ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಕಾರ್ತೀಕ ಸಂಗೀತೋತ್ಸವ, ಕನ್ನಡ ರಾಜ್ಯೋತ್ಸವ ಮತ್ತು ಕನಕ ಜಯಂತಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು,
ಕೊನೆಯ ದಿನವಾದ ನವೆಂಬರ್ 13, ಭಾನುವಾರ ಸಂಜೆ ಗಾಯನ-ವ್ಯಾಖ್ಯಾನ ಕಾರ್ಯಕ್ರಮದಲ್ಲಿ, ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್ ಅವರು ಹಾಡಿದ ಶ್ರೀ ಕನಕದಾಸರ ರಚನೆ "ಬಾರೋ ಕೃಷ್ಣಯ್ಯ", ಶ್ರೀ ಕಮಲೇಶ ವಿಠಲದಾಸರ "ಉಡುಪಿಯ ಕೃಷ್ಣನ ಸಡಗರ ನೋಡುವ ಬಾರೇ ನಾರಿಮಣಿಯೇ", ಶ್ರೀ ವಾದಿರಾಜರ "ಏನು ಸುಕೃತವ ಮಾಡಿದಳೋ ಯಶೋದೆ", ಶ್ರೀ ವ್ಯಾಸರಾಜರ "ರಂಗ ಬಂದ ಬೃಂದಾವನದಲಿ ನಿಂದ", ಶ್ರೀ ವಿಜಯದಾಸರ "ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀ ಹರಿ", ಶ್ರೀ ಪ್ರಸನ್ನವೆಂಕಟದಾಸರ "ಹಕ್ಕಿಯ ಹೆಗಲೇರಿ ಬಂದವಗೆ ನೋಡಕ್ಕ ಮನಸೋತೆ ನಾನವಗೆ" ಹಾಗೂ ಶ್ರೀ ಪುರಂದರದಾಸರ "ಜಗದೋದ್ಧಾರನ ಆಡಿಸಿದಳೆಶೋದೆ" ಹೀಗೆ ವಿವಿಧ ಹರಿದಾಸರುಗಳ ಅಪರೂಪದ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿದರು.
ಈ ಎಲ್ಲಾ ಹಾಡುಗಳಿಗೂ ಡಾ|| ವಿನಾಯಕಾಚಾರ್ ಅವರು ಬಹಳ ಅರ್ಥವತ್ತಾಗಿ ನಿರೂಪಣೆ ಮಾಡಿದರು. ನಂತರ ಶ್ರೀಮತಿ ರೇಖಾ ಪ್ರಸಾದ್ ಮತ್ತು ಸಂಗಡಿಗರಿಂದ ಶ್ರೀ ಪುರಂದರದಾಸರ ನವರತ್ನ ಮಾಲಿಕೆ ಗೋಷ್ಠಿ ಗಾಯನ ಜರುಗಿತು. ಈ ಕಾರ್ಯಕ್ರಮದ ವಂದನಾರ್ಪಣೆಯನ್ನು ಡಾ|| ಭಾಷ್ಯಂ ಚಕ್ರವರ್ತಿ ಅವರು ಬಹಳ ಸೊಗಸಾಗಿ ನಡೆಸಿಕೊಟ್ಟರು.



0 Comments