ಕರ್ನಾಟಕದ ಆಂಧ್ರ ಗಡಿಭಾಗದಿಂದ ಶ್ರೀರಾಮಚಂದ್ರ ಮೂರ್ತಿ ಕೆತ್ತನೆಗೆ ಬೃಹತ್ ಬಂಡೆ ಪುಣ್ಯಕ್ಷೇತ್ರ ಮಂತ್ರಾಲಯಕ್ಕೆ ರವಾನೆ
ಮಧುಗಿರಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅಂತೆಯೇ ದಕ್ಷಿಣದ ಮಂತ್ರಾಲಯದಲ್ಲಿ ಶ್ರೀ ಅಭಯ ರಾಮ ಮಂದಿರ ಹಾಗೂ ಬೃಹತ್ ರಾಮನ ಮೂರ್ತಿ ಪ್ರತಿಷ್ಟಾಪನೆ ಆಗುತ್ತಿದೆ. ಅದಕ್ಕೆ ತಾಲ್ಲೂಕಿನ ಗಡಿಭಾಗ ಮಿಡಿಗೇಶಿ ಹೋಬಳಿಯ ಸರಹದ್ದಿನ ಕೂಗಳತೆ ದೂರದಲ್ಲಿರುವ ರೊಳ್ಳೆ ಮಂಡಲದಿಂದ ಮೂರ್ತಿ ಕೆತ್ತನೆಗೆ ಬೇಕಾದ ಬೃಹತ್ ಕಲ್ಲನ್ನು ಕೊಂಡೊಯ್ಯಲಾಗಿದೆ.
ಇಲ್ಲಿಂದ ಹೋದ ಶಿಲೆ ಮರ್ಯಾದಾ ಪುರುಷೋತ್ತಮನ ಮೂರ್ತಿ ರೂಪ ಪಡೆಯುತ್ತದೆ. ಕೋಟ್ಯಂತರ ಜನರಿಂದ ಆರಾಧಿಸಲ್ಪಡುತ್ತದೆ. ಮರ್ಯಾದೆ ಪುರುಷೋತ್ತಮ ಶ್ರೀರಾಮಚಂದ್ರ ದಕ್ಷಿಣ ಭಾರತದ ಪ್ರಸಿದ್ಧವಾದ ಪುಣ್ಯಕ್ಷೇತ್ರ, ರಾಯರ ಸನ್ನಿಧಿಯಲ್ಲಿ ನಿಂತು ಭಕ್ತಕೋಟಿಗೆ ದರುಶನ ನೀಡಲಿದ್ದಾನೆ.
ಇಲ್ಲಿಂದ ತೆಗೆದುಕೊಂಡು ಹೋದ ಈ ಬೃಹತ್ ಬಂಡೆಯಿಂದ ಶ್ರೀರಾಮಚಂದ್ರನ ಆಕೃತಿ ಅರಳಲಿದೆ.
ಮಧುಗಿರಿ ತಾಲೂಕು ಕರ್ನಾಟಕದ ಗಡಿಭಾಗದಲ್ಲಿರುವ ಮಡಕಶಿರಾ ತಾಲ್ಲೂಕು ರೊಳ್ಳ ಮಂಡಲ್ ಪಿಲ್ಲ ಗುಂಡ್ಲು ಗ್ರಾಮದ ಕ್ವಾರಿಯಿಂದ ತೆಗೆದ 60 ಅಡಿ ಎತ್ತರದ ಬೃಹತ್ ಬಂಡೆಗೆ ಪೂಜೆ ನೆರವೇರಿಸಿ ಸಾಗಾಣೆಗೆ ಚಾಲನೆ ನೀಡಲಾಯಿತು. ಸುಮಾರು 500 ಟನ್ ಗೂ ಅಧಿಕ ತೂಕದ ಬಂಡೆಯನ್ನು 136 ಚಕ್ರಗಳುಳ್ಳ ಲಾರಿ ಮೂಲಕ ಮಡಕಶಿರಾ-ಪಾವಗಡ ಮಾರ್ಗವಾಗಿ ರವಾನಿಸಲಾಯಿತು. ಮಂತ್ರಾಲಯ ತಲುಪಿದ ನಂತರ ವಿಗ್ರಹದ ರೂಪ ಪಡೆದು ಪೂಜೆ ಪುನಸ್ಕಾರ ಮೂಲಕ ಪ್ರತಿಷ್ಠಾಪನೆ ಆಗಲಿದೆ.
ಬೃಹತ್ ಶಿಲಾ ವಿಗ್ರಹ ನಿರ್ಮಾಣಕ್ಕೆ ಸುಮಾರು ಒಂದು ವರ್ಷ ಕಾಲ ಸಮಯಾವಕಾಶ ಬೇಕಾಗಿದೆ. ಬೃಹತ್ ಶಿಲ್ಪಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಅಶೋಕ್ ಗುಡಿಗಾರ್ ಅವರ ಕೈ ಕಲೆಯಲ್ಲಿ ಶ್ರೀರಾಮನ ಮೂರ್ತಿ ಮೂಡಲಿದೆ.
ಶ್ರೀ ಅಭಯ ರಾಮ ಮಂದಿರ ಸೇವಾ ಸಮಿತಿ ವತಿಯಿಂದ ದೇಗುಲ ನಿರ್ಮಾಣ, ಹಾಗೂ ರಾಮರ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ನಡೆಯುತ್ತಿದ್ದು, ಮಧುಗಿರಿ ತಾಲೂಕಿನ ಗೊಂದಿಹಳ್ಳಿ ಮೂಲದ ಬೆಂಗಳೂರಿನ ಶ್ರೀವಾರಿ ಜ್ಯೂವೆಲರ್ಸ್ ಮಾಲೀಕರಾದ ಎಸ್.ವಿ. ರಾಜೇಂದ್ರ ಪ್ರಸಾದ್ ಅವರು ಭಗವಾನ್ ಶ್ರೀ ರಾಮಚಂದ್ರ ದೇವರ ಮೂರ್ತಿಗಾಗಿ ಕೆಂಪು ಮಿಶ್ರಿತ ಹಸಿರು ಶಿಲೆಯನ್ನು ದಾನ ಮಾಡಿದ್ದಾರೆ.
ಈ ಪುಣ್ಯ ಕಾರ್ಯವನ್ನು ಶ್ರೀ ಅಭಯ ರಾಮ ಮಂದಿರ ಸೇವಾ ಸಮಿತಿ. ಅಧ್ಯಕ್ಷರು ಬಿ. ಕೃಷ್ಣಮೂರ್ತಿ. ಕಾರ್ಯದರ್ಶಿಶ್ರೀ ಚೆಂಚಿ ಪಿ. ದ್ವಾರಕನಾಥ್. ಖಜಾಂಚಿಶ್ರೀ ವಿ.ಎಸ್. ಹರೀಶ್. ಸದಸ್ಯರು ಸುಬ್ಬ ನರಸಿಂಹ. ಶ್ರೀನಿವಾಸ್ ರೆಡ್ಡಿ. ಶ್ರೀಮತಿ ಸಪ್ತಾಶರ್ಮ. ಶ್ರೀ ಕೆ.ವಿ. ನಾಗರಾಜ್ ಗುಪ್ತ ಮತ್ತಿತರರಿದ್ದರು.
-ವರದಿ:ನಾಗೇಶ್ ಜೀವಾ ಮಧುಗಿರಿ
0 Comments