ಬೆಂಗಳೂರು: ತುಮಕೂರು ಜಿಲ್ಲೆಯ ಪಳವಲ್ಲಿ ಕಟ್ಟೆ ಬಳಿ ಖಾಸಗಿ ಬಸ್ ಅಪಘಾತಕ್ಕೀಡಾಗಿ ಎಂಟು ಪ್ರಯಾಣಿಕರು ಧಾರುಣವಾಗಿ ಸಾವನ್ನಪ್ಪಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಅಪಘಾತಕ್ಕೆ ಸಾರಿಗೆ ಇಲಾಖೆಯ ಕರ್ತವ್ಯ ಲೋಪ ಆಗಿದೆ ಎಂದಿದ್ದಾರೆ.
ತುಮಕೂರು ಜಿಲ್ಲೆಯ ಪಳವಲ್ಲಿ ಕಟ್ಟೆ ಬಳಿ ಖಾಸಗಿ ಬಸ್ ಅಪಘಾತಕ್ಕೀಡಾಗಿ ಎಂಟು ಪ್ರಯಾಣಿಕರು ಸಾವನ್ನಪ್ಪಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ.
ಕೂಡಲೇ ಸಾರಿಗೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯ ಕೈಗೊಳ್ಳಬೇಕು. ದುರಂತದಲ್ಲಿ ಸಾವನ್ನಪ್ಪಿದವರಿಗೆ ದೊಡ್ಡ ಪ್ರಮಾಣದ ಪರಿಹಾರ ನೀಡಬೇಕು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಅವರಿಗೂ ಪರಿಹಾರ ಕೊಡಬೇಕು.
ಖಾಸಗಿ ಬಸ್ ಗಳ ಗುಣಮಟ್ಟ, ಪರವಾನಗಿ, ತಾಂತ್ರಿಕ ಕ್ಷಮತೆ, ವೇಗದ ಚಾಲನೆ ಇತ್ಯಾದಿಗಳ ಬಗ್ಗೆ ನಿರಂತರ ದೂರು ಬರುತ್ತಲೇ ಇದ್ದರೂ ಸರಕಾರವು ನಿರ್ಲಕ್ಷ್ಯ ಧೋರಣೆಯಲ್ಲೇ ಇದೆ. ಗ್ರಾಮೀಣ ಸಾರಿಗೆಯನ್ನು ಉತ್ತಮಪಡಿಸುವ ಸರಕಾರದ ಮಾತುಗಳು ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದೆ.
ಅತಿವೇಗ ಹಾಗೂ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಸಿಕ್ಕಿದ್ದು, ಬಸ್ಸಿನ ಟಾಪ್ ಮೇಲೆಯೇ 40ಕ್ಕೂ ಹೆಚ್ಚು ಪ್ರಯಾಣಿಕರು ಕೂತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಇದು ಸಾರಿಗೆ ಇಲಾಖೆ ನಿರ್ಲಕ್ಷ್ಯದ ಪರಮಾವಧಿ.
ಈ ಬಗ್ಗೆ ಸರಕಾರ ಕಠಿಣ ಕ್ರಮ ವಹಿಸಬೇಕು. ಕರ್ತವ್ಯ ಲೋಪದ ಎಸಗಿರುವ ಸಾರಿಗೆ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು.
ದುರಂತದಲ್ಲಿ ಜೀವ ಕಳೆದುಕೊಂಡ ಎಲ್ಲ ಅಮೂಲ್ಯ ಜೀವಗಳಿಗೆ ನನ್ನ ಶ್ರದ್ಧಾಂಜಲಿ ಹಾಗೂ ಎಲ್ಲ ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
0 Comments