Ticker

6/recent/ticker-posts

Ad Code

Responsive Advertisement

ಓಬವ್ವ ಆತ್ಮರಕ್ಷಣಾ ಕಲೆ ತರಬೇತಿಯಿಂದ ವಿದ್ಯಾರ್ಥಿನಿಯರ ಆತ್ಮರಕ್ಷಣೆ ಮಾಡಿಕೊಳ್ಳಲು ಕರೆ : ಸಿ.ಎಂ. ಬೊಮ್ಮಾಯಿ.

 

  ಬೆಂಗಳೂರು, ಫೆಬ್ರವರಿ 06 (ಕರ್ನಾಟಕ ವಾರ್ತೆ): ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ಮೂಡಿಸಲು ಹಾಗೂ ಆತ್ಮರಕ್ಷಣೆಗಾಗಿ ರಾಜ್ಯದಾದ್ಯಂತ 1,80,000 ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ಕಾರ್ಯಕ್ರಮವನ್ನು ನೀಡುವ ಸರ್ಕಾರದ ಮಹಾತ್ಮಕಾಂಕ್ಷೆಯ ಓಬವ್ವ ಆತ್ಮರಕ್ಷಣಾ ಕಲೆ ತರಬೇತಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದರು.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ, ಶಿಕ್ಷಣ ಸಂಸ್ಥೆಗಳ  ಸಂಘದ ಸಹಯೋಗದಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಗಳು ಮತ್ತು ಕ್ರೈಸ್ ವಸತಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಓಬವ್ವ ಆತ್ಮರಕ್ಷಣಾ ಕಲೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿನಿಯರಿಗೆ ಆತ್ಮವಿಶ್ವಾಸ ತುಂಬುವುದು ಈ ತರಬೇತಿ ಕಲಿಕೆಯ ಮೂಲ ಉದ್ದೇಶವಾಗಿದೆ ಎಂದರು.

 ಓಬವ್ವ ಶಕ್ತಿಯ ಪ್ರತೀಕವಾಗಿದ್ದು, ತನ್ನ ನಾಡು-ನುಡಿ ಹಾಗೂ ತನ್ನ ರಕ್ಷಣೆಗಾಗಿ ತ್ಯಾಗ ಮತ್ತು ಶೌರತ್ವವನ್ನು ಮೆರೆದಿದ್ದು, ಈ ಶಕ್ತಿಯ ಧ್ಯೋತಕವಾಗಿ ಕರಾಟೆ ತರಬೇತಿಗೆ ಓಬವ್ವನ ಹೆಸರನ್ನೇ ಇಡಲಾಗಿದೆ. ಕರ್ನಾಟಕ, ಕನ್ನಡಿಗರ ಆಸ್ಮಿತವನ್ನು ಮರುಕಳಿಸಿ ವೈಭವೀಕರಿಸಿ ಮುಂದಿನ ದಿನಗಳಿಗೆ ಕಾಣಿಕೆಯಾಗಿ ನೀಡುವುದೇ ಈ ತರಬೇತಿಯ ಉದ್ದೇಶವಾಗಿದೆ. ಮುಂಬರುವ ದಿನಗಳಲ್ಲಿ ಕೆಳದಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಉತ್ಸವಗಳನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಇವರ ಶೌರ್ಯ, ತ್ಯಾಗಗಳು ನಮಗೆ ಪ್ರೇರಣೆಯಾಗಲಿದೆ ಎಂದರು.

 ಜಿಲ್ಲೆಯಲ್ಲಿ 12 ತರಬೇತಿ ಶಾಲೆಗಳಿದ್ದು, ಅವುಗಳನ್ನು ಮಹಿಳಾ ಆತ್ಮರಕ್ಷಣೆ ಕೋರ್ಸ್ ನೀಡಲು ಬಳಕೆಯಾಗುವಂತೆ ಕ್ರಮಕೈಗೊಳ್ಳಲಾಗುವುದು. ಮಹಿಳಾ ರಕ್ಷಣೆಗಾಗಿ ಸರ್ಕಾರ ವಿವಿಧ ಕಾನೂನು ಜಾರಿ ಮಾಡಿದ್ದರೂ, ಪ್ರತಿಕೂಲ ಪರಿಸ್ಥಿತಿಯಲ್ಲಿ ದೌರ್ಜನ್ಯ ನಡೆಸಿದವರ ವಿರುದ್ಧ ತಮ್ಮ ರಕ್ಷಣೆ ಮಾಡಿಕೊಳ್ಳಲು ಈ ತರಬೇತಿಯು ಹೆಚ್ಚು ಸಹಾಯಕವಾಗುತ್ತದೆ. ಮಹಿಳೆಯರ ಸುರಕ್ಷತೆಗಾಗಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದ್ದು, ಸಮಾಜದಲ್ಲಿ ಅವರ ಆರ್ಥಿಕ, ಸಾಮಾಜಿಕ, ಸ್ವಾಭಿಮಾನದ ಬದುಕು ಉತ್ತಮವಾದರೆ ಸಾಂಸ್ಕೃತಿಕವಾಗಿ ಶ್ರೀಮಂತ ಹಾಗೂ ಸಾಮಾಜಿಕವಾಗಿ ಸುರಕ್ಷಿತವಾಗಿರುತ್ತಾರೆ ಎಂದರು.

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ರವರು ಪ್ರಾಸ್ತವಿಕವಾಗಿ ಮಾತನಾಡಿ ಸಮುದಾಯದ ಅಂಚಿನಲ್ಲಿರುವ ಹೆಣ್ಣುಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢ ಹಾಗೂ ಸಮರ್ಥರಾಗಲು ಪ್ರತಿಕೂಲ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಈ ತರಬೇತಿಯನ್ನು ನೀಡಲಾಗುತ್ತಿದೆ.        ಪ್ರಥಮ ಹಂತದಲ್ಲಿ 1700 ವಸತಿ ಶಾಲೆ ವಿದ್ಯಾರ್ಥಿನಿಯರು ಈ ತರಬೇತಿಯನ್ನು ಪಡೆದಿದ್ದಾರೆ.  ತರಬೇತಿ ಹೊಂದಿ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದ 1000 ಮಹಿಳಾ ತರಬೇತುದಾರರನ್ನು ಆಯ್ಕೆ ಮಾಡಿ ವಿದ್ಯಾರ್ಥಿನಿಯರಿಗೆ ಈ ತರಬೇತಿ ನೀಡಲಾಗುತ್ತಿದೆ. ಫೆಬ್ರವರಿ 07 ರಂದು ರಾಜ್ಯದಾದ್ಯಂತ ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಈ ತರಬೇತಿ ಉದ್ಘಾಟನೆಯಾಗಲಿದೆ ಎಂದರು.

 ಈ ಸಂದರ್ಭದಲ್ಲಿ ನವ್ಯ ಹಾಗೂ ಭವ್ಯವಾದ ತರಬೇತಿಗೆ ಸ್ಫೂರ್ತಿ ತುಂಬುವ ಓಬವ್ವನ ಹೆಸರಿನ ಲಾಂಛನವನ್ನು ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಕುರುಮೇನಹಳ್ಳಿಯ 100 ಜನ ವಿದ್ಯಾರ್ಥಿನಿಯರು ಕರಾಟೆ ಕುರಿತು ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವರಾದ  ಶ್ರೀ ಹಾಲಪ್ಪ ಆಚಾರ್, ಉಪ್ಪಾರ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಗಿರೀಶ್, ವಿಧಾನಪರಿಷತ್ ಸದಸ್ಯರಾದ ಶ್ರೀ ರವಿಕುಮಾರ್, ತುಳಸಿ ಮುನಿರಾಜುಗೌಡ, ವಿಶ್ವಕರ್ಮ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಾಬು ಪತ್ತಾರ್, ಚೆಲುವಾದಿ ನಾರಾಯಣಸ್ವಾಮಿ,  ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ   ಶ್ರೀ ಪಿ.ಕೆ. ಅನಂತಕುಮಾರ್, ಹಿಂದುಳಿದ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ|| ರವಿಕುಮಾರ್ ಸುರಪುರ, ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ರಮೇಶ್ ದೇಸಾಯಿ ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement