ಬೆಂಗಳೂರು: ರಾಜ್ಯ ಬಿಜೆಪಿ ವತಿಯಿಂದ ಜನವರಿ 7, 8 ಮತ್ತು 9 ರಂದು ನಡೆಯಬೇಕಾದ ಚಿಂತನ ವರ್ಗವನ್ನು ಕೋವಿಡ್ ಮೂರನೇ ಅಲೆಯ ತೀವ್ರಗೊಳ್ಳುತ್ತಿರುವ ಕಾರಣ ಮುಂದೂಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಅಲೆ ವೇಗವಾಗಿ ಹರಡುವುದನ್ನು ಗಮನಿಸಿ ರಾಜ್ಯ ಸರ್ಕಾರ ಕೋವಿಡ್‍ನ ನಿಯಂತ್ರಿಸಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಸರ್ಕಾರದ ಸುತ್ತೋಲೆಯನ್ನು ಗೌರವಿಸುವುದು ಮತ್ತು ಸರ್ಕಾರದ ಕಾನೂನು ಪಾಲನೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಚಿಂತನ ಸಭೆಯನ್ನು ಮುಂದೂಡಲಾಗಿದೆ ಎಂದು ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ.
ದೇಶದ ಸಮಗ್ರತೆ, ಏಕತೆಯನ್ನು ಗೌರವಿಸದ ಕಾಂಗ್ರೆಸ್ ಪಕ್ಷ- ಡಾ. ಸಂದೀಪ್ ಕುಮಾರ್ ಟೀಕೆ
ಬೆಂಗಳೂರು: ರಾಷ್ಟ್ರದ ಜನಪ್ರಿಯ ಪ್ರಧಾನಿಗಳಾದ ನರೇಂದ್ರ ಮೋದಿಯವರ ಭದ್ರತೆಯ ವಿಚಾರದಲ್ಲಿ ಪಂಜಾಬಿನ ಕಾಂಗ್ರೆಸ್ ಸರ್ಕಾರ ವಿಫಲವಾಗಿದ್ದು, ಇದು ಕಾಂಗ್ರೆಸ್ ಪಕ್ಷವು ದೇಶದ ಸಮಗ್ರತೆ ಮತ್ತು ಏಕತೆಯನ್ನು ಕಡೆಗಣಿಸುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿ ಎಂದು ರಾಜ್ಯ ಯುವ ಮೋರ್ಚಾ ಅಧ್ಯಕ್ಷರಾದ ಡಾ. ಸಂದೀಪ್ ಕುಮಾರ್ ಅವರು ತಿಳಿಸಿದ್ದಾರೆ.
ಪಂಜಾಬ್ ಸರಕಾರದ ಉದ್ದೇಶಪೂರ್ವಕವಾದ ಈ ರಾಜಕೀಯದ ದುರುದ್ದೇಶದ ಕ್ರಮವನ್ನು ಯುವ ಮೋರ್ಚಾವು ತೀವ್ರವಾಗಿ ಖಂಡಿಸುತ್ತದೆ. ಜಗತ್ತಿನೆಲ್ಲೆಡೆ ಅಭಿಮಾನಕ್ಕೆ ಪಾತ್ರರಾದ ನರೇಂದ್ರ ಮೋದಿ ಅವರ ಪ್ರಾಣಕ್ಕೆ ಸಂಚಕಾರ ತರುವಂತೆ ವರ್ತಿಸಿದ ಪಂಜಾಬ್ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕು. ಹಾಗೂ ಅಲ್ಲಿನ ಮುಖ್ಯಮಂತ್ರಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿಕೊಂಡ ಕಾಂಗ್ರೆಸ್ ಸರ್ಕಾರ ಆತಂಕದ ವಾತಾವರಣವನ್ನು ನಿರ್ಮಿಸಿದೆ. ಇದು ಅತ್ಯಂತ ಕೀಳುಮಟ್ಟದ ರಾಜಕೀಯ ಪ್ರದರ್ಶನವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

0 Comments