ರ‍್ಯಾಪಿಡೋ, ಪೋರ್ಟರ್ ಕಂಪನಿಗಳಿಂದ ಆಟೋ ಚಾಲಕರಿಗೆ ಆಗುತ್ತಿರುವ ತೊಂದರೆಯನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆಬ್ರುವರಿ 17ರಂದು ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಆಮ್ ಆದ್ಮಿ ಪಾರ್ಟಿ ನಿರ್ಧರಿಸಿದೆ.
ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಆಟೋ ಚಾಲಕರ ಘಟಕದ ರಾಜ್ಯ ಅಧ್ಯಕ್ಷರಾದ ಆಯೂಬ್ ಖಾನ್, “ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಮಹಾಮಾರಿಯಿಂದಾಗಿ ಪದೇಪದೇ ಬಂದ ಲಾಕ್‌ಡೌನ್ ಹಾಗೂ ಕರ್ಫ್ಯೂಗಳಿಂದ ಆಟೋ ಚಾಲಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಪರದಾಡುವಂತಾಗಿದೆ. ಗಾಯದ ಮೇಲೆ ಬರೆ ಎಂಬಂತೆ, ಈಗ ರ‍್ಯಾಪಿಡೋ ಬೈಕ್‌ಗಳು ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವುದು ಆಟೋ ಚಾಲಕರಿಗೆ ಶಾಪವಾಗಿ ಪರಿಣಮಿಸಿದೆ. ಸರ್ಕಾರದಿಂದ ಪರವಾನಗಿ ಪಡೆಯದೇ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವ ರ‍್ಯಾಪಿಡೋ ಸೇವೆಗೆ ಕಡಿವಾಣ ಹಾಕಬೇಕು. ಗೂಡ್ಸ್ ಆಟೋಗಳಿಗೆ ತೊಂದರೆ ನೀಡುತ್ತಿರುವ ಪೋರ್ಟರ್ ಕಂಪನಿಯ ಸೇವೆಗೆ ನಿಯಂತ್ರಣ ಹೇರಬೇಕು” ಎಂದು ಆಗ್ರಹಿಸಿದರು.
ಎಎಪಿಯ ಬೆಂಗಳೂರು ನಗರ ಆಟೋ ಚಾಲಕ ಘಟಕದ ಅಧ್ಯಕ್ಷರಾದ ವೆಂಕಟೇಗೌಡ ಮಾತನಾಡಿ, “ಕೋವಿಡ್‌ನಿಂದಾಗಿ ಸುಮಾರು 25,000ಕ್ಕೂ ಹೆಚ್ಚು ಆಟೋ ರಿಕ್ಷಾಗಳಿಗೆ ಎಫ್‌ಸಿ, ರಹದಾರಿ ಮತ್ತು ಇನ್ಶುರೆನ್ಸ್ ಆಗಿಲ್ಲ. ಇದರಿಂದಾಗಿ ಪೊಲೀಸರಿಗೆ ಪದೇಪದೇ ದಂಡ ಕಟ್ಟಬೇಕಾಗಿದೆ. ಸರ್ಕಾರದ ಆದೇಶವಿಲ್ಲದಿದ್ದರೂ, ಫೋರ್ ಸ್ಟ್ರೋಕ್ ಆಟೋಗಳು ಎಲ್‌ಪಿಜಿ ಟ್ಯಾಂಕ್ ಬದಲಾಯಿಸಿಕೊಂಡು ಬಂದರೆ ಮಾತ್ರ ಎಫ್‌ಸಿ ಮಾಡುತ್ತೇವೆ ಎಂದು ಆರ್‌ಟಿಒ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಟ್ಯಾಂಕ್ ಬದಲಾವಣೆಗೆ ಆಟೋ ಚಾಲಕರು 5000 ರೂಪಾಯಿವರೆಗೆ ಖರ್ಚು ಮಾಡಬೇಕಾಗುತ್ತದೆ. ಇವುಗಳಿಗೆಲ್ಲ ಕನಿಷ್ಠ ಒಂದು ವರ್ಷವಾದರೂ ಸಮಯ ನೀಡಬೇಕೆಂದು ಸಾರಿಗೆ ಇಲಾಖೆ ಆಯುಕ್ತರು, ಜಂಟಿ ಆಯುಕ್ತರು, ಅಪರ ಆಯುಕ್ತರು ಹಾಗೂ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ವೆಂಕಟೇಗೌಡ ಬೇಸರ ವ್ಯಕ್ತಪಡಿಸಿದರು.
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಆಟೋ ಘಟಕದ ಪ್ರಧಾನ ಕಾರ್ಯದರ್ಶಿಯಾದ ಉಸ್ಮಾನ್ ಮಾತನಾಡಿ, “ಆಟೋ ರಿಕ್ಷಾ, ಟ್ಯಾಕ್ಸಿ ಮತ್ತು ಗೂಡ್ಸ್ ಚಾಲಕರಿಗೆ ಸರ್ಕಾರದಿಂದ ಯಾವುದೇ ಸವಲತ್ತು ಸಿಗುತ್ತಿಲ್ಲ. ಚಾಲಕರ ಆರೋಗ್ಯ ಹಿತದೃಷ್ಟಿಯಿಂದ ದೆಹಲಿ ಹಾಗೂ ಆಂಧ್ರಪ್ರದೇಶ ಮಾದರಿಯಲ್ಲಿ ಇಎಸ್‌ಐ ಸೌಲಭ್ಯ ನೀಡಬೇಕು. ಸ್ವಂತ ಮನೆಯಿಲ್ಲದ ಬಡ ಆಟೋ ಚಾಲಕರಿಗೆ ಸರ್ಕಾರವು ನಿವೇಶನಗಳನ್ನು ನೀಡಬೇಕು. ಈ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 15ಕ್ಕೂ ಹೆಚ್ಚು ಸಂಘಟನೆಗಳ ಜೊತೆಗೂಡಿ ಆಮ್ ಆದ್ಮಿ ಪಾರ್ಟಿಯ ಆಟೋ ಘಟಕವು ಫೆ. 17ರ ಗುರುವಾರದಂದು ಮೌರ್ಯ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲಿದೆ” ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವಿನೋದ್, ಕರುನಾಡ ಚಾಲಕರ ಹಿತರಕ್ಷಣಾ ಸಮಿತಿಯ ಮೂರ್ತಿ,ನಮ್ಮ ಆಟೋ ಚಾಲಕರ ಸಂಘದ ಚಿಕ್ಕೇಗೌಡ ಕರ್ನಾಟಕ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಹರೀಶ್ ಹಾಗೂ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.
0 Comments