ಮಂಡ್ಯ : ಫೆ.22ರಂದು ಯುವ ಮೋರ್ಚಾದ ಮೊದಲ ಸಮಾವೇಶವು ಮಂಡ್ಯ ನಗರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರದ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ತಿಳಿಸಿದರು.
ಕೇಂದ್ರ ನಾಯಕ ಅಮಿತ್ ಶಾ ಅವರು ಈಗಾಗಲೇ ಮಂಡ್ಯ ಭಾಗಕ್ಕೆ ಬಂದು ಹೋಗಿದ್ದಾರೆ. ಇದು ಕಾಯಕರ್ತರಲ್ಲಿ ಉತ್ಸಾಹ ತುಂಬಿದೆ. 2019ರ ವಿಧಾನಸಭೆ ಉಪ ಚುನಾವಣೆಯಲ್ಲಿ ಕೆ.ಆರ್.ಪೇಟೆಯಲ್ಲಿ ಪಕ್ಷಕ್ಕೆ ಐತಿಹಾಸಿಕ ಗೆಲುವು ಲಭಿಸಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಹಳೇ ಮೈಸೂರು ಭಾಗಕ್ಕೆ ಪಕ್ಷ ವಿಶೇಷ ಒತ್ತು ಕೊಡುತ್ತಿದೆ ಎಂದರು.
ಕೇಂದ್ರ ಹಾಗೂ ರಾಜ್ಯದ ಸರ್ಕಾರಗಳ ಸಾಧನೆಗಳನ್ನು ಜನತೆಯ ಮುಂದಿಡುವ ಮೂಲಕ ಅವರಿಗೆ ಅಭಿವೃದ್ಧಿ ವಿಚಾರವಾಗಿ ಪಕ್ಷ ಹೊಂದಿರುವ ದೂರದೃಷ್ಟಿತ್ವವನ್ನು ಮನದಟ್ಟು ಮಾಡುವುದು ನಮ್ಮ ಉದ್ದೇಶವಾಗಿದೆ. ಎಂದರು.
ಸದಸ್ಯತ್ವ ನೋಂದಣಿ
ಸಮಾವೇಶಗಳ ಮೂಲಕ 2 ಕೋಟಿ ಮತದಾರರನ್ನು ತಲುಪುವುದು, 50 ಲಕ್ಷ ಹೊಸ ಮತದಾರರನ್ನು ಸದಸ್ಯರನ್ನಾಗಿ ನೋಂದಣಿ ಮಾಡುವ ಗುರಿ ಇದೆ. ಪಕ್ಷದಲ್ಲಿರುವ 7 ಮೋರ್ಚಾಗಳಾದ ಯುವ ಮೋರ್ಚಾ, ಎಸ್ಸಿ ಮೋರ್ಚಾ, ಎಸ್ಟಿ ಮೋರ್ಚಾ, ಒಬಿಸಿ ಮೋರ್ಚಾ, ಮಹಿಳಾ ಮೋರ್ಚಾ, ರೈತ ಮೋರ್ಚಾ, ಮತ್ತು ಅಲ್ಪಸಂಖ್ಯಾತ ಮೋರ್ಚಾಗಳನ್ನು ಸಕ್ರಿಯಗೊಳಿಸುವ ಗುರಿಯನ್ನು ಸಮಾವೇಶಗಳು ಹೊಂದಿವೆ. ಈ ಸಂದರ್ಭದಲ್ಲಿ ಪ್ರಧಾನಿಯವರ ಅಮೃತ್ ಕಾಲ್ ಯೋಜನೆಯನ್ನು ಸಾಕಾರಗೊಳಿಸಲು ತೀರ್ಮಾನಿಸಲಾಗಿದೆ ಎಂದರು.
224 ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಮೋರ್ಚಾಗಳ ಸಮಾವೇಶ ನಡೆಸಲಾಗುತ್ತಿದೆ. ತುಮಕೂರು ಮಹಾನಗರದಲ್ಲಿ ಯುವ ಸಮಾವೇಶ ನಡೆಸಿದರೆ, ಗುಬ್ಬಿಯಲ್ಲಿ ಮಹಿಳಾ ಸಮಾವೇಶ ನಡೆಸುತ್ತೇವೆ, ತುರುವೇಕೆರೆಯಲ್ಲಿ ರೈತ ಸಮಾವೇಶ ಆದರೆ,ಅಲ್ಲಿಗೆ ಜಿಲ್ಲೆಯ ಎಲ್ಲ ಕಾರ್ಯಕರ್ತರೂ ಬರಲಿದ್ದಾರೆ, ಮೋರ್ಚಾಗಳು ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕೇಂದ್ರ ರಾಜ್ಯಗಳ ಸಾಧನೆಯನ್ನು ಮನೆಮನೆಗೆ ತಲುಪಿಸಲು ನಿರ್ಧರಿಸಲಾಗಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಗೆ ಸಂಚಾಲಕ, ಸಹ ಸಂಚಾಲಕರ ನೇಮಕವಾಗಿದ್ದು ಸಭೆಗಳು ನಡೆಯುತ್ತಿವೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಸಚಿವ ಕೆ.ಸಿ.ನಾರಾಯಣಗೌಡ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಅಶೋಕ್ ಜಯರಾಂ, ಇಂದ್ರೇಶ್, ಚಂದಗಾಲು ಶಿವಣ್ಣ, ಶೀಳನೆರೆ ಅಂಬರೀಶ್, ಶರಣು ಇದ್ದರು.

0 Comments