*ಯಶವಂತಪುರದಲ್ಲಿ ಅಕ್ಷಯ ಬ್ರಾಹ್ಮಣರ ಮಹಾಸಂಘದ ಅರ್ಥಪೂರ್ಣ 4 ನೇ ವಾರ್ಷಿಕೋತ್ಸವ ಆಚರಣೆ*
ಬೆಂಗಳೂರು : ಅಕ್ಷಯ ಬ್ರಾಹ್ಮಣರ ಮಹಾಸಂಘದ ನಾಲ್ಕನೇ ವಾರ್ಷಿಕೋತ್ಸವ ಕಾರ್ಯಕ್ರಮವು ಡಿಸೆಂಬರ್ 25 ರಂದು, ನಗರದ ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.
ಭಾನುವಾರದ ಬೆಳಿಗ್ಗೆ 6.30ಕ್ಕೆ ಸಂಘದ ಆಡಳಿತ ಮಂಡಳಿಯ ಸದಸ್ಯರಿಂದ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ಮಾಡುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಬೆಳಿಗ್ಗೆ 9.30 ರ ಸುಮಾರಿಗೆ ಪ್ರಾರ್ಥನೆ ಹಾಗೂ ವೇದಘೋಷಗಳೊಂದಿಗೆ ಮುಂದುವರಿದ ಕಾರ್ಯಕ್ರಮದಲ್ಲಿ, ಗೀತಾ ಜಯಂತಿಯ ಪ್ರಯುಕ್ತ ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ನ ಗೌರವ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮಿ ನಾಗೇಶ್ವರರವರ ಮೇಲ್ವಿಚಾರಣೆಯಲ್ಲಿ ಗೀತಾ ಪಠಣವನ್ನು ನಡೆಸಿಕೊಡಲಾಯಿತು.
ಗೀತಾ ಪಠಣದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳೂ ಸಹ ಸಭಿಕರ ಮನಸ್ಸುಗಳಿಗೆ ಮುದನೀಡಿತು.
ಆನಂತರ ಬೆಳಿಗ್ಗೆ 11.30 ರ ಸುಮಾರಿಗೆ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ, ಆಗಮಿಸಿದ ಗಣ್ಯರಿಂದ ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮದ ಪ್ರಧಾನ ಘಟ್ಟಕ್ಕೆ ಚಾಲನೆ ದೊರೆತಿತು. ಸರ್ವರೂ ನಾಡಗೀತೆಯನ್ನು ಹಾಡುವ ಮೂಲಕವಾಗಿ ಕನ್ನಡಾಭಿಮಾನವನ್ನು ಮೆರೆಸುವ, ಕನ್ನಡ ನಾಡು ನುಡಿಯನ್ನು ಪರಿಚಯಿಸುವ ನಾಡಗೀತೆಯ ಮೂಲಕ ಸ್ಮರಿಸಿ, ಈ ನಾಡಿನ ಭವ್ಯ ಪರಂಪರೆಯನ್ನು ಮುಂದಿನ ತಲೆಮಾರುಗಳಿಗೆ ಕೊಂಡೊಯ್ಯುವ ಸಂಕಲ್ಪ ಪ್ರತಿಯೊಬ್ಬರಲ್ಲೂ ಮೂಡಿಸಿದ ವಿಶೇಷ ಅನುಭೂತಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಸಭಿಕರಲ್ಲಿ ಆದ ಅನುಭವಕ್ಕೆ ಈ ಸಂದರ್ಭವು ಸಾಕ್ಷಿಯಾಯಿತು.
ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನವರಾದ ಅಥರ್ವಣವೇದ ವಿದ್ವಾಂಸರಾಗಿರುವ ವೇ. ಬ್ರಂ. ಶ್ರೀ. ರಾಘವೇಂದ್ರ ಭಟ್ ರವರಿಗೆ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗಣ್ಯರುಗಳಾದ ತಿರುಪತಿಯ ತಿರುಮಲ ತಿರುಪತಿ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್ ವಿಶೇಷಾಧಿಕಾರಿಗಳಾದ ಶ್ರೀ ಪಗಡಾಲ ಆನಂದತೀರ್ಥಾಚಾರ್ ರವರು, ಬೆಂಗಳೂರು ಮಲ್ಲೇಶ್ವರಂ ಬ್ರಾಹ್ಮಣ ಸಭಾ ಅಧ್ಯಕ್ಷರು
ಪ್ರಕಾಶ್ ಅಯ್ಯಂಗಾರ್ ರವರು, ಬೆಂಗಳೂರು ವಿಶ್ವ ವಿಪ್ರ ವೃಂದದ ಅಧ್ಯಕ್ಷರಾದ ಎಸ್. ರಘುನಾಥ್ ರವರು, ಯುವ ಸಮಾಜ ಸೇವಕರಾದ ಅನೂಪ್ ಅಯ್ಯಂಗಾರ್ ರವರು, ಬೆಂಗಳೂರು ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮೀ ನಾಗೇಶ್ವರರವರು, ಅಕ್ಷಯ ಬ್ರಾಹ್ಮಣರ ಮಹಾಸಂಘದ ಅಧ್ಯಕ್ಷರಾದ ಕೆ.ಎಸ್. ಶ್ರೀಕಂಠಪ್ರಸಾದ್, ಸಂಘಟನಾ ಕಾರ್ಯದರ್ಶಿ ರಮೇಶ್ ಬಾಬು, ವಾರ್ತಾ ಮತ್ತು ಮಾಧ್ಯಮ ಉಸ್ತುವಾರಿಯನ್ನು ವಹಿಸಿದ ಸಮಾಜ ಸೇವಕರು ಡಾ. ಅಂಬರೀಶ್ ಜಿ., ಹಿರಿಯ ಸಲಹೆಗಾರರಾದ ಜಗನ್ನಾಥ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಥರ್ವಣವೇದ ಸಾಧಕರ ಸನ್ಮಾನದೊಂದಿಗೆ ಹತ್ತನೆಯ ತರಗತಿ ಹಾಗೂ ಪಿಯುಸಿ ಯಲ್ಲಿ ಹೆಚ್ಚಿನ ಅಂಕಿಗಳನ್ನು ಗಳಿಸಿ ವಿಶಿಷ್ಠ ಸಾಧನೆ ಮಾಡಿದ 18 ವಿದ್ಯಾರ್ಥಿಗಳಿಗೆ ಮಹಾಸಂಘದ ವತಿಯಿಂದ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಿ ಪ್ರೋತ್ಸಾಹಿಸುವುದರೊಂದಿಗೆ ಬೇರೆ ಮಕ್ಕಳಿಗೂ ಪ್ರೇರಣೆ ನೀಡುವ ಕಾರ್ಯವು ಮಹಾಸಂಘದ ವತಿಯಿಂದ ನಡೆದದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಅಧ್ಯಕ್ಷರ ಭಾಷಣದಲ್ಲಿ ಕೆ.ಎಸ್. ಶ್ರೀಕಂಠಪ್ರಸಾದ್ ರವರು ಮಾತನಾಡುತ್ತಾ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಮಕ್ಕಳ ಪೋಷಕರು ತಮ್ಮ ಮಕ್ಕಳ ಪ್ರದರ್ಶನಗಳು ಮುಕ್ತಾಯವಾಗುತ್ತಲೇ, ಆ ಕೂಡಲೇ ಅಲ್ಲಿಂದ ಹೊರಡುವ ಕೆಲವರ ನಡೆಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿ, ಅನ್ಯ ಮಕ್ಕಳ ಕಲಾಪ್ರದರ್ಶನವನ್ನು ಸಹ ವೀಕ್ಷಿಸುವ ಮೂಲಕ ಪ್ರೋತ್ಸಾಹಿಸಬೇಕಾದ ಜವಾಬ್ದಾರಿ ಎಲ್ಲರಿಗೂ ಇದೆ ಎಂಬ ಸಂದೇಶ ಬಹಳ ಅರ್ಥಪೂರ್ಣವಾಗಿತ್ತು.
ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಯುವ ಸಮಿತಿ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
*ಸಂಘದ ಸಾಧನೆ*
ದಕ್ಷಿಣಾಮ್ನಾಯ ಶೃಂಗೇರಿ ಪೀಠದ ಮಹಾಸನ್ನಿಧಾನ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಹಾಗೂ ಸನ್ನಿಧಾನ ಶ್ರೀ ಶ್ರೀ ವಿದುಶೇಖರ ಭಾರತೀ ತೀರ್ಥ ಸ್ವಾಮಿಗಳ ಕೃಪಾಶೀರ್ವಾದ ಮತ್ತು ಸಾನ್ನಿಧ್ಯದಲ್ಲಿ ಅನಾವರಣಗೊಂಡು ಪ್ರಾರಂಭಗೊಂಡ ಅಕ್ಷಯ ಬ್ರಾಹ್ಮಣರ ಮಹಾಸಂಘ ಕಳೆದ ನಾಲ್ಕು ವರ್ಷಗಳಿಂದ ಸನಾತನ ಧರ್ಮದ ಉಳಿವಿಗಾಗಿ, ಬ್ರಾಹ್ಮಣರ ಸಂಘಟನೆ, ಅಭಿವೃದ್ಧಿಗಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ.
ಸಂಘವು ಅನೇಕ ಬಡ ಬ್ರಾಹ್ಮಣ ಕುಟುಂಬಗಳಿಗೆ ಅಗತ್ಯ ದಿನಸಿ ಸಾಮಗ್ರಿಗಳು, ಮಾತ್ರೆ ಔಷಧಿಗಳಿಗೆ ಧನ ಸಹಾಯವನ್ನು ಮಾಡಿದೆ. ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಮತ್ತು ವಿದ್ಯಾಭ್ಯಾಸಕ್ಕೆ ಬೇಕಾದ ಸಾಮಗ್ರಿಗಳ ವಿತರಣೆ, ಕರ್ನಾಟಕ ರಾಜ್ಯೋತ್ಸವ ಆಚರಣೆ, ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ನೇತ್ರ ಚಿಕಿತ್ಸೆ, ಸಂಕ್ರಾಂತಿ ಸಂಭ್ರಮ, ಮಾಘಸ್ನಾನ, ನೂತನ ಸಂವತ್ಸರದ ಉಗಾಗಿ ಆಚರಣೆ, ಪಂಚಾಂಗ ಶ್ರವಣ, ಶಂಕರ ಜಯಂತಿ, ರಾಮಾನುಜ ಜಯಂತಿ, ಮಧ್ವ ನವಮಿ, ಶ್ರಾವಣ ಸಂಜೆ, ಸಾಮೂಹಿಕ ಸತ್ಯನಾರಾಯಣ ಪೂಜೆ, ನವರಾತ್ರಿ ಪೂಜೆ, ಮಹಾಶಿವರಾತ್ರಿ, ಉಪಾಕರ್ಮ, ಕಾರ್ತೀಕ ದೀಪೋತ್ಸವ, ಅಕ್ಷಯ ಕ್ರೀಡೋತ್ಸವ, ಹಾಗೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.
ನಾಲ್ಕು ಬಡ ವಿಪ್ರ ಕುಟುಂಬಗಳಲ್ಲಿ ಮರಣ ಸಂಭವಿಸಿದ ಸಂದರ್ಭದಲ್ಲಿ ಅಂತ್ಯೇಷ್ಠಿ ಕಾರ್ಯಕ್ರಮದನ್ವಯ ಮೊದಲನೇ ದಿವಸದ ಎಲ್ಲಾ ವ್ಯವಸ್ಥೆಗಳನ್ನು ಸಂಘದ ವತಿಯಿಂದ ಉಚಿತವಾಗಿ ಮಾಡಿದ್ದಾರೆ. ಇದಲ್ಲದೇ ಪಿತೃಪಕ್ಷದಲ್ಲಿ ಪಿತೃತರ್ಪಣ ಕಾರ್ಯಕ್ರಮ, 16 ಹುಣ್ಣಿಮೆಯೆಂದು ನಿಗದಿಪಡಿಸಿದ ಮನೆಗಳಲ್ಲಿ ಸತ್ಯನಾರಾಯಣ ಪೂಜೆ ಹಾಗೂ 11 ತ್ರಯೋದಶಿಯಂದು ಪ್ರದೋಶ ಪೂಜೆಯನ್ನು ಈ ವರ್ಷ ನಡೆಸಿದ್ದಾರೆ. ಸರಕಾರದ ಸವಲತ್ತುಗಳಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿಯ ಮೂಲಕ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಕುಟುಂಬದ ಅರ್ಜಿಯನ್ನು ಸರಕಾರಕ್ಕೆ ರವಾನಿಸಿ ಫಲಾನುಭವಿಗಳಿಗೆ ಸಹಾಯ ಹಸ್ತವನ್ನು ಚಾಚಿದೆ.







0 Comments