ಬಳ್ಳಾರಿ ಏ 29. ಕರ್ನಾಟಕ ರಾಜ್ಯ ಪ್ರವರ್ಗ-1 ರ ಒಕ್ಕೂಟವು 2021 ಆಗಸ್ಟ್ ತಿಂಗಳಿನಲ್ಲಿ ಕಾನೂನು ಬದ್ಧವಾಗಿ ನೋಂದಾಯಿತವಾಗಿದೆ. ಈ ಒಕ್ಕೂಟವು ಪಕ್ಷಾತೀತವಾಗಿ ಪ್ರವರ್ಗ-1 ರ ಜಾತಿಗಳ ಜನರ ಸರ್ವತೋಮುಖ ಅಭಿವೃದ್ಧಿಗಾಗಿ ಸ್ಥಾಪಿತವಾಗಿದೆ. ಇದರ ಅಧ್ಯಕ್ಷರಾಗಿ ಡಿ.ಟಿ ಶ್ರೀನಿವಾಸ್ ರವರು ಇದ್ದು, ಅವರ ನೇತೃತ್ವದಲ್ಲಿ 60 ಕ್ಕೂ ಹೆಚ್ಚು ಜಾತಿಗಳ ಮುಖಂಡರು ಈ ಒಕ್ಕೂಟದ ಪದಾಧಿಕಾರಿಗಳಾಗಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಯಾಗಿದ್ದಾರೆ. ಮತ್ತು ಓಕ್ಕೂಟದ ಹಿತಾಸಕ್ತಿಗೆ ಪೂರಕವಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಲೋಕೇಸ್ ಅವರು ತಿಳಿಸಿದರು.ಕರ್ನಾಟಕ ರಾಜ್ಯ ಸರ್ಕಾರಿ ಆದೇಶ ಸಂಖ್ಯೆ: SWD - 225 / BSD 2000 DATED: 30-03-2002. ಅನ್ವಯ ಅತಿ ಹಿಂದುಳಿದ ಜಾತಿಗಳನ್ನು ಪ್ರವರ್ಗ-1 ರ ಜಾತಿಗಳ ಗುಂಪಿಗೆ ಸೇರಿಸಲಾಗಿದ್ದು ಇದರಲ್ಲಿ 46 ಅಲೆಮಾರಿ ಮತ್ತು ಅರೆ ಅಲೆಮಾರಿ ಜಾತಿಗಳು ಸೇರಿದಂತೆ ಒಟ್ಟು 95 ಮುಖ್ಯ ಜಾತಿಗಳಿದ್ದು ಅದರೊಟ್ಟಿಗೆ 376 ಉಪಜಾತಿಗಳಿರುತ್ತವೆ.
ಇದರಲ್ಲಿ ಭತ್ತ, ಗೊಲ್ಲ, ಉಪ್ಪಾರ, ಹೆಳವ, ಜೋಗಿ, ದೊಂಬಿ ದಾಸರು, ತೇವಾರ್, ಗೂರ್ಖಾ, ಹಾವಾಡಿಗ, ಬುಡಬುಡಕಿ, ದೇವದಾಸಿ, ಬಸವಿ, ಬೈರಾಗಿ, ಪರದೇಶಿ, ಕಿಲಿಕ್ಯಾತ, ಸನ್ಯಾಸಿ, ಚಿತ್ರಗಾರ, ಗಾರುಡಿಗ, ಗೊಂದಳಿ, ಇನ್ನು ಮುಂತಾದ ಜಾತಿಗಳಿದ್ದು, ರಾಜ್ಯದ ಜನಸಂಖ್ಯೆಯಲ್ಲಿ ಪ್ರವರ್ಗ-1 ರ ಜಾತಿಗಳ ಜನರು ಒಟ್ಟು ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇದ್ದಾರೆ ಎಂದರು. ಈ ಅತಿ ಹಿಂದುಳಿದ ಜಾತಿಗಳ ಜನರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಮತ್ತು ರಾಜಕೀಯವಾಗಿ ಅತಿ ಹಿಂದುಳಿದಿದ್ದು ಇವರ ನ್ಯಾಯಬದ್ಧ ಹಕ್ಕುಗಳನ್ನು ಪಡೆಯಲು ಈ ಒಕ್ಕೂಟ ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಈ ಜನರನ್ನು ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಮತ್ತು ತಾಲ್ಲೂಕುಗಳಲ್ಲಿ ಸಂಘಟಿಸುತ್ತ ಬಂದಿದೆ. ರಾಜ್ಯದ ಒಟ್ಟು 224 ವಿಧಾನ ಸಭಾ ಕ್ಷೇತ್ರದ, ಕನಿಷ್ಠ 90 ವಿಧಾನ ಸಭಾ ಕ್ಷೇತ್ರಗಳಲ್ಲಿ ಮತ್ತು ರಾಜ್ಯದ 6 ಲೋಕ ಸಭಾ ಕ್ಷೇತ್ರಗಳಲ್ಲಿ ಪ್ರವರ್ಗ-1 ರ ಜಾತಿಗಳ ಮತದಾರರು ನಿರ್ಣಾಯಕರಾಗಿದ್ದಾರೆ. ಈ ಪ್ರವರ್ಗ-1 ರ ಜಾತಿಗಳ ಜನರು ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಒಂದುಗೂಡಿ ಸಂಘಟಿತರಾದಲ್ಲಿ, ಪ್ರಸ್ತುತ ರಾಜ್ಯದ, 32 ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರವರ್ಗ-1 ರ ಜಾತಿಯ ಮತದಾರರೇ ಬಹು ಸಂಖ್ಯೆಯಲ್ಲಿ ಇರುವುದರಿಂದ ಈ ಕ್ಷೇತ್ರಗಳಲ್ಲಿ ಪ್ರವರ್ಗ-1 ರ ಜಾತಿಯ ಅಭ್ಯರ್ಥಿಗಳು ತಮ್ಮ ಸ್ವಂತ ಬಲದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಒಕ್ಕೂಟದ ಬೆಂಬಲ ಪಡೆದು ಶಾಸಕರಾಗಬಹುದಾಗಿದೆ. ಇಂತಹ ಈ ಪ್ರವರ್ಗ-1 ರ ಜಾತಿಗಳ ಜನರ ನ್ಯಾಯಯುತ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮೌಲಾಲಿ,ಚಿದಾನಂದಪ್ಪ,ಧನರಾಜ್,ತಿಮ್ಮಪ್ಪ ಯಾದವ್, ಸೂರ್ಯ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

0 Comments