Ticker

6/recent/ticker-posts

Ad Code

Responsive Advertisement

ಸೈನಿಕರ ತ್ಯಾಗ, ಬಲಿದಾನಗಳನ್ನು ನಮ್ಮ ಮಕ್ಕಳಿಗೆ ತಿಳಿಸುವ ಕಾರ್ಯವಾಗಬೇಕು

 ವಾರ್ತಜಾಲ ಸುದ್ದಿ ಮಧುಗಿರಿ: ‘ದೇಶಕ್ಕಾಗಿ ತಮ್ಮ ಜೀವನ ಮುಡುಪಿಟ್ಟ ಸೈನಿಕರ ತ್ಯಾಗ, ಬಲಿದಾನಗಳನ್ನು ನಮ್ಮ ಮಕ್ಕಳಿಗೆ ತಿಳಿಸುವ ಕಾರ್ಯವಾಗಬೇಕು’ ಎಂದು ಪತ್ರಕರ್ತ ಜಿ.ನಾರಾಯಣರಾಜು ಹೇಳಿದರು.

ಪಟ್ಟಣದ ಮಹಾತ್ಮಗಾಂಧಿ ವೃತ್ತ ಡೂಂಲೈಟ್ ವೃತ್ತದ ಬಳಿ ವಿವಿಧ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಕಾರ್ಗಿಲ್‌ ವಿಜಯ ದಿವಸ್‌–2022, ಹುತಾತ್ಮ ವೀರಯೋಧರಿಗೆ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಿನಿಮಾ, ಮೊಬೈಲ್‌ ಎಬಿಸಿಡಿ ಹೇಳುವ ಇಂದಿನ ಮಕ್ಕಳಿಗೆ ಕ್ಷಾತ್ರ ತೇಜಸ್ಸಿನ ಭಾರತವನ್ನು ಕಟ್ಟಿದ ಹುತಾತ್ಮರನ್ನು ಎಬಿಸಿಡಿ ಮೂಲಕ ಮಕ್ಕಳಿಗೆ ಪರಿಚಯ ಮಾಡುವ ಕಾರ್ಯವನ್ನು ಪೋಷಕರು ಮಾಡಬೇಕು. ಎ ಎಂದರೆ ಅಬ್ಬಕ್ಕ, ಬಿ ಎಂದರೆ ಭಗತ್‌ಸಿಂಗ್‌, ಸಿ ಎಂದರೆ ಚಂದ್ರಶೇಖರ ಆಜಾದ್‌, ಡಿ ದಾದಾಭಾಯಿ ನವರೋಜಿ ಆಗಬೇಕು. ನಮ್ಮ ಮಕ್ಕಳಿಗೆ ಅವರ ಬಲಿದಾನ ತಿಳಿಸಬೇಕು’ ಎಂದು ಕರೆ ನೀಡಿದರು.

ಮಕ್ಕಳಿಗೆ ಸಿನಿಮಾ, ಕ್ರೀಡಾ ತಾರೆಯರು ಹೀರೋಗಳಾಗಬಾರದು. ದೇಶಕ್ಕೆ ಪ್ರಾಣಾರ್ಪಣೆ ಮಾಡಿದ ಸೈನಿಕರು ನಮ್ಮ ಮಕ್ಕಳಿಗೆ ಹೀರೋಗಳಾಗಬೇಕು ಎಂದು ಕಿವಿಮಾತು ಹೇಳಿದರು.

‘ಭಾರತದ ಸೈನಿಕರ ಕಾರ್ಯವನ್ನು ಗುರುತಿಸುವ ಕಾರ್ಯಕ್ಕೆ ಪ್ರೇರಣೆ ನೀಡಿದ್ದು ಕಾರ್ಗಿಲ್‌ ಯುದ್ಧ. ಸೈನಿಕರು ವೃತ್ತಾಸುರನ ಸಂಹಾರಕ್ಕೆ ತನ್ನ ಬೆನ್ನುಮೂಳೆಯನ್ನು ನೀಡಿ ಲೋಕಕಲ್ಯಾಣ ಮಾಡಿದ ಧಧೀಚಿ ಪರಂಪರೆಯವರು. ನಾವು ಇಂದು ಮನೆಯಲ್ಲಿ ಕುಳಿತು ಧಾರಾವಾಹಿ ವೀಕ್ಷಿಸುತ್ತಾ ನಿರಾತಂಕವಾಗಿ ಬದುಕಿದ್ದೇವೆ ಎಂದರೆ ಅದಕ್ಕೆ ಸೈನಿಕರು ಕಾರಣ. ಶತ್ರು ರಾಷ್ಟ್ರಗಳು ನೀಡಿದ ಚಿತ್ರಹಿಂಸೆಯನ್ನು ಸಹಿಸಿಕೊಂಡು ದೇಶಕ್ಕಾಗಿ ಬಲಿದಾನ ಮಾಡಿದ ಅಸಂಖ್ಯ ಸೈನಿಕರನ್ನು ನೆನೆಯುವ ಕಾರ್ಯವಾಗಬೇಕು’ ಎಂದು ಹೇಳಿದರು.

‘ನಾವು ತಿನ್ನುವ ಒಂದೊಂದು ಅಗಳಿನಲ್ಲಿಯೂ ಸೌರಬ್‌ ಖಾಲಿಯಾ, ವಿಕ್ರಂ ಭಾತ್ರಾ, ಮನೋಜ್‌ಕುಮಾರ್ ಪಾಂಡೆಯಂತಹವರ ತ್ಯಾಗ, ಬಲಿದಾನ ಇದೆ. ಇದನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಬೇಕು. ಒಂದು ದಿನ ಸಮಾರಂಭ ಮಾಡಿ ಭಾರತ್ ಮಾತಾಕಿ ಜೈ ಎಂದು ಮುಗಿಸುವುದಲ್ಲ ಸೈನಿಕರ ತ್ಯಾಗವನ್ನು ನೆನಪಿಸಿಕೊಳ್ಳಬೇಕು’ ಎಂದರು.

ರಕ್ತದಾನ ಶಿಬಿರ ಗೆಳೆಯರ ಬಳಗದ ಅಧ್ಯಕ್ಷ ಶಶಿಕುಮಾರ್  ಮಾತನಾಡಿ ಮಧುಗಿರಿ ತಾಲ್ಲೂಕಿನಲ್ಲಿ ನೂರಕ್ಕೂ ಹೆಚ್ಚು ನಿವೃತ್ತ ಯೋಧರು ಇದ್ದು  ಅವರಿಗಾಗಿ ನಿರೀಕ್ಷಣಾ ಮಂದಿರದ ಸಮೀಪ ಖಾಲಿ ನಿವೇಶನವನ್ನು ಸರ್ಕಾರದ ವತಿಯಿಂದ ಮಂಜೂರಾಗಿದ್ದು ಮುಂದಿನ  ದಿನಗಳಲ್ಲಿ ನಿವೃತ್ತ ಯೋಧರ ಸೌದಿ ನಿರ್ಮಾಣವಾಗಲಿದೆ ಎಂದು ತಿಳಿಸಿದರು. 

ಕನ್ನಡ ವಿಜಯ  ಸೇನೆ ಅಧ್ಯಕ್ಷ ತಿಮ್ಮರಾಜು, ಡಾ ರಾಜ್ ಅಭಿಮಾನಿ ಬಳಗದ ಗೋವಿಂದರಾಜು, ಸರ್ಕಾರಿ ನೌಕರರ ಸಂಘದ ಮಾಜಿ ಖಜಾಂಚಿ ಹನುಮಂತರಾಯಪ್ಪ, ನಾವು ಭಾರತೀಯರು ಸಂಸ್ಥೆಯ ಮುಜಮಿಲ್ ಭಾಷಾ, ಅಲ್ಪಸಂಖ್ಯಾತರ ವಿಭಾಗದ ಸಾದಿಕ್ ಹಾಗೂ ನೂರಾರು ಅಭಿಮಾನಿಗಳು ಹಾಜರಿದ್ದರು. 

ನಿವೃತ್ತ ಯೋಧ ನಾಗರಾಜು ರವರನ್ನು ಅಭಿನಂದಿಸಲಾಯಿತು. ನಿವೃತ್ತ ಯೋಧರ ಸ್ಮರಣಾರ್ಥ ಮೆಣದಭತ್ತಿ ಹಚ್ಚಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ನಂತರ ರಾಷ್ಟ್ರಗೀತೆ ಹಾಡಿ ಗೌರವ ಸಮರ್ಪಿಸಲಾಯಿತು.

ವರದಿ:ನಾಗೇಶ್ ಜೀವಾ ಮಧುಗಿರಿ.

Post a Comment

0 Comments

Ad Code

Responsive Advertisement