ಬೆಂಗಳೂರು : ನಗರದಲ್ಲಿ ದೇವಸ್ಥಾನಗಳಿಗೆ ಪ್ರಸಿದ್ಧವಾಗಿರುವ ಮಲ್ಲೇಶ್ವರದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಓಂ ಶ್ರೀ ಗಂಗಮ್ಮ ದೇವಿಯ ಜಾತ್ರೆ ಹಾಗೂ ಹಸೀ ಕರಗದ ಮಹೋತ್ಸವವು ನಗರದಲ್ಲಿ ಮಹಾಮಳೆಯ ನಡುವೆಯು ಊರ ಹಬ್ಬವಾಗಿ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
ಜಾತ್ರೆಯ ಅಂಗವಾಗಿ ಶ್ರೀ ಗಂಗಮ್ಮ ದೇವಿ ತಾಯಿಯು ದೇವಸ್ಥಾನದ ಗರ್ಭಗುಡಿಯಲ್ಲಿ ವಿಶೇಷ ಅಲಂಕಾರಭೂಷಿತಳಾಗಿ ಭಕ್ತಾದಿಗಳಿಗೆ ದರ್ಶನ ನೀಡಿ, ಬಂದ ಬಕ್ತರೆಲ್ಲರ ಕಣ್ಣುಗಳಿಗೆ ಆನಂದವನ್ನುಂಟು ಮಾಡಿ, ತೇಜೋಮಯವಾಗಿ ಕಂಡುಬಂದ ಅಮ್ಮನವರ ದರುಶನದಿಂದ, ದರ್ಶನಾರ್ಥಿಗಳಾಗಿ ದೂರದೂರದಿಂದ ಬಂದಿದ್ದವರೆಲ್ಲರು ತಮ್ಮ ಬಯಕೆ ಬೇಡಿಕೆ ಹರಕೆ ಸಲ್ಲಿಕೆಗಳನ್ನು ದೇವಿಗೆ ಸಲ್ಲಿಸಿ ಪುನೀತ ಭಾವದಿ, ಅಮ್ಮನ ಅಭಯದ ಅನುಭೂತಿಯಿಂದ ನಿಶ್ಚಿಂತ ಮನೋಭಾವಪರವಶದಿ ಸಂತಸಗೊಂಡಂತಹ ವಾತಾವರಣದಲ್ಲಿ ಭಕ್ತರು ಈ ಜಾತ್ರೆಯಲ್ಲಿ ಭಾಗಿಯಾಗಿದ್ದರು.
ಬುಧವಾರ ಸಂಜೆ ಸುಮಾರು 7.30 ಗಂಟೆ ಸುಮಾರಿಗೆ ಕರಗಧಾರಿ ಸುಧಾಕರ್ ನಟರಾಜ್ ರವರು ಹೂವಿನ ಪೇಟ ಕರಗವನ್ನು ಹೊತ್ತು ದೇವಸ್ಥಾನದಿಂದ ಹೊರಟು ಸಂಪಿಗೆ ಮುಖ್ಯರಸ್ತೆ, ಮಲ್ಲೇಶ್ವರಂ, ವೈಯಾಲಿಕಾವಲ್, ಗುಟ್ಟಹಳ್ಳಿ ರಸ್ತೆಗಳಲ್ಲಿ ಕರಗವು ಸಂಚರಿಸಿ, ದಾರಿಯುದ್ದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾದಿದ್ದ ಭಕ್ತಾದಿಗಳಿಗೆ ದರ್ಶನ ನೀಡಿ ಬೆಳಿಗ್ಗೆ ಸುಮಾರು 4 ಗಂಟೆಗೆ ಮರಳಿ ಕರಗ ಸನ್ನಿಧಾನಕ್ಕೆ ತಲುಪಿತು.


0 Comments