ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್
ವಾರ್ತಾಜಾಲ,ಶಿಡ್ಲಘಟ್ಟ :ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡ ಅವರ 108 ಅಡಿಗಳ ಪುತ್ಥಳಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಭಾರತ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಗಮಿಸಿದ್ದ ಸಂದರ್ಭದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ನರೇಂದ್ರ ಮೋದಿ ಯವರ ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ಆಗಮಿಸಿದ್ದರು ಎಂದು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಿ.ಸಿ.ನಂದೀಶ್ ಸ್ಪಷ್ಟಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೆಂಪೇಗೌಡ ಅವರ ಪುತ್ಥಳಿ ಉದ್ಘಾಟನಾ ಕಾರ್ಯಕ್ರಮಕ್ಕೆ ಬರಲು ನಾವು ಯಾರನ್ನು ಹಣದ ಆಮಿಷವೊಡ್ಡಿ ಕಾರ್ಯಕ್ರಮಕ್ಕೆ ಕರೆದು ಕೊಂಡು ಹೋಗಿಲ್ಲ. ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಾರ್ಯಕರ್ತರಿಗೆ ಹಣ ನೀಡುವುದು ಭಾರತೀಯ ಜನತಾ ಪಕ್ಷದ ಸಿದ್ದಾಂತವಲ್ಲ. ಆದರೆ ಯಾರೋ ಕಿಡಿಗೇಡಿಗಳು ಭಾರತೀಯ ಜನತಾ ಪಕ್ಷ ಆಡಳಿತದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಜನಪರ ಮತ್ತು ಅಭಿವೃದ್ಧಿ ಕಾಮಗಾರಿ ನೋಡಲಾರದೆ ನಮ್ಮ ವಿರುದ್ಧ ಅಮಾಯಕ ಕೂಲಿ ಕಾರ್ಮಿಕರನ್ನು ಎತ್ತಿಕಟ್ಟಿ ನಮಗೆ ಅಪಮಾನ ಮಾಡಲು ಉದೇಶ ಪೂರ್ವಕವಾಗಿ ನಡೆಸಿರುವ ಪಿತೂರಿ ಎಂದು ತಿರುಗೇಟು ನೀಡಿದರು.
ನಂತರ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎನ್.ದೇವರಾಜು ಅವರು ಮಾತನಾಡಿ ಬೆಂಗಳೂರು ನಿಮಾತೃ ನಾಡಪ್ರಭು ಕೆಂಪೇಗೌಡ ಅವರ 108 ಅಡಿಗಳ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ನಮ್ಮ ತಾಲೂಕಿನಿಂದ ಸುಮಾರು 100 ಕ್ಕೂ ಹೆಚ್ಚು ಬಸ್ ಗಳಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಅಭಿಮಾನಿಗಳು ಯಾವುದೇ ಹಣಕಾಸಿನ ಆಸೆ ಇಲ್ಲದೆ ಭಾಗವಹಿಸಿ ಯಶಸ್ವಿಗೊಳಿಸಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ವಿರೋಧಿಗಳು ಈ ಯಶಸ್ವಿ ಕಾರ್ಯಕ್ರಮಗಳನ್ನು ನೋಡಿ ಕೇವಲ ರಾಜಕೀಯ ಪಿತೂರಿಯಿಂದ ಬಡ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ನಮ್ಮ ಪಕ್ಷದ ಮುಖಂಡರು ಹಾಗೂ ನಗರ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ. ನಂದೀಶ್ ಅವರ ಹೆಸರನ್ನು ತೇಜೋವದೇ ಮಾಡಲು ಹೊರಟಿರುವುದು ಸೂಕ್ತವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಆಂಜನೇಯಗೌಡ , ಬಿಜೆಪಿ ಶಿಡ್ಲಘಟ್ಟ ಗ್ರಾಮಾಂತರ ಮಂಡಲಾಧ್ಯಕ್ಷ ಸುರೇಂದ್ರಗೌಡ , ನೇಕಾರರ ಪ್ರಕೋಷ್ಠದ ಜಿಲ್ಲಾ ಸಂಚಾಲಕ ನಾಗೇಶ್ , ಕಾರ್ಮಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ನರೇಶ್ , ಕಾರ್ಮಿಕ ಪ್ರಕೋಷ್ಠದ ನಗರಾಧ್ಯಕ್ಷ ಶ್ರೀರಾಮ್,ಯುವ ಮುಖಂಡ ಚೆಲುವರಾಜ್ ಹಾಜರಿದ್ದರು.

0 Comments