Ticker

6/recent/ticker-posts

Ad Code

Responsive Advertisement

ಸಭಾಪತಿಗಳ ಹುದ್ದೆಯ ಕಾರ್ಯನಿರ್ವಹಣೆಯಲ್ಲಿ ತೃಪ್ತಿ- ಬಸವರಾಜ ಹೊರಟ್ಟಿ

ಬೆಂಗಳೂರು, ಮೇ 16, (ಕರ್ನಾಟಕ ವಾರ್ತೆ) : ಸಭಾಪತಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಹಲವಾರು ಮಹತ್ವದ ನಿರ್ಧಾರಗಳನ್ನು ಹಾಗೂ ನಿರ್ಣಯಗಳನ್ನು ಕೈಗೊಂಡು ಜಾರಿಗೊಳಿಸಲಾಗಿದೆ ಎಂದು ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ತಿಳಿಸಿದರು.

ಇಂದು ವಿಧಾನಸೌಧದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಸದನದ ಸಮರ್ಪಕ ಕಾರ್ಯ ಚಟುವಟಿಕೆ ಹಾಗೂ ಘನತೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ ವಿಧಾನ ಪರಿಷತ್ತಿನ ಮಾಜಿ ಸಭಾಪತಿ / ಉಪ ಸಭಾಪತಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿ ಅವರಿಂದ ಹಲವಾರು ಮಾಹಿತಿಗಳನ್ನು, ಸಲಹೆಗಳನ್ನು ಪಡೆದು ಕಾರ್ಯ ನಿರ್ವಹಿಸಲಾಗಿದೆ ಎಂದು ತಿಳಿಸದರು.

ಭಾರತದ ಸಂಸತ್ತಿನ ಮೇಲ್ಮನೆಯಾಗಿರುವ ರಾಜ್ಯಸಭೆಯ ಕಾರ್ಯ ವೈಖರಿ, ಚಟುವಟಿಕೆ ಹಾಗೂ ಕಲಾಪಗಳ ನಿರ್ವಹಣಾ ಪದ್ದತಿಗಳನ್ನು ಸಮಗ್ರವಾಗಿ ಅಧ್ಯಯನ ನಡೆಸಿ ರಾಜ್ಯ ಸಭೆ ಮಾದರಿಯಲ್ಲಿಯೇ ವಿಧಾನ ಪರಿಷತ್ತಿನ ಕಲಾಪಗಳನ್ನು ನಡೆಸಲು ಕ್ರಮ ವಹಿಸಲಾಗಿದೆ. ರಾಜ್ಯಸಭೆ ಮಾದರಿಯಲ್ಲಿಯೇ ಶೂನ್ಯ ವೇಳೆ ಹಾಗೂ ಸದನದ ಇತರೆ ವ್ಯವಹಾರಗಳನ್ನು ನಿಗದಿತ ಸಮಯದಲ್ಲಿ ಆರಂಭಿಸಿ ಸಮಯಕ್ಕೆ ಸರಿಯಾಗಿ ಮುಕ್ತಾಯಗೊಳಿಸುವ ಪರಿಪಾಠ ಜಾರಿಗೊಳಿಸಲಾಗಿದ್ದು, ಅಂದಿನ ಕಾರ್ಯಕಲಾಪಗಳ ಪಟ್ಟಿಯಲ್ಲಿರುವ ವಿಷಯಗಳನ್ನು ಅಂದೇ ಚರ್ಚೆಗೆ ಕೈಗೆತ್ತಿಕೊಂಡು ಅದೇ ದಿನವೇ ಮುಕ್ತಾಯಗೊಳಿಸುವ ಯಶಸ್ವಿ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.

ಸದನದಲ್ಲಿ ಸಾರ್ವಜನಿಕ ಮಹತ್ವದ ವಿಷಯ, ಆಯವ್ಯಯದ ಮೇಲೆನ ಚರ್ಚೆ ಸೇರಿದಂತೆ ಇನ್ನಿತರ ಮಹತ್ವದ ವಿಷಯಗಳ ಚರ್ಚೆಗೆ ರಾಜಕೀಯ ಪಕ್ಷಗಳ ಸದಸ್ಯರ ಸಂಖ್ಯಾಬಲದ ಮೇಲೆ ಸಮಯ ನಿಗದಿಪಡಿಸಿ ಚರ್ಚೆಗೆ ಅವಕಾಶ ನೀಡುವ ವಿನೂತನ ಪದ್ದತಿಯನ್ನು ಜಾರಿಗೊಳಿಸಲಾಗಿದೆ. ಸದನ ನಡೆಯುವ ಸಂದರ್ಭದಲ್ಲಿ ಆಯಾಯ ದಿನಗಳಿಗೆ ಕಲಾಪದಲ್ಲಿ ಹಾಜರಾಗಬೇಕಾಗಿರುವ ಸಚಿವರು ಹಾಗೂ ಅಧಿಕಾರಿಗಳ ಹಾಜರಾತಿಯನ್ನು ಕಡ್ಡಾಯ ಕ್ರಮ ಕೈಗೊಂಡು ಅವರ ಉಪಸ್ಥಿತಿಯನ್ನು ದೃಢೀಕರಣಗೊಳಿಸಲಾಗಿದೆ ಹಾಗೂ ಅವರ ಹಾಜರಾತಿ ಬಗ್ಗೆ ಸದನದಲ್ಲಿ ಬಹಿರಂಗವಾಗಿ ಘೋಷಣೆ ಮಾಡುವ ನೂತನ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದರು.

ಸದನದಲ್ಲಿ ಸದಸ್ಯರು ಕೇಳುವ ಪ್ರಶ್ನೆಗಳಿಗೆ ಸಂಬಂಧಪಟ್ಟ ಸಚಿವರು ಸದನದಲ್ಲಿ ಉತ್ತರಿಸುವ ಹಾಗೂ ಕೋರಿರುವ ವೇಳೆಯೊಳಗೆ ಉತ್ತರವನ್ನು ಸಂಬಂಧಪಟ್ಟ ಸದಸ್ಯರುಗಳಿಗೆ ನೀಡುವಂತೆ ಕ್ರಮವಹಿಸಲಾಗಿದೆ. ಬೆಳಗಾವಿಯಲ್ಲಿ ಡಿಸೆಂಬರ್‍ನಲ್ಲಿ ನಡೆದ ಅಧಿವೇಶನದಲ್ಲಿ ಪ್ರಶ್ನೋತ್ತರ ವೇಳೆ ಹಾಗೂ ಶೂನ್ಯವೇಳೆಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಜ್ವಲಂತ ಸಮಸ್ಯೆ ಕುರಿತಂತೆ ಪ್ರತ್ಯೇಖವಾಗಿ ಎರಡು ದಿನಗಳ ಸುದೀಘ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ. ವಿಧಾನ ಮಂಡಲದಲ್ಲಿ ರಚನಾತ್ಮಕ ಹಾಗೂ ಶಾಸನಬದ್ಧ ಸುಧಾರಣೆಗಳನ್ನು ಕೈಗೊಳ್ಳುವಲ್ಲಿ ಹಲವು ರೀತಿಯಲ್ಲಿ ಶ್ರಮವಹಿಸಲಾಗಿದೆ.

ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ 2021ರ ನವೆಂಬರ್ 17 ಮತ್ತು 18ರಂದು ನಡೆದು ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮಾವೇಶದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, “ಸಂವಿಧಾನ, ಸದನ ಮತ್ತು ನಾಗರೀಕರ ಬಗೆಗೆ ಪೀಠಾಸೀನಾಧಿಕಾರಿಗಳ ಜವಬ್ದಾರಿ” ಕುರಿತು ವಿಚಾರವನ್ನು ಮಂಡಿಸಲಾಯಿತು ಹಾಗೂ ನವದೆಹಲಿಯ ಸಂಸತ್ ಭವನದಲ್ಲಿ 2021ರ ಡಿಸೆಂಬರ್ 14 ಮತ್ತು 15ರಂದು ನಡೆದ ಸಾರ್ವಜನಿಕ ಲೆಕ್ಕಪತ್ರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು “ದೇಶದ ಅಭಿವೃದ್ಧಿಯಲ್ಲಿ ಸಾರ್ವಜನಿಕ ಲೆಕ್ಕಪತ್ರಗಳ ಪಾತ್ರ” ಕುರಿತು ವಿಷಯವನ್ನು ಮಂಡಿಸಿ, ಕೇಂದ್ರ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾದ ಅಧೀರ್ ರಂಜನ್ ಚೌದರಿ ಸೇರಿದಂತೆ ಹಲವು ಗಣ್ಯರ ಪ್ರಶಂಸೆಗೆ ಪಾತ್ರರಾಗಿರುವುದು ಹೆಮ್ಮೆ ತಂದಿದೆ ಎಂದು ತಿಳಿಸಿದರು.

2022ರ ಏಪ್ರಿಲ್ 11ರಿಂದ 13ರ ವರೆಗೆ ಅಸ್ಸಾಂನ ಗೌಹಾಟಿಯಲ್ಲಿ ನಡೆದ ಎಂಟನೇ ಕಾಮನ್‍ವೆಲ್ತ್ ಸಂಸದೀಯ ಸಂಘದ ಭಾರತ ವಲಯದ ಸಮ್ಮೇಳನದಲ್ಲಿ ಪಾಲ್ಗೊಂಡು, “ರಾಷ್ಟ್ರೀಯ ಅಭಿವೃದ್ಧಿ ಮತ್ತು ಸಾಮಾನ್ಯ ಒಳತಿಗಾಗಿ ಯುವಶಕ್ತಿಯನ್ನು ಬಳಸಿಕೊಳ್ಳುವುದು” ಕುರಿತು ಬೆಳಕು ಚೆಲ್ಲಲಾಯಿತು. ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕರ್ನಾಟಕ ವಿಧನ ಮಂಡಲದ ಜಂಟಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಲೋಕಸಭಾಧ್ಯಕ್ಷ ಓಂಬಿರ್ಲಾ ಅವರಿಗೆ ಮನವಿಯೊಂದನ್ನು ನೀಡಿ ನವದೆಹಲಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತಿರುವ ಸಂಸತ್ ಭವನ “ಸೆಂಟ್ರಲ್ ವಿಸ್ತಾ”ದ ಒಂದು ಕಟ್ಟಡಕ್ಕೆ “ಅನುಭವ ಮಂಟಪ” ಎಂದು ಹೆಸರಿಡುವಂತೆ ಮನವಿ ಮಾಡಲಾಯಿತು. ಇದೇ ವಿಷಯಕ್ಕೆ ಸಂಬಂದಿಸಿದಂತೆ ಮಾನ್ಯ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಮಾನ್ಯ ಪ್ರಧನ ಮಂತ್ರಿಯವರಿಗೆ ಮನವಿ ನೀಡಿ ವಿನಂತಿಸಲಾಗಿದೆ ಎಂದು ತಿಳಿಇದರು.

2022ರ ಫೆಬ್ರವರಿ 03 ಮತ್ತು 04ರಂದು ವಿಧಾನಮಂಡಲದ ಕಾರ್ಯವೈಖರಿ, ಸಂಸದೀಯ ಕಾರ್ಯಪದ್ದತಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಸಂರಕ್ಷಣೆ ಕುರಿತಂತೆ ಉಭಯ ಸದನಗಳ ಶಾಸಕರುಗಳಿಗೆ ನುರಿತ ಸಂಸದೀಯ ಪಟುಗಳು, ಮಾಜಿ ಮುಖ್ಯಮಂತ್ರಿಗಳು ಹಾಗೂ ಕಾನೂನು ಸಚಿವರೂ ಸೇರಿದಂತೆ ಇನ್ನಿತರ ರಾಜಕೀಯ ಧುರೀಣರಿಂದ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದೆ.

ವಿಧಾನಪರಿಷತ್ತಿನ ಸಚಿವಾಲಯದ ಆಡಳಿತದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ನೌಕರರಲ್ಲಿ ಶಿಸ್ತು ಮತ್ತು ಸಮಯ ಪ್ರಜ್ಞೆ ಹೆಚ್ಚಿಸುವ ದೃಷ್ಠಿಯಿಂದ ಬಯೋಮೆಟ್ರಿಕ್ ವ್ಯವಸ್ಥೆ ಜಾರಿ, “ಡಿ” ದರ್ಜೆ ನೌಕರರಿಗೆ ಸಮವಸ್ತ್ರ, ಹಲವು ವರ್ಷಗಳಿಂದ ವಿಳಂಬವಾಗಿದ್ದ ಮುಂಬಡ್ತಿ ಪ್ರಕ್ರಿಯೆಗೆ ಚಾಲನೆ, ಒಂದೇ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿ / ನೌಕರರಿಗೆ ಆಂತರಿಕ ವರ್ಗಾವಣೆ / ಕಾರ್ಯ ಮರುಹಂಚಿಕೆ, ನೌಕರರಿಗೆ ಕಾರ್ಯಸ್ಥಳದಲ್ಲಿ ಪೂರಕ ವಾತಾವರಣ ಸೃಷ್ಠಿ ಕಟ್ಟಡದ ಸೌಂದರ್ಯಿಕರಣಕ್ಕೆ ಆದ್ಯತೆ ಹೀಗೆ ಹಲವಾರು ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಚಿವಾಲಯದ ಆಡಳಿತದಲ್ಲಿ ಸುಧಾರಣೆ ಹಾಗೂ ಅಧಿಕಾರಿ / ನೌಕರರ ಮನೋಸ್ಥೈರ್ಯ ಹೆಚ್ಚಿಸಲು ಕ್ರಮ ವಹಿಸಲಾಗಿದೆ ಎಂದು ಸಭಾಪತಿಗಳು ತಿಳಿಸಿದರು.

ಪ್ರಾಥಮಿಕ ಮತ್ತು ಪ್ರೌಢ, ಪದವಿಪೂರ್ವ ಹಾಗೂ ಉನ್ನತ ಶಿಕ್ಷಣ ಇಲಾಖೆಗಳ ಕುರಿತ ಸಾರ್ವಜನಿಕ ಕುಂದುಕೊರತೆ ನೀಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸುಮಾರು 30 ಹೆಚ್ಚು ಸಭೆಗಳನ್ನು ನಡೆಸಿ ಹಲವು ಸಮಸ್ಯೆಗಳ ಪರಿಹಾರಕ್ಕೆ ಯಶಸ್ವಿ ಪ್ರಯತ್ನ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದ ರೈತಾಪಿ ವರ್ಗದ ವಿದ್ಯುತ್ತಿನ ಕೊರತೆ ಕುರಿತಂತೆ ಇಂಧನ ಇಲಾಖೆಯ ಅಧಿಕಾರಿಗಳೊಂದಿಗೆ ಹಾಗೂ ಕಂದಾಯ ಇಲಾಖೆ ಸೇರಿದಂತೆ ಹಲವು ಪ್ರಮುಖ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ 42ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ ಹಲವಾರು ಮಹತ್ವದ ಪರಿಹಾರಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದೇನೆ ಎನ್ನುವುದು ನನಗೆ ಸಮಾಧಾನ ತಂದಿದೆ ಎಂದು ತಿಳಿಸಿದರು.


Post a Comment

0 Comments

Ad Code

Responsive Advertisement