Ticker

6/recent/ticker-posts

Ad Code

Responsive Advertisement

🌺🌺🌺🌺 ಶ್ರೀಶ್ಯಾಮಸುಂದರ ವಿಠಲ ದಾಸರು 🌺🌺🌺🌺

 ವಿಠಲದಾಸರ ಪವಿತ್ರವಾದ ಜೀವನ ಪರಿಚಯ ಮಾಡುವ ಒಂದು ಸಣ್ಣ ಪ್ರಯತ್ನ.

ಹರಿದಾಸರ ತಾಣವೆಂದೇ ಸುಪ್ರಸಿದ್ಧವಾದ ನಮ್ಮ ನಾಡಿನ‌ ರಾಯಚೂರು ಪ್ರಾಂತ್ಯ ನೀಡಿದ ಮತ್ತೊಂದು ಕೊಡುಗೆ ಮಾನವಿ ಅಥವಾ ಬಲ್ಲಟಗಿ ಶ್ರೀಗುಂಡಾಚಾರ್ಯರು.




ಶ್ಯಾಮಸುಂದರವಿಠಲಾಂಕಿತರಾದ ಶ್ರೀಗುಂಡಾಚಾರ್ಯರು  ೨೦ ನೇ ಶತಮಾನದಲ್ಲಿ  ಅಪೂರ್ವ ಸಾಧನೆಗೈದ ಹರಿದಾಸರು.

ವರಕವಿ, ಆಶುಕವಿ, ಜೀವಂತ ಅರ್ಥ ಕೋಶ ಎಂದೆಲ್ಲಾ ಪ್ರಸಿದ್ದ ರಾದವರು.

ಮೂಲ ನಾಮಧೇಯ: ಗುಂಡಾಚಾರ್ಯ / ಗುರಾಚಾರ್ಯ

ಜನನ: ೧೮೯೬ ಮಾನ್ವಿ ಬಳಿಯ ಕುರ್ಡಿ ಗ್ರಾಮದಲ್ಲಿ

ತಂದೆ: ಶ್ರೀ ಶ್ಯಾಮಾಚಾರ್ಯರು.

ತಾಯಿ: ಶ್ರೀಮತಿ ಕೊಪ್ರಮ್ಮ

ಅಂಕಿತ: ಶ್ಯಾಮಸುಂದರ ವಿಠ್ಠಲ.

ತಾಯಿಯ ತಂಗಿ  ರಿಂದಮ್ಮ

ಮತ್ತು ಅವರ ಪತಿ ಶ್ರೀಗುರುಭೀಮಾಚಾರ್ಯರಿಗೆ

ಗಂಡು ಸಂತಾನವಿಲ್ಲದ ಕಾರಣ ಗುಂಡಾಚಾರ್ಯರನ್ನು ಅವರ ಮಗನಂತೆ ಬೆಳಸಿದರು.

ಕಾಲ ಕ್ರಮೇಣ  ಗುಂಡಾಚಾರ್ಯರು ಶ್ರೀಗುರುಭೀಚಾರ್ಯರಿಂದ ಸಂಸ್ಕೃತ ಮತ್ತು ಪೌರೋಹಿತ್ಯವನ್ನು ಕಲಿತು 

ಕುರ್ಡಿ,  ಮಾನ್ವಿ ,ಬಲ್ಲಟಗಿ

ಗ್ರಾಮಗಳಲ್ಲಿ ಪೌರೋಹಿತ್ಯ  ನಡೆಸಿ, ನಂತರ ಸರ್ಕಾರಿ‌ ಶಿಕ್ಷಣ ವೃತ್ತಿಯಲ್ಲಿಯೂ ಇದ್ದವರು. 

ಸಣ್ಣ ವಯಸ್ಸಿನಲ್ಲೆ ಶ್ರೀಜಗನ್ನಾಥದಾಸರ ಹರಿಕಥಾಮೃತಸಾರವನ್ನು ಆಳವಾಗಿ ಅಧ್ಯಯನ‌ಮಾಡಿ  ಅಲ್ಲಿ ಹೇಳಿದ ಸಕಲ‌ ತತ್ತ್ವಪ್ರಮೇಯಗಳನ್ನು‌ ಅರಗಿಸಿಕೊಂಡವರು.

ಹಾಗೆಯೇ ಪರಂಪರೆಯಿಂದ ಬಂದ ಪೌರೋಹಿತವೃತ್ತಿಯು  ಅವರಲ್ಲಿ  ಸಾಕಷ್ಟು ಸಂಸ್ಕೃತದ  ಭಾಷಾ ಜ್ಞಾನವನ್ನು  ರೂಢಿಸಿತ್ತು.

ಅಧ್ಯಾತ್ಮಿಕ ಒಲವು ಹೆಚ್ಚಾದಂತೆ ಶಿಕ್ಷಕ ವೃತ್ತಿಯನ್ನು ತೊರೆದರು.

 ಆ ಪ್ರಾಂತ್ಯದ ಆಗಿನ‌ ಮತ್ತೊಬ್ಬ ಪ್ರಮುಖ ಹರಿದಾಸರಾದ ಶ್ರೀಅಸ್ಕಿಹಾಳ ಗೋವಿಂದದಾಸರ ಬಗ್ಗೆ ಅಪಾರ ಗೌರವಾದರವನ್ನು ಹೊಂದಿದ್ದರು.

ಜೊತೆ ಜೊತೆಗೆ ಲಿಂಗಸೂರಿನ  ಶ್ರೀಪ್ರಾಣೇಶದಾಸರ ಪರಂಪರೆಯಲ್ಲಿ ಬಂದ ಶ್ರೀ ವರದೇಶ ವಿಠಲರು

ಶ್ರೀಸುಂದರವಿಠಲರು

(ಗೋರೆಬಾಳ ಹನುಮಂತರಾಯರು),

ಶ್ರೀಸುಳಾದಿ ಕುಪ್ಪೇರಾಯರು,

ಅಭಿನವ ಪ್ರಾಣೇಶದಾಸರು

ಇವರೆಲ್ಲರಿಗೂ ಆತ್ಮೀಯರಾದರು.

ಗುಂಡಾಚಾರ್ಯರು  ಸುಳಾದಿ ಕುಪ್ಪೇರಾಯರು, ಸಿರಿವಾರದ ಶ್ರೀ ರಾಮಚಂದ್ರ ರಾಯರು ಸಿರಿವಾರದ ಶ್ರೀರಾಮಾಚಾರ್ಯ

ರೊಂದಿಗೆ ಮಧ್ವ ಶಾಸ್ತ್ರ ಸಂಪನ್ನ ರಾದ ಕೃಷ್ಣಾತೀರದ ಪೂಜ್ಯ ಐಕೂರು ನರಂಸಿಂಹಾಚಾರ್ಯರಲ್ಲಿಗೆ ತೆರಳಿ ಮಧ್ವಸಿದ್ಧಾಂತದ ಪ್ರಮೇಯಗಳನ್ನು ಚರ್ಚಿಸುತ್ತಿದ್ದರು.

ಚಿತ್ರದುರ್ಗದ ತಂದೆ ವೆಂಕಟೇಶವಿಠ್ಠಲರ ( ಶ್ರೀರಾಮಚಂದ್ರರಾಯರು) ಸತ್ಸಂಗವೂ ಗುಂಡಾಚಾರ್ಯರಿಗೆ ಒದಗಿ ಬಂದಿತು.

ಅಸಾಧಾರಣ ಕಾವ್ಯಪ್ರತಿಭೆ, ಕನ್ನಡ ಹಾಗೂ ಸಂಸ್ಕೃತ ದಲ್ಲಿ ಪ್ರಕಾಂಡ ಪಾಂಡಿತ್ಯ ಗಳಿಸಿದ ದಾಸರು ಬಹು ದೊಡ್ಡ ಆಶುಕವಿಗಳಾಗಿ ಮಾನವಿ ಪ್ರಾಂತ್ಯದಲ್ಲಿ ಪ್ರಖ್ಯಾತರಾಗಿದ್ದರು.

ದಾಸರು ರಚಿಸಿದ ಕೀರ್ತನೆಗಳು ಮಧ್ವ ಸಂಪ್ರದಾಯದ ದೇವಕಕ್ಷ,, ಯತಿ ಕಕ್ಷ , ದಾಸ ಕಕ್ಷದ ಶ್ರೇಣಿಯಲ್ಲಿದೆ.ಸಂಸ್ಕೃತ ಭೂಯಿಷ್ಟವಾದ ಸಂಗೀತದ ಚೌಕಟ್ಟಿನಲ್ಲಿ ಕೂಡಿಸಿದ್ದು ಪ್ರಚಲಿತ ರಾಗಗಳನ್ನೆ ಬಳಸಿದ್ದಾರೆ.

ದೇವತಾ ತಾರತಮ್ಯ , ಯತಿತಾರತಮ್ಯ ಅನುಸರಿಸಿ  ಅನೇಕ ಕೃತಿಗಳನ್ನು ರಚಿಸಿದ್ದಾರೆ.

ಅವುಗಳಲ್ಲಿನ ಕೆಲವು: *ಕಾಯೋ ಕಾವೇರಿ ರಂಗ ಕಾರುಣ್ಯ ಪಾಂಗಾ *

*ಪಾಂಡುರಂಗ ಪರಿಪಾಲಿಸೊ

ನುಡಿಲಾಲುಸೊ *

*ಕಾಯೇ ದುರ್ಗಾಂಭ್ರಣಿಯೇ 

ಕಾಯೇ ಕಾಯೇ ರುಕ್ಮೀಣಿಯೇ *

"ಆರಂಭದಲಿ ನಮಿಪೆ ಬಾಗಿ ಶಿರವ *

*ತೋರೈ ಪಾವರ್ವತಿಯೇ ಶಂಕರನ *

"ಅಂಬಿಕಾಪತಿ ರಕ್ಷಿದೆಸೆನ್ನಾ "

*ಪಾಲಿಸೆನ್ನನು ಪಂಪಾಕ್ಷೇತ್ರವಾಸ *

 * ಯೋಗಿಗಳ ಹೃದಯಕೆ  ನಿಲುಕ‌ ನಿಗಮಾಗಮೈ ಕವಿನುತನ *

*ರಕ್ಷಿಸೆನ್ನನು  ಪಕ್ಷಂದ್ರನೇ ನೀನು‌ *

*ಪೊರೆವುದೋ ಸಂಜೀವರಾಯ *

*ಹನುಮಂತಾ ಪಾಹಿ ಗುರು ಹನುಮಂತ *

*ದೇವ ಹನುಮಾಶೆಟ್ಟಿ 

ರಾಯಾ ಜಗಜೆಟ್ಟಿ *

*ಹನುಮಂತ ಪಾಹಿ ಹನುಮಂತ 

ಮುನಿ ವ್ಯಾಸ ಕರಕಮಲಾರ್ಚಿತ *

*ಎಂದು ಕಾಂಬೆ‌ನೋ  ನಂದಗೋಪನ‌ ಕಂದ ಶ್ರೀಗೋವಿಂದನ "

ಪೊಂದಿ ಭಜಿಸಿ ನಿರುತ

ಮಾನವ ಮಹಿಳ  ವೃಂದಾರಕ 

(ಶ್ರೀ ಸುವ್ರತೀಂದ್ರರು) 

ಏನು ಧನ್ಯರೊ ಜಗದಿ ಎಂಥ ಮಾನ್ಯರೊ

(ಶ್ರೀರಘುಪ್ರೇಮತೀರ್ಥರು)

ವರದಾತೀರದಿ ನೆಲಸಿಹ ಗುರುವರನ್ಯಾರೆ ಪೇಳಮ್ಮಯ್ಯ

ಶ್ರೀಸುಶೀಲೇಂದ್ರರು  (ಹೊಸರಿತ್ತಿ)

ಪಾಂಡು ನಂದನರಂತೆ ತೋರುತಿಹರು ಪಂಡಿತರಂತೆ (ಸತ್ಯಧ್ಯಾನತೀರ್ಥರು  ಪಂಢರಾಪುರ )

ನಿತ್ಯ ವ್ಯಾಸತತ್ತ್ವಜ್ಞರಂಫ್ರಿ ಭಜಿಸೊ  ಕೃತ್ಯಕೃತ್ಯನೆಂದೆನುಸೊ

(ಶ್ರೀ ವೇಣಿಸೋಮಾಪುರ)

ಸತತ ಪಾಲಿಸೊ ಎನ್ನ ಯತಿ ರಾಘವೇಂದ್ರ

ಎಂಥ ದಯವಂತನೋ ಮಂತ್ತ ಮುನಿ ನಾಥನೋ

(ಶ್ರೀರಾಘವೇಂದ್ರರು)

*ರಂಗ ಓಲಿದ ದಾಸರಾಯ 

ಸಾಧು ಸಂಗ ವಹಿಸಿ ಕರುಣದಿ ಪಿಡಿ‌ ಕೈಯ *

(ಶ್ರೀ ಜಗನ್ನಾಥದಾಸರು)

ಅನೇಕ ಕ್ಷೇತ್ರ ಸಂದರ್ಶಿಸಿ ದಾಸರು ಕ್ಷೇತ್ರ ಮಹಿಮೆ ಸಾರುವ ಪದಗಳನ್ನು ಹೇರಳವಾಗಿ ರಚಿಸಿದ್ದಾರೆ.

ಮತ್ತೊಂದು ಅವರು ಹೊಂದಿದ್ದ ಲೋಕ ಜೀವನ ಸೂಕ್ಷ ಸಂವೇದನೆಯ ದಾಸರ ಸಮಷ್ಟಿ ಪ್ರಜ್ಞೆಯ ಮನೋಧರ್ಮ*

ದಾಸರು ಅನೇಕ ಬಯಲಾಟಗಳನ್ನು , ಧಾರ್ಮಿಕ ಒಗಟುಗಳನ್ನು ಪ್ರಾಸಬದ್ಧ ರಹಸ್ಯ ತತ್ತ್ವಾರ್ಥಗಳಿಂದ ರಚಿಸಿದ್ದಾರೆ.

ಅನೇಕ ಬಯಲು‌ ನಾಟಕಗಳು‌ ರಂಗಭೂಮಿ ಪ್ರದರ್ಶನ ಕಂಡಿವೆ.

ರಚಿಸಿದ ಬಯಲು ನಾಟಕಗಳು :

ಭೋಜ ಪ್ರಬಂಧ, ರುಕ್ಮಾಂಗದ ಚರಿತ್ರೆ, ಶ್ರೀರಾಮ ಪಾದುಕಾಪಟ್ಟಾಭಿಷೇಕ, ಲಂಕಾದಹನ, ಶ್ರೀನಿವಾಸ ಕಲ್ಯಾಣ.

ದಾಸರ ಅನೇಕ ಬಯಲಾಟಗಳು ಪ್ರಾಂತ್ಯದಲ್ಲಿ  ರಂಗಭೂಮಿ ಪ್ರದರ್ಶನ ಕಂಡಿವೆ.

ದಾಸರು ಅತಿಯಾದ ಮಡಿಯ ವೇಷ ಭೂಷಣವಿಲ್ಲದೆ ಸರಳ ಬದುಕಿನ ಮುಖೇನ ಜನಸಾಮಾನ್ಯರಲ್ಲಿ ಅಧ್ಯಾತ್ಮಿಕ ದೃಷ್ಟಿಕೋನ ಬಿತ್ತಿದರು.

ಜನಸಾಮಾನ್ಯರು ಹಿಡಿದ ಕೆಟ್ಟ ಮಾರ್ಗವನ್ನು ತಮ್ಮ ಕೃತಿಯ ಆದಿಯಲ್ಲಿ ಮೆಚ್ಚುಗೆ ಸೂಚಿಸಿದಂತೆ ನುಡಿದು ಅಂತ್ಯದಲ್ಲಿ ಸಾಧನೆಗೆ ಒದಗುವಂತಹ ನಡಾವಳಿಗಳ ಅವಶ್ಯಕತೆಯನ್ನು ಸಾರಿ ಹೇಳುವ ವೈಶಿಷ್ಟ್ಯ ಕಲೆಗಾರಿಕೆ ಯನ್ನು  ದಾಸರು ಕರತಲಾಮಕ ಮಾಡಿಕೊಂಡಿದ್ದರು .

ಅವರು ರಚಿಸಿದ ಕೇಳ್  ಕೇಳ್ ಲೋ ತತ್ತ್ವ ಜ್ಞಾನ ಎನ್ನುವ ಕೀರ್ತನೆಯಲ್ಲಿ ಮೋಟಾರು ವಾಹನ, ನಾಟಕದರುಶನ, ಹೋಟೆಲೊಳಗೆ ಸುಭೋಜನ, ಇವುಗಳು ಪೀಯೂಷಪಾನವಾಗಿವೆ.

ವೇಶ್ಯಾಲಯ ಪ್ರವೇಶಿಸುವುದೇ ಘನ ಕಾಶಿ ಪ್ರಯಾಗಕ್ಕೆ ಸಮಾನ, ಸೋಪು ತೀಡಿಸುವ, ಕ್ರಾಪು ಬುಡುವವೇ ವೇದಾಧ್ಯಯನ, ಸೋಡಾಪಾನ ಬೀಡಿ ಸೇದೋಣ, ಕೂಡಿ ಇಸ್ಪೀಟು ಆಡೋಣ ಮುಂತಾದವು ಭವಕ್ಲೇಶ ಭಂಜನಗಳು ಮೇಲ್ನೋಟಕ್ಕೆ ಎಲ್ಲವನ್ನೂ ಮೆಚ್ಚಿಕೊಂಡಂತೆ ನುಡಿದ ದಾಸರು ನೀಡುವ ಪದದ ಅಂತಿಮ ಸಂದೇಶ

ಈ ಕಲಿ ಬೋಧ ನಿರಾಕರಿಸುವವರಿಗೆ ಶ್ರೀಕರ ಶ್ಯಾಮಸುಂದರನ ದಿವ್ಯಾನಂದ ಭವನ

ದುಶ್ಚಟಗಳು ತರುವ ಅಪಾರ ಅನರ್ಥಗಳನ್ನು ತಮ್ಮ ಇನ್ನೊಂದು ಪದದಲ್ಲಿ  ಜಾಣೆ ನಂಬಿದೆ  ಇಸ್ಪೆಟ್ ರಾಣಿ 

ನೀನೊಲಿದೆನ್ನ ಪಾಣಿಯೊಳಗೆ ಬಂದು ಕಾಣಮ್ಮ ರಚನೆಯ ಅಂತ್ಯದಲ್ಲಿ ಜನರು ಈ ದುಶ್ಚಟದಿಂದ ದನಕರು ಹೊಲಮನೆ ಕಳೆದುಕೊಳ್ಳುವ ಹಾಗು ಉಣಲು, ಉಡಲು ಪಡುವ ಬವಣೆ ಮನದಟ್ಟಾಗುವಂತೆ ಎಚ್ಚರಿಕೆಯ ಸಂದೇಶ ನೀಡುತ್ತಾರೆ.

ಬಲು ಕಷ್ಟ  ಬರಗಾಲ ಬಂದಿತಯ್ಯ ಶಿಶುಗಳಿಗೆ ಹಾಲಿಲ್ಲ ಪಶುಗಳಿಗೆ ಮೇವಿಲ್ಲ ಉಸುರಲು ಬಾಯಿಲ್ಲ ವೃದ್ಧ ಜನಕೆ 

ಜನ ತಮ್ಮನ್ನು ವರಕವಿ ಎಂದು ಗೌರವಿಸಿದರೆ ದಾಸರು ತಮ್ಮ ಒಂದು ಕೃತಿ ಯಲ್ಲಿ

ಎನಗಾಕೆ ಕವಿಯೆಂಬ ಶ್ರೇಷ್ಠ ನಾಮ ಎಂಬ ವಿನಮ್ರತೆ ತೋರಿದ್ದಾರೆ.

ಅವರ ಶಿಷ್ಯರಲ್ಲಿ ಮೂರ್ತ ಪ್ಪ ಹರಿಜನನಾಗಿದ್ದುದು ತಿಳಿದು ಬರುತ್ತದೆ‌. ಆತ್ಮೋದ್ಧಾರಕ್ಕಾಗಿ ಹಂಬಲಿಸುವ ಎಲ್ಲರನ್ನೂ ಹರಿದಾಸ ಪಂಥ ಮುಕ್ತಮನದಿಂದ ಸ್ವಾಗತಿಸುತ್ತದೆ ಎನ್ನುವುದನ್ನು ಶ್ರೀ ಶ್ಯಾಮಸುಂದರ ದಾಸರು ತಮ್ಮ ಜೀವಿತದಲ್ಲಿ ಪ್ರಯಾಣಿಕರುಸಿದ್ದಾರೆ.

ಅವರ ಶಿಷ್ಯ ರಲ್ಲಿ ಪ್ರಮುಖರು: ಶ್ರೀ ಅಭಿನವ ಪ್ರಾಣೇಶದಾಸರು , ಶ್ರೀ ಪದ್ಮನಾಭ ದಾಸರು, ಶ್ರೀ ಲಕುಮೀಶ ವಿಠ್ಠಲದಾಸರು, ಶ್ರೀ ರಘುಪತಿ ವಿಠ್ಠಲ ದಾಸರು, ಶ್ರೀ ಭುಜಂಗಶಯನರು, ಶ್ರೀ ವಿಜಯ ಸಾರಥಿದಾಸರು‌.

ಶ್ರೀದಾಸರು ಶ್ರೀಹರಿಯಪಾದಸಾಕ್ಷಿಯ ಅನುಭವದಿಂದ ಮಧ್ವ ಮತದ ತಿರುಳನ್ನು ಅಸ್ವಾದಿಸಿ  ತಮ್ಮ ಆಶುಕವಿತಾ ಸಾಮರ್ಥ್ಯದಿಂದ ಎಲ್ಲರ ಮನವನ್ನು ಗೆದ್ದಿದ್ದರು.

ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದವರು ಇಂಥಾ ಗೂಢಾರ್ಥ, ಪ್ರಮೇಯ ತತ್ವಗಳನ್ನು ಬರೆದು , ಪದ ಪದ್ಯ ಸುಳಾದಿಗಳ ರಚನೆ ಸಾಧ್ಯವೇ?

ಪೂರ್ವ ಜನ್ಮ ಸಂಸ್ಕಾರದ ಪುಣ್ಯ ಕರ್ಮಗಳಿಂದಷ್ಟೇ ಮಾತ್ರ ಸಾಧ್ಯ.

ಹರಿವಾಯುಗುರುಗಳ ಸಂಪೂರ್ಣ ಕೃಪಾಕಟಾಕ್ಷ ಹೊಂದಿದ್ದ ಶ್ರೀಗುಂಡಾಚಾರ್ಯರು ಆರ್ವಾಚೀನ ದಾಸ ಸಾಹಿತ್ಯದ ಪ್ರಸಾರ, ಸ್ವರಚನೆ ಮತ್ತು ಶಿಷ್ಯಪರಂಪರೆಯನ್ನು ಮುಂದುವರೆಸಿ ಹರಿದಾಸ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವಪೂರ್ಣ ಸ್ಥಾನ ಪಡೆದಿದ್ದಾರೆ.

" ವರ ಕವಿಗಳಿಂದ ವರ ಕವಿಗಳಿಗೆ ಸ್ವಾಗತ "

ಕವಿ ದ ರಾ ಬೇಂದ್ರೆಯವರನ್ನು ಕುರಿತ ಹಾಡು ಸುಂದರವಾಗಿದೆ. 

ಮಾನವಿಯಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನಕ್ಕೆ ಬರುವಂತೆ ವ್ಯವಸ್ಥಾಪಕರು ಮಾಡಿಕೊಂಡ ಮನವಿಯನ್ನು ಕವಿ ಬೇಂದ್ರೆಯವರು ಮನ್ನಿಸದಿದ್ದುದಕ್ಕೆ ಇಡೀ ಸಮ್ಮೇಳನದ ಉತ್ಸಾಹವು ಕುಗ್ಗಿದ್ದನ್ನರಿತ ಶ್ರೀ ಶ್ಯಾಮಸುಂದರದಾಸರು ಕವಿ ಬೇಂದ್ರೆಯವರಿಗೆ ಮಾನವಿಗೆ ಬರುವಂತೆ ಆಹ್ವಾನಿಸಿ ಒಂದು ಸ್ವಾಗತ ಪದವನ್ನು ಬರೆದು ಧಾರವಾಡಕ್ಕೆ ಕಳುಹಿಸಿದರು. 

ಸ್ವಾಗತ ಪದದಲ್ಲಿ ನಿರೂಪಿತ ಸಾಹಿತ್ಯ ಸತ್ವವನ್ನು ಓದಿದ ಕವಿ ಬೇಂದ್ರೆಯವರು ಕೂಡಲೇ ಮಾನವಿಗೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು. 

ಸತ್ಕವೀಂದ್ರ ಬಾ ಬೇಂದ್ರೆ -

ಸುಗುಣ ಸಾಂದ್ರ ।। ಪಲ್ಲವಿ ।।

ನಮ್ಮ ಮಾನವಿ ಸ್ಥಳದಿ -

ಅಚ್ಛಗನ್ನಡದ ನುಡಿಯ ।

ಸಮ್ಮಿಲನ ಸಾಗಿಸಲು ನಿಶ್ಚಯಿಸಿದೆ ।

ನಿಮ್ಮ ಬರುವಿಕೆ ಬಯಕೆ ।।

ಇಮ್ಮಡಿಸಿಹುದೆಮಗೆ ।

ಸಮ್ಮತಿಸಿ । ಬಾರ ।

ಯ್ಯ ಸತ್ಕವೀಂದ್ರ ಶ್ರೀ -

ಬೇಂದ್ರೆ ಸುಗುಣೇಂದ್ರ   ।। ಚರಣ ।।

ದಾಸರುಹರಿಪಾದ ಸೇರಿದ್ದು *

ದುರ್ಮುಖಿ ನಾಮ ಸಂವತ್ಸರ ವೈಶಾಖ ಶುದ್ಧ ನವಮಿ

*ಕ್ರಿ.ಶ .1956

ಹರೇ ಶ್ರೀನಿವಾಸ

-ಆಲಂಪಲ್ಲಿ ಪ್ರತಿಷ್ಟಾನ ರಾಯಚೂರು

Post a Comment

0 Comments

Ad Code

Responsive Advertisement