ಕನ್ನಡ ಸಾಹಿತ್ಯ ಪರಿಷತ್ತು ದಿನಾಂಕ ೦೫-೦೫-೨೦೨೨ರ ಗುರುವಾರ ಬೆಳಗ್ಗೆ ೧೧.೦೦ಕ್ಕೆ ಮೂರನೆಯ ಮಹಡಿಯಲ್ಲಿರುವ ಕುವೆಂಪು ಸಭಾಂಗಣದಲ್ಲಿ “೧೦೮ನೆಯ ಸಂಸ್ಥಾಪನಾ ದಿನಾಚರಣೆ ಹಾಗೂ ಶತಮಾನೋತ್ಸವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ”ವನ್ನು ಏರ್ಪಡಿಸಲಾಗಿದೆ. ಶತಮಾನೋತ್ಸವ ದತ್ತಿ ಪ್ರಶಸ್ತಿಗೆ ಕಸಾಪದ ಮಾಜಿ ಅಧ್ಯಕ್ಷರಾದ ಡಾ. ಆರ್. ಕೆ. ನಲ್ಲೂರು ಪ್ರಸಾದ್ ಅವರು ಭಾಜನರಾಗಿದ್ದು, ಇವರಿಗೆ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರೂರು ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಇದಲ್ಲದೆ, ಕಸಾಪ ಸಿಬ್ಬಂದಿಗಳಿಗಾಗಿ ಶ್ರೀ ಎಂ.ಜಿ. ನಾಗರಾಜು ಅವರು ಪರಿಷತ್ತಿನಲ್ಲಿ ಸ್ಥಾಪಿಸಿರುವ ಗೌರಮ್ಮ ಗಂಗಾಧರಯ್ಯ ಸೇವಾ ಸಿಬ್ಬಂದಿ ದತ್ತಿ ಪ್ರಶಸ್ತಿಗೆ ಪರಿಷತ್ತಿನ ನಿವೃತ್ತ ಸಿಬ್ಬಂದಿಗಳಾದ ಶ್ರೀ ಜಗನ್ನಾಥ ಹೇಮಾದ್ರಿ ಹಾಗೂ ಶ್ರೀ ಮಂಜಯ್ಯ ಅವರು ಮತ್ತು ಹಾಲಿ ಸಿಬ್ಬಂದಿ ಶ್ರೀ ರಾಜು ಅವರುಗಳು ಭಾಜನರಾಗಿದ್ದಾರೆ.
ಮೊದಲ ಬಾರಿಗೆ ಪರಿಷತ್ತು ಕನ್ನಡ ಪರಿಚಾರಕ ಪುರಸ್ಕಾರವನ್ನು ನೀಡುತ್ತಿದ್ದು, ಈ ಪ್ರಶಸ್ತಿಗೆ ಶ್ರೀ ಮ.ಅ. ವೆಂಕಟೇಶ್ ಹಾಗೂ ಶ್ರೀಮತಿ ಶೋಭಾ ಸುನೀಲ ಗುಂಡಮಿ ಅವರುಗಳು ಭಾಜನರಾಗಿರುತ್ತಾರೆ.
ಈ ಸಮಾರಂಭದಲ್ಲಿ “ಕನ್ನಡ ಮನಸ್ಸುಗಳ ಮೇಲೆ ಕನ್ನಡ ಸಾಹಿತ್ಯ ಪರಿಷತ್ತು ಬೀರಿದ ಪ್ರಭಾವ”ದ ಕುರಿತು ಕಸಾಪದ ನಿವೃತ್ತ ವ್ಯವಸ್ಥಾಪಕರಾದ ಶ್ರೀ ಜಗನ್ನಾಥ ಹೇಮಾದ್ರಿ ಅವರು ಮಾತನಾಡಲಿದ್ದಾರೆ, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾನ್ಯ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ವಹಿಸಲಿದ್ದಾರೆ.




0 Comments