Ticker

6/recent/ticker-posts

Ad Code

Responsive Advertisement

ಆಮ್‌ ಆದ್ಮಿ ಪಾರ್ಟಿಗೆ ಭಾಸ್ಕರ್‌ ರಾವ್‌ ಸೇರ್ಪಡೆ

ಆಮ್‌ ಆದ್ಮಿ ಪಾರ್ಟಿ ನಾಯಕರಾದ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹಾಗೂ ಡಿಸಿಎಂ ಮನೀಷ್‌ ಸಿಸೋದಿಯಾ ಸಮ್ಮುಖದಲ್ಲಿ, ನಿವೃತ್ತ ಎಡಿಜಿಪಿ ಭಾಸ್ಕರ್‌ ರಾವ್‌ರವರು ಪಕ್ಷಕ್ಕೆ ಸೇರ್ಪಡೆಯಾದರು.










ಎಎಪಿಯ ದೆಹಲಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಮನೀಷ್‌ ಸಿಸೋದಿಯಾ, “ಶಿಕ್ಷಣ, ಆರೋಗ್ಯ, ಉದ್ಯೋಗ, ಸಾರಿಗೆ ಇನ್ನಿತರೆ ಕ್ಷೇತ್ರದಲ್ಲಿ ದೆಹಲಿಯ ಕೇಜ್ರಿವಾಲ್‌ ಸರ್ಕಾರ ತಂದಿರುವ ಬದಲಾವಣೆಯನ್ನು ಭಾಸ್ಕರ್‌ ರಾವ್‌ರವರು ಗಮನಿಸುತ್ತಿದ್ದರು. ದೆಹಲಿಯಲ್ಲಾಗಿರುವ ಬದಲಾವಣೆಯು ದೇಶದೆಲ್ಲೆಡೆ ವಿಸ್ತರಿಸಬೇಕೆಂದು ಅವರು ಬಯಸಿದರು. ಆದ್ದರಿಂದಲೇ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಭಾಸ್ಕರ್‌ ರಾವ್‌ರವರು ಪೊಲೀಸ್‌ ಕಮಿಷನರ್‌ ಆಗಿದ್ದರೂ, ʻಜನಸಾಮಾನ್ಯರ ಕಮಿಷನರ್‌ʼ ಎಂದೇ ಖ್ಯಾತರಾಗಿದ್ದರು. ಇವರ ಸೇರ್ಪಡೆಯಿಂದ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಪಕ್ಷ ಇನ್ನಷ್ಟು ಬಲಗೊಳ್ಳುವ ವಿಶ್ವಾಸವಿದೆ” ಎಂದು ಹೇಳಿದರು.

ನಿವೃತ್ತ ಎಡಿಜಿಪಿ ಭಾಸ್ಕರ್‌ ರಾವ್‌ ಮಾತನಾಡಿ, “ಹಿಂದೊಮ್ಮೆ ದೆಹಲಿಗೆ ಬಂದಾಗ ಇಲ್ಲಿನ ಟ್ಯಾಕ್ಸಿ ಡ್ರೈವರ್‌ರೊಬ್ಬರು ಸರ್ಕಾರಿ ಶಾಲೆಗಳು ಭಾರೀ ಅಭಿವೃದ್ಧಿ ಹೊಂದಿವೆ ಎಂದು ಹೇಳಿದರು. ನಾನು ಶಾಲೆಗಳನ್ನು ಪರಿಶೀಲಿಸಿದೆ. ಶಾಲೆಗಳಷ್ಟೇ ಅಲ್ಲದೇ ಆರೋಗ್ಯ ಕೇಂದ್ರಗಳು ಕೂಡ ಆಧುನೀಕರಣಗೊಂಡಿರುವುದು ಕಂಡುಬಂದಿತು. ಇಲ್ಲಿನ ಸರ್ಕಾರವು ಸಾಮಾನ್ಯ ಜನರಿಗೆ ಅತ್ಯಂತ ಹತ್ತಿರವಾಗಿದೆ. ಕರ್ನಾಟಕದಲ್ಲೂ ಇದೇ ಮಾದರಿಯ ಸರ್ಕಾರ ಆಡಳಿತಕ್ಕೆ ಬರಬೇಕು. ಕರ್ನಾಟಕದ ಗ್ರಾಮ ಪಂಚಾಯತಿಗಳಿಂದ ವಿಧಾನಸೌಧದ ತನಕ ಎಲ್ಲವೂ ಬದಲಾಗಬೇಕಿದೆ” ಎಂದು ಹೇಳಿದರು.

“ಕರ್ನಾಟಕದ ಜನರು ಬದಲಾವಣೆ ಬಯಸುತ್ತಿದ್ದಾರೆ. ಬೆಂಗಳೂರನ್ನು ಜ್ಞಾನದ ರಾಜಧಾನಿ ಎಂದು ಕರೆಯಲಾಗುತ್ತದೆ. ಕರ್ನಾಟಕ ಹಾಗೂ ಬೆಂಗಳೂರು ಉತ್ತಮ ಆಡಳಿತವನ್ನು ಪಡೆಯಲು ಅರ್ಹವಾಗಿದೆ. ಆದರೆ ಆಡಳಿತ ನಡೆಸುವ ರಾಜಕಾರಣಿಗಳು ಸರಿಯಿಲ್ಲದ ಕಾರಣ ಕರ್ನಾಟಕದ ಜನರಿಗೆ ಉತ್ತಮ ರಸ್ತೆ, ಉತ್ತಮ ಶಾಲೆ, ಉತ್ತಮ ಆಸ್ಪತ್ರೆ ಮುಂತಾದ ಸೌಲಭ್ಯಗಳು ಸಿಗುತ್ತಿಲ್ಲ. ಆಮ್‌ ಆದ್ಮಿ ಪಾರ್ಟಿಯಿಂದ ಮಾತ್ರ ಕರ್ನಾಟಕದ ಬದಲಾವಣೆ ಸಾಧ್ಯ” ಎಂದು ಭಾಸ್ಕರ್‌ ರಾವ್‌ ಹೇಳಿದರು.

ಪಕ್ಷದ ಕರ್ನಾಟಕದ ಉಸ್ತುವಾರಿ ರೋಮಿ ಭಾಟಿ, ಕರ್ನಾಟಕದ ಚುನಾವಣಾ ಉಸ್ತುವಾರಿ ದಿಲೀಪ್‌ ಪಾಂಡೆ, ಕರ್ನಾಟಕ ಎಎಪಿ ಅಧ್ಯಕ್ಷರಾದ ಪೃಥ್ವಿ ರೆಡ್ಡಿಯವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಬೆಂಗಳೂರು ನಗರ ಎಎಪಿ ಅಧ್ಯಕ್ಷ ಮೋಹನ್‌ ದಾಸರಿ , ವಿಜಯ್ ಶಾಸ್ತ್ರಿಮಠ ,ರಾಜೀವ್ ಟೋಪಣ್ಣವರ ಹಾಗೂ ರಾಜ್ಯದ ಅನೇಕ ನಾಯಕರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement