Ticker

6/recent/ticker-posts

Ad Code

Responsive Advertisement

ವಿವಿಧ ಯೋಜನೆಗಳ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆ

ಮಕ್ಕಳ ಹಕ್ಕುಗಳನ್ನು ರಕ್ಷಿಸಿ;ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ:ಡಿಸಿ ಮಾಲಪಾಟಿ

ಬಳ್ಳಾರಿ,ಮೇ 26: ಮಕ್ಕಳ ರಕ್ಷಣೆ ಹಾಗೂ ಪುನರ್ ವಸತಿಗಾಗಿ ಜಿಲ್ಲಾಮಟ್ಟದಲ್ಲಿ ಎಲ್ಲ ಇಲಾಖೆಗಳು ಸಮನ್ವಯ ಸಾಧಿಸುವುದರ ಮೂಲಕ ಜಿಲ್ಲೆಯಾದ್ಯಂತ ಮಕ್ಕಳ ಹಕ್ಕುಗಳನ್ನು ರಕ್ಷಿಸಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಗುರುವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪೋಷಣೆ ಮತ್ತು ರಕ್ಷಣೆ ಅವಶ್ಯಕತೆ ಇರುವ ಮಕ್ಕಳಾದ ಅನಾಥ, ಏಕ ಪೋಷಕ, ಬಾಲಕಾರ್ಮಿಕ, ಬಾಲ್ಯ ವಿವಾಹಕ್ಕೆ ಒಳಗಾದ, ಭೀಕ್ಷಾಟನೆಯಲ್ಲಿ ತೊಡಗಿರುವ, ಮನೆಬಿಟ್ಟು ಓಡಿಬಂದಿರುವ, ಚಿಂದಿ ಆಯುವ, ದೌರ್ಜನ್ಯಕ್ಕೆ ಒಳಗಾದ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳನ್ನು ರಕ್ಷಿಸಿ ಅವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಬಾಲನ್ಯಾಯ ಕಾಯ್ದೆಯ ಅಡಿ ನೋಂದಣಿಯಾಗಿರುವ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿರುವ ಮಕ್ಕಳ ಭತ್ಯೆಯು ಪೋಷಕರು ದುರುಪಯೋಗವಾಗುವುದು ಕಂಡುಬಂದಿದ್ದು, ಭತ್ಯೆಯು ನೇರವಾಗಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಉಪಯೋಗವಾಗುವಂತೆ ಮನೆ ಮನೆ ಭೇಟಿ ನೀಡಿ ಎನ್‍ಜಿಒ ಮತ್ತು ಆಶಾಕಾರ್ಯಕರ್ತೆಯರು ಪಾಲಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.

*ಬಾಲ್ಯವಿವಾಹ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ: ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಏಪ್ರೀಲ್ ಮತ್ತು ಮೇ ತಿಂಗಳಲ್ಲಿ 20 ಪ್ರಕರಣಗಳು ದಾಖಲಾಗಿದ್ದು, ಈ ಕುರಿತಂತೆ ಮನೆ ಮನೆಗೆ ತೆರಳಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಇದಕ್ಕೆ ಶಿಕ್ಷಣ ಇಲಾಖೆಯ ಸಹಕಾರವು ಆಗತ್ಯವಿದ್ದು, ಅವರು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಹೇಳಿದರು.

ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ವರ್ಷ 2021ರ ಏಪ್ರೀಲ್‍ನಿಂದ 2022ರ ಮಾರ್ಚ್‍ವರೆಗೆ ಒಟ್ಟು 147 ಬಾಲ್ಯ ವಿವಾಹಗಳಾಗಿದ್ದು, ಹೆಚ್ಚಾಗಿ ಹಳ್ಳಿಗಳಲ್ಲಿ ನಡೆಯುತ್ತಿವೆ. ಅವುಗಳನ್ನು ತಡೆಯಲು ಶ್ರಮಿಸುವ ಅಗತ್ಯವಿದ್ದು,ಈ ಕಾರ್ಯಕ್ಕೆ ಗ್ರಾಪಂ ಪಿಡಿಒಗಳು ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಕೈಜೋಡಿಸಬೇಕು. ಈ ಕುರಿತಂತೆ ಅರಿವು ಮಾಡಿಸುವ ನಿಟ್ಟಿನಲ್ಲಿ ಮುಂಬರುವ ತಿಂಗಳಿಂದ ಗ್ರಾಮಸಭೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಜೊತೆಗೆ ಆಯಾ ಗ್ರಾಮಗಳ ವಾರ್ಡ್‍ಗಳಲ್ಲಿ ಹಾಗೂ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಗ್ರಾಮಸಭೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ನಿರಾಶ್ರಿತ ಕೇಂದ್ರಗಳಿಗೆ ಬೇಕಾದ ಸೌಲಭ್ಯಗಳ ಕೊರತೆಗಳಿದ್ದಲ್ಲಿ ನನ್ನ ಗಮನಕ್ಕೆ ತರಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು, ನಿರಾಶ್ರಿತ ಕೇಂದ್ರಗಳಿಗೆ ಕೌನ್ಸಿಲರ್ ಮತ್ತು ಸೆಕ್ರೆಟರಿಗಳ ಆವಶ್ಯಕತೆ ಇದ್ದಲ್ಲಿ 2 ವಾರಕ್ಕೊಮ್ಮೆ ಕಳುಹಿಸಿಕೊಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಹೇಳಿದರು.

ಮಕ್ಕಳ ಸಹಾಯವಾಣಿ 1098 ಗೆ ಸಂಬಂಧಿಸಿದಂತೆ ಅಪರಿಚಿತ ಮಕ್ಕಳು ಅಥವಾ ಕಳೆದುಹೋದ ಮಕ್ಕಳು ಸಿಕ್ಕಲ್ಲಿ ಯಾವ ರೀತಿಯಲ್ಲಿ ಆ ಮಕ್ಕಳನ್ನು ರಕ್ಷಿಸುತ್ತೀರಿ ಎಂದು ವಿಚಾರಿಸಿದರು. ಈ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ 1098 ಬಗ್ಗೆ ಬಹುತೇಕ ಕಡೆ ಪ್ರಚಾರ ಕೈಗೊಳ್ಳಬೇಕು ಹಾಗೂ ಮಕ್ಕಳು ದೊರಕಿದಲ್ಲಿ ಅವರ ರಕ್ಷಣೆಯ ಸಮಯದಲ್ಲಿ ಯಾವ ಯಾವ ಇಲಾಖೆಗಳು ಭಾಗವಹಿಸುತ್ತವೆ ಎಂಬ ಮಾಹಿತಿಯನ್ನು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಪಡೆದರು.

ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಮತ್ತು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲು ಸೆಕ್ಷನ್ 16 ಹಾಗೂ 17ರ ಅಧಿಕಾರಿಗಳು ಹೆಚ್ಚಿನ ನೀಡಬೇಕು ಎಂದು ಹೇಳಿದರು.

ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಇರುವಂತಹ ಸಮಸ್ಯೆಗಳನ್ನು ಪಟ್ಟಿ ಮಾಡಿ ನೀಡಿ ;ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಸರ್ಕಾರಿ ಬಸ್‍ಗಳಲ್ಲಿ ಮಕ್ಕಳ ಸಹಾಯವಾಣಿ 1098 ಕುರಿತು ಭಿತ್ತಿ ಪತ್ರವನ್ನು ಅಂಟಿಸಬೇಕು. ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಹಾಗೂ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ 1098 ಗೋಡೆ ಬರಹ ಬರೆಸುವ ಕಾರ್ಯ ಕೈಗೊಳ್ಳಬೇಕು ಹಾಗೂ ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಮೊದಲು ಆಯಾ ತಾಲೂಕಿನ ತಹಶೀಲ್ದಾರರ ಗಮನಕ್ಕೆ ತರಬೇಕು 

ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೊಸ ತಾಲೂಕುಗಳಾದ ಕಂಪ್ಲಿ ಮತ್ತು ಕುರುಗೋಡಿನಲ್ಲಿ ಸಾಂತ್ವನ ಕೇಂದ್ರಗಳನ್ನು ಸ್ಥಾಪಿಸಲು ಸೂಚಿಸಿದರು.

ಸಖಿ ಒನ್ ಸ್ಟಾಫ್ ಸೆಂಟರ್‍ನಲ್ಲಿರುವ ನಿರ್ಗತಿಕರ ಮಹಿಳೆಯರಿಗೆ ಮಾಸಿಕ ವೇತನ ಸರಿಯಾದ ಸಮಯಕ್ಕೆ ತಲುಪುತ್ತಿದೇಯೇ ಎನ್ನುವ ಮಾಹಿತಿ ಪಡೆದ ಅವರು, ಸಿಬ್ಬಂದಿಗಳ ಕೊರತೆಯಿದ್ದಲ್ಲಿ ನೇಮಕ ಮಾಡಿಕೊಳ್ಳುವಂತೆ ಈ ಸಂದರ್ಭದಲ್ಲಿ ಸೂಚಿಸಿದರು.

*ಘನತೆಯ ಬದುಕು ಕೈಪಿಡಿ ಬಿಡುಗಡೆ: ಜಿಲ್ಲಾ ಮಕ್ಕಳ ರಕ್ಷಣ ಘಟಕ ಸಿದ್ದಪಡಿಸಿದ “ಘನತೆಯ ಬದುಕು” ಮಾಧ್ಯಮ ಮತ್ತು ಮಕ್ಕಳು ಒಂದು ಕೈಪಿಡಿಯನ್ನು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

ಈ ಕೈಪಿಡಿಯಲ್ಲಿ ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ)ಕಾಯ್ದೆ 2015ರ ಅನುಸಾರ ಬಾಲಪರಾಧಿ ಎಂಬ ಪದ ಬಳಕೆ ಬದಲು ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮಗು ಎಂದು ಬಳಸುವುದು, ರಿಮ್ಯಾಂಡ್ ಹೋಂ ಶಬ್ದದ ಬದಲು ವೀಕ್ಷಣಾಲಯ, ಅತ್ಯಚಾರ ಶಬ್ದದ ಬದಲು ಲೈಂಗಿಕ ಹಲ್ಲೆ,ದೌರ್ಜನ್ಯ,ಹಿಂಸೆ,ಕಿರುಕುಳ ಅಥವಾ ಶೋಷಣೆ ಎನ್ನುವ ಪದ ಬಳಕೆ ಮಾಡುವುದು,ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಮಕ್ಕಳ ಭಾವಚಿತ್ರ,ಹೆಸರು,ವಿಳಾಸ,ಊರು,ಶಾಲೆ,ಕುಟುಂಬದ ಮಾಹಿತಿ ಬಹಿರಂಗಪಡಿಸದಿರುವುದು ಸೇರಿದಂತೆ ವಿವಿಧ ಅಂಶಗಳ ಕುರಿತ ಮಾಹಿತಿ ಹೊಂದಿದೆ.

ಈ ಸಂದರ್ಭದಲ್ಲಿ ಜಿಪಂ ಸಿಇಒ ಜೆ.ಲಿಂಗಮೂರ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಾಜನಾಯ್ಕ ಅವರು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.






 


Post a Comment

0 Comments

Ad Code

Responsive Advertisement