“ಹೆಣ್ಣು ಒಂದು ಹೆಜ್ಜೆ ಮುಂದೆ ಇಟ್ಟರೆ ಸಮಾಜ ಒಂದು ಹಂತ ಮೇಲಕ್ಕೇರುತ್ತದೆ. ಎಲ್ಲಾ ಮಹಿಳೆಯರಲ್ಲೂ ಒಂದಿಲ್ಲೊಂದು ಕನಸು ಅಥವಾ ಕಲೆ ಅಡಗಿರುತ್ತದೆ. ಅವುಗಳಿಗೆ ಸರಿಯಾದ ಪೋಷಣೆ ನೀಡುವುದು ಕುಟುಂಬದ ಹೊಣೆ. ಹಾಗೆಯೇ ಅವಕಾಶ ದೊರಕಿಸಿಕೊಡುವುದು ಸಮಾಜದ ಎಲ್ಲರ ಜವಾಬ್ದಾರಿಯಾಗಿದೆ. ಹೆಣ್ಣು ಮಕ್ಕಳು ಆಟದ ಮೈದಾನದಿಂದ ಬೋರ್ಡ್ ರೂಮಿನ ವರೆಗೂ ಎಲ್ಲಾ ಕ್ಷೇತ್ರಗಳಲ್ಲಿ ಹಬ್ಬಿ ಬೆಳೆಯಬೇಕೆಂಬುದು ನನ್ನ ಹಂಬಲ” ಎಂದು ʼಅವಳ ಹೆಜ್ಜೆʼ ಸಂಸ್ಥಾಪಕಿ ಶಾಂತಲಾ ದಾಮ್ಲೆ ಹೇಳಿದರು.
ನಿನ್ನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ʼಕನ್ನಡತಿ ಉತ್ಸವ-2022ʼ ರ ಅಂಗವಾಗಿ ನಡೆದ ʼಮಿಸ್ ಮಹಾಲಕ್ಷ್ಮೀʼ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆಯರಿಗೆ ಪಾರಿತೋಷಕ ವಿತರಿಸಿ ಅವರು ಮಾತನಾಡುತ್ತಿದ್ದರು. ಪ್ಯಾಷನ್ ಶೋನಲ್ಲಿ 7 ವರ್ಷದಿಂದ ಮೊದಲುಗೊಂಡು 75 ವರ್ಷ ವಯೋಮಾನದವರೆಗಿನ ಮಹಿಳೆಯರು ತಮ್ಮ ತಮ್ಮ ಕನಸು, ಕಸುಬು ಮತ್ತು ಕಲೆಯನ್ನು ಕ್ರಿಯಾಶೀಲವಾಗಿ ವಿವಿಧ ಉಡುಗೆ ತೊಡುಗೆಗಳ ಮೂಲಕ ರ‍್ಯಾಂಪ್ ಮೇಲೆ ಪ್ರದರ್ಶಿಸಿದರು.
ವೈದ್ಯೆ, ವಕೀಲೆ, ಫಾರ್ಮಾಸಿಸ್ಟ್, ಕೇಶ ವಿನ್ಯಾಸಕಿ, ಬಾಹ್ಯಾಕಾಶ ವಿಜ್ಞಾನಿ, ವನ್ಯಜೀವಿ ಛಾಯಾಗ್ರಾಹಕಿ, ಸಮಾಜ ಸೇವೆ, ಕಸೂತಿ, ಶಿಕ್ಷಣ, ಫ್ಯಾಷನ್ ಡಿಸೈನಿಂಗ್, ಮಾಡಲಿಂಗ್, ಜಿಮ್, ಯೋಗ, ಸಾಹಿತ್ಯ, ಗಾಯನ, ಭರತನಾಟ್ಯ, ಕಥಕ್, ಯಕ್ಷಗಾನ, ಚಿತ್ರಕಲೆ, ನಾಟಕ, ಟ್ರಕ್ಕಿಂಗ್, ಆಭರಣ ವಿನ್ಯಾಸ ಮುಂತಾದ ಕ್ಷೇತ್ರಗಳನ್ನು ಪ್ರತಿನಿಧಿಸಿದರು.
ಇದರೊಂದಿಗೆ, ʼಹಳೆ ಬೇರು ಹೊಸ ಚಿಗುರುʼ ಶೀರ್ಷಿಕೆಯಡಿ ಹೆಣ್ಣು ಸಂತತಿಯ ಮೂರು ನಾಲ್ಕು ತಲೆಮಾರಿನ ಒಂದೇ ಕುಟುಂಬದ ಮಹಿಳೆಯರು ಒಟ್ಟಾಗಿ ರ‍್ಯಾಂಪ್ ವಾಕ್ ಮೇಲೆ ನಡೆದು ತಮ್ಮ ಬಾಂಧವ್ಯವನ್ನು ಪ್ರದರ್ಶಿಸಿದರು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ದೀಪಾ, 9972947589
ನಿರ್ದೇಶಕಿ, ಕನ್ನಡತಿ ಉತ್ಸವ-2022

0 Comments