ಬಳ್ಳಾರಿ,ಮೇ 10: ಸತ್ಯಕ್ಕೆ ಹರಿಶ್ಚಂದ್ರ, ನೀತಿಗೆ ಧರ್ಮರಾಜ, ಪ್ರತಿಜ್ಞೆಗೆ ಭೀಷ್ಮ, ನ್ಯಾಯ-ನೀತಿ-ಧರ್ಮಕ್ಕೆ ಶ್ರೀರಾಮ ಅದರಂತೆಯೇ ಪರಿಶುದ್ಧ ಭಕ್ತಿಗೆ ಒಂದು ಶಕ್ತಿ ಅದುವೇ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರು, ಶುದ್ಧ ಭಕ್ತಿಯಿಂದ ಶಿವನು ಒಲಿಯುವ ಪರಿ ಜಗತ್ತಿಗೆ ತೋರಿಸಿಕೊಟ್ಟ ತಾಯಿ, ರೆಡ್ಡಿ ಜನಾಂಗದ ಆರಾಧ್ಯ ದೇವತೆ ಹೇಮರೆಡ್ಡಿ ಮಲ್ಲಮ್ಮ ಎಂದು ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಪಾರ್ವತಿ ನಗರದ ಬಸವ ಭವನದಲ್ಲಿ ಮಂಗಳವಾರದಂದು ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯೋತ್ಸವದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹುಟ್ಟಿನಿಂದ ಕೊನೆಯವರೆಗೂ ಆ ತಾಯಿಯ ಬಾಳಿನ ಕಣ ಕಣದಲ್ಲೂ ಅಡಗಿದ್ದ ಒಂದು ಅಂಶ ಶ್ರೀ ಶೈಲ ಮಲ್ಲಿಕಾರ್ಜುನ, ಆ ಮಲ್ಲಿಕಾರ್ಜುನನಲ್ಲಿನ ಅಗಾಧ ಭಕ್ತಿ ಶುದ್ಧ ಭಕ್ತಿಗೆ ಒಲಿಯೋ ಭಗವಂತ ಶಿವ. ಬರಿ ಒಲಿಯೋದಲ್ಲ ಭಕ್ತರ ಕಷ್ಟಗಳನ್ನ ತಾನೇ ತೆಗೆದುಕೊಂಡು ಬಾಳು ಬೆಳಗೋ ದೇವಾ ಆ ಶಿವ. ಅಂತಹ ಘಟನೆಗಳು ಹಾಗೂ ಪವಾಡಗಳು ಹೇಮರೆಡ್ಡಿ ಮಲ್ಲಮ್ಮರ ಬದುಕಿನ ಉದ್ದಕ್ಕೂ ನಾವು ಕಾಣಬಹುದು ಎಂದು ಹೇಳಿದರು.
ಗಂಡನ ಮನೇಲಿ ಎಲ್ಲರೂ ಊಟ ಮಾಡಿ ಮಲಗಿದರೆ, ಮಲ್ಲಮ್ಮರ ಬದುಕು ಹಾಗಿರಲಿಲ್ಲ. ರಾತ್ರಿಯಿಡೀ ಜೋಳದ ರಾಶಿ ಬೀಸಬೇಕಿತ್ತು. ಸುಸ್ತಾಗಿ ಮಲಗಿದಾಗ, ಎಚ್ಚರ ಆಗುವಷ್ಟರಲ್ಲಿ ಬೀಸುವ ಕೆಲಸ ಮುಗಿದಿರುತ್ತಿತ್ತು. ಸಾಕ್ಷಾತ್ ಭಗವಂತ ಬಂದು ಮಲ್ಲಮನಿಗೆ ಸಹಾಯ ಮಾಡುತ್ತಿದ್ದ ಪರಿ ಮತ್ತು ಮಲ್ಲಮ್ಮರ ಬದುಕಲ್ಲಿ ಹತ್ತು ಹಲವು ಘಟನೆಗಳು ಕಾಣಬಹುದು. ಅತ್ತೆ ಹಾಗು ಗಂಡನ ಮನೆಯವರು ಮಲ್ಲಮನಿಗೆ ಕಷ್ಟಕೊಡಲು ಅಡವಿಗೆ ದನ ಮೇಯಿಸಲು ಕಳಿಸಿದರೆ, ಆತಳನ್ನ ಕಾಪಾಡುತ್ತ, ಆಕೆ ನೀಡೋ ಊಟ ಮಾಡುತ್ತಿದ್ದುದ್ದು ಆ ಭಗವಂತ ಶಿವ ಎಂದು ನಾವು ಇಲ್ಲಿ ಸ್ಮರಿಸಬಹುದು ಎಂದರು.
ಧನಕ್ಕೆ ಹೆಸರಾಗಿದ್ದ ಮಲ್ಲಮಳಿಗೆ ಬುದ್ಧಿ ಕಲಿಸಲು, ಒಮ್ಮೆ ಮನೆಗೆ ಬಂದ ಭಿಕ್ಷುಕನಿಗೆ ಕೆಂಡ ತುಂಬಿದ ಪಾತ್ರೆ ಕೊಟ್ಟು ಅದನ್ನ ಹಾಕಲು ಅತ್ತೆ ಹೇಳಿದಾಗ, ಶಿವನ ನೆನೆದು ಹಾಕಿದಾಗ ಅದು ಧಾನ್ಯವಾಗಿತ್ತು.
ದುಶ್ಚಟಗಳ ದಾಸನಾಗಿದ್ದ ಮೈದುನ ಮನ ಬದಲಾಯಿಸಿ ಆತನನ್ನ ಮಹಾಯೋಗಿಯನ್ನಾಗಿ ಮಾಡಿದ್ದು, ಕಣ್ಣಿಲ್ಲದವರಿಗೆ ಶಿವನನ್ನು ತೋರಿಸಿ ಕಣ್ಣು ಬರುವ ಹಾಗೆ ಮಾಡಿದ್ದು, ಬಡವರಿಗೆ ಸಿರಿ ಹೀಗೆ ಅವರ ಪವಾಡಗಳು ಅಪಾರ ಮತ್ತು ಹೇಳತೀರಲಾಗದು ಎಂದು ವಿವರಿಸಿದರು.
ಇವತ್ತು ಈ ಸಮುದಾಯದ ಶ್ರೇಯಸ್ಸಿಗೆ ಕಾರಣ ಮಲ್ಲಮ್ಮರ ಆ ಪರಮ ಭಕ್ತಿ, ಮಲ್ಲಮ್ಮ ತನ್ನ ಬದುಕು ಮುಗಿಸುವ ಮೊದಲು ಮಲ್ಲಿಕಾರ್ಜುನ, ಆಕೆಯ ಭಕ್ತಿಗೆ ಒಲಿದು ದರ್ಶನ ನೀಡಿ, ಏನು ವರ ಬೇಕು ಎಂದಾಗ ಮಲ್ಲಮ್ಮ- ತನ್ನ ಬಳಗಕ್ಕೆ ಎಂದೂ ಬಡತನ ಬರಬಾರದು, ಅವರಿಗೆ ಎಂದೂ ಉಣ್ಣಲು-ಉಡಲು-ತೊಡಲು ಯಾವ ಕೊರತೆಯೂ ಆಗಬಾರದು ಎಂದು ಬೇಡುತ್ತಾರೆ.
ಆ ತಾಯಿಯ ಆದರ್ಶ, ಜೀವನ ನಮಗೆ ಇಂದು ಪ್ರೇರಣೆ ಆಗಬೇಕು. ಒಬ್ಬ ಗೃಹಿಣಿ ಸಮಾಜದ ಶಕ್ತಿ ಆಗಬಹುದು ಎಂದು ತೋರಿಸಿಕೊಟ್ಟ ಹೇಮರೆಡ್ಡಿ ಮಲ್ಲಮ್ಮ ಅವರ ಆದರ್ಶ, ಜೀವನ ಸದಾ ಮನುಕುಲವನ್ನ ಬೆಳಗುತ್ತದೆ ಮತ್ತು ಸತ್ಯ ಧರ್ಮ, ನ್ಯಾಯ ನೀತಿಗಳ ಹಾದಿಯಲ್ಲಿ ನಡೆಯಬೇಕಿದೆ. ಮನುಕೂಲದ ಶ್ರೇಯಸ್ಸಿಗೆ ಪ್ರತಿ ದಿನ ನಾವು ಹೇಮರೆಡ್ಡಿ ಮಲ್ಲಮ್ಮರ ಜೀವನವನ್ನ ಅದರ್ಶವಾಗಿತ್ತುಕೊಂಡು ಬದುಕಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೆಡ್ಡಿ ಸಮುದಾಯದವರು ಹೇಮೆರಡ್ಡಿ ಮಲ್ಲಮ್ಮನ ದೇವಸ್ಥಾನ ನಿರ್ಮಾಣಕ್ಕೆ ನಿವೇಶನ ಕುರಿತು ಪ್ರಸ್ತಾಪಿಸಿದಕ್ಕೆ, ಪ್ರತಿಕ್ರಿಯಿಸಿದ ಸಚಿವರು ಮುಂದಿನ ದಿನಗಳಲ್ಲಿ ರೆಡ್ಡಿ ಸಮುದಾಯದವರೊಂದಿಗೆ ಈ ಕುರಿತು ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.
ಕಷ್ಟ ಜೀವಿಗಳಾಗಿ, ದುಡಿಮೆಯನ್ನೇ ದೇವರಾನ್ನಿಗಿಸಿಕೊಂಡಿರುವ ಈ ಸಮಾಜದ ಒಳಿತಿಗೆ ನಮ್ಮ ಸರ್ಕಾರ ಬದ್ಧವಿದ್ದು, ಉತ್ತಮ ಯೋಜನೆಗಳ ರೂಪಿಸುವ ಕೆಲಸಕ್ಕೆ ನಮ್ಮ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ ಎಂದು ಹೇಳಿದರು.
ಜಯಂತಿಯ ಮೆರವಣಿಗೆಯು ಕನಕದುರ್ಗಮ್ಮ ದೇವಸ್ಥಾನದಿಂದ ವಾಲ್ಮೀಕಿ ವೃತ್ತದ ಮೂಲಕ ಬಸವ ಭವನದವರೆಗೆ ತಲುಪಿತು.
ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳಾದ ನಾಗವೇಣಿ ಪದ್ಮನಾಭರೆಡ್ಡಿ ಅವರು ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯೋತ್ಸವ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ವೈ.ಎಂ.ಸತೀಶ್, ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ, ಎಸ್‍ಪಿ ಸೈದುಲು ಅಡಾವತ್, ಎಡಿಸಿ ಪಿ.ಎಸ್.ಮಂಜುನಾಥ, ತಹಶೀಲ್ದಾರ ವಿಶ್ವನಾಥ, ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ್ ರಂಗಣ್ಣನವರ್, ರಾಯದುರ್ಗ ಶಾಸಕರಾದ ರಾಮಚಂದ್ರ ರೆಡ್ಡಿ, ಮಹಾನಗರ ಪಾಲಿಕೆ ಸದಸ್ಯರಾದ ಸುರೇಖಾ ಮಲ್ಲನಗೌಡ, ಈರಮ್ಮ, ಬುಡಾ ಅಧ್ಯಕ್ಷ ಪಾಲನ್ನ, ಎಪಿಎಂಸಿ ಅಧ್ಯಕ್ಷ ಉಮೇಶ್ ಸೇರಿದಂತೆ ರೆಡ್ಡಿ ಸಮುದಾಯದ ಭಾಂದವರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

0 Comments