ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ 87 ಹಳ್ಳಿಗಳಲ್ಲಿ ಶನಿವಾರ ವಿದ್ಯುತ್ ಅದಾಲತ್ ನಡೆಯಿತು. ಕಳೆದ ಐದು ವಿದ್ಯುತ್ ಅದಾಲತ್ ಗಳಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯ ಗ್ರಾಹಕರು ಅದಾಲತ್ ನಲ್ಲಿ ಭಾಗವಹಿಸಿ ತಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಪಡೆದರು.
ವಿದ್ಯುತ್ ಅದಾಲತ್ ನಲ್ಲಿ ಸುಮಾರು 2600 ಗ್ರಾಹಕರು ಭಾಗವಹಿಸಿ, ವಿದ್ಯುತ್ ಸಂಬಂಧಿತ ಸಮಸ್ಯೆಗಳ ಕುರಿತು ಬೆಸ್ಕಾಂ ಅಧಿಕಾರಿಗಳಿಗೆ ಮನವಿ ನೀಡಿದರು. ಕೆಲವು ಸಮಸ್ಯೆಗಳಿಗೆ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ಸೂಚಿಸಿದರೆ, ಇನ್ನೂ ಕೆಲವು ಸಮಸ್ಯೆಗಳನ್ನು ಮೇಲಾಧಿಕಾರಿಗಳಿಗೆ ರವಾನಿಸಿದರು.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಅವರು ಬೆಸ್ಕಾಂನ ತುಮಕೂರು ವಿಭಾಗದ ಬೊಮ್ಮನಹಳ್ಳಿ ಗ್ರಾಮದ ಕ್ಯಾತಸಂದ್ರ ಉಪ ವಿಭಾಗದಲ್ಲಿ ನಡೆದ ಅದಾಲತ್ ನಲ್ಲಿ ಭಾಗವಹಿಸಿ ಗ್ರಾಹಕರ ಕುಂದು ಕೊರತೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕರ್ನಾಟಕ ಸರಕಾರ ಆರಂಭಿಸಿರುವ ಅಮೃತ ಜ್ಯೋತಿ ಯೋಜನೆಯು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಿಪಿಎಲ್ ಕುಟುಂಬಗಳಿಗೆ 75 ಯೂನಿಟ್ ವರೆಗಿನ ಉಚಿತ ವಿದ್ಯುತ್ ಸೌಲಭ್ಯ ನೀಡುವ ಅತ್ಯಂತ ಮಹತ್ವದ ಯೋಜನೆಯಾಗಿದ್ದು, ಅರ್ಹ ಫಲಾನುಭವಿಗಳನ್ನು ಬೆಸ್ಕಾಂ ನ ಅಧಿಕಾರಿಗಳು ಗುರುತಿಸಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಅವರಿಂದ ಅರ್ಜಿಗಳನ್ನು ಸಂಗ್ರಹಿಸಿ ಯೋಜನೆಯನ್ನು ಬೆಸ್ಕಾಂ ಕಾರ್ಯಗತಗೊಳಿಸುತ್ತಿದೆ. ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಅವರ ಬಳಿಗೆ ಹೋಗಿ ಆಲಿಸಿ ಸ್ಥಳದಲ್ಲೇ ಪರಿಹಾರ ಸೂಚಿಸುವುದೇ ವಿದ್ಯುತ್ ಅದಾಲತ್ ನ ಮುಖ್ಯ ಉದ್ದೇಶವಾಗಿದೆ, ಹೆಚ್ಚಿನ ಸಂಖ್ಯೆಯ ಗ್ರಾಹಕರು ಇದರ ಉಪಯೋಗ ಪಡೆಯಬೇಕು ಎಂದು ಬೆಸ್ಕಾಂ ಎಂಡಿ ಈ ಸಂದರ್ಭದಲ್ಲಿ ತಿಳಿಸಿದರು.
ಬೆಸ್ಕಾಂನ ನಿರ್ದೇಶಕ (ತಾಂತ್ರಿಕ) ಡಿ, ನಾಗಾರ್ಜುನ ಅವರು ಕೋಲಾರ ಜಿಲ್ಲೆಯ ಬೆಸ್ಕಾಂನ ಬಂಗಾರಪೇಟೆ ಉಪ ವಿಭಾಗದಲ್ಲಿ ನಡೆದ ಅದಾಲತ್ ನಲ್ಲಿ ಭಾಗವಹಿಸಿದ್ದರು.
ಇದು 6 ನೇ ವಿದ್ಯುತ್ ಅದಾಲತ್ ಆಗಿದ್ದು ಪ್ರತಿ ತಿಂಗಳ ಮೂರನೇ ಶನಿವಾರದಂದು ವಿದ್ಯುತ್ ಅದಾಲತ್ ಅನ್ನು ಆಯೋಜಿಸಲಾಗುತ್ತಿದ್ದು ಈ ಬಾರಿಯ ವಿದ್ಯುತ್ ಅದಾಲತ್ ನಲ್ಲಿ ಗ್ರಾಹಕರಿಂದ ಬೆಸ್ಕಾಂ ಅಧಿಕಾರಿಗಳು ಸುಮಾರು 1050 ದೂರುಗಳನ್ನು ಸ್ವೀಕರಿಸಿ, ಕೆಲವು ಮನವಿಗಳನ್ನುಸ್ಥಳದಲ್ಲೇ ವಿಲೇವಾರಿ ಮಾಡಲಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಅದಾಲತ್ ನಲ್ಲಿ ಗ್ರಾಹಕರು ಬಿಲ್ಲಿಂಗ್ ಸಮಸ್ಯೆಗಳು, ವಿದ್ಯುತ್ ಸಂಪರ್ಕ ನೀಡುವಲ್ಲಿ ವಿಳಂಬ, ವಿದ್ಯುತ್ ವ್ಯತ್ಯಯ, ಮಾಪಕ ಸಂಬಂಧಿತ ದೂರುಗಳು, ವಿದ್ಯುತ್ ಕಳ್ಳತನ, ವಿದ್ಯುತ್ ಮಾರ್ಗದಲ್ಲಿರುವ ಲೋಪಗಳು, ಹೆಚ್ಚವರಿ ಕಂಬಳಿಗೆ ಬೇಡಿಕೆ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಮನವಿ ನೀಡಿದರು.
ವಿದ್ಯುತ್ ಅದಾಲತ್ ನಲ್ಲಿ ಬೆಸ್ಕಾಂ ನಿಗಮ ಕಚೇರಿಗಳ ಅಧಿಕಾರಿಗಳು ಭಾಗವಹಿಸಿದ್ದು, ಸಂಸ್ಥೆಯು ಗ್ರಾಹಕರಿಗೆ ನೀಡುತ್ತಿರುವ ಯೋಜನೆಗಳು ಮತ್ತು ಸೇವೆಗಳ ಕುರಿತು ಮಾಹಿತಿ ನೀಡಿದರು.





0 Comments