ಬೆಂಗಳೂರು : ಮತ್ತಿಕೆರೆಯ ಶ್ರೀ ರಾಮಾಂಜನೇಯ ಆಟೋ ನಿಲ್ದಾಣ ದ ವತಿಯಿಂದ, "ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್" ರವರ ಪುಣ್ಯಸ್ಮರಣೆ ಮತ್ತು "ಕರಾಟೆರಾಜ ಶಂಕರ್ ನಾಗ್" ರವರ ಜನ್ಮದಿನದ ಸವಿನೆನಪಿಗಾಗಿ "೬೭ ನೇ ಕರ್ನಾಟಕ ರಾಜ್ಯೋತ್ಸವ" ಕಾರ್ಯಕ್ರಮವನ್ನು ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರು, ಸಮಾಜಸೇವಕರು, ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರಾದ "ಕನ್ನಡರತ್ನ ಹರೀಶ್" ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಾಗೂ ಸ್ಥಳೀಯ ಹಿರಿಯ ನಾಗರಿಕರಾದ ವೆಂಕಟೇಶ್ ರವರು ಅಧ್ಯಕ್ಷತೆ ವಹಿಸಿದ್ದರು.
ಕನ್ನಡತಾಯಿ ಭುವನೇಶ್ವರಿ ಮಾತೆಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ಮಾಡಿದ ನಂತರ ಕನ್ನಡರತ್ನ ಹರೀಶ್ ರವರು ಮಾತನಾಡಿ ನಾಡು-ನುಡಿಯ ಹಿರಿಮೆ, ಸಂಸ್ಕೃತಿ-ಪರಂಪರೆಯ ಮಹತ್ವವನ್ನು ತಿಳಿಸಿಕೊಟ್ಟರು. ಕನ್ನಡ ಭಾಷೆಯ ಬಳಕೆ ನಮ್ಮೆಲ್ಲರ ಆದ್ಯ ಕರ್ತವ್ಯ, ನಮ್ಮ ಭಾಷೆಯ ಅಸ್ಮಿತೆಯನ್ನು ಕಾಪಾಡಿಕೊಂಡು ಮತ್ತು ಪರಭಾಷಿಕರಿಗೆ ಸ್ನೇಹಪೂರ್ವಕವಾಗಿ ಕನ್ನಡ ಕಲಿಕೆಯ ಬಗ್ಗೆ ಒಲವು ಮೂಡುವಂತೆ ಮಾಡಬೇಕೆಂದು ಕರೆನೀಡಿದರು.
ಅಂತೆಯೇ ಆಟೋಚಾಲಕರು ರಾಜ್ಯೋತ್ಸವ ಆಚರಣೆಯ ಮೂಲಕ ಶಂಕರ್ ನಾಗ್ ಮತ್ತು ಪುನೀತ್ ರಾಜಕುಮಾರ್ ರವರನ್ನು ಸದಾಕಾಲವೂ ಜೀವಂತವಾಗಿರಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.
ಡಾ.ಪುನೀತ್ ರಾಜಕುಮಾರ್ ರವರ ಪುಣ್ಯಸ್ಮರಣೆಯ ನಿಮಿತ್ತವಾಗಿ ಅನ್ನದಾನವನ್ನು ಏರ್ಪಡಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರಾದ ವೆಂಕಟೇಶ್ ರವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಆಟೋಚಾಲಕರ ಸಂಘದ ಅಧ್ಯಕ್ಷರಾದ ರಾಜಕುಮಾರ್, ಕಾರ್ಯದರ್ಶಿ ವೆಂಕಟೇಶ್, ಸಂಚಾಲಕರಾದ ಸಿದ್ದು, ರಮೇಶ್, ಕುಮಾರ್, ಹಾಗೂ ಮತ್ತಿತರ ಚಾಲಕರು ಈ ಕಾರ್ಯಕ್ರಮದಲ್ಲಿ ಭಾಗವಹಿದ್ದರು.

0 Comments