ಕೊಪ್ಪಳ, ಏ. 21: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿಯ ಸಂಘ ಪರಿವಾರ ಸೇರಿಕೊಂಡು ರಾಜ್ಯದಲ್ಲಿ ನಡೆಸುತ್ತಿರುವದು ಕೇವಲ ರಾಜಕೀಯ ಸಂಘರ್ಷ, ಇದು ಚುನಾವಣೆಯ ಸಿದ್ಧತೆಯ ಭಾಗ ಎಂದು ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಕಟುವಾಗಿ ಟೀಕಿಸಿದ್ದಾರೆ.
ಬಿಜೆಪಿ ಕಳೆದ 8 ವರ್ಷಗಳಲ್ಲಿ ಹೇಳಿದ್ದು, ಜನರಿಗೆ ಕೊಟ್ಟ ಆಶ್ವಾಸನೆ ಎಲ್ಲವೂ ಭೋಗಸ್ ಆಗಿದ್ದು, ಸುಳ್ಳಿನ ಸಾಮ್ರಾಜ್ಯ ಎಂಬುದು ದೇಶದ ಜನರಿಗೆ ಗೊತ್ತಾಗಿದೆ, ಆದ್ದರಿಂದ ಹಿಂದೂ ಮುಸ್ಲಿಂ ಸಂಘರ್ಷದಲ್ಲಿ ತಮ್ಮ ಅಧಿಕಾರದ ದಾಹ ತೀರಿಸಿಕೊಳ್ಳುವ ಆಲೋಚನೆಯಲ್ಲಿ ಇದ್ದು, ಅದರ ಭಾಗವಾಗಿ ಹಿಜಾಬ್, ವ್ಯಾಪಾರ, ಹಲಾಲ್, ಆಜಾನ್ ಮೊದಲಾದ ವಿಷಯಗಳನ್ನು ಎತ್ತಿ ಹಿಂದೂ ಮತ ಬ್ಯಾಂಕ್ ಮಾಡಿಕೊಳ್ಳಲು ಅಹಿಂದ ವರ್ಗವನ್ನೇ ಟಾರ್ಗೆಟ್ ಮಾಡಿದೆ.
ಸತ್ತರೆ ದಲಿತ ಹಿಂದುಳಿದ ವರ್ಗದ ಯುವಕರು ಸಾಯಲಿ, ಅದರ ಮೇಲೂ ರಾಜಕಾರಣ ಮಾಡಬಹುದು ಎಂಬು ದುರಾಲೋಚನೆಯ ಭ್ರಷ್ಟ ನೀಚ ಸರಕಾರ ಇಂದು ದೇಶ ಆಳುತ್ತಿವೆ. ಆ ಪಕ್ಷ ಕೇವಲ ದೇಶಪ್ರೇಮವನ್ನು ತಮ್ಮ ಭಾಷಣಕ್ಕೆ ಸೀಮಿತಗೊಳಿಸಿದ್ದಾರೆ ಹೊರತು ಪಾಲನೆ ಮಾಡುವದಿಲ್ಲ. ಯಾವುದೇ ಧರ್ಮ ಹಿಂಸೆ ಮಾಡಿ ಅಧಿಕಾರ ಪಡೆಯಿರಿ ಎಂದು ಹೇಳಿಲ್ಲ, ಹಿಂದೂ ಎನ್ನುವದು ಒಂದು ಆಚರಣೆಯ ಪದ್ಧತಿ ಹೊರತು ಧರ್ಮವಲ್ಲ. ಒಸಾಹತುಶಾಯಿ, ಅಧಿಕಾರಶಾಯಿ ಮತ್ತು ಬಂಡವಾಳಶಾಯಿ ಪಕ್ಷ ಬಿಜೆಪಿ ಅತ್ಯಂತ ಭ್ರಷ್ಟ ಮತ್ತು ಧೂರ್ತ ಪಾರ್ಟಿಯಾಗಿದೆ.
ಒಂದಷ್ಟು ಮಾಧ್ಯಮಗಳನ್ನು ಖರೀದಿಸಿ ಅವರ ಮೂಲಕ ಜನರಿಗೆ ಮಂಕು ಬೂದಿ ಎರಚುವ ಕೆಲಸ ನಿರಂತರವಾಗಿ ಮಾಡುತ್ತಿದ್ದು, ಅದ್ಯಾವುದರ ಪರಿವೇ ಇಲ್ಲದ ಸಾಮಾನ್ಯ ಮುಗ್ಧ ಜನ ಬಲಿಯಾಗುತ್ತಿದ್ದಾರೆ. ಹಿಂದಿನ ಸರಕಾರ ನೀಡಿದ ಎಲ್ಲಾ ಯೋಜನೆಗಳನ್ನು ಮಣ್ಣುಪಾಲು ಮಾಡಿ ದಲಿತರಿಗೆ ಕೊಟ್ಟ ಹಣವನ್ನೂ ಬಿಡದೇ ನುಂಗಿ ನೀರು ಕುಡಿದ ಇವರು ಕೇವಲ ಮೋಸ ಮಾಡುತ್ತಿದ್ದು, ಜನರಿಗೆ ಬರುವ ದಿನಗಳಲ್ಲಿ ಎಳೆ ಎಳೆಯಾಗಿ ಬಿಚ್ಚಿಡುವ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಕೇವಲ ಒಂದು ರಾಜಕೀಯ ಪಕ್ಷವಲ್ಲ, ಅದು ರಾಷ್ಟವನ್ನು ಇಂತಹ ದುಷ್ಟರಿಂದ ಕಾಪಾಡುವ ಸಂಘಟನೆ. ಅದಕ್ಕಾಗಿ ಅದನ್ನು ನಿರಂತರವಾಗಿ ಟೀಕಿಸಿ ಜನರಿಂದ ದೂರ ಮಾಡುವ ಪ್ರಯತ್ನ ಮಾಡಲಾಗುತ್ತಿದೆ.
ಬಿಜೆಪಿಯ ಪ್ರಚೋದನೆಗಳಿಗೆ ಬಲಿಯಾಗಬಾರದು, ನೀವು ಸಂಘರ್ಷಕ್ಕೆ ಇಳಿಯುವ ಮುನ್ನ ನಿಮ್ಮ ಜೊತೆಗೆ ಇರುವವರು ಯಾರು, ಎಡಿ ರೂಂಲ್ಲಿ ಕುಳಿತು ನಿಮ್ಮನ್ನು ಬೀದಿಗೆ ನಿಲ್ಲಿಸಿದವರು ಯಾರು ಎಂದು ಯೋಚಿಸಿ ಹೆಜ್ಜೆ ಇಡಿ ಎಂದು ಅಹಿಂದ ವರ್ಗದ ಜನರಿಗೆ ಎಚ್ಚರಿಸಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಬಿಜೆಪಿ ಕೇವಲ ತಾಂತ್ರಿಕವಾಗಿ ಚುನಾವಣೆಗಳನ್ನು ಗೆಲ್ಲುತ್ತಿದ್ದು, ಅದನ್ನು ಮೀರಿ ಈ ಭಾರಿ ಕಾಂಗ್ರೆಸ್ ಗೆಲುವಿನ ದಡ ಸೇರಿ ಅಧಿಕಾರ ಹಿಡಿಯುವ ಮೂಲಕ ಅಹಿಂದ ವರ್ಗದ ಎಲ್ಲಾ ಯೋಜನೆಗಳನ್ನು ಮರಳಿ ಪ್ರಾರಂಭಿಸುವ ಮತ್ತು ಎಲ್ಲಾ ವರ್ಗದ ಶೋಷಿತ ಮತ್ತು ಹಿಂದುಳಿದ ಜನರಿಗೆ ಸಮಾನ ಅವಕಾಶ ಕೊಟ್ಟು ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಕಾಪಾಡುವ ಕೆಲಸ ಮಾಡುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 Comments