Ticker

6/recent/ticker-posts

Ad Code

Responsive Advertisement

ಧಾರಾಕಾರ ಮಳೆ: ಮುಖ್ಯಮಂತ್ರಿಗಳ ಬೆಂಗಳೂರು ರೌಂಡ್ಸ್

ಬೆಂಗಳೂರು, ಮೇ 19,  (ಕರ್ನಾಟಕ ವಾರ್ತೆ) : ಕಳೆದ ನಾಲ್ಕು ದಿನಗಳಿಂದ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರು ನಗರದ ಹಲವಾರು ಪ್ರದೇಶಗಳಲ್ಲಿ ನೀರು ನುಗ್ಗಿ ಮನೆಗಳಿಗೆ ಹಾನಿಯಾಗಿದ್ದು, ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲಿಸುವ ಸಲುವಾಗಿ ಇಂದು ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಜಿಟಿ ಜಿಟಿ ಸುರಿಯುತ್ತಿರುವ ಮಳೆಯಲ್ಲಿಯೇ ಸ್ಥಳೀಯ ಶಾಸಕರೊಂದಿಗೆ ಬೆಂಗಳೂರು ರೌಂಡ್ಸ್ ಕೈಗೊಂಡರು.





ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಿಂದ ಬಿ.ಎಂ.ಟಿ.ಸಿ ವೋಲ್ವೋ ಬಸ್ಸಿನಲ್ಲಿ ಪ್ರಯಾಣಿಸಿದ ಮುಖ್ಯಮಂತ್ರಿಗಳು ಬಿ.ಬಿ.ಎಂಪಿ ವ್ಯಾಪ್ತಿಯ ಪಶ್ಚಿಮ ವಲಯದ ಜೆ.ಸಿ.ನಗರ, 60 ಅಡಿ ರಸ್ತೆಯಲ್ಲಿರುವ  ವಾರ್ಡ್ ನಂ. 68ರಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳು ಮತ್ತು ಕಲ್ಚರ್ಟ್‍ಗಳನ್ನು, ಕಮಲಾನಗರ ಮುಖ್ಯ ರಸ್ತೆಯ, ಶಂಕರಮಠ ದೇವಸ್ಥಾನದ ಹತ್ತಿರ ವಾರ್ಡ್ ನಂ. 74ರಲ್ಲಿ ಮಳೆ ನೀರು ಕಾಲುವೆಗಳ ಹೂಳು ತೆಗೆದಿರುವುದು, ಲಗ್ಗೆರೆ 19ನೇ ಮುಖ್ಯ ರಸ್ತೆಯಲ್ಲಿ ಮಳೆ ನೀರು ಕಾಲುವೆಗಳ ಹೂಳು ತೆಗೆದಿರುವುದು, ಬಿ.ಬಿ.ಎಂ.ಪಿ. ಪೂರ್ವ ವಲಯದ ಅರೆಬಿಕ್ ಕಾಲೇಜು ಎದುರಿನ ನಾಗವಾರ ಮೆಟ್ರೋ ಸ್ಟೇಷನ್‍ನ  ಮೆಟ್ರೋ ಕಾಮಗಾರಿಗಳು, ಹೆಚ್.ಬಿ.ಆರ್. ಲೇಔಟ್‍ನ 5ನೇ ಬ್ಲಾಕ್‍ನ 18 ಮತ್ತು 19ನೇ ಮುಖ್ಯರಸ್ತೆ ಮತ್ತು 44ನೇ ಕ್ರಾಸ್‍ನಲ್ಲಿ ಮಳೆ ನೀರು ಕಾಲುವೆಗಳಲ್ಲಿ ಹೂಳು ತೆಗೆದಿರುವುದು ಜಾಗೂ ಹೆಬ್ಬಾಳ – ಎಸ್.ಟಿ.ಪಿ 100 ಎಂ.ಎಲ್.ಡಿ ಕಾಮಗಾರಿ ಮುಕ್ತಾಯವಾಗಿರುವುದನ್ನು ವೀಕ್ಷಿಸಿ ಮರಳಿ ಗೃಹ ಕಚೇರಿ ಕೃಷ್ಣಕ್ಕೆ ತೆರಳಿದರು.

ನಗರದ ವೀಕ್ಷಣೆಯ ನಂತರ ಮಾಧ್ಯದವರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಪ್ರಾಯಶಃ ಮೇ ಮಾಹೆಯಲ್ಲಿ 15ದಿನಗಳಲ್ಲಿ ಸುರಿಯಬಹುದಾದ ಮಳೆ ಬಹು ಕಡಿಮೆ ಸಮಯದಲ್ಲಿ, ಅಂದರೆ ಕೇವಲ 4 ತಾಸಿನಲ್ಲಿ ಧಾರಕಾರವಾಗಿ ಬೆಂಗಳೂರು ನಗರದಲ್ಲಿ ಸುರಿದಿದೆ. ಸುಮಾರು 40-50 ವರ್ಷಗಳ ಹಿಂದೆ ಇಂತಹ ಮಳೆಯಾಗಿತ್ತು ಆದರೆ ಇತ್ತೀಚೆಗೆ ಕಳೆದ ನಾಲ್ಕೈದು ದಿನಗಳಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಂದರೆ 100 ಎಂ.ಎಲ್ ನಿಂದ 120 ಎಂ.ಎಲ್ ವರೆಗೂ ಮಳೆಯಾಗಿದ್ದು, ನಗರದ ಜನತೆ ತುಂಬಾ ತೊಂದರೆಗೀಡಾಗಿದ್ದಾರೆ ಎಂದು ತಿಳಿಸಿದರು.

ಕಳೆದ ಮೂರು ನಾಲ್ಕು ದಶಕಗಳಿಂದಲೂ ಬಳೆ ಬಂದಾಗ ಎಲ್ಲಾ ತಗ್ಗು ಪ್ರದೇಶಗಳಲ್ಲಿ ಸಹಜವಾಗಿ ನೀರು ಬಂದು ಜಲಾವೃತವಾಗುತ್ತದೆ. ಇದಕ್ಕೆ ಹಲವಾರೂ ಪರಿಹಾರಗಳನ್ನು ಮಾಡಿದರೂ ಸಹ ಸಮಸ್ಯೆಗಳು ಸುಧಾರಿಸುತ್ತಿಲ್ಲ. ಒಂದು ಕಡೆ ಪರಿಹಾರವಾದರೆ ಮತ್ತೊಂದೆಡೆ ಸಮಸ್ಯೆ ಉದ್ಭವಿಸುತ್ತದೆ. ಕಾರಣ ಇತ್ತೀಚೆಗೆ ಬೆಂಗಳೂರು ನಗರ ಬೃಹದಾಕಾರವಾಗಿ ಬೆಳೆಯುತ್ತಿದೆ. ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಹಲವಾರು ಕ್ರಮಗಳನ್ನು ತೆಗೆದುಕೊಂಡರೂ ಸಹ ಸಮಸ್ಯೆಗಳನ್ನು ಪರಿಪೂರ್ಣವಾಗಿ ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಕಳೆದ ಬಾರಿ ಮಳೆಯಾದಾಗ ಎಲ್ಲಾ ಶಾಸಕರೊಂದಿಗೆ ಸಭೆ ನಡೆಸಲಾಯಿತು, ಅದೇ ರೀತಿ ವಿರೋಧ ಪಕ್ಷದವರೊಂದಿಗೂ ಸಹ ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ಹಲವು ತೀರ್ಮಾಗಳನ್ನು ತೆಗೆದುಕೊಳ್ಳಲಾಯಿತು.

ಮೊಟ್ಟಮೊದಲನೆಯದಾಗಿ ಕಣಿವೆವಾರು ಅಭಿವೃದ್ಧಿಪಡಿಸುವಂತಹದ್ದು. (ಗಿಚಿಟಟಥಿ ತಿise ಆeveಟoಠಿmeಟಿಣ) ವೃಷಭಾವತಿ ವ್ಯಾಲಿ, ಚಲಗಟ್ಟ ವ್ಯಾಲಿ, ಹೆಬ್ಬಾಳ ವ್ಯಾಲಿ ಇಂತಹ ಸುಮಾರು 6ರಿಂದ 7 ವ್ಯಾಲಿಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಎಲ್ಲೆಲ್ಲಿ ಒಳ ಚರಂಡಿ ಹಾನಿಗೊಳಗಾಗಿದೆಯೋ ಅದನ್ನೆಲ್ಲ ಸರಿಪಡಿಸುವುದು. ಈ ಕೆಲಸವನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ಎಂದು ತಿಳಿಸಿದರು. ಒಳಚರಂಡಿ ದುರಸ್ತಿಗಾಗಿ ಹದಿನಾರು ನೂರು ಕೋಟಿಯ ಡಿ.ಪಿ.ಆರ್ ಸಿದ್ದಗೊಂಡಿದ್ದು, ಈಗಾಗಲೇ ಇದಕ್ಕೆ ಆಯವ್ಯಯದಲ್ಲಿ ಹಣವನ್ನು ಸಹ ಒದಗಿಸಲಾಗಿದೆ ಇನ್ನೂ ಕೆಲವೇ ದಿನಗಳಲ್ಲಿ ಡಿ.ಪಿ.ಆರ್ ಅನುಮೊದನೆಯಾಗಿ ಕೆಲಸ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.

ಒಳಚರಂಡಿ ವ್ಯವಸ್ಥೆಯಲ್ಲಿ, ಎಲ್ಲೆಲ್ಲಿ ಅಡಚಣೆಗಳಿವೆ, ಎಲ್ಲೆಲ್ಲಿ ಹೂಳು ತುಂಬಿಕೊಂಡಿವೆ, ಎಲ್ಲೆಲ್ಲಿ ಹಳೆಯ ಒಳ ಚರಂಡಿಗಳಿದ್ದು ಒಡೆದು ಹೋಗಿವೆಯೋ ಅವುಗಳನ್ನು ಕೂಡಲೇ ನಿರ್ಮಿಸಿ ಸಮಸ್ಯೆಯನ್ನು ನಿವಾರಣೆ ಮಾಡಲು ಈಗಾಗಲೇ ಅನುಮತಿ ನೀಡಿದ್ದೇನೆ ಎಂದು ತಿಳಿಸಿದರು.

ತುರ್ತಾಗಿ ಒಳ ಚರಂಡಿಗಳಲ್ಲಿ ಹೂಳು ತೆಗೆಯುವ ಕೆಲಸ ಆಗಬೇಕಿದೆ. ಅದನ್ನು ಕೂಡಲೇ ಕೈಗೆತ್ತಿಕೊಂಡು ಕಾರ್ಯ ನಿರ್ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ. ಮುಖ್ಯ ಚರಂಡಿ ಏನಿವೆ ಅದನ್ನು ಪ್ರಾಥಮಿಕ ಚರಂಡಿ ಅಂತಲೂ ಕರೆಯುತ್ತೇವೆ. ಅದರ ಹೂಳು ತೆಗೆಯುವುದನ್ನು ಸಮಗ್ರವಾಗಿ ಮಾಡಬೇಕು. ಈಗಾಗಲೇ ಹೆಚ್.ಬಿ.ಆರ್. ಲೇಔಟ್‍ನಲ್ಲಿ ಇರುವಂತ ಮುಖ್ಯ ಚರಂಡಿ ಅದು ಸುಮಾರು 2.5 ಕಿ.ಮೀ ಇದ್ದು, ಇದನ್ನು ಸಂಪೂರ್ಣವಾಗಿ ಡಿ.ಸಿಲ್ಟ್ ಮಾಡಲು ಆದೇಶ ನೀಡಿದ್ದೇನೆ. ಮತ್ತು ಚರಂಡಿ ಪಕ್ಕದಲ್ಲಿರುವ  ವಾರ್ಡುಗಳಲ್ಲಿ ದ್ವಿತೀಯ ಮತ್ತು ತೃತೀಯ ಒಳ ಚರಂಡಿಗಳಲ್ಲಿಯೂ ಸಹ ಹೂಳು ತೆಗೆಯಲು ಆದೇಶ ನೀಡಿದ್ದೇನೆ. ಮುಖ್ಯ ಚರಂಡಿ ಹೂಳು ತೆಗೆಯಲು ಸರ್ಕಾರ ಹಣ ನೀಡುತ್ತದೆ. ಮತ್ತು ಉಪ ಚರಂಡಿಗಳ ಹೂಳು ತೆಗೆಯುಲು ಬೆಂಗಳೂರು ಜಲಮಂಡಲಿಯವರಿಗೆ ಅವರಿಗೆ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಎಸ್.ಡಿ.ಪಿ. ಪ್ಲ್ಯಾಂಟ್ಸ್ ಸಾಮರ್ಥ್ಯವನ್ನು ಹೆಚ್ಚು ಮಾಡಬೇಕಿದ್ದು, ಸುಮಾರು 40 ಎಂ.ಎಲ್.ಡಿ.ಗೂ ಅಧಿಕವಾಗಿ ಹೆಚ್ಚು ಮಾಡಲು ಆದೇಶ ನೀಡಲಾಗಿದೆ. ಬೆಂಗಳೂರು ಜಲಮಂಡಳಿಯವರು ಈ ಕೆಲಸವನ್ನು ಈಗಾಗಲೇ ಪ್ರಾರಂಭಿಸಿರುತ್ತಾರೆ. ಹೆಬ್ಬಾಳ ಎಸ್.ಡಿ.ಪಿ ಪ್ಲ್ಯಾಂಟ್‍ನಲ್ಲಿ 100 ಎಂ.ಎಲ್.ಡಿ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಆದರೆ ಇದು ಸಾಕಾಗುತ್ತಿಲ್ಲ. ಇದರ ಸಾಮರ್ಥ್ಯವನ್ನು ಇನ್ನು 60 ಎಂ.ಎಲ್.ಡಿ.ಗೆ ಹೆಚ್ಚು ಮಾಡುವಂತೆ ಮನವಿಗಳು, ಕೋರಿಕೆಗಳು ಬರುತ್ತಿವೆ. ಈ ಸಂಬಂಧ ಈಗಾಗಲೇ ಹಳೆಯ ಪ್ಲ್ಯಾಂಟ್ ಇರುವ ಸ್ಥಳದಲ್ಲಿ ಹೊಸ 60 ಎಂ.ಎಲ್.ಡಿ. ಪ್ಲ್ಯಾಂಟ್ ಹಾಕಲು ಸೂಚನೆ ನೀಡಿದ್ದೇನೆ. ಡಿ.ಪಿ.ಆರ್.ಗೂ ಸಹ ಅನುಮೋದನೆ ನೀಡಿದ್ದೇನೆ. ಡಿ.ಪಿ.ಆರ್ ಅನುಮೋದನೆ ಆದ ತಕ್ಷಣ ಹಣಕಾಸಿನ ನೆರವು ಒದಗಿಸುವಂತೆ ಜಲ ಮಂಡಲಿಯವರು ಕೋರಿದ್ದು, ಅದನ್ನು ಸಹ ಒದಗಿಸಿ ಕೊಡುತ್ತೇನೆ ಎಂದು ತಿಳಿಸಿದರು.

ಗೋಪಾಲಯ್ಯನವರ ವಾರ್ಡ್‍ನಲ್ಲಿ ಭಿಕ್ಷುಕರ ಕಾಲೋನಿಯಿಂದ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದುಬರುವಂತೆ ಮಾಡುವ ಸಲುವಾಗಿ ಒಳ ಚರಂಡಿಗಳ ಹೂಳನ್ನು ಕೂಡಲೇ ತೆಗೆಯುವಂತೆ ಸೂಚಿಸಿದ್ದೇನೆ. ವೃಷಭಾವತಿ ವ್ಯಾಲಿಯಲ್ಲಿ ಬಹಳಷ್ಟು ಹಳೆಯ ಬ್ರಿಡ್ಜ್‍ಗಳಿದ್ದು, ಅವು ನೀರನ್ನು ತಡೆ ಹಿಡಿಯುತ್ತಿವೆ. ಅವುಗಳನ್ನು ಮರು ಮಾದರಿ ಮಾಡಲು  ತಿಳಿಸಿದ್ದೇನೆ. ಇಂತಹ ಸುಮಾರು ಎಂಟರಿಂದ ಹತ್ತು ಬ್ರಿಡ್ಜ್‍ಗಳಿದ್ದು, ಅವುಗಳನ್ನು ಕೂಡಲೇ ನವೀಕರಣ ಮಾಡಲು ಕ್ರಮವಹಿಸಲು ತಿಳಿಸಲಾಗಿದೆ.

ಬಸವರಾಜ ಭೈರತಿ ಅವರ ವಾರ್ಡಿನಲ್ಲಿ ರೈಲ್ವೇ ಬ್ರಿಡ್ಜ್ ಮುಂದಿನ ಭಾಗ 300 ಮೀಟರ್ ಇದ್ದದ್ದು 100 ಮೀಟರ್ ಆಗಿದೆ. ಅದನ್ನು ಸಹ ದುರಸ್ತಿ ಮಾಡಲು ಡಿ.ಪಿ.ಆರ್ ಆಳವಡಿಸಿಕೊಳ್ಳಲಾಗಿದೆ. ಈ ವಾರ್ಡಿನಲ್ಲಿ ಹೂಳು ತೆಗೆಯುವ ಕಾರ್ಯ, ನೀರನ್ನು ಪಂಪ್ ಮಾಡುವ ಕಾರ್ಯ ಈಗಾಗಲೇ ಪ್ರಾರಂಭ ಆಗಿದೆ. ಬಹಳಷ್ಟು ಮನೆಗಳಲ್ಲಿ ಇದ್ದ ನೀರನ್ನು ಪಂಪ್ ಮಾಡಿ ತೆಗೆಯಲಾಗಿದೆ. ಬಿ.ಬಿ.ಎಂ.ಪಿ ಸಿಬ್ಬಂದಿಗಳು, ಹೋಮ್‍ಗಾರ್ಡ್ಸ್, ಸಿವಿಲ್ ಡಿಪೆನ್ಸ್‍ನವರು ಮತ್ತು ಇಂಜಿನಿಯರುಗಳು  ಹಗಲೂ ರಾತ್ರಿ ಎನ್ನದೇ ಸುಮಾರು 48 ಗಂಟಗಳು ನಿದ್ದೇ ಮಾಡದೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೇರೆ ಬೇರೆ ಪ್ರದೇಶಗಳಲ್ಲಿ, ಬೇರೆ ಬೇರೆ ಮನೆಗಳಲ್ಲಿರುವ ನೀರನ್ನು ತೆಗೆದಿದ್ದಾರೆ ಮತ್ತು ತೆಗೆಯುತ್ತಿದ್ದಾರೆ.

ಮುಖ್ಯ ಚರಂಡಿಗಳ ಕೆಳಗಡೆ ಮನೆಗಳನ್ನು ನಿರ್ಮಾಣ ಮಾಡಿದಾಗ ಹಲವಾರು ಸಮಸ್ಯೆಗಳಾಗುತ್ತಿವೆ. ಹೊಸಕೆರೆಹಳ್ಳಿಯಲ್ಲಿ ಮುಖ್ಯ ಚರಂಡಿಯ ಸುಮಾರು 8ರಿಂದ 10 ಅಡಿಗಳ ಕೆಳಗಡೆ ಮನೆಗಳನ್ನು ಅತಿಕ್ರಮವಾಗಿ ನಿರ್ಮಿಸಿದ್ದಾರೆ. ಇದರಿಂದ ಸಮಸ್ಯೆಯಾಗಿದೆ. ಕೆಲವರು ಚರಂಡಿಗಳನ್ನು ನಿಲ್ಲಿಸಿ ಮನೆಗಳನ್ನು ಅಕ್ರಮವಾಗಿ ನಿರ್ಮಿಸಿಕೊಂಡಿದ್ದಾರೆ. ಅದನ್ನು ಸಹ ತೆರವುಗೊಳಿಸಿ ಸಂಪೂರ್ಣವಾಗಿ ಚರಂಡಿಗೆ ದಾರಿ ನೀಡುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.

ಇತ್ತೀಚೆಗೆ ಸುರಿದ ಮಳೆಯಿಂದ ಯಾವ ಯಾವ ಪ್ರದೇಶದಲ್ಲಿ ಯಾರ ಯಾರ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ ಅವರುಗಳಿಗೆ ಇಪ್ಪತ್ತೈದು ಸಾವಿರ ಪರಿಹಾರವನ್ನು ನೀಡಲಾಗುವುದು. ಡಿ.ಬಿ.ಟಿ. ಮುಖಾಂತರವೇ ಹಣವನ್ನು ಪಾವತಿಸಲಾಗುತ್ತಿದ್ದು, ಇಂದಿನಿಂದಲೇ ಪರಿಹಾರ ನೀಡಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗೂ ತೊಂದರೆಗೊಳಗಾದವರಿಗೆ ಒಂದು ವಾರಕ್ಕೆ ಆಗುವಷ್ಟು ಪಡಿತರ ಮತ್ತು ಊಟದ ವ್ಯವಸ್ಥೆ ಮಾಡಲು ಸಹ ಬಿ.ಬಿ.ಎಂ.ಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಬೆಂಗಳೂರು ರೌಂಡ್ಸ್ ಹೊರಟ ಸಂದರ್ಭದಲ್ಲಿ ಕಂದಾಯ ಸಚಿವರಾದ ಆರ್. ಅಶೋಕ, ಲೋಕಸಭಾ ಸಂಸದ ಪಿ.ಸಿ.ಮೋಹನ್, ಶಾಸಕ ಎಸ್. ಆರ್. ವಿಶ್ವನಾಥ್, ರಾಜುಚಂದ್ರಶೇಖರ್, ಬಿ.ಬಿ.ಎಂ.ಪಿ. ಮುಖ್ಯ ಆಯುಕ್ತರಾದ ತುಷಾರಗಿರಿನಾಥ್, ಆಡಳಿತಾಧಿಕಾರ ರಾಕೇಶ್ ಸಿಂಗ್, ಮಾನ್ಯ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಪ್ರಸಾದ್ ಒಳಗೊಂಡಂತೆ, ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಗಳು, ಬಿ.ಬಿ.ಎಂ.ಪಿ ಹಾಗೂ ಬಿ.ಡಿ.ಎ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement