2014 ರಲ್ಲಿ ಅಧಿಕಾರಕ್ಕೆ ಬಂದ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಳೆದ 8 ವರ್ಷಗಳಿಂದ ಜನಪರ ಆಡಳಿತ ನೀಡಲು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಟೀಕಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಅಭಿವೃದ್ಧಿ ಕೇವಲ ಸುಳ್ಳು ಜಾಹೀರಾತುಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಸುಳ್ಳು ಪ್ರಚಾರಗಳಲ್ಲಿ ಮಾತ್ರ ಎದ್ದು ಕಾಣುತ್ತಿದೆ.
ಆದರೆ ವಾಸ್ತವವಾಗಿ ಇಂದಿಗೂ ದೇಶದ ಜನತೆ ನಿರುದ್ಯೋಗ, ಬಡತನ, ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಮತ್ತು ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ತತ್ತರಿಸಿಹೋಗಿದ್ದಾರೆ ಎಂದು ಕಿಡಿಕಾರಿದ್ದಾರೆ.
2014 ರ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಯಾವ ಭರವಸೆಯನ್ನೂ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈಡೇರಿಸಿಲ್ಲ. ದೇಶದಲ್ಲಿ ನಿರುದ್ಯೋಗವನ್ನು ತೊಡೆದುಹಾಕಲು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ನೀಡಿದ್ದ ಭರವಸೆ ಸಂಪೂರ್ಣ ಹುಸಿಯಾಗಿದೆ.
2016 ರಲ್ಲಿ ಜಾರಿಗೆತಂದ ನೋಟ್ ಬ್ಯಾನ್ ನಿಂದಾಗಿ 50 ಲಕ್ಷ ಉದ್ಯೋಗಗಳು ನಾಶವಾಗಿದೆ ಎಂದು ಆರ್ ಬಿ ಐ ಹೇಳಿದೆ.
ಅವೈಜ್ಞಾನಿಕ ಜಿಎಸ್ಟಿ ಜಾರಿಯಿಂದಾಗಿ ಸುಮಾರು 3 ಲಕ್ಷ ಸಣ್ಣ ಮತ್ತು ಮಧ್ಯಮ ಉದ್ಯಮಗಳು ನಾಶವಾಗಿ ನಾಲ್ಕೈದು ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಜಾರಿಯಾದ ಲಾಕ್ ಡೌನ್ ನಿಂದಾಗಿ 14 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದರು. ಹಾಗಾಗಿ ದೇಶದಲ್ಲಿನ ಅಗಾಧ ನಿರುದ್ಯೋಗ ಪರಿಸ್ಥಿತಿಯಿಂದ ಯುವಜನತೆಯ ಆತ್ಮಹತ್ಯೆ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ ಎಂದು ಟೀಕಿಸಿದ್ದಾರೆ.
ಇನ್ನು ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ತಂದು ಬಡವರ ಖಾತೆಗೆ 15 ಲಕ್ಷ ರೂಪಾಯಿಗಳನ್ನು ಜಮಾ ಮಾಡುವುದಾಗಿ ಮೋದಿ ಹೇಳಿದ್ದರು.
ಆದರೆ ಸುಮಾರು 45.47 ಕೋಟಿ ಬಡವರಿಂದ ಜನಧನ ಖಾತೆ ತೆರೆಸಿ, ಅದರಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎಂಬ ನೆಪ ಒಡ್ಡಿ, ಕನಿಷ್ಠ 15 ಸಾವಿರ ಕೋಟಿ ರೂಪಾಯಿಗಳನ್ನು ಬ್ಯಾಂಕುಗಳ ಮೂಲಕ ದಂಡ ವಸೂಲಿ ರೂಪದಲ್ಲಿ ಬಡವರ ಹಣವನ್ನು ಕಸಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು 2014 ರಲ್ಲಿ 74 ರೂಪಾಯಿ ಇದ್ದ ಪೆಟ್ರೋಲ್ ಇಂದು 110 ರೂಪಾಯಿಗಳನ್ನು ದಾಟಿದೆ. ಹಾಗೆಯೇ 64 ರೂಪಾಯಿಗೆ ಸಿಗುತ್ತಿದ್ದ ಡೀಸೆಲ್ 95 ಹಾಗೂ 350 ಕ್ಕೆ ಸಿಗುತ್ತಿದ್ದ ಅಡುಗೆ ಸಿಲಿಂಡರ್ ಬೆಲೆ 1000 ರೂಪಾಯಿ ದಾಟಿದೆ.
70 ರೂಪಾಯಿಗಳಿಗೆ ಸಿಗುತ್ತಿದ್ದ ಅಡುಗೆ ಎಣ್ಣೆ ₹200 ಗಳಿಗೆ ಹಾಗೂ ರೂ 80 ಗೆ ಇದ್ದ ಬೇಳೆ 180 ರೂಪಾಯಿ ಆಗಿದೆ.
ಬಹುತೇಕ ದಿನಬಳಕೆಯ ವಸ್ತುಗಳ ಬೆಲೆ ಎರಡರಿಂದ ಮೂರು ಪಟ್ಟು ಏರಿಕೆಯಾಗಿ ಜನ ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ ಎಂದಿದ್ದಾರೆ.
ಇನ್ನು ನೂರು ಸ್ಮಾರ್ಟ್ ಸಿಟಿ ನಿರ್ಮಾಣ ಹಾಗೂ ಬುಲೆಟ್ ಟ್ರೈನ್ ಘೋಷಣೆ ಮಾಡಿದ್ದ ನರೇಂದ್ರ ಮೋದಿ ಸರ್ಕಾರ, ಎಂಟು ವರ್ಷ ಕಳೆದರೂ ಒಂದೇ ಒಂದು ಸ್ಮಾರ್ಟ್ ಸಿಟಿ ಹಾಗೂ ಒಂದೇ ಒಂದು ಬುಲೆಟ್ ಟ್ರೈನ್ ಓಡಿಸಲಾಗಿಲ್ಲ.
ಹಾಗೆಯೇ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಾಗಿ ಘೋಷಣೆ ಮಾಡಿದ ಮೋದಿ ಸರ್ಕಾರ, ತನ್ನದೇ ಬಿಜೆಪಿ ಸರ್ಕಾರವಿರುವ ಕರ್ನಾಟಕದಲ್ಲಿ 40 ಪರ್ಸೆಂಟ್ ಸರ್ಕಾರ ಎಂಬ ಕುಖ್ಯಾತಿಯನ್ನು ಗಳಿಸಿದೆ.
ಯುಪಿಎ ಸರಕಾರ 126 ರಫೆಲ್ ಯುದ್ಧ ವಿಮಾನಗಳನ್ನು ಖರೀದಿಸಲು ಹೊರಟಿದ್ದ ಹಣದಲ್ಲಿ ಕೇವಲ 36 ವಿಮಾನಗಳನ್ನು ಖರೀದಿಸಿದೆ. ಹಾಗಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಹ ಭ್ರಷ್ಟಾಚಾರದಿಂದ ಮುಕ್ತವಾಗಿಲ್ಲ ಎಂಬುದನ್ನು ಫ್ರಾನ್ಸ್ ಮಾಧ್ಯಮಗಳು ವರದಿ ಮಾಡಿವೆ ಎಂದಿದ್ದಾರೆ. ಹಾಗೆಯೇ ಹಠಮಾರಿ ಧೋರಣೆಯಿಂದ ಜಾರಿ ಮಾಡಲು ಹೊರಟ ರೈತ ವಿರೋಧಿ ಕಾಯ್ದೆಗಳಿಂದಾಗಿ 700 ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡು ಚಳುವಳಿ ನಡೆಸಬೇಕಾಯಿತು.
ಇನ್ನೂ ದೇಶದ ರಕ್ಷಣೆ ವಿಚಾರದಲ್ಲಿ ಪುಲ್ವಾಮ ಘಟನೆ ಹಾಗೂ ಭಾರತದ ಪ್ರದೇಶಗಳಲ್ಲಿ ಚೀನಾ ಅಕ್ರಮವಾಗಿ ನಿರ್ಮಿಸಿರುವ ಮನೆಗಳು ನರೇಂದ್ರ ಮೋದಿ ಸರ್ಕಾರದ ಪೊಳ್ಳುತನವನ್ನು ಸಾಬೀತುಪಡಿಸಿವೆ ಎಂದು ಟೀಕಿಸಿದ್ದಾರೆ. ಡಾಲರ್ ಎದುರು ರೂಪಾಯಿ ಮೌಲ್ಯವಂತೂ ಸಾರ್ವಕಾಲಿಕ ಕುಸಿತ ಕಂಡು ₹ 78 ಸಮೀಪಿಸುತ್ತಿದೆ. ಹಾಗೆಯೇ ದೇಶದಲ್ಲಿ ಹಣದುಬ್ಬರ ಶೇಕಡ 8 ಕ್ಕೆ ಏರಿಕೆಯಾಗಿದೆ.
ಇದು ದೇಶದ ದುರ್ಬಲ ಆರ್ಥಿಕ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದಿದ್ದಾರೆ. ಇನ್ನು ಬಹಳ ಜನಪ್ರಿಯವಾದ ಉಜ್ವಲ ಯೋಜನೆ ಹಳ್ಳ ಹಿಡಿದಿದೆ. ಅಡುಗೆ ಅನಿಲದ ಬೆಲೆ ಏರಿಕೆಯಿಂದಾಗಿ ಹಳ್ಳಿಗಳಲ್ಲಿ ಮತ್ತೆ ಸೌದೆ ಮತ್ತು ಸಗಣಿ ಉಪಯೋಗಿಸಿ ಅಡುಗೆ ಮಾಡುವ ಪರಿಸ್ಥಿತಿ ಬಂದೊದಗಿದೆ.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇಷ್ಟೆಲ್ಲಾ ವೈಫಲ್ಯಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಅಂಬಾನಿ ಅದಾನಿ ಮುಂತಾದ ಉದ್ಯಮಿಗಳ ಸಂಪತ್ತು ಅಗಾಧವಾಗಿ ಏರಿಕೆಯಾಗಿದೆ.
ಆಕ್ಸ್ ಫಾಂ ವರದಿಯಂತೆ ದೇಶದ ಕೇವಲ 100 ಜನ ಅತೀ ಶ್ರೀಮಂತರ ಬಳಿ ಶೇಕಡ 73 ರಷ್ಟು ಸಂಪತ್ತು ಕೇಂದ್ರೀಕೃತ ಗೊಂಡಿದೆ. ಇದೇ ಸಂದರ್ಭದಲ್ಲಿ ಬಡವರ ಸಂಖ್ಯೆ ಅಗಾಧವಾಗಿ ಏರಿಕೆಯಾಗಿದೆ.
ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗಿಳಿಯುತ್ತಿದ್ದರೂ ಕೇಂದ್ರ ಬಿಜೆಪಿ ಸರ್ಕಾರ ಜಾಹೀರಾತುಗಳ ಮುಖಾಂತರ ಹಾಗೂ ಬಿಜೆಪಿಯ ಸಾಮಾಜಿಕ ಜಾಲತಾಣಗಳ ಮುಖಾಂತರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಹೆಣಗಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಹಾಗೆಯೇ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬಿಜೆಪಿಯ ಮಂತ್ರಿಗಳು ಶಾಸಕರು ಸಂಸದರು ಹಾಗೂ ಮುಖಂಡರು ಮಂದಿರ-ಮಸೀದಿ, ಧರ್ಮ, ಜಾತಿ, ಭಾಷೆ ಮುಂತಾದ ಭಾವನಾತ್ಮಕ ವಿಚಾರಗಳಲ್ಲಿ ದೇಶದ ಜನರಲ್ಲಿ ಗೊಂದಲ ಮೂಡಿಸಿ ವಾಸ್ತವ ಪರಿಸ್ಥಿತಿಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ನಾಟಕ ಆಡುತ್ತಿದ್ದಾರೆ.
ಇದರಿಂದ ದೇಶಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟು ಗುಂಪು ಹಲ್ಲೆ, ಕೊಲೆ, ಸುಲಿಗೆ, ಅತ್ಯಾಚಾರದಂತಹ ಘಟನೆಗಳು ಏರಿಕೆಯಾಗಿವೆ. ಇನ್ನು ಬಿಜೆಪಿ ಮತ್ತು ನರೇಂದ್ರ ಮೋದಿ ಸರ್ಕಾರದ ವೈಫಲ್ಯಗಳನ್ನು ಟೀಕಿಸಿದರೆ ದೇಶದ್ರೋಹಿ ಪಟ್ಟ ಕಟ್ಟುವ ಹೊಸ ರೋಗ ಹುಟ್ಟಿಕೊಂಡಿದೆ.
ದೇಶ ಜನರಿಗೆ ಅಚ್ಚೆ ದಿನದ ಕನಸು ಕನಸಾಗಿಯೇ ಉಳಿದಿದೆ. ಕನಿಷ್ಠ ಈಗಲಾದರೂ ಬಿಜೆಪಿ ಮತ್ತು ನರೇಂದ್ರ ಮೋದಿ ತಮ್ಮ ವೈಫಲ್ಯಗಳನ್ನು ಗಣನೆಗೆ ತೆಗೆದುಕೊಂಡು ದೇಶದ ಜನತೆಗೆ ಅಚ್ಚೆ ದಿನದ ಆಡಳಿತವನ್ನು ನಡೆಸಲಿ ಎಂದು ಬಹುಜನ ಸಮಾಜ ಪಾರ್ಟಿ ಆಗ್ರಹಿಸುತ್ತದೆ ಎಂದಿದ್ದಾರೆ.
0 Comments