ಬೆಂಗಳೂರು,ಮಾ.19- ಇಂದಿರಾ ಕ್ಯಾಂಟೀನ್‍ಗಳನ್ನು ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರಿಗೆ ಕಳೆದ 10 ತಿಂಗಳಿನಿಂದ ಬಿಲ್ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ನೂರಾರು ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್‍ಗಳನ್ನು ನಿರ್ವಹಣೆ ಮಾಡುತ್ತಿರುವ ಗುತ್ತಿಗೆ ಸಂಸ್ಥೆಗಳಿಗೆ ಕೋಟ್ಯಾಂತರ ರೂ. ಬಿಲ್ ಪಾವತಿ ಬಾಕಿ ಉಳಿದಿದೆ. ಕಳೆದ 10 ತಿಂಗಳಿನಿಂದ 22 ಕೋಟಿ ರೂ.ಗಳನ್ನು ಗುತ್ತಿಗೆದಾರರಿಗೆ ನೀಡಬೇಕಾಗಿದೆ.
ಬಾಕಿ ಹಣ ನೀಡದ ಹಿನ್ನೆಲೆಯಲ್ಲಿ ಕ್ಯಾಂಟೀನ್‍ಗಳನ್ನು ಮುಚ್ಚಲು ಗುತ್ತಿಗೆ ಸಂಸ್ಥೆಗಳು ಚಿಂತನೆ ನಡೆಸಿದ್ದು, ಇದರಿಂದ ನೂರಾರು ಕಾರ್ಮಿಕರು, ಅಡುಗೆ ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇಲ್ಲಿ ಕಡು ಬಡವರು, ಕೂಲಿ ಕಾರ್ಮಿಕರು, ವ್ಯಾಪಾರಿಗಳು, ಆಟೊ, ಟ್ಯಾಕ್ಸಿ ಚಾಲಕರಿಗೆ ರಿಯಾಯಿತಿ ದರದಲ್ಲಿ ಮೂರು ಹೊತ್ತು ಊಟ, ತಿಂಡಿ ನೀಡಲಾಗುತ್ತಿದೆ.
ಮತ್ತೊಂದೆಡೆ, ಗುತ್ತಿಗೆದಾರರು ಒಂದೊಮ್ಮೆ ಬಡವರ ಹಸಿವು ನೀಗಿಸುತ್ತಿರುವ ಇಂದಿರಾ ಕ್ಯಾಂಟೀನ್‍ಗಳನ್ನು ಮುಚ್ಚಿದರೆ, ಸಾವಿರಾರು ಮಂದಿಗೆ ತೊಂದರೆಯಾಗಲಿದೆ. ಈ ಕುರಿತು ಪ್ರತಿಕ್ರಿಯಿಸಿದ ಗುತ್ತಿಗೆದಾರರೊಬ್ಬರು, ಸಂಸ್ಥೆಗೆ 10 ತಿಂಗಳಿನಿಂದ 22 ಕೋಟಿ ಬಾಕಿ ಹಣ ಬರಬೇಕಿದೆ. ಅಲ್ಲದೇ ಕಳೆದ ವರ್ಷದ ಪೌರಕಾರ್ಮಿಕರ ನಾಲ್ಕು ಕೋಟಿ ರೂ. ಬಿಲ್ ಬಾಕಿ ಇದೆ. ಹೀಗೆ, ಬಿಲ್ ಪಾವತಿ ಮಾಡದಿದ್ದರೆ ಬಾಗಿಲು ಮುಚ್ಚಬೇಕಾಗುತ್ತದೆ ಎಂದರು.
ಅದೇ ರೀತಿ, 800-900 ಜನ ಕೆಲಸಕ್ಕೆ ಇದ್ದು, ವೇತನ ಕೊಡಲು ಸಾಧ್ಯವಾಗುತ್ತಿಲ್ಲ. ಹಲವರು ಕೆಲಸ ಬಿಟ್ಟು ಹೋಗುತ್ತಿದ್ದಾರೆ ಎಂದೂ ಬೇಸರ ವ್ಯಕ್ತಪಡಿಸಿದರು. ತಗ್ಗಿದ ಗ್ರಾಹಕರು: ದಿನೇ ದಿನೇ ಕ್ಯಾಂಟೀನ್‍ಗಳಲ್ಲಿ ಉಪಹಾರ ಸೇವಿಸುವವರ ಸಂಖ್ಯೆ ಕಡಿಮೆಯಾಗಿದೆ. ಕೆಲವೊಂದು ಕ್ಯಾಂಟೀನ್‍ಗಳಲ್ಲಿ ಬೆಳಗ್ಗೆ 200, ಮಧ್ಯಾಹ್ನ 100 ಮತ್ತು ರಾತ್ರಿ 50 ಮಂದಿಯಷ್ಟೇ ಆಹಾರ ಸೇವಿಸುತ್ತಿದ್ದಾರೆ.
ಕೊರೋನಾ ಭೀತಿಯಿಂದಾಗಿ ಹಲವು ಕ್ಯಾಂಟೀನ್‍ಗಳತ್ತ ಜನ ಸುಳಿಯುತ್ತಿಲ್ಲ. ಹೀಗಾಗಿ, ಹಲವು ಕ್ಯಾಂಟೀನ್‍ಗಳು ಗ್ರಾಹಕರಿಲ್ಲದೆ ಭಣಗುಡುತ್ತಿವೆ. ಪಾಲಿಕೆಯಿಂದ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಗುತ್ತಿಗೆ ಸಂಸ್ಥೆಗಳು ದಿನಸಿ, ತರಕಾರಿ ಪೂರೈಸುತ್ತಿದ್ದವರಿಗೆ ಲಕ್ಷಾಂತರ ರೂ. ಬಾಕಿ ಉಳಿಸಿಕೊಂಡಿವೆ.
ಅದೇ ರೀತಿ, ನೀರು, ಒಳಚರಂಡಿ ಸಂಪರ್ಕ ಕಡಿತ ಗುತ್ತಿಗೆ ಸಂಸ್ಥೆಗಳು ಜಲಮಂಡಳಿಗೆ ಕೋಟ್ಯಂತರ ರೂ. ಶುಲ್ಕ ಬಾಕಿ ಉಳಿಸಿಕೊಂಡಿವೆ. ಹಾಗಾಗಿ, ಜಲಮಂಡಳಿಯು ಅಡುಗೆ ಮನೆ ಹಾಗೂ ಕ್ಯಾಂಟೀನ್‍ಗಳಿಗೆ ನೀರು, ಒಳಚರಂಡಿ ಸಂಪರ್ಕವನ್ನು ಕಡಿತಗೊಳಿಸಿದೆ. ಆದ್ದರಿಂದ ಗುತ್ತಿಗೆ ಸಂಸ್ಥೆಗಳು ಖಾಸಗಿ ಟ್ಯಾಂಕರ್‍ಗಳಿಂದ ನೀರು ಖರೀದಿಸುತ್ತಿರುವ ಅಂಶವೂ ಗೊತ್ತಾಗಿದೆ.

0 Comments