳು ಭರವಸೆಗೆ ಸಾಕ್ಷಿಯಾಗಿದೆ.
ಕೇಂದ್ರ ಬಿಜೆಪಿ ಸರ್ಕಾರದಂತೆಯೇ ರಾಜ್ಯ ಬಿಜೆಪಿ ಸರ್ಕಾರವು ಸಹ ಬಜೆಟ್ ಅನುಷ್ಠಾನಕ್ಕೆ 77,000 ಕೋಟಿ ಸಾಲ ಮಾಡಲು ಹೊರಟಿರುವುದು ಆತಂಕಕಾರಿ. ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿಶೇಷ ಯೋಜನೆಗೆ 30,000 ಕೋಟಿ ಹಣ ನಿಗದಿಗೊಳಿಸಿರುವುದು ಕೇವಲ ಕಣ್ಣೊರೆಸುವ ತಂತ್ರವಾಗಿದೆ.
ಈ ಹಣವನ್ನು ಇತರೆ ಇಲಾಖೆಗಳಿಗೆ ವರ್ಗಾವಣೆ ಮಾಡುವ 7(ಡಿ) ಕಾಲಂಅನ್ನು ರದ್ದುಗೊಳಿಸದೆ ಇರುವುದು ವಂಚನೆಗೆ ಸಾಕ್ಷಿಯಾಗಿದೆ. ಇಡೀ ಬಜೆಟ್ ಅನ್ನು ತಮ್ಮ ಮೂರು ವರ್ಷಗಳ ಆಡಳಿತದ ವೈಫಲ್ಯವನ್ನು ಮುಚ್ಚಿಕೊಳ್ಳಲು, ಮಹಿಳೆಯರು, ರೈತರು ಯುವಜನರನ್ನು ಮತ ಗಳಿಕೆಗೆ ಆಕರ್ಷಿಸುವ ತಂತ್ರವನ್ನಾಗಿ ಬಳಸಿಕೊಳ್ಳಲಾಗಿದೆಯೇ ಹೊರತು ರಾಜ್ಯದ ಶಾಶ್ವತ ಅಭಿವೃದ್ಧಿಗೆ ಪೂರಕವಾಗಿ ಅಲ್ಲ.
0 Comments