ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು, ಈಗಲೂ ರಾಜ್ಯದಲ್ಲಿ ಶೇ 40 ಕಮಿಷನ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇದು ಅತ್ಯಂತ ಭ್ರಷ್ಟ ಸರ್ಕಾರ. ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಭ್ರಷ್ಟರಾಗಿದ್ದಾರೆ. ಇಂತಹ ಸರ್ಕಾರವನ್ನು ನನ್ನ ಜೀವನದಲ್ಲಿ ನೋಡಿಲ್ಲ. ಅತಿಯಾದ ಭ್ರಷ್ಟಾಚಾರದಲ್ಲಿ ನಿರತರಾಗಿರುವ ಒಬ್ಬ ಸಚಿವರ ವಿರುದ್ಧ ಶೀಘ್ರದಲ್ಲೇ ಕ್ರಿಮಿನಲ್ ಮುಖದ್ದಮೆ ಹೂಡುತ್ತೇವೆ ಎಂದು ಎಂದು ಕಿಡಿ ಕಾರಿರುವುದು ರಾಜ್ಯ ಸರ್ಕಾರದ ಮಹಾ ಭ್ರಷ್ಟಾಚಾರಕ್ಕೆ ಹಿಡಿದಿರುವ ಕನ್ನಡಿಯಾಗಿದೆ.
ಈ ಬಗ್ಗೆ, ಹಿಂದೆಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿ.
ಶಿವಸೇನೆ, ಆಮ್ ಆದ್ಮಿ, ಕಾಂಗ್ರೆಸ್, ಆರ್ ಜೆ ಡಿ ಮುಂತಾದ ವಿರೋಧ ಪಕ್ಷಗಳ ನಾಯಕರುಗಳ ಮೇಲೆ ಐಟಿ, ಇಡಿ, ಸಿಬಿಐ ದಾಳಿ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ, ತಮ್ಮದೇ ಬಿಜೆಪಿ ಸರ್ಕಾರದ ಮೇಲೆ ಇಷ್ಟೆಲ್ಲಾ ಆರೋಪಗಳಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸರಿಯಲ್ಲ. ಇದು ಕೇಂದ್ರದ ಮಲತಾಯಿ ಧೋರಣೆಗೆ ಸಾಕ್ಷಿಯಾಗಿದೆ.
ತಕ್ಷಣ ಉನ್ನತ ತನಿಖೆ ಕೈಗೊಂಡು ಭ್ರಷ್ಟ ಸಚಿವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.
ಕೆಂಪಣ್ಣನವರ ಜೊತೆಗೆ ಬಿಬಿಎಂಪಿ ಗುತ್ತಿಗೆದಾರರ ಸಂಘ, ಕ್ರೈಸ್ ಗುರುತ್ತಿಗೆದಾರರ ಸಂಘ ಸಹ ಆರೋಪಿಸಿರುವುದು ಪ್ರಕರಣದ ಗಂಭೀರತೆಯನ್ನು ಸಾರುತ್ತದೆ. ಇಂದಿಗೂ ಜಲಸಂಪನ್ಮೂಲ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳು ಹಾಗೂ ಬಿಬಿಎಂಪಿಯಿಂದ ಸುಮಾರು 22 ಸಾವಿರ ಕೋಟಿಗೂ ಹೆಚ್ಚು ಹಣ ಗುತ್ತಿಗೆದಾರರಿಗೆ ಬಿಡುಗಡೆ ಆಗದಿರುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಶ್ವೇತ ಪತ್ರವನ್ನು ಹೊರಡಿಸಲಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇಷ್ಟೆಲ್ಲ ಗುರುತರ ಆರೋಪಗಳಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಧಾರಗಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ ಎಂದು ಹೇಳಿರುವುದು ಬೇಜವಾಬ್ದಾರಿತನದ ಪರಮಾವಧಿಯಾಗಿದೆ ಎಂದು ಕಿಡಿ ಕಾರಿದ್ದಾರೆ.
ಮುಖ್ಯಮಂತ್ರಿ ಸ್ವತಹ ತಾವೇ ಯಾಕೆ ಲೋಕಾಯುಕ್ತವಾಗಲಿ ಅಥವಾ ನ್ಯಾಯಾಂಗ ತನಿಖೆಯನ್ನಾಗಲಿ ನಡೆಸಬಾರದು? ಎಂದು ಪ್ರಶ್ನಿಸಿರುವ ಅವರು, ಒಂದು ವೇಳೆ ಗುತ್ತಿಗೆದಾರರ ಆರೋಪ ಸುಳ್ಳಾಗಿದ್ದರೆ ಅವರ ವಿರುದ್ಧವೇ ಯಾಕೆ ಕ್ರಮ ಕೈಗೊಳ್ಳಬಾರದು ಎಂದಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಈ ಪ್ರಮಾಣದ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಸಾವರ್ಕರ್ ಹೆಸರಿನಲ್ಲಿ ಯಾತ್ರೆ ಹೊರಟಿರುವುದು ಹಾಸ್ಯಾಸ್ಪದ.
ಪಿಎಸ್ಐ ನೇಮಕಾತಿ , ಸಹಾಯಕ ಪ್ರಾಧ್ಯಾಪಕರ ಹಾಗೂ ಕೆಪಿಟಿಸಿಎಲ್ ಪರೀಕ್ಷಾ ಹಗರಣಗಳು ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿವೆ.
ಇಷ್ಟೆಲ್ಲ ನಡೆಯುತ್ತಿದ್ದರು ಕೇಂದ್ರ ಬಿಜೆಪಿ ನಾಯಕತ್ವ ಕಣ್ಣು ಮುಚ್ಚಿ ಕುಳಿತಿರುವುದು, ಈ ಭ್ರಷ್ಟಾಚಾರದಲ್ಲಿ ಪಾಲುದಾರರೇನೋ ಎಂಬ ಸಂಶಯಕ್ಕೆ ಕಾರಣವಾಗಿದೆ.
ಐಟಿ,ಇಡಿ,ಸಿಬಿಐ, ಲೋಕಾಯುಕ್ತ ಅಥವಾ ನ್ಯಾಯಾಂಗ ಯಾವುದಾದರೂ ಆಗಲಿ, ತಕ್ಷಣ ಸಮಗ್ರ ತನಿಖೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇಲ್ಲವೇ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿ ಕೊಂಡು ನ್ಯಾಯಾಂಗ ತನಿಖೆಗೆ ಮುಂದಾಗಲಿ ಎಂದಿದ್ದಾರೆ.
ಹಾಗೆಯೇ ಗುತ್ತಿಗೆದಾರರ ಸಂಘವು ಸಹ ನಿರ್ದಿಷ್ಟ ಸಚಿವರು ಮತ್ತು ಅಧಿಕಾರಿಗಳ ಮೇಲೆ ದೂರು ದಾಖಲಿಸುವ ಮೂಲಕ ತಕ್ಕ ಪಾಠ ಕಲಿಸಲು ಮುಂದಾಗಲಿ. ಇಲ್ಲದಿದ್ದರೆ ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡುತ್ತಿದ್ದರೆ , ಅದನ್ನೇ ರಾಜಕೀಯ ಕಾರಣಕ್ಕಾಗಿ ಆರೋಪ ಮಾಡುತ್ತಿದ್ದಾರೆಂದು ರಾಜ್ಯ ಬಿಜೆಪಿ ಸರ್ಕಾರ ತನ್ನ ಮೇಲಿನ ಆರೋಪಗಳನ್ನು ಅನಾಯಾಸವಾಗಿ ತಳ್ಳಿ ಹಾಕಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.
ಒಟ್ಟಿನಲ್ಲಿ ಸಮಗ್ರ ತನಿಖೆ ನಡೆದು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಬಹುಜನ ಸಮಾಜ ಪಾರ್ಟಿ ಅಗ್ರಹಿಸುತ್ತದೆ ಎಂದಿದ್ದಾರೆ.

0 Comments