ಭಾರತದ ಸಂವಿಧಾನ ಪ್ರಪಂಚದಲ್ಲಿಯೇ ಶ್ರೇಷ್ಠ ಹಾಗೂ ಅತಿ ದೊಡ್ಡದಾದ ಗ್ರಂಥವಾಗಿದೆ ಎಂದು ಡಿ.ವಿ. ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಾಣದ ರಂಗಯ್ಯ ತಿಳಿಸಿದರು.
ವಾರ್ತಾ ಜಾಲ ಸುದ್ದಿ : ಮಧುಗಿರಿ:ತಾಲೂಕಿನ ಡಿ.ವಿ.ಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಡೀ ದೇಶವೇ 74ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ದೇಶದ ವಿವಿಧಡೆ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಭಾರತ ಗಣತಂತ್ರವಾಗಿ ಇಂದಿಗೆ 74 ವರ್ಷ ಪೂರೈಸಿದೆ. 1950 ಜನವರಿ 26ರಂದು ದೇಶ ಗಣತಂತ್ರವಾಯಿತು. ಪ್ರತಿ ಭಾರತೀಯರೆಲ್ಲರೂ ಈ ದಿನವನ್ನು ಬಹುದೊಡ್ಡ ಹಬ್ಬದಂತೆ ಆಚರಿಸಬೇಕಾಗಿದೆ ಎಂದು ಹೇಳಿದರು.
ಬ್ರಿಟಿಷರು ನಮ್ಮ ದೇಶಕ್ಕೆ ಬಂದು ಸುಮಾರು 300 ವರ್ಷಗಳ ಕಾಲ ನಮ್ಮನ್ನು ಹಾಳಿ ದೇಶದ ಸಂಪತ್ತನ್ನೆಲ್ಲ ಕೊಳ್ಳೆ ಹೊಡೆದು ದೇಶ ಬಿಟ್ಟು ಹೋಗಬೇಕಾದರೆ ನಮ್ಮಲ್ಲಿ ಏನೂ ಉಳಿದಿರಲ್ಲಿಲ್ಲ. ಜನರಿಗೆ ತಿನ್ನುವುದಕ್ಕೆ ಅನ್ನವೂ ಇಲ್ಲದೆ ಎಲ್ಲೆಡೆ ಬಡತನವೊಂದೆ ತಾಂಡವಾಡುತ್ತಿತ್ತು. ಅಂತಹ ಸಂದರ್ಭದಲ್ಲಿ ರಾಷ್ಟ್ರಕ್ಕೊಂದು ಸಂವಿಧಾನಬೇಕೆಂದು ಅರಿತ ಹಲವು ಸ್ವಾತಂತ್ರ್ಯ ಹೋರಾಟಗಾರರು ಸಂವಿಧಾನ ರಚಿಸಲು ಮುಂದಾಗುತ್ತಾರೆ. ಆಗ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಬಾಬು ರಾಜೇಂದ್ರ ಪ್ರಸಾದ್ ಅವರನ್ನು ಹಾಗೂ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ನೇಮಕ ಮಾಡಲಾಗುತ್ತದೆ. ನಂತರದ ದಿನಗಳಲ್ಲಿ ಅಂಬೇಡ್ಕರ್ ಹೆಚ್ಚು ಶ್ರಮವಹಿಸಿ ಹಲವು ದೇಶಗಳ ಸಂವಿಧಾನಗಳನ್ನು ಮಾದರಿಯಾಗಿಸಿಕೊಂಡು ಭಾರತದ ಸಾಮಾಜಿಕ ಪರಿಸ್ಥಿತಿಗೆ ಹೊಂದುವ ಒಂದು ಶ್ರೇಷ್ಠ ಸಂವಿಧಾನವನ್ನು ರಚಿಸಿ ದೇಶಕ್ಕೆ ಅರ್ಪಿಸಿದ್ದಾರೆ ಎಂದು ಹೇಳಿದರು.
ಪ್ರತಿಯೊಬ್ಬರೂ ಸಂವಿಧಾನವನ್ನು ತಿಳಿದುಕೊಳ್ಳಬೇಕಾಗಿದೆ. ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಸಂವಿಧಾನದ ಬಗ್ಗೆ ಆಸಕ್ತಿ ಮೂಡಿಸಲು ನಮ್ಮ ದೇಶ, ನಮ್ಮ ಸಂವಿಧಾನ ಎಂಬ ಕಾರ್ಯಕ್ರಮದಡಿಯಲ್ಲಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಸಂವಿಧಾನದ ಪೀಠಿಕೆಯ ಹೊತ್ತಿಗೆಯನ್ನು ನೀಡಲಾಗುತ್ತದೆ ಜೊತೆಗೆ ಮುಂದಿನ ದಿನಗಳಲ್ಲಿ ಮೂಲಭೂತ ಕರ್ತವ್ಯಗಳು, ಮೂಲಭೂತ ಹಕ್ಕುಗಳ ಪಟ್ಟಿಯ ಹೊತ್ತಿಗೆಯನ್ನು ಕೂಡ ಶಾಲಾ ಮಕ್ಕಳಿಗೆ ಹಂಚಲಾಗುತ್ತದೆ ಎಂದು ಹೇಳಿದರು.
ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ, ದಲಿತರಿಗೆ, ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ಪಂಚಾಯಿತಿಯ ಅನುಧಾನದಲ್ಲಿ ಎಷ್ಟು ಸಾಧ್ಯವೋ ಅಷ್ಟು ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಹೇಳಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಎಂ.ಎನ್. ಮಾತನಾಡಿ, ಅಧ್ಯಕ್ಷರು, ಸದಸ್ಯರು ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದು, ಪಂಚಾಯಿತಿ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಆದ್ಯತೆ ಮೇರೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಭಾರತದ ಸಂವಿಧಾನದ ಪ್ರಸ್ತಾವನೆಯ ಹೊತ್ತಿಗೆಯನ್ನು ಬಿಡುಗಡೆ ಮಾಡಿ, ಶಾಲೆಯ ಶಿಕ್ಷಕರಿಗೆ ಹಂಚಲಾಯಿತು. ಇದೇ ಸಂದರ್ಭದಲ್ಲಿ ಪಂಚಾಯಿತಿ ಹಿಂಭಾಗದಲ್ಲಿ ಹಲವು ಸಸಿಗಳನ್ನು ನಾಟಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮಂಜುಳಾ ತಿಮ್ಮರಾಜು, ಕಾರ್ಯದರ್ಶಿ ನವೀನ್ ಕುಮಾರ್, ಸದಸ್ಯರಾದ ಗಂಗಮ್ಮ, ಮಂಜುಳಾ, ಶಿಕ್ಷಕಿಯರಾದ ಜಯಮ್ಮ, ಮುತ್ತುರಾಜ್, ರಂಗನಾಥ, ರಾಮಚಂದ್ರಯ್ಯ, ಹರೀಶ್, ಪಂಚಾಯಿತಿ ಕಾರ್ಯದರ್ಶಿ ನವೀನ್, ಅಶಾ ಕಾರ್ಯಕರ್ತರಾದ ಪುಷ್ಪಾಲತಾ, ಪೂಜಿತಾ ಮತ್ತಿತರರು ಉಪಸ್ಥಿತರಿದ್ದರು.
ವರದಿ:ನಾಗೇಶ್ ಜೀವಾ ಮಧುಗಿರಿ.
ಮೋ:8722818634


0 Comments