ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರ ನಿರಂತರವಾಗಿ ನಿತ್ಯ ಡೀಸೆಲ್ ಪೆಟ್ರೋಲ್ ಬೆಲೆ ಏರಿಕೆ ಮಾಡುವುದರ ಮೂಲಕ ಜನರ ಜೀವಕ್ಕೆ ಕೊಡಲಿಪೆಟ್ಟು ಹಾಕುತ್ತಿದೆ ಎಂದು ನಗರದಲ್ಲಿ 111 (ನೂರ ಹನ್ನೊಂದು) ರೂ ಪೆಟ್ರೋಲ್ ದರ ಏರಿಕೆಯಾಗಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಸಾಂಕೇತಿಕವಾಗಿ ಪೆಟ್ರೋಲ್ ಉಚಿತವಾಗಿ ವಿತರಿಸುವ ಮೂಲಕ ಕೇಂದ್ರ ಸರ್ಕಾರದ ಬೆಲೆ ಏರಿಕೆಯನ್ನು ಖಂಡಿಸಿ ವಿನೂತನ ಪ್ರತಿಭಟನೆ ನಡೆಸಲಾಯಿತು.
ಡೀಸೆಲ್ ಪೆಟ್ರೋಲ್ ಬೆಲೆ ಏರಿಕೆಯಿಂದ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯೂ ಸಹ ಏರಿಕೆಯಾಗಿದೆ. ಚುಣಾವಣೆಗೋಸ್ಕರ ಸೀಮಿತವಾಗಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ಸಾರ್ವಜನಿಕರ ಹಿತವನ್ನು ಮರೆತು ನಿತ್ಯ ದರ ಏರಿಕೆ ಮಾಡುವುದರ ಮೂಲಕ ಸಾರ್ವಜನಿಕರ ಜೀವನಕ್ಕೆ ಅಪಾಯವನ್ನು ತಂದಿದೆ ಎಂದು ಕಾಂಗ್ರೆಸ್ ಮುಖಂಡ ಎಸ್. ಮನೋಹರ್ ತಿಳಿಸಿದರು.
ನರೇಂದ್ರ ಮೋದಿ ದೇಶದ ಪ್ರಧಾನಿಯಾದ ನಂತರ ಕಪ್ಪು ಹಣ ತರಲಿಲ್ಲ ಯಾರ ಖಾತೆಗೂ ಹದಿನೈದು ಲಕ್ಷ ಹಣ ಹಾಕಲಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ ಇಳಿಯಲಿಲ್ಲ, ನೀಡಿದ್ದ ಎಲ್ಲ ಭರವಸೆಗಳು ಸುಳ್ಳಾಗಿವೆ, ಕೇಂದ್ರ ಬಿಜೆಪಿ ಸರ್ಕಾರ ತೊಲಗದೆ ಹೋದರೆ ಜನರು ಜೀವನ ಸಾಗಿಸುವುದೇ ಅತ್ಯಂತ ಕಷ್ಟಕರವಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರದ ಬೆಲೆ ಏರಿಕೆಯನ್ನು ಖಂಡಿಸಿ ಪೆಟ್ರೋಲ್ ಬಂಕ್ ನಲ್ಲಿ ಉಚಿತವಾಗಿ ಸಾಂಕೇತಿಕವಾಗಿ ಪೆಟ್ರೋಲ್ ವಿತರಿಸುವ ಮೂಲಕ ನರೇಂದ್ರ ಮೋದಿಯ ಬೆಲೆ ಏರಿಕೆ ನೀತಿಯನ್ನು ಖಂಡಿಸಲಾಯಿತು ಎಂದು ಮಾಹಿತಿ ನೀಡಿದರು.
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ನಡೆದ ಈ ವಿನೂತನ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ವೆಂಕಟೇಶ್, ಆದಿತ್ಯ, ಹೇಮರಾಜ್, ಪುಟ್ಟರಾಜು, ಮಂಜುನಾಥ್ ಚಂದ್ರಶೇಖರ್, ನವೀನ್, ಸೂಪ್ರಾಜ್, ಪ್ರಶಾಂತ್ ಹಾಗೂ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
.jpeg)


0 Comments