*ಕೆಂಪೇಗೌಡ ಪ್ರತಿಮೆ ಅನಾವರಣ ಪೂರ್ವಭಾವಿ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಬಣ್ಣನೆ*
*ಚಿಕ್ಕಬಳ್ಳಾಪುರ:* ದೇಶದಲ್ಲಿಯೇ ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗುತ್ತಿರುವ ಕರ್ನಾಟಕದ ಇಂಜಿನ್ ಆಗಿ ಬೆಂಗಳೂರು ಕಾರ್ಯನಿರ್ವಹಿಸುತ್ತಿದ್ದು, ಇಂತಹ ಇಂಜಿನ್ ನಿರ್ಮಿಸಿದವರು ನಾಡಪ್ರಭು ಕೆಂಪೇಗೌಡರು ಎಂಬುದನ್ನು ಹೇಳಲು ಹರ್ಷವಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಬಣ್ಣಿಸಿದರು.
ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತಾ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಸ್ಥಳೀಯ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ತಾಯಿಗೆ ನೀಡಿದ ಮಾತಿನಂತೆ ಸಾವಿರಾರು ಕೆರೆಗಳ ನಿರ್ಮಾಣ ಮಾಡುವ ಜೊತೆಗೆ ಪರಿಸರ ಉಳಿವಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಕೆಂಪೇಗೌಡರನ್ನು ಸ್ಮರಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರ.
*108 ಅಡಿ ಎತ್ತರದ ಪ್ರತಿಮೆ*
ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲಾಗಿದೆ. ಈ ಪ್ರತಿಮೆ ಅನಾವರಣವನ್ನು ಪ್ರಧಾನಿ ನರೇಂದ್ರಮೋದಿ ಅವರು ನೆರವೇರಿಸಲಿದ್ದಾರೆ. ನಾಡು ಕಟ್ಟಿದ ಒಬ್ಬ ದಿಗ್ಗಜರಿಗೆ ನಮನ ಸಲ್ಲಿಸಲು ಮತ್ತೊಬ್ಬ ದಿಗ್ಗಜರು ಆಗಮಿಸುತ್ತಿದ್ದಾರೆ ಇಂತಹ ಐತಿಹಾಸಿಕ ಕಾರ್ಯಕ್ರಮ ಕಣ್ಣುತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕು ಎಂದು ಸಚಿವರು ಕೋರಿದರು.
ಯಾರೇ ಆಗಲಿ ಇಂತಹ ಜಾತಿಯಲ್ಲಿಯೇ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಲು ಸಾಧ್ಯವಿಲ್ಲ. ಆದರೆ ಒಕ್ಕಲಿಗರ ಸಮುದಾಯದಲ್ಲಿ ಜನಿಸಿದ ಕೆಂಪೇಗೌಡರು ಈ ನಾಡು ನಿರ್ಮಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಕೆರೆಗಳ ನಿರ್ಮಾಣ, ಪರಿಸರ ಉಳಿಸುವ ಅವರ ಕಾರ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಹಾಗಾಗಿ ಅಂತಹ ಮಹನೀಯರ ಸ್ಮರಣೆ ನಮ್ಮೆಲ್ಲರ ಹೊಣೆ ಎಂದು ಹೇಳಿದರು.
*ಕೃಷಿ ಮಾಡುವವರೆಲ್ಲರೂ ಒಕ್ಕಲಿಗರೇ*
ಭೂಮಿ ತಾಯಿ ಸೇವೆ ಮಾಡುವವರೆಲ್ಲರೂ ಒಕ್ಕಲಿಗರೇ ಆಗಿದ್ದಾರೆ. ಒಕ್ಕಲಿಗ ಎಂಬುದು ಒಂದು ಜಾತಿಗೆ ಸೀಮಿತವಾಗಿಲ್ಲ. ರಾಜ್ಯ ಬಜೆಟ್ 2.5 ಲಕ್ಷ ಕೋಟಿಯಲ್ಲಿ ಅರ್ಧಕ್ಕೂ ಹೆಚ್ಚು ವರಮಾನ ಬರುತ್ತಿರುವುದು ಬೆಂಗಳೂರಿನಿಂದ. ಇಂತಹ ಬೆಂಗಳೂರು ನಿರ್ಮಿಸಿದವರು ಕೆಂಪೇಗೌಡರು. ಬೆಂಗಳೂರಿನಿಂದ ಇಡೀ ರಾಜ್ಯಕ್ಕೆ ಸಹಕಾರಿಯಾಗಿದೆ ಎಂದರು.
ಸಮಾಜ ಸುಧಾರಕರಾದ ಕೆಂಪೇಗೌಡರನ್ನು ಶಾಶ್ವತವಾಗಿ ಸ್ಮರಣೆ ಮಾಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ.
ಗಣ್ಯರನ್ನು ಜಾತಿಗೆ ಸೀಮಿತ ಮಾಡಲು ಸಾಧ್ಯವಿಲ್ಲ, ಬೆಂಗಳೂರಿನಲ್ಲಿ ಅಂಬೇಡ್ಕರ್ ಕಾಲೇಜನ್ನು ಇತ್ತೀಚಿಗೆ ಪ್ರಧಾನಿಗಳೇ ಉದ್ಘಾಟಿಸಿದರು. ವಾಲ್ಮೀಕಿ ಸಮುದಾಯ ಮೀಸಲಾತಿಗಾಗಿ ನಾಲ್ಕು ದಶಕಗಳಿಂದ ಹೋರಾಟ ಮಾಡುತ್ತಿದ್ದರೂ
ವಿರೋಧ ಪಕ್ಷಗಳು ಗಮನವನ್ನೇ ಹರಿಸಲಿಲ್ಲ. ಆದರೆ ಬಿಜೆಪಿ ವಿರುದ್ಧ ಆರೋಪ ಮಾಡುವುದರಲ್ಲಿಯೇ 56 ವರ್ಷಕಳೆದು, ಕೇವಲ ಅವರ ಮತ ಪಡೆದು ಮೋಸ ಮಾಡಿದರು ಎಂದು ಆರೋಪಿಸಿದರು.
*ಬಿಜೆಪಿ ಸರ್ಕಾರ ಮೀಸಲಾತಿ ನೀಡಿದೆ*
ಎಸ್ ಸಿ ಮತ್ತು ಎಸ್ ಟಿ ಸಮುದಾಯದವರಿಗೆ ಮೀಸಲಾತಿ ನೀಡಿದ್ದು ಬಿಜೆಪಿ ಸರ್ಕಾರ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದಾಗ ಕೆಲಸ ಮಾಡಬೇಕು, ಆದರೆ ಇವರಿಗೆ ಜಾಣಮರೆವು. ಹಾಗಾಗಿಯೇ ಅಧಿಕಾರಕ್ಕೆ ಬಂದ ಕೂಡಲೇ ನೀಡಿದ್ದ ಎಲ್ಲ ಭರವಸೆಗಳನ್ನು ಮರೆತರು ಎಂದು ಲೇವಡಿ ಮಾಡಿದರು.
ಎಲ್ಲ ಸಮುದಾಯಗಳಿಗೂ ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಒತ್ತು ನೀಡುವ ಕೆಲಸ ಬಿಜೆಪಿಯಿಂದ ಮಾತ್ರ ಸಾಧ್ಯ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸುವ ಮೂಲಕ ಇಡೀ ವಿಶ್ವವೇ ಕೆಂಪೇಗೌಡರನ್ನು ಕಾಣುವಂತಾಗಿದೆ. ಅಲ್ಲದೆ ಈ ಪ್ರತಿಮೆಯ ಮುಂದೆ ನಿರ್ಮಿಸುತ್ತಿರುವ ಉದ್ಯಾನವನಕ್ಕೆ ರಾಜ್ಯದ ಎಲ್ಲ ಪುಣ್ಯ ಕ್ಷೇತ್ರಗಳು, ಕೆರೆ ಮತ್ತು ನದಿಗಳಿಂದ ಮಣ್ಣು ಸಂಗ್ರಹ ಮಾಡಿ ತರಲಾಗಿದೆ ಎಂದು ವಿವರಿಸಿದರು.
ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಬರುವವರಿಗಾಗಿ ವಾಹನ ವ್ಯವಸ್ಥೆ, ಊಟದ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ನಾಡಪ್ರಭುಗಳಿಗೆ ಗೌರವ ಸಮರ್ಪಣೆ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗೋವಿಂದಸ್ವಾಮಿ, ಪಿ.ಎನ್. ಕೇಶವರೆಡ್ಡಿ, ಕೋಡಿರಂಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
-------------------------
*ಪಕ್ಷಕ್ಕೆ ಬರುವವರನ್ನು ಆತ್ಮೀಯವಾಗಿ ಸ್ವಾಗತಿಸೋಣ*
*ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಭಿಮತ*
*ಚಿಕ್ಕಬಳ್ಳಾಪುರ* : ಬಿಜೆಪಿ ಮಹಾ ಸಮುದ್ರದಂತೆ, ಯಾರೇ ಪಕ್ಷಕ್ಕೆ ಬಂದರೂ ಆತ್ಮೀಯವಾಗಿ ಬರಮಾಡಿಕೊಳ್ಳಬೇಕು, ಸಮಾನ ಗೌರವ ನೀಡುವ ಮೂಲಕ ಪಕ್ಷ ಬಲವರ್ಧನೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕ ಮನವಿ ಮಾಡಿದರು.
ತಾಲೂಕಿನ ಗೊಲ್ಲಹಳ್ಳಿ ಗೇಟ್ ಬಳಿ ಭಾನುವಾರ ಆಯೋಜಿಸಿದ್ದ ಸ್ಥಳೀಯ ಮುಖಂಡರ ಸಭೆಯಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ ನಲ್ಲಗುಟ್ಟಪಾಳ್ಯ ಗ್ರಾಪಂ ಸದಸ್ಯೆ ಕಾಂತಮ್ಮ ತಿಪ್ಪಾರೆಡ್ಡಿ ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಹೊಸಬರು ಬಂದ ಕಾರಣಕ್ಕೆ ಹಳಬರು ಎದೆಗುಂದಬೇಕಿಲ್ಲ ಎಂದು ಕಾರ್ಯಕರ್ತರಿಗೆ ಕಿನಿಮಾತು ಹೇಳಿದರು.
*ಬೇಧಭಾವ ಬೇಡ*
ಪಕ್ಷದಲ್ಲಿ ಹಿರಿಯ, ಕಿರಿಯ ಎಂಬ ಯಾವುದೇ ಬೇಧವಿಲ್ಲ. ನದಿಯಲ್ಲಿ ಹಳೇ ನೀರು, ಹೊಸ ನೀರು ಬೆರೆತು ಒಟ್ಟಾಗಿ ಹರಿಯುವಂತೆ ವಲಸಿಗ ಮತ್ತು ಮೂಲ ಎಂಬ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಎಲ್ಲರೂ ಬೆರೆತು ನಡೆಯಬೇಕು. ಹರಿಯೋ ನದಿಯಲ್ಲಿ ನೀರೆಲ್ಲ ಒಂದೇ ಎಂಬ ಮಾತಿನಂತೆ ನಾವೆಲ್ಲ ಮುಂದೆ ಸಾಗೇಣ ಎಂದು ಸಚಿವರು ಕರೆ ನೀಡಿದರು.
ನಾವು ನೋಡಬೇಕಿರುವುದು ಅಭಿವೃದ್ಧಿ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲರೂ ಕೈ ಜೋಡಿಸೋಣ. ಅಭಿವೃದ್ಧಿ ಪಥದಲ್ಲಿ ಕ್ಷೇತ್ರ ಉತ್ತಂಗ ತಲುಪಲು ಎಲ್ಲರೂ ಕೈ ಜೋಡಿಸುವಂತೆ ಮನವಿ ಮಾಡಿದರು.
ಪ್ರಧಾನಿ ಮೋದಿಯವರ ಮಾತು ಕೇಳಲು ಇದೊಂದು ಸದಾವಕಾಶವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು, ಅಂಬೇಡ್ಕರ್ ಅವರು ಒಂದು ಜಾತಿಗೆ ಸೀಮಿತರಾದವರಲ್ಲ, ಅವರು ಈ ಸಮಾಜ ಮತ್ತು ದೇಶದ ಆಸ್ತಿ. ಅದೇ ರೀತಿಯಲ್ಲಿ ವಾಲ್ಮೀಕಿ ಅವರು ರಚನೆ ಮಾಡಿದ ರಾಮಾಯಣ ಒಂದು ಜಾತಿಗೆ ಸೀಮಿತವಾಗಿಲ್ಲ. ಮಾನವ ಕುಲಕ್ಕೆ ಸಮಾಜ ಸುಧಾರಣೆ ಬಯಸಿದ ಮಹನೀಯರೆಲ್ಲರೂ ಸಮಾಜದ ಆಸ್ತಿ ಎಂಬುದನ್ನು ಮರೆಯಬಾರದು ಎಂದರು.
*ವಿಶ್ವ ಮಾನವರಾಗಬೇಕು*
ಸಾವಿರಾರು ವರ್ಷಗಳ ಹಿಂದೆಯೇ ಇವರು ಸಮಾನತೆ ಸಾರಿದವರು, ಹಾಗಾಗಿಯೇ ಇವರು ಮಹನೀಯರಾಗಿದ್ದಾರೆ. ಇದೇ ಗುಂಪಿಗೆ ಸೇರಿದವರು ಕೆಂಪೇಗೌಡರು. ಅಲ್ಪ ಮಾನವನಾಗಿ ಹುಟ್ಟಿ, ವಿಶ್ವ ಮಾನವರಾಗಿ ಸಾಯಬೇಕು ಎಂದಿದ್ದಾರೆ ಕುವೆಂಪು. ಸಮಾಜಕ್ಕೆ ನಮ್ಮ ಕೊಡುಗೆ ನೀಡಿದಾಗ ಮಾತ್ರ ನಾವು ವಿಶ್ವ ಮಾನವರಾಗಲು ಸಾಧ್ಯ ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ಹೇಳಿದರು.
ನಿಸ್ವಾರ್ಥ ಸೇವೆಯ ಸಿದ್ಧಾಂತದಡಿ ಕೆರೆಗಳನ್ನು ಕಟ್ಟಿದರು ಕೆಂಪೇಗೌಡರು, ಆ ಕಾಲದಲ್ಲಿಯೇ ಪರಿಸರ ಸಂರಕ್ಷಣೆ ಮಾಡಿದವರು ಕೆಂಪೇಗೌಡರು. ಇಂತಹ ಮಹನೀಯರಿಗೆ ರಾಜ್ಯ ಸರ್ಕಾರ ಕೆಂಪೇಗೌಡರ ಪ್ರತಿಮೆ ಸ್ಥಾಪಿಸುತ್ತಿರುವುದು ಹರ್ಷನೀಯ ಎಂದು ಹೇಳಿದರು.
*ನಿಗಮದ ಮೊದಲ ನಿರ್ದೇಶಕರಾಗಿ ರಾಜಣ್ಣ*
ಕೆಂಪೇಗೌಡರ ಹೆಸರಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ನಿಗಮದ ಮೊದಲ ನಿರ್ದೇಶಕರಾಗಿ ಆವುಲಗುರ್ಕಿ ರಾಜಣ್ಣ ಅವರು ನೇಮಕವಾಗಿದ್ದಾರೆ. 56 ವರ್ಷಗಳ ಕಾಲ ಆಡಳಿತ ನಡೆಸಿದವರು ಕೇವಲ ಸ್ವಾರ್ಥಕ್ಕಾಗಿ ಅಧಿಕಾರ ಅನುಭವಿಸಿದರೆ, ಬಿಜೆಪಿ ಸರ್ಕಾರ ಎಲ್ಲರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದು ಸಚಿವರು ಹೇಳಿದರು.
ವಿರೋಧಪಕ್ಷದವರು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ತಿರುಚುತ್ತಾರೆ ಎಂದು ಆರೋಪಿಸಿದರು. ಕಳೆದ 56 ವರ್ಷಗಳಿಂದ ಸುಳ್ಳು ಹೇಳುತ್ತಲೇ ಬಲಹೀನ ವರ್ಗಗಳ ಮತ ಪಡೆದಿದ್ದಾರೆ. ಆದರೆ ಅವರಿಗೆ ಮೀಸಲಾತಿ ನೀಡಲು ಸಾಧ್ಯವಾಗಲಿಲ್ಲ. 56 ವರ್ಷ ಅಧಿಕಾರ ನಡೆಸಿದವರು ನೀಡದ ಮೀಸಲಾತಿ ಬಿಜೆಪಿ ಸರ್ಕಾರ ನೀಡಿದೆ ಎಂದು ಹೇಳಿದರು.
ಉಪವಾಸ ಸತ್ಯಾಗ್ರಹದ ಮೂಲಕ ಮೀಸಲಾತಿಗಾಗಿ ಹೋರಾಟ ನಡೆಸಿದ ಶ್ರೀ ಪ್ರಸನ್ನಾನಂದ ಶ್ರೀಗಳಿಗೆ ಜಿಲ್ಲೆಯಲ್ಲಿ ಬೃಹತ್ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗುವುದು. ಇದೇ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಲಾಗುವುದು. ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಮೀಸಲಾತಿ ಸರಿಪಡಿಸಲು ಮುಖ್ಯಮಂತ್ರಿಗಳು ಶ್ರಮಿಸುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಈ ಭಾಗವನ್ನು ಕೈಗಾರಿಕಾ ಪ್ರದೇಶ ಮಾಡಲಾಗುವುದು
ಇದಕ್ಕೆ ಅಗತ್ಯವಿರುವ ಭೂಮಿ ವಶಕ್ಕೆ ಪಡೆಯಲು ಎಲ್ಲರ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಮುನಿರಾಜು, ಜೆ.ಕೆ. ರೆಡ್ಡಿ, ಆವುಲಕೊಂಡರಾಯಪ್ಪ, ರಾಜಣ್ಣ, ಮಿಲ್ಟನ್ ವೆಂಕಟೇಶ್, ರಾಮಣ್ಣ, ಮೂರ್ತಿ, ಜಾಲಪ್ಪ, ನರಸಿಂಹಯ್ಯ, ವೆಂಕಟರಮಣಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

0 Comments