ಬೌದ್ಧಧರ್ಮದ ಅಪಾಯದಿಂದ ಭಾರತವನ್ನು ಬ್ರಾಹ್ಮಣರು ಕಾಪಾಡಿದ್ದಾರೆ ಎಂಬ ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ಮೂರ್ಖತನದಿಂದ ಕೂಡಿದೆ.
ವಿಶ್ವದಲ್ಲೇ ಜಪಾನ್ ಒಳಗೊಂಡಂತೆ ಸುಮಾರು ನಲವತ್ತಕ್ಕೂ ಹೆಚ್ಚು ರಾಷ್ಟ್ರಗಳು ಭಾರತದ ಬೌದ್ಧಧರ್ಮವನ್ನು ಒಪ್ಪಿಕೊಂಡು ಶಿಕ್ಷಣ, ಉದ್ಯೋಗ, ವಿಜ್ಞಾನ, ಸಂಶೋಧನೆ, ಬಾಹ್ಯಾಕಾಶ, ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಭಾರತಕ್ಕಿಂತ ಅಭಿವೃದ್ಧಿ ಹೊಂದಿವೆ.
ಪ್ರೀತಿ-ಪ್ರೇಮ, ಕರುಣೆ, ಮಮತೆಯ ಜೊತೆಗೆ ವಿಜ್ಞಾನವನ್ನು ತಳಹದಿಯನ್ನಾಗಿ ಹೊಂದಿರುವ ಬೌದ್ಧ ಧರ್ಮ ಕುರಿತು ಅವಿವೇಕತನದಿಂದ ಮಾತನಾಡಿರುವ ಸಚಿವ ಸುಧಾಕರ್ ತಕ್ಷಣ ಕ್ಷಮೆಯಾಚಿಸಬೇಕು ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.
ಇಡೀ ವಿಶ್ವಕ್ಕೆ ನಳಂದ, ತಕ್ಷಶಿಲ ದಂತಹ ಜಗತ್ಪ್ರಸಿದ್ಧ ವಿಶ್ವವಿದ್ಯಾನಿಲಯಗಳನ್ನು ನೀಡಿದ್ದು ಬೌದ್ಧ ಧರ್ಮದ ಕಾಲ.
ವಿಜ್ಞಾನಿ ಐನ್ ಸ್ಟೀನ್ ನಾನು ಯಾವುದೇ ಧರ್ಮವನ್ನು ಒಪ್ಪಿ ಕೊಳ್ಳುವುದಿಲ್ಲ. ಒಂದು ವೇಳೆ ನನಗೆ ಧರ್ಮ ಅನಿವಾರ್ಯವಾದರೆ ವಿಜ್ಞಾನಕ್ಕೆ ಹತ್ತಿರವಾಗಿರುವ ಬುದ್ಧ ಧರ್ಮವನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ ಎಂದಿರುವುದು ಸಚಿವ ಸುಧಾಕರ್ ಗೆ ತಿಳಿದಿಲ್ಲ ಎನಿಸುತ್ತದೆ.
ಸಚಿವರು ಇನ್ನಾದರೂ ಇತಿಹಾಸ ತಿಳಿದುಕೊಂಡು ಮಾತನಾಡಲಿ ಎಂದಿದ್ದಾರೆ. ಅಸ್ಪೃಶ್ಯತೆ, ಜಾತಿ ಮತ್ತು ವರ್ಣವ್ಯವಸ್ಥೆಯನ್ನು ನಿರಾಕರಿಸುವ ಬೌದ್ಧ ಧರ್ಮ ಮನುಷ್ಯ ಕೇಂದ್ರಿತ ಧರ್ಮ. ಧರ್ಮಕ್ಕೆ ಮಾನವರು ಅನಿವಾರ್ಯವೇ ಹೊರತು, ಮನುಷ್ಯರಿಗೆ ಧರ್ಮ ಅನಿವಾರ್ಯವಲ್ಲ ಎಂದು ಸಾರಿದ ಗೌತಮ ಬುದ್ಧ ಇಡೀ ಜಗತ್ತಿನ ಬೆಳಕು ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ.
ಇಂದಿಗೂ ಸಹ ಭಾರತವನ್ನು ಬುದ್ಧ ಮತ್ತು ಬುದ್ಧನ ಧರ್ಮದ ಕಾರಣಕ್ಕಾಗಿ ಇಡೀ ಜಗತ್ತು ಗೌರವಿಸುತ್ತದೆ.
ಚಿಕ್ಕಬಳ್ಳಾಪುರದ ಬ್ರಾಹ್ಮಣರ ಕಾರ್ಯಕ್ರಮದಲ್ಲಿ ಬ್ರಾಹ್ಮಣರನ್ನು ಓಲೈಸಲು ಬೌದ್ಧ ಧರ್ಮವನ್ನು ಅವಹೇಳನ ಮಾಡಿರುವುದು ಖಂಡನೀಯ. ಬೌದ್ಧಧರ್ಮದ ಮಾನವೀಯ ಗುಣಗಳು ಇಂದಿನ ಜಾತಿ-ಧರ್ಮದ ಗಲಭೆಗಳಿಗೆ ಪ್ರಚೋದಿಸುವ ವರಿಗೆ ಹಾಗೂ ಯುದ್ಧ ದಾಹಿಗಳಿಗೆ ಅರ್ಥವಾಗುವುದಿಲ್ಲ. ಸಾಮ್ರಾಟ್ ಅಶೋಕನ ಕಾಲದಲ್ಲಿ ಬ್ರಾಹ್ಮಣರನ್ನು ಒಳಗೊಂಡಂತೆ ಇಡೀ ದೇಶವೇ ಬೌದ್ಧ ಮಯವಾಗಿತ್ತು ಎನ್ನುವ ಸತ್ಯ ಸಚಿವ ಸುಧಾಕರ್ ಗೆ ಇಲ್ಲ ಎನಿಸುತ್ತದೆ.
ಈ ಬಿಜೆಪಿ ಸರ್ಕಾರದ ಮಂತ್ರಿಗಳಿಗೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಭ್ರಾತೃತ್ವ ನೆಲೆಸುವುದು ಇಷ್ಟವಿಲ್ಲ ಎಂದು ಟೀಕಿಸಿದ್ದಾರೆ.
ಆ ಕಾರಣಕ್ಕಾಗಿಯೇ ಒಂದು ಧರ್ಮದ ವಿರುದ್ಧ ಮತ್ತೊಂದು ಧರ್ಮವನ್ನು ಎತ್ತಿಕಟ್ಟುವ ಹಾಗೂ ಹಿಯಾಳಿಸುವ ಕೆಲಸ ಮಾಡುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ಕೃತ್ಯ.
ಭಾರತದ ಸಂವಿಧಾನದ ಪೀಠಿಕೆಯಲ್ಲಿರುವ ಸ್ವಾತಂತ್ರ್ಯ ಸಮಾನತೆ ಭ್ರಾತೃತ್ವ ಎಂಬ ತತ್ವಗಳನ್ನು ಬೌದ್ಧಧರ್ಮದಿಂದ ಪಡೆದುಕೊಂಡಿದ್ದೇವೆ ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದಾರೆ.
ಹಾಗೆಯೇ ಭಾರತದಲ್ಲಿ ಬೌದ್ಧಧರ್ಮ ಸ್ವೀಕರಿಸುವ ಮೂಲಕ, ಪುನರ್ ಮನ್ನಣೆ ದೊರಕಿಸಿಕೊಟ್ಟವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್. ಬೌದ್ಧ ಧರ್ಮದ ಅವಹೇಳನ ಕೊಟ್ಯಂತರ ಬುದ್ಧನ ಅನುಯಾಯಿಗಳಿಗೆ ಹಾಗೂ ಅಂಬೇಡ್ಕರ್ ಅವರಿಗೆ ಮಾಡುವ ಅಪಮಾನ ಸಹ.
ಕೂಡಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ರಾಜ್ಯಪಾಲರು ಸಚಿವ ಸುಧಾಕರ್ ಗೆ ಸೂಕ್ತ ಎಚ್ಚರಿಕೆ ನೀಡಬೇಕೆಂದು ನಮ್ಮ ಪಕ್ಷ ಆಗ್ರಹಿಸುತ್ತದೆ ಎಂದಿದ್ದಾರೆ.
0 Comments