ಬೆಂಗಳೂರು : ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಬ್ಬಿಗೆರೆ ಪೈಪ್ ಲೈನ್ ಮುಖ್ಯರಸ್ತೆಯಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 19 ನೇ ವರ್ಷದ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾತಃ ಸುಪ್ರಭಾತ ಸೇವೆಯಿಂದ ಆರಂಭಗೊಂಡು ಕುಂಭ ಉಪ ಕುಂಭ ಆರಾಧನೆ, ನವಗ್ರಹ ಆರಾಧನೆ, ಪ್ರಧಾನ ದೇವತಾ ಕುಂಭ ಆರಾಧನೆ, ಗಣಹೋಮ, ನವಗ್ರಹ ಹೋಮ, ಮೂರ್ತಿ ಹೋಮ, ಉಪಯುಕ್ತ ಹೋಮ, ನೃಸೂಕ್ತ ಶ್ರೀ ಸೂಕ್ತ ಹೋಮ, ಶ್ರೀ ಲಕ್ಷ್ಮೀ ಹೃದಯ ಹೋಮ ಮಹಾ ಪೂರ್ಣಾಹುತಿ ಮುಂತಾದ ಧಾರ್ಮಿಕ ವಿಧಿ ವಿಧಾನಗಳು ಶಾಸ್ತ್ರೋಕ್ತವಾಗಿ ಶ್ರೀದೇವಿ ಆರಾಧಕರಾದ ತಿಪ್ಪೇಸ್ವಾಮಿ ಕೆ.ಎಂ., ಧರ್ಮಾಧಿಕಾರಿಗಳಾದ ಬಿ. ಅಣ್ಣಯ್ಯಪ್ಪನವರ ನೇತೃತ್ವದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಬಿ.ಕೆ. ಲಕ್ಷ್ಮೀನಾರಾಯಣಚಾರ್ಯ (ಬಾಬು) ರವರ ಮಾರ್ಗದರ್ಶನದಂತೆ ಪುರೋಹಿತರುಗಳು ಶಾಸ್ತ್ರೋಕ್ತವಾಗಿ ಪೂಜಾ ಹವನ ಹೋಮಾದಿ ಕೈಂಕರ್ಯಗಳನ್ನು ನೆರವೇರಿಸಿದರು.
ಇದೇ ವೇಳೆ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ಸಹ ಹಮ್ಮಿಕೊಳ್ಳಲಾಗಿತ್ತು. ದೇವಿಯ ಪ್ರೇರಣೆಯ ಮೇರೆಗೆ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕರು ಆರ್. ಮಂಜುನಾಥ, ಜೆಡಿಎಸ್ ಮುಖಂಡರು ಕೆ.ಸಿ.ವೆಂಕಟೇಶ್ (ದೇವೇಗೌಡರು), ಶ್ರೀಮತಿ ಸುಮಿತ್ರ ಟಿ., ಶ್ರೀಮತಿ ಶಾಂತಲಾ, ಶ್ರೀಮತಿ ಎಸ್. ಸುನಂದ, ನಿಶಾಂತ್ ರಾವ್ ಮುಂತಾದವರೊಡನೆ ಇನ್ನೂ ಹಲವರು ವಾರ್ಷಿಕೋತ್ಸವ ಸಮಾರಂಭದ ಯಶಸ್ವಿ ನಿರ್ವಹಣೆಯಲ್ಲಿ ನೆರವಾದರು.
ಭಕ್ತಾದಿಗಳು ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಆಚರಿಸಲಾದ ಮಹೋತ್ಸವದಲ್ಲಿ, ಬೆಂಗಳೂರು ಮಾತ್ರವಲ್ಲದೆ ನೆರೆಹೊರೆಯ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.
0 Comments