ರಾಜ್ಯ ಬಿಜೆಪಿ ಸರ್ಕಾರ ಈ ವರ್ಷದ ಪರಿಶಿಷ್ಟ ಜಾತಿ ಮತ್ತು ವರ್ಗದ ಎಸ್ಸಿ ಎಸ್ ಪಿ ಮತ್ತು ಟಿಎಸ್ಪಿ ಯೋಜನೆಯ 7885.32 ಕೋಟಿ ರುಪಾಯಿಗಳನ್ನು ಇತರ ಇಲಾಖೆಗಳಿಗೆ ವರ್ಗಾವಣೆ ಮಾಡಿರುವುದನ್ನು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಎಂ. ಕೃಷ್ಣ ಮೂರ್ತಿ ಖಂಡಿಸಿದ್ದಾರೆ.
ಈ ಮೊದಲು ಜಲ ಜೀವನ್ ಮಿಷನ್ ಯೋಜನೆಗೆ 3 ಸಾವಿರ ಕೋಟಿ ಹಣವನ್ನು ನೀಡಿದ್ದು, ಈಗ ಇತರ ಇಲಾಖೆಗಳಿಗೆ 7885.32 ಕೋಟಿ ಹಣವನ್ನು ವರ್ಗಾಯಿಸಿರುವುದು ಈ ಬಿಜೆಪಿ ಸರ್ಕಾರದ ದಲಿತ ವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಈ ಹಿಂದಿನ ಸರ್ಕಾರಗಳು ಸಹ ವರ್ಗಾಯಿಸಿವೆ ಎಂಬ ಸಬೂಬು ಹೇಳಿರುವುದು ನಾಚಿಕೆಗೇಡಿನ ಸಂಗತಿ.
ಹಿಂದಿನ ಸರ್ಕಾರಗಳು ತಪ್ಪು ಮಾಡಿದ್ದರೆ, ಅದೇ ತಪ್ಪನ್ನು ಬಿಜೆಪಿ ಸರ್ಕಾರ ಮುಂದುವರಿಸಬೇಕೆಂಬ ಕಡ್ಡಾಯ ನಿಯಮವಿದೆಯೇ? ಎಂದು ಪ್ರಶ್ನಿಸಿದ್ದಾರೆ.
2015 - 16 ರಿಂದ ಜಾರಿಯಿರುವ ಎಸ್ ಸಿ ಎಸ್ ಪಿ ಮತ್ತು ಟಿಎಸ್ಪಿ ಕಾಯ್ದೆಯು ಪ್ರಾಮಾಣಿಕವಾಗಿ ಈವರೆಗೆ ಜಾರಿಯಾಗಿದ್ದರೆ, ರಾಜ್ಯದಲ್ಲಿ ಪರಿಶಿಷ್ಟ ವರ್ಗಗಳು ಬಡತನ ಮತ್ತು ನಿರುದ್ಯೋಗದಿಂದ ಮುಕ್ತರಾಗಿ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗಿರುತ್ತಿತ್ತು.
ಆದರೆ ಈ ಕಾಯ್ದೆಯಲ್ಲಿರುವ 7 (ಡಿ) ಕಾಲಂ ಸರ್ಕಾರಗಳಿಗೆ ಯೋಜನೆಯ ಹಣವನ್ನು ಬೇರೆ ಇಲಾಖೆಗಳಿಗೆ ವರ್ಗಾಯಿಸುವ ಅಧಿಕಾರವನ್ನು ನೀಡಿದೆ. ಇದನ್ನು ದುರುಪಯೋಗಪಡಿಸಿಕೊಂಡಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜನತಾದಳ ನೇತೃತ್ವದ ಸರಕಾರಗಳು ನಿರಂತರವಾಗಿ ಪರಿಶಿಷ್ಟ ವರ್ಗಗಳಿಗೆ ಅನ್ಯಾಯವೆಸಗುತ್ತಾ ಬಂದಿವೆ.
ಈ 7(ಡಿ) ಕಾಲಂ ರದ್ದುಗೊಳಿಸಬೇಕೆಂದು ದಲಿತ ಸಂಘಟನೆಗಳು ಮತ್ತು ಮುಖಂಡರು ನಿರಂತರವಾಗಿ ಹೋರಾಡುತ್ತಿದ್ದರೂ ಸಿದ್ದರಾಮಯ್ಯ, ಎಚ್. ಡಿ. ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸರ್ಕಾರಗಳು ಸ್ಪಂದಿಸಿಲ್ಲ.
ಇದರ ಅರ್ಥ ಕಾಂಗ್ರೆಸ್, ಬಿಜೆಪಿ ಮತ್ತು ಜನತಾ ದಳ ಪಕ್ಷಗಳ ಸರ್ಕಾರಗಳು ಮತ್ತು ನಾಯಕರು ಕೇವಲ ಓಟಿಗಾಗಿ ಪರಿಶಿಷ್ಟ ಜಾತಿಗಳನ್ನು ಉದ್ಧಾರಮಾಡುವ ಮಾತುಗಳನ್ನಾಡುತ್ತಾರೆಯೇ ಹೊರತು, ಪ್ರಾಮಾಣಿಕವಾಗಿ ಪರಿಶಿಷ್ಟ ವರ್ಗಗಳ ಏಳಿಗೆಯನ್ನು ಮಾಡಲು ಸಾಧ್ಯವಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ಪರಿಶಿಷ್ಟ ವರ್ಗಗಳಿಗೆ ಆಗುತ್ತಿರುವ ಅನ್ಯಾಯವನ್ನು ರಾಜ್ಯದ ಏಳು ಬಿಜೆಪಿ ಸಂಸದರು ಮತ್ತು ಎಲ್ಲಾ ಪಕ್ಷಗಳಿಂದ ಗೆದ್ದಿರುವ 53 ಪರಿಶಿಷ್ಟ ಜಾತಿ ಮತ್ತು ವರ್ಗದ ಶಾಸಕರು ಸರ್ಕಾರದ ಈ ನೀತಿಯನ್ನು ಪ್ರತಿಭಟಿಸಿ ನ್ಯಾಯ ಕೊಡಿಸಬೇಕು.
ಈ ಸರ್ಕಾರ ವರ್ಗಾವಣೆ ಮಾಡಿರುವ ಹಣವನ್ನು ಪರಿಶಿಷ್ಟ ಭೂರಹಿತರ, ವಸತಿ ಮತ್ತು ನಿವೇಶನ ರಹಿತರ ಹಾಗೂ ನಿರುದ್ಯೋಗಿಗಳ ಸ್ವಾವಲಂಬಿ ಯೋಜನೆಗಳಿಗೆ ಈ ಹಣವನ್ನು ಯೋಜನೆಗಳಿಗೆ ವಾಪಸ್ಸು ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಇಲ್ಲದಿದ್ದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಪರಿಶಿಷ್ಟ ವರ್ಗಗಳ ಜೊತೆ ನಿಂತು ಹೋರಾಡಬೇಕು ಎಂದು ಬಿಎಸ್ಪಿ ಒತ್ತಾಯಿಸುತ್ತದೆ ಎಂದಿದ್ದಾರೆ.
ಇಲ್ಲದಿದ್ದರೆ ರಾಜ್ಯದಾದ್ಯಂತ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಂಸದರು ಮತ್ತು ಶಾಸಕರ ಮನೆಗಳ ಮುಂದೆ ದಲಿತ ಸಂಘಟನೆಗಳ ಜೊತೆಗೂಡಿ ಬಹುಜನ ಸಮಾಜ ಪಾರ್ಟಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
0 Comments