ಉತ್ತರಹಳ್ಳಿಯ ಭುವನೇಶ್ವರಿನಗರದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯ ವಸತಿ ಸಮುಚ್ಚಯಗಳಿಂದ ಸ್ಥಳೀಯರನ್ನು ಒಕ್ಕಲೆಬ್ಬಿಸುತ್ತಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಾರ್ಟಿಯು ಗುರುವಾರ ಪ್ರತಿಭಟನೆ ನಡೆಸಿತು.
ಸ್ಥಳೀಯರನ್ನು ಉದ್ದೇಶಿಸಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ಹಿರಿಯ ಮುಖಂಡರು ಹಾಗೂ ಮಾಜಿ ಶಾಸಕರಾದ ಎಚ್.ಡಿ.ಬಸವರಾಜು, “ವಸತಿ ಹಂಚಿಕೆಗೆ ಸಂಬಂಧಿಸಿ ಕೊಳಚೆ ನಿರ್ಮೂಲನಾ ಮಂಡಳಿಯಲ್ಲಿ ಭಾರೀ ಅಕ್ರಮ ನಡೆದಿದೆ. ಬಿಜೆಪಿ ಶಾಸಕ ಎಂ.ಕೃಷ್ಣಪ್ಪರವರ ಬೆಂಬಲಿಗರು ಹಾಗೂ ಅಕ್ರಮವಾಗಿ ಹಣ ನೀಡಿದವರಿಗೆ ವಸತಿಗಳನ್ನು ಹಂಚಿಕೆ ಮಾಡಲಾಗಿದೆ. ಶಾಸಕರ ಕುತಂತ್ರದಿಂದಾಗಿ ಇಂದು ಇಲ್ಲಿನ ನೂರಾರು ಕುಟುಂಬಗಳು ಬೀದಿ ಪಾಲಾಗುವ ಆತಂಕದಲ್ಲಿವೆ. ಸಾಮಾನ್ಯ ಜನರ ಬಗ್ಗೆ ಕಾಳಜಿಯಿಲ್ಲದ ಭ್ರಷ್ಟನೊಬ್ಬ ಶಾಸಕರಾಗಿರುವುದು ಇಲ್ಲಿನ ಜನರ ದುರಾದೃಷ್ಟ” ಎಂದು ಹೇಳಿದರು.
ಬೆಂಗಳೂರು ನಗರದ ಎಎಪಿ ಅಧ್ಯಕ್ಷರಾದ ಮೋಹನ್ ದಾಸರಿ ಮಾತನಾಡಿ, “ಇಲ್ಲಿ ನೆಲೆಸಿರುವ ಬಡ ಹಾಗೂ ಮಧ್ಯಮ ವರ್ಗದ ಜನರನ್ನು ಒಕ್ಕಲೆಬ್ಬಿಸಲು ಯಾವುದೇ ಕಾರಣಕ್ಕೂ ಆಮ್ ಆದ್ಮಿ ಪಾರ್ಟಿ ಅವಕಾಶ ನೀಡುವುದಿಲ್ಲ. ಸರ್ಕಾರ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಬಲವಂತವಾಗಿ ಒಕ್ಕಲೆಬ್ಬಿಸಲು ಮುಂದಾದರೆ ಪಕ್ಷವು ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಲಿದೆ. ಸರ್ಕಾರ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿಗೆ ಜನರ ಬಗ್ಗೆ ಕಾಳಜಿಯಿದ್ದರೆ, ಅವರನ್ನು ಇಲ್ಲಿಂದ ಹೊರಹಾಕುವ ಬದಲು ಹಕ್ಕುಪತ್ರ ನೀಡಿ ನೆರವಾಗಲಿ. ಹಕ್ಕುಪತ್ರಕ್ಕಾಗಿ ಇಲ್ಲಿನ ಕುಟುಂಬಗಳು ಅನೇಕ ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿರುವುದನ್ನು ತಿಳಿದು ಬೇಸರವಾಗುತ್ತಿದೆ” ಎಂದು ಹೇಳಿದರು.
ಪ್ರತಿಭಟನೆಗೂ ಮುನ್ನ ಸ್ಥಳೀಯರೊಂದಿಗೆ ಚರ್ಚಿಸಿದ ಎಎಪಿ ಮುಖಂಡರು, ಅವರ ಸಮಸ್ಯೆಗಳನ್ನು ಆಲಿಸಿ ಸಾಂತ್ವನ ಹೇಳಿದರು. ಮುಖ್ಯ ಎಂಜಿನಿಯರ್‌ರನ್ನು ತರಾಟೆಗೆ ತೆಗೆದುಕೊಂಡು, ಯಾವುದೇ ಕಾರಣಕ್ಕೂ ಜನರನ್ನು ಒಕ್ಕಲೆಬ್ಬಿಸಬಾರದೆಂದು ಆಗ್ರಹಿಸಿದರು. ಆಮ್ ಆದ್ಮಿ ಪಕ್ಷದ ಮುಖಂಡರಾದ ಜಗದೀಶ್ ವಿ ಸದಂ, ಚನ್ನಪ್ಪ ಗೌಡ, ಮಂಜುನಾಥ್ ಸ್ವಾಮಿ, ವಿಜಯ್ ಶಾಸ್ತ್ರಮಠ್, ಸೀತಾರಾಮ್ ಗುಂಡಪ್ಪ, ಬೋಪಣ್ಣ, ಇಮ್ರಾನ್, ವಿಜಯ್ ಹಾಗೂ ಇನ್ನಿತರೆ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.
0 Comments