Ticker

6/recent/ticker-posts

Ad Code

Responsive Advertisement

ಸಂಕಷ್ಟದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸರ್ಕಾರದ ವತಿಯಿಂದ ಅಗತ್ಯ ನೆರವು

 ಮಧುಗಿರಿ : ಪ್ರಾಕೃತಿಕ ವಿಕೋಪ ಸೇರಿದಂತೆ ಇನ್ನಿತರೆ ಸಂಕಷ್ಟದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸರ್ಕಾರದ ವತಿಯಿಂದ ಅಗತ್ಯ ನೆರವು ದೊರೆಯಲಿದ್ದು, ಇಂತಹ ಮಕ್ಕಳನ್ನು ಗುರುತಿಸುವ ಕೆಲಸ ಆಗಬೇಕಿದೆ ಎಂದು ಸಿಡಿಪಿಓ ಅನಿತಾ ತಿಳಿಸಿದರು.

ಪಟ್ಟಣದ ತಾ.ಪಂ ಕಚೇರಿ ಆವರಣದಲ್ಲಿರುವ ಸಮಥ್ರ್ಯ ಸೌಧದಲ್ಲಿ ಗುರುವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಾಕೃತಿಕ ವಿಕೋಪ ಹಾಗೂ ಇನ್ನಿತರ ಸಂಕಷ್ಟದಲ್ಲಿರುವ ಮಕ್ಕಳ ಸಮಸ್ಯೆಗಳು ಮತ್ತು ಪುನರ್ವಸತಿ ಯೋಜನೆಗಳು ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕೋವಿಡ್ ಸೇರಿದಂತೆ ಇನ್ನಿತರೆ ಸಂಕಷ್ಟದಲ್ಲಿ ಪೋಷಕ ರನ್ನು ಕಳೆದುಕೊಂಡ ಮಕ್ಕಳು ಸಂಕಷ್ಟಕ್ಕೆ ಸಿಲುಕಿ ಇಂದು ಕೌಟುಂಬಿಕ ದೌಜ್ರ್ಯನ್ಯ, ಬಾಲ್ಯವಿವಾಹದಂತಹ ಗಂಬೀರವಾದ ತೊಂದರೆಗಳನ್ನು ಅನುಭವಿಸುತ್ತಿದ್ದು,  ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವಾಗಬೇಕಿದೆ ಎಂದರು.

ಸಿಪಿಐ ಸರ್ದಾರ್ ಮಾತನಾಡಿ ಕೋವಿಡ್ ಮಹಾಮಾರಿಯಿಂದಾಗಿ ಇಂದು ಬಹಳಷ್ಟು ಕುಟುಂಬಗಳು ತೊಂದರೆಗೀಡಾಗಿದ್ದು, ಪೋಷಕರನ್ನು ಕಳೆದುಕೊಂಡ ಅನೇಕ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಹಾಗೂ ವಿವಿಧ ರೀತಿಯ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಮಕ್ಕಳನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಪುರಸಭೆ ಮುಖ್ಯಾಧಿಕಾರಿ ನಜ್ಮಾ ಮಾತನಾಡಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ  ಕುಟುಂಬದಲ್ಲಿ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಇರುವುದಿಲ್ಲ.  ಇದರಿಂದ ಬಾಲ್ಯವಿವಾಹಕ್ಕೆ ತುತ್ತಾಗುವ ಸಂಭವ ಹೆಚ್ಚಾಗಿರುತ್ತದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರ ಮನವೊಲಿಸಿ ಶಿಕ್ಷಣಕ್ಕೆ ಅಗತ್ಯವಿರುವ ಸವಲತ್ತು ಒದಗಿಸಬೇಕು ಎಂದರು.

ಜಿಲ್ಲೆಯಲ್ಲಿ 608 ಮಕ್ಕಳು ಕೋವಿಡ್ ಸಂಕಷ್ಟದಲ್ಲಿ ತಂದೆ,  ತಾಯಿಯನ್ನು ಕಳೆದುಕೊಂಡಿದ್ದಾರೆ. ಇನ್ನಿತರೆ ಕಾಯಿಲೆಗಳ ಕಾರಣಗಳಿಂದಾಗಿ 1178 ಮಕ್ಕಳು ಪೋಷಕರನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ. 39 ಮಕ್ಕಳು ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡಿದ್ದಾರೆ. ನಮ್ಮ ಸುತ್ತಮುತ್ತಲು ಇಂತಹ ಮಕ್ಕಳು ಕಂಡುಬಂದಲ್ಲಿ ಅವರನ್ನು ಗುರುತಿಸಿ ಮುಖ್ಯಮಂತ್ರಿ ಬಾಲ ಸೇವಾ ಯೋಜನೆ ವತಿಯಿಂದ ಅವರಿಗೆ ಆತ್ಮಸ್ಥೈರ್ಯ ತುಂಬಿ ಶಿಕ್ಷಣವನ್ನು ನೀಡುವುದರ ಜೊತೆಗೆ ಸರ್ಕಾರ ವತಿಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕು ಎಂದು ಮಕ್ಕಳ ಸಂರಕ್ಷಣಾಧಿಕಾರಿ ಶಿವಣ್ಣ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು. 

ಗ್ರೇಡ್ 2 ತಹಶೀಲ್ದಾರ್ ಕಮಲಮ್ಮ ಮಾತನಾಡಿ ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರದ ವತಿಯಿಂದ 1.5 ಲಕ್ಷ  ಪರಿಹಾರ ನೀಡಲಾಗುತ್ತದೆ.  ಇಲಾಖೆಗಳು ಇಂತಹ ಮಕ್ಕಳ ನೆರವಿಗೆ ದಾವಿಸಬೇಕು ಎಂದರು. ಬಿಇಓ ನಂಜುಂಡಯ್ಯ ಮತ್ತು ತರಬೇತಿ ನಿರತ ಶಿಕ್ಷಕರು  ಇದ್ದರು.

Post a Comment

0 Comments

Ad Code

Responsive Advertisement