ಇತ್ತೀಚೆಗೆ ಬೆಂಗಳೂರಿನ ಜೆ ಎಸ್ ಎಸ್ ಆಡಿಟೋರಿಯಂನಲ್ಲಿ ಯಶಶ್ವಿಯಾಗಿ ನಡೆಯಿತು. ಅಭಿನಯ ದರ್ಪಣದಿಂದ ಸಭಾಲಕ್ಷಣ ಕುರಿತಾದ ಶ್ಲೋಕಗಳ ಮುಖೇನ ದೇವತಾ ಸಮೂಹಕ್ಕೆ, ಅಷ್ಟ ದಿಕ್ಪಾಲಕರಿಗೆ ಹಾಗೂ ಪ್ರೇಕ್ಷಕರಿಗೆ ಪುಷ್ಪಾಂಜಲಿ ನಮನಗಳನ್ನು ಸಲ್ಲಿಸುತ್ತಾ ವೇದಿಕೆ ಪ್ರವೇಶ ಮಾಡಿದ ಅನುಶ್ರೀ, ಸರಸ್ವತೀ ಕೌತ್ವಂ ಹಾಗೂ ಕಲ್ಯಾಣಿ ರಾಗದ ಜತಿಸ್ವರಗಳಿಗೆ ನರ್ತಿಸುತ್ತಾ ಸುಂದರ ನೃತ್ಯಬಂಧಗಳಲ್ಲಿ ಮಿಂಚಿದರು.
ಉತ್ತರಾರ್ಧದಲ್ಲಿ ರಥದಲ್ಲಿ ಕುಳಿತು ಮೆರವಣಿಗೆಯಲ್ಲಿ ಹೊರಟ ನಾಯಕ ಚಿದಂಬರಂನ ನಟರಾಜ ತನ್ನೆಡೆಗೆ ನೋಡಬಾರದೇ ಎಂದು ಹಪಿಸುವ ನಾಯಿಕಾ ಪಾತ್ರದಲ್ಲಿ ಅನುಶ್ರೀ ಮನೋಜ್ಞ ಅಭಿನಯ ಹಾಗೂ ಕಣ್ಣಗೀ ಎಂಬ ಕೃತಿಯಲ್ಲಿ ಕಣ್ಣಗಿಯ ಸಂತಸ, ಕೋವಲನ್ ಜತೆಗಿನ ಶೃಂಗಾರ, ಮಾಧವಿಯ ನೃತ್ಯದ ಆಕರ್ಷಣೆ, ತಪ್ಪು ತೀರ್ಪು ನೀಡಿದ ಪಾಂಡ್ಯರಾಜನ ಎದುರಲ್ಲಿ ಕ್ರೋಧಿತಳಾಗಿ ಅನುಶ್ರೀಯವರ ಪ್ರೌಢ ಅಭಿನಯ ಕಲಾರಸಿಕರ ಮನ ಸೂರೆಗೊಂಡಿತು. ಮರಾಠಿ ಅಭಂಗ್‍ನಲ್ಲಿ ಕೃಷ್ಣರಾಧೆಯರ ಮುನಿಸು ಸರಸವಾಗುವ ಪರಿಯನ್ನು ಉತ್ತಮ ಅಭಿನಯದಲ್ಲಿ ಅನುಶ್ರೀ ಪ್ರದರ್ಶಿಸಿದರು. ಬಾಲಮುರಳಿಕೃಷ್ಣರವರ ಕದನಕುತೂಹಲ ರಾಗದ ತಿಲ್ಲಾನದೊಂದಿಗೆ ಅನುಶ್ರೀಯವರ ರಂಗಪ್ರವೇಶ ಕಲಾರಸಿಕರಿಗೆ ನಾಟ್ಯದ ಸೊಬಗನ್ನು ಉಣಬಡಿಸಿ, ಮಂಗಳಪ್ರದವಾಯಿತು. ಹಿಮ್ಮೇಳದ ಗಾಯನದಲ್ಲಿ ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮ, ಮೃದಂಗದಲ್ಲಿ ವಿದ್ವಾನ್ ಜಿ ಎಸ್ ನಾಗರಾಜ, ವೇಣುವಾದನದಲ್ಲಿ ವಿದ್ವಾನ್ ಮಹೇಶ ಸ್ವಾಮಿ, ವಯಲಿನ್‍ನಲ್ಲಿ ಶ್ರೀ ಸಿ ಮಧುಸೂದನ್ ಹಾಗೂ ನಟ್ಟುವಾಂಗಂನಲ್ಲಿ ಗುರು ವಿದುಷಿ ದೀಪಾ ಭಟ್ ಅನುಶ್ರೀಯವರಿಗೆ ಉತ್ತಮ ಸಹಕಾರ ನೀಡಿದರು. ಶ್ರೀ ಬಿ. ಪುಟ್ರಾಯ ಭಟ್ ರವರ ಅಚ್ಚ ಕನ್ನಡ ನಿರೂಪಣೆ ಕೇಳುಗರ ಮನಸ್ಸಿಗೆ ಮುದನೀಡಿತು.

.jpeg)

.jpeg)
0 Comments