Ticker

6/recent/ticker-posts

Ad Code

Responsive Advertisement

500 ಚಿತ್ರಗಳ ಹಿರಿಯ ಚಲನಚಿತ್ರ ಕಲಾವಿದ-ಶಂಕರಭಟ್

ಈಗ ಜೀವಮಾನ ಸಾಧನೆಗಾಗಿ ರಾಷ್ಟ್ರೀಯ ಕಲಾವಿಭೂಷಣ ರಾಷ್ಟ್ರ ಪ್ರಶಸ್ತಿ ಪುರಸ್ಕøತ 
 ಪರಿಚಯ : ಕಲೆ ಯಾರನ್ನುಯಾವಾಗ ಎಲ್ಲಿಂದ ಹೇಗೆ ಕೈಬೀಸಿ ಕರೆಯುತ್ತದೆ ಎಂಬುದು ಅನೂಹ್ಯ. ಪ್ರತಿಯೊಬ್ಬರಲ್ಲೂ ಒಬ್ಬ ಕಲಾವಿದ ವ್ಯಕ್ತ ಅವ್ಯP À್ತಆಗಿರುತ್ತಾನೆ. ಅದಕ್ಕೆ ಪೂರಕ ವಾತಾವರಣ ಅವಕಾಶ ಸಿಕ್ಕಾಗ ಕಲಾಕುಡಿ ಹೆಮ್ಮರವಾಗಿ ಬೆಳೆಯುತ್ತದೆ. ಇದಕ್ಕೆ ಪ್ರತಿಭೆ ಪ್ರಯತ್ನದೊಂದಿಗೆ ಅದೃಷ್ಟವೂ ಬೇಕು. ಶ್ರೀ ಶಂಕರಭಟ್‍ರವರು ಮಲೆನಾಡಿನ ಅಭಿಜಾತ ಕಲಾವಿದ ಎಂದರೆ ಅತ್ಯುಕ್ತಿಯಲ್ಲ. 
 ಕಳೆದ 50 ವರ್ಷಗಳಿಂದ ನಾಟಕ, ಸಿನಿಮಾ, ಕಿರುತೆರೆ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ, ಕಲಾರಸಿಕರ ಮನದಲ್ಲಿ ಒಂದು ಶಾಶ್ವತ ಸ್ಥಾನವನ್ನು ಗಳಿಸಿದ್ದಾರೆ.
 ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಬಳಿಯ ಪುಟ್ಟ ಗ್ರಾಮ ಕಲಗಾರು ಇವರ ಹುಟ್ಟೂರು. ತಂದೆ ಶ್ರೀ ಮಹಾಬಲೇಶ್ವರ ಭಟ್ಟರು, ತಾಯಿ ಶ್ರೀಮತಿ ಸಾವಿತ್ರಮ್ಮ. ಮೂವರು ಸಹೋದರಿಯರು ಒಬ್ಬ ತಮ್ಮ. ಭಟ್ಟರು ಕೃಷಿ ಕುಟುಂಬದ ತುಂಬು ಸಂಸಾರದಲ್ಲಿ ಏರಿಳಿತವನ್ನು ಕಂಡುಂಡು ಬೆಳೆದವರು. ತಂದೆ-ತಾಯಿ ನೀಡಿದ ಸಂಸ್ಕಾರ ಹಾಕಿಕೊಟ್ಟ ಅಡಿಪಾಯ ಗಟ್ಟಿಯಾಗಿತ್ತು. ಸಿದ್ದಾಪುರ ಬಳಿಯ ತಟ್ಟಿಕೈನ ಶ್ರೀಮತಿ ಗೀತಾಭಟ್ ಇವರ ಪತ್ನಿ. ಬಾಳ ಸಂಗಾತಿ ಆಗಮನದ ನಂತರ ಇವರ ಬದುಕಿನ ದಿಕ್ಕು ಇನ್ನೊಂದು ಮಗ್ಗಲಿಗೆ ಹೊರಳಿತು, ಅರಳಿತು. ಇವರ ಮಗ ಅಕ್ಷತ್ ಭಟ್, ಸೊಸೆ ರಂಜಿತಾ. ಇಬ್ಬರೂ ಅಮೇರಿಕಾದಲ್ಲಿ ಎಂ.ಎಸ್. ಮುಗಿಸಿ ಅಲ್ಲೇ ಉತ್ತಮ ಉದ್ಯೋಗದಲ್ಲಿರುವರು. ಮಗಳು ಅಮೃತಾ ಭಟ್ ಹಾಗೂ ಅಳಿಯ ನಿರಂಜನ್ ಇಬ್ಬರೂ ಇಂಜಿನಿಯರ್. ಬೆಂಗಳೂರಿನಲ್ಲಿ ವೃತ್ತಿ ನಿರತರು. ಪತ್ನಿ ಶ್ರೀಮತಿ ಗೀತಾ ಭಟ್‍ರವರ ಪ್ರೋತ್ಸಾಹ, ಸಹಕಾರ ಪ್ರೇರಣೆ ಶ್ರೀ ಶಂಕರಭಟ್‍ರವರ ಸಾಧನೆಯ ವೇಗೋತ್ಕರ್ಷ..! ಕಲೆ ಅವರರಕ್ತದಲ್ಲಿ ಹರಿದು ಬಂದಿದ್ದಾಗಿದೆ. 
 ಹೇಳಿ ಕೇಳಿ ಮಲೆನಾಡು. ಅಲ್ಲಿನ ಬೆಟ್ಟಗುಡ್ಡ, ಮರಗಿಡ ಬಳ್ಳಿ, ನದಿ ತೊರೆಝರಿ ಜಲಪಾತ ತುಂಪುಗಾಳಿ, ಹಕ್ಕಿಗಳ ಚಿಲಿಪಿಲಿ, ನಯನ ಮನೋಹರ ಪ್ರಕೃತಿ ಸೌಂದರ್ಯ, ಹಳ್ಳಿಯ ಜನಪದ ಕಲೆ, ನಾಟಕ, ಯಕ್ಷಗಾನ, ಚಂಡೆನಾದ, ಬಾಲ್ಯದ ಶಾಲಾ ದಿನಗಳಲ್ಲೇ ಇವರೊಳಗಿನ ಕಲಾವಿದನ ಜಾಗ್ರತಗೊಳಿಸಿತ್ತು. ಪ್ರಾಥಮಿಕ, ಮಾದ್ಯಮಿಕ, ಪ್ರೌಢಶಾಲಾ ವಿದ್ಯಾಭ್ಯಾಸ ತಾಳಗುಪ್ಪದ ನಳಂದ ಶಾಲೆಯಲ್ಲಿ, ಪಿಯುಸಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ. 
ನಂತರ ಬಿ.ಕಾಂ. ಪದವಿ ಓದಲು ಬಂದು ಸೇರಿದ್ದು ಎಂಇಎಸ್ ಕಾಲೇಜು ಬೆಂಗಳೂರು. 
ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದುಎಂ.ಇ.ಎಸ್. ಕಾಲೇಜು ಸೇರಿದ ಮೇಲೆ ಇವರೊಳಗಿನ ಕಲಾವಿದನಿಗೆ ಹೆಚ್ಚಿನ ಅವಕಾಶ ಕಲ್ಪಿತವಾಯಿತು. ಅಂದಿನ ದಿನದಲ್ಲಿ ಕಾಲೇಜ್‍ನ ಸಹ-ಪ್ರಿನ್ಸಿಪಲ್‍ಆಗಿದ್ದ ಹಿರಿಯ ಸಾಹಿತಿಗಳು, ನಾಟಕಕಾರರು, ವಿಮರ್ಶಕರು ಆದ ಶ್ರೀ ಕಾ.ವೆಂ. ರಾಜಗೋಪಾಲ್‍ರವರ ಮಾರ್ಗದರ್ಶನದಲ್ಲಿ ರಂಗಭೂಮಿ ಪ್ರವೇಶಿಸಿದರು. 


ಕಾಲೇಜು ದಿನಗಳಲ್ಲಿ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಉತ್ತಮ ನಟನೆಗಾಗಿ ಮೂರು ಬಾರಿ ‘ಉಲ್ಲಾಳ್ ಶೀಲ್ಡ್’ ಪಡೆದ ಪ್ರತಿಭಾವಂತರು. ಬ್ಯಾಂಕ್ ಉದ್ಯೋಗಿಯಾಗಿ ಇದ್ದುಕೊಂಡೆ ಹಿರಿತೆರೆ ಮತ್ತು ಕಿರುತೆರೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಯುಕೊ ಬ್ಯಾಂಕ್ ನಲ್ಲಿ 38 ವರ್ಷ ಸೇವೆ ಸಲ್ಲಿಸಿ ಅಧಿಕಾರಿಯಾಗಿ ನಿವೃತ್ತಿ ಹೊಂದಿದರು. ಇಂದು 65 ರ ವಯೋಮಾನದಲ್ಲೂ ಭಟ್ಟರು ಯುವಕರಂತಿದ್ದಾರೆ. ಸೋದರ ಮಾವ ದೊಂಬೆ ಶಿವರಾಮಯ್ಯನವರ ಪ್ರೇರಣೆಯಲ್ಲಿ ಶಂಕರಭಟ್‍ರವರು ರಂಗಭೂಮಿ ಪ್ರವೇಶ ಪಡೆದರು. ಮಾವರಿಂದಲೇ ಪರಿಚಿತರಾದ ಶ್ರೀಯುತರಾದ ಗಿರೀಶ್‍ಕಾರ್ನಾಡ, ಬಿ.ವಿ.ಕಾರಂತ್, ಜಿ.ವಿ.ಅಯ್ಯರ್, ಟಿ.ಎಸ್.ನಾಗಾಭರಣ, ಆರ್.ನಾಗೇಶ್. ಟಿ.ಎನ್.ಸೀತಾರಾಮ. ಡಾ. ದೊಡ್ಡರಂಗೇಗೌಡರು, ಶ್ರೀನಿವಾಸಪ್ರಭು, ಶ್ರೀನಿವಾಸಮೂರ್ತಿ, ಲೋಕನಾಥ, ಅನಂತನಾಗ್, ಶಂಕರನಾಗ್, ರಮೇಶಭಟ್, ಸುನೀಲ್ ಪುರಾಣಿಕ್, ಸುಂದರ್‍ರಾಜ್ ಮುಂತಾದವರೊಂದಿಗೆ ನಾಟಕದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಕಸಪಾ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್‍ಜೋಷಿ ಯವರಿಂದ ಬಹು ಉಪಕೃತರಾಗಿದ್ದಾರೆ. ಆಕಾಶವಾಣಿ ನಾಟಕಗಳು ಹಾಗೂ ಹಲವಾರು ಗೀತ ಚಿತ್ರ, ಜಾಹಿರಾತುಗಳಲ್ಲಿ ಕೂಡ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಖ್ಯಾತ ಚಿತ್ರನಟ ಅನಂತನಾಗ್‍ರವರ ಮೂಲಕ ಪರಿಚಿತರಾದ ಖ್ಯಾತ ನಿರ್ದೇಶಕ ಶ್ರೀ ಕೆ.ವಿ.ಜಯರಾಮ್ ಅವರು “ಶ್ವೇತ ಗುಲಾಬಿ” ಚಿತ್ರದಲ್ಲಿ ಅವಕಾಶ ನೀಡುವ ಮೂಲಕ ಚಿತ್ರರಂಗ ಪ್ರವೇಶಿಸಲು ಅನುವು ಮಾಡಿಕೊಟ್ಟರು. ಕನ್ನಡ ಚಿತ್ರಗಳಲ್ಲಿ ನಟಿಸುತ್ತಿದ್ದ ಶ್ರೀ ಶಂಕರಭಟ್, ಯು.ಆರ್. ಅನಂತಮೂರ್ತಿಯವರ ಕಥೆ ‘ಘಟಶ್ರಾದ್ಧ’ ಹಿಂದಿಯಲ್ಲಿ ‘ದೀಕ್ಷಾ’ ಚಲನಚಿತ್ರವಾದಾಗ ಶ್ರೀ ನಾನಾ ಪಾಟೇಕರ್ ಎದುರು ಶಾಲಾಮಾಸ್ತರ್ ಪಾತ್ರ ನಿರ್ವಹಿಸಿ ತಾನೊಬ್ಬ ಸಮರ್ಥ ಕಲಾವಿದ ಎಂಬುದನ್ನು ನಿರೂಪಿಸಿದರು. ಇದಕ್ಕೆ ಮೂಲ ಕಾರಣರಾದ ಸಂಕಲನಕಾರ-ನಿರ್ದೇಶಕರಾದ ಶ್ರೀ ಗುರುದತ್ತರವರನ್ನು ಭಟ್ ಕೃತಜ್ಞತೆಯಿಂದ ನೆನೆಯುತ್ತಾರೆ. ಎನ್.ಎಫ್.ಡಿ.ಸಿ. ಮತ್ತು ದೂರದರ್ಶನ ಸಹಭಾಗಿತ್ವದಲ್ಲಿ ತಯಾರಾದ ಶ್ರೀ ಅರುಣ್‍ಕೌಲ್ ನಿರ್ದೇಶನದ ಈ ಹಿಂದಿ ಚಿತ್ರದಲ್ಲಿ ನಾನಾ ಪಾಟೇಕರ್, ಕೆ.ಕೆ.ರೈನಾ, ವಿಜಯಕಶ್ಯಪ್, ರಾಜಶ್ರೀ ಸಾವಂತ್, ಮನೋಹರ್ ಸಿಂಗ್ ಇವರ ಜೊತೆಯಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು. ‘ದೀಕ್ಷಾ’ ಹಿಂದಿ ಚಿತ್ರಕ್ಕೆ 1994 ನೇ ಸಾಲಿನ ಉತ್ತಮ ಹಿಂದಿ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿ ಹಾಗೂ ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳೂ ಬಂದಿವೆ.
 ಜಿ.ವಿ. ಅಯ್ಯರ್ ನಿರ್ದೇಶನದ ಸ್ವರ್ಣಕಮಲ ಪ್ರಶಸ್ತಿ ಪಡೆದ ಆದಿಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯ, ನಾಟ್ಯರಾಣಿ ಶಾಂತಲ, ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಜಿ.ವಿ. ಅಯ್ಯರ್ ನಿರ್ದೇಶನದಲ್ಲಿ ‘ಕೃಷ್ಣಾವತಾರ’ ಎಂಬ ಹಿಂದಿ ಧಾರಾವಾಹಿಯಲ್ಲೂ, “ಅದೃಷ್ಟದ ಹೋರಾಟ” ಕನ್ನಡ ಧಾರಾವಾಹಿಯಲ್ಲೂ ಅಭಿನಯಿಸಿದ್ದಲ್ಲದೇ ‘ತಿರುವಳ್ಳವರ್ ಚರತಂ’ ಎಂಬ ತಮಿಳು ಧಾರಾವಾಹಿ ಕೆಲವು ಕಂತುಗಳಲ್ಲಿ ತಮ್ಮ ನಟನಾಚಾತುರ್ಯವನ್ನು ಮೆರೆದಿದ್ದಾರೆ. ಉಪೇಂದ್ರ ನಿರ್ದೇಶನದ “ಶ್” ಚಿತ್ರದಲ್ಲಿ ಖಳನಟನಾಗಿ ಮಿಂಚಿದ್ದು, ಉಪೇಂದ್ರ, ರಕ್ತಕಣ್ಣೀರು, ಹೆಚ್.ಟು.ಓ, ಹುಡುಗಾಟ, ಅಂತಿಮ ತೀರ್ಪು, ಬೇಟೆ, ಅಧಿಪತಿ, ಧೃವತಾರೆ, ಪರಶುರಾಮ, ಭಾಗ್ಯದ ಲಕ್ಷ್ಮೀ ಬಾರಮ್ಮ, ಶಬ್ದವೇದಿ, ತಾಳಿಕಟ್ಟೋ ಶುಭವೇಳೆ, ಗಟ್ಟಿಮೇಳ, ಹುಬ್ಬಳ್ಳಿ, ಪಟ್ಟಣಕ್ಕೆ ಬಂದ ಪುಟ್ಟ, ರಾಣಿ ಮಹಾರಾಣಿ, ಮಾಲಾಶ್ರೀ ಮಾಮಾಶ್ರೀ, ರಶ್ಮಿ, ರಂಜಿತ, ಮತ್ಸರ, ಪ್ರೊಫೆಸರ್ ನಂದಿ, ಸವ್ಯಸಾಚಿ, ಪಾವನಗಂಗಾ, ತೆನಾಲಿರಾಮ, ಗಂಡುಗಲಿ ಕುಮಾರರಾಮ, ಮಿಲನ ಅರಿಶಿನಕುಂಕುಮ, ರಂಭೆ ಊರ್ವಶಿ ಮೇನಕೆ, ರಜನಿ, ವಿಷ್ಣುಸೇನೆ, ನಮ್ಮೂರ ರಾಜ, ಜನನಾಯಕ, ನಿನಗಾಗಿ, ನಿನಗೋಸ್ಕರ, ಮಹಾಕ್ಷತ್ರಿಯ, ಕತ್ತೆಗಳು ಸಾರ್ ಕತ್ತೆಗಳು, ಕೋತಿಗಳು ಸಾರ್ ಕೋತಿಗಳು, ಸೀತಾರಾಮ ಕಲ್ಯಾಣ, ಯುವರತ್ನ, ನಾಗರಿಕ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಜನಮನದಲ್ಲಿ ಉಳಿದಿದ್ದಾರೆ. ಕನ್ನಡದ ಕಣ್ಮಣಿ ಡಾ. ರಾಜಕುಮಾರ್, ಕಲ್ಯಾಣ್‍ಕುಮಾರ, ರಾಜೇಶ್, ಬಾಲಕೃಷ್ಣ, ಅಶ್ವತ್, ಪಂಢರಿಬಾಯಿ, ಜಯಂತಿ, ಭಾರತಿ, ಆರತಿ, ವಜ್ರಮುನಿ, ತೂಗುದೀಪ ಶ್ರೀನಿವಾಸ, ಅನಂತನಾಗ್, ಶಂಕರನಾಗ್, ಆದಿಯಾಗಿ ಡಾ.ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಡಾ. ಪುನೀತ್‍ರಾಜ್‍ಕುಮಾರ್, ದರ್ಶನ್, ಸುದೀಪ್, ಗಣೇಶ್ ಹೀಗೆ ಇಂದಿನ ಹೊಸ ತಲೆಮಾರು ಸೇರಿದಂತೆ ಕಳೆದ ನಾಲ್ಕು ತಲೆಮಾರಿನ ನಟರೊಂದಿಗೆ, ಹಾಗೂ ನಾಲ್ಕು ತಲೆಮಾರಿನ ಹಿರಿ-ಕಿರಿಯ ನಿರ್ದೇಶಕರ ಚಿತ್ರಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಶ್ರೀ ಶಂಕರಭಟ್‍ರವರಿಗೆ ಇದೆ. 
ದೂರದರ್ಶನ ಕರ್ನಾಟಕದಲಿ ್ಲಕನ್ನಡ ಕಾರ್ಯಕ್ರಮ ಪ್ರಾರಂಭ ಮಾಡಿದಾಗ ಕಿರುತೆರೆಯಲ್ಲಿ ತೊಡಗಿಕೊಂಡು ಮುಂದೆ “ಸಿಹಿ ಕಹಿ” “ನಮ್ಮ ನಮ್ಮಲ್ಲಿ” “ಅಮ್ಮ” ಧಾರಾವಾಹಿಗಳಲ್ಲಿ ತಮ್ಮ ನಟನೆಯ ಛಾಪು ಮೂಡಿಸಿದರು. ಆ ನಂತರ ತಿರುಗಿ ನೋಡದೆ ಹತ್ತಾರು ವಾರದ ಧಾರಾವಾಹಿಗಳಲ್ಲಿ ನಟಿಸಿದರು. ಮುಂದೆ ಮೆಗಾ ಧಾರಾವಾಹಿ ಆರಂಭವಾದಾಗಿನಿಂದಲೂ ‘ಮನೆತನ’ ‘ಜನನಿ’ ‘ಕಾವ್ಯಾಂಜಲಿ’ ‘ಕನ್ಯಾದಾನ’ ‘ಕುಂಕುಮ ಭಾಗ್ಯ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದರು. ಮುಂದೆಶ್ರೀ ಬ.ಲ. ಸುರೇಶ್ ರಚನೆ-ನಿರ್ದೇಶನದಲ್ಲಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ “ಗುರುರಾಘವೇಂದ್ರ ವೈಭವ” ದಲ್ಲಿ ಕೇಶವಾಚಾರ್ಯ ಪಾತ್ರದಲ್ಲಿ ಮನೋಜ್ಣವಾಗಿ ಅಭಿನಯಿಸಿದರು. ಶ್ರೀ ಟಿ.ಎನ್. ಸೀತಾರಾಮ್ ನಿರ್ದೇಶನದ “ಮುಕ್ತ ಮುಕ್ತ, ಅರುಂಧತಿ, ಪಾಪ ಪಾಂಡು, ಲಕ್ಷ್ಮೀಬಾರಮ್ಮ’ “ಮುಂಜಾವು” ಧಾರಾವಾಹಿ, ಹರೀಶ್ ಆಚಾರ್ಯ ನಿರ್ದೇಶನದಲ್ಲಿ “ಶ್ರೀ ನಾರಾಯಣಗುರು ವಿಜಯದರ್ಶನ” ದಲ್ಲಿ ನಾರಾಯಣ ಗುರು ತಂದೆ ಪಾತ್ರದಲ್ಲಿ. “ಅರುಂಧತಿ” ಧಾರಾವಾಹಿಯಲ್ಲಿ ಶ್ರೀಶೈಲ ದೇವಸ್ಥಾನದ ಅರ್ಚಕರನ ಪಾತ್ರದಲ್ಲಿ ಅಭಿನಯ. ಶ್ರೀನಿವಾಸ ಕಲ್ಯಾಣದಲ್ಲಿ ಕುಬೇರನಾಗಿ, ಆಶ್ವಿನಿ ನಕ್ಷತ್ರದಲ್ಲಿ ಆಯಿ ಗಂಡನಾಗಿ, ಲಕ್ಷ್ಮೀಬಾರಮ್ಮದಲ್ಲಿ ಜ್ಯೋತಿಷ್ಯಿಯಾಗಿ, “ಸರಯೂ” ಧಾರಾವಾಹಿಯಲ್ಲಿ ನಾಯಕಿ ತಂದೆ ರಾಘವ ಶರ್ಮನಾಗಿ ಸುಮಾರು 400 ಕಂತುಗಳಲ್ಲಿ ಅಭಿನಯ. ಹೀಗೆ ಸಾಲು ಸಾಲಾಗಿ ಟಿ.ವಿ. ಧಾರಾವಾಹಿಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಪ್ರಸ್ತುತ ಪ್ರಸಾರವಾಗುತ್ತಿರುವ ‘ಪುಟ್ಟಕ್ಕನ ಮಕ್ಕಳು, ಕಾದಂಬರಿ, ರಾಧಿಕಾ’ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.
 ಇದುವರೆಗೂ ಸುಮಾರು 5000 ಧಾರಾವಾಹಿ ಕಂತುಗಳು, 500 ಕ್ಕೂ ಹೆಚ್ಚು ಚಲನಚಿತ್ರಗಳು ಹಾಗೂ 200ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುವರು. ಚಲನಚಿತ್ರ, ರಂಗಭೂಮಿ, ಕಿರುತೆರೆಯಲ್ಲಿ 50 ವರ್ಷಗ ಸೇವೆ ಇವರದಾಗಿದೆ. ಇವರ ಪ್ರತಿಭೆಯನ್ನು ಗುರುತಿಸಿದ ಬೆಂಗಳೂರು ಮಹಾನಗರ ಪಾಲಿಕೆ ಪ್ರತಿಷ್ಟಿತ ‘ಕೆಂಪೇಗೌಡ’ ಪ್ರಶಸ್ತಿ ನೀಡಿ ಗೌರವಿಸಿದೆ. 
ಇವರ ಶ್ರೇಷ್ಠ ಅಭಿನಯಕ್ಕಾಗಿ ‘ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ’, ‘ಬಸವ ವಿಭೂಷಣ ರಾಷ್ಟ್ರೀಯ ಪ್ರಶಸ್ತಿ’, ‘ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ’ ಕನ್ನಡ ಸಾಹಿತ್ಯ ಪರಿಷತ್ತು ನೀಡಿದ “ಪ್ರೊ. ಮರಿದೇವರು ದತ್ತಿ ಪ್ರಶಸ್ತಿ” ಹೀಗೆ ನಾನಾ ಸಂಸ್ಥೆಗಳು, ಮಠ ಮಂದಿರಗಳು, ಸೇವಾ ವಲಯಗಳು ಕೊಡಮಾಡುವ ಮೂವತ್ತಕ್ಕೂ ಹೆಚ್ಚು ಉನ್ನತ ಪ್ರಶಸ್ತಿ ಪುರಸ್ಕಾರಗಳು ಇವರನ್ನು ಹುಡುಕಿಕೊಂಡು ಬಂದಿವೆ.
 ಮೃದು ಸ್ವಭಾವ, ಮಧುರ ಮಾತು, ನಗುನಗುತ್ತ ಎಲ್ಲರೊಂದಿಗೆ ಬೆರೆಯುವ ಹೊಂದಿಕೊಳ್ಳುವ ಗುಣ, ಅಭಿನಯದಲ್ಲಿ ತನ್ಮಯತೆ, ಪಾತ್ರದ ಗಾತ್ರದ ಬಗ್ಗೆ ಚಿಂತಿಸದೆ ಪರಕಾಯ ಪ್ರವೇಶ ಮಾಡಿ ಪಾತ್ರಕ್ಕೆ ನ್ಯಾಯ ಒದಗಿಸುವ ಮನ, ವೃತ್ತಿ ಮತ್ತು ಪ್ರವೃತ್ತಿ ಹೊಂದಾಣಿಕೆ ಮಾಡಿಕೊಂಡು ಹೋಗುವ ಕ್ರಮ, ಶ್ರಮ ಲೆಕ್ಕಿಸದೇ ತೊಡಗಿಕೊಳ್ಳುವಿಕೆ.. ಈ ಎಲ್ಲಾ ಗುಣಗಳೂ ಶ್ರೀ ಶಂಕರಭಟ್‍ರವರಿಗೆ ಕನ್ನಡ ರಂಗಭೂಮಿ, ಚಿತ್ರರಂಗ, ಕಿರುತೆರೆಯಲ್ಲಿ ಗೌರವಾನ್ವಿತ ಸ್ಥಾನ ತಂದುಕೊಟ್ಟಿದೆ ಎಂದರೆ ತಪ್ಪಿಲ್ಲ. ಹಲವು ಆಯಾಮಗಳಲ್ಲಿ ಇವರೊಬ್ಬ ಅದ್ಭುತ ಕಲಾವಿದರು. ಇಂಥ ಶ್ರೇಷ್ಠ ಕಲಾವಿದರನ್ನು ಗುರುತಿಸಿ, ಇವರಿಗೆ ಬೆಂಗಳೂರಿನ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ತನ್ನ 30ನೇ ವರ್ಷದ ವಾರ್ಷಿಕೋತ್ಸವ ಸವಿನೆನಪಿಗಾಗಿ ಹಮ್ಮಿಕೊಂಡಿರುವ ಜನಪದ ಸಂಭ್ರಮ ಕಾರ್ಯಕ್ರಮದಲ್ಲಿ, 
ರಮೇಶ ಸುರ್ವೆ ನೇತೃತ್ವದಲ್ಲಿ





























ಇವರ ಜೀವಮಾನ ಕಲಾ ಸಾಧನೆಗಾಗಿ “ರಾಷ್ಟ್ರೀಯ ಕಲಾ ವಿಭೂಷಣ ರಾಷ್ಟ್ರಪ್ರಶಸ್ತಿ” ನೀಡುತ್ತಿರುವುದು ಪ್ರಶಸ್ತಿಗೆ ಮತ್ತು ಅವರಿಗೆ ಸಂದ ಗರಿಯಾಗಿದೆ. ಕೊನೆಯ ಮಾತು!.. ಇವರ ಕಲಾವಂತಿಕೆಯನ್ನು ನಮ್ಮ ಚಿತ್ರರಂಗ ಇನ್ನೂ ಸಂಪೂರ್ಣವಾಗಿ ಬಳಸಿಕೊಂಡಿಲ್ಲ. ಈ ಕೊರಗು ಅವರಿಗೂ ಇದೆ, ನಮಗೂ ಇದೆ. ಶ್ರೀ ಶಂಕರಭಟ್‍ರವರು ಮುಂದಿನ ದಿನಗಳಲ್ಲಿ ವಿಶೇಷ ವಿಶಿಷ್ಠ ಸಶಕ್ತ ಪಾತ್ರಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಮಿಂಚಲಿ ಎಂಬುದು ಎಲ್ಲರ ಆಶಯ.

 ಲೇಖನ : ಬ.ಲ.ಸುರೇಶ
 ಸಾಹಿತಿಗಳು-ಚಲನಚಿತ್ರ ನಿರ್ದೇಶಕರು ಸುರ್ವೆ ನ್ಯೂಸ್ ಸೋರ್ಸ್, ಬೆಂಗಳೂರು

Post a Comment

0 Comments

Ad Code

Responsive Advertisement