ಬೆಂಗಳೂರು: ಮೇಕೆದಾಟು ಯೋಜನೆ ವಿಚಾರದಲ್ಲಿ ಅನಾಹುತ ಮತ್ತು ಅನಪೇಕ್ಷಿತ ವಿಳಂಬಕ್ಕೆ ಹಿಂದಿನ ಕಾಂಗ್ರೆಸ್ ಸರಕಾರದ ನೀರಾವರಿ ಸಚಿವ ಎಂ.ಬಿಪಾಟೀಲರೇ ಕಾರಣ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ, ವಕ್ತಾರ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಈಗ ನೀರಾವರಿ ಸಚಿವರಾಗಿರುವ ಗೋವಿಂದ ಕಾರಜೋಳ ಅವರು ಕಾಂಗ್ರೆಸ್ಸಿಗರಿಂದ ಆಗಿರುವ ಸಮಸ್ಯೆಗಳನ್ನು ಮತ್ತು ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ಜನರ ಮುಂದೆ ಎಳೆಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಇದರಿಂದ ಕುಪಿತಗೊಂಡ ಎಂ.ಬಿ.ಪಾಟೀಲ ಅವರು ಕಾರಜೋಳ ಅವರನ್ನು ನಾಲಾಯಕ್, ಸ್ಟುಪಿಡ್ ಎಂದು ಕೆಟ್ಟಕೆಟ್ಟದಾಗಿ ಬೈದಿದ್ದಾರೆ. ಅವರು ಪರಿಶಿಷ್ಟ ಜಾತಿಯವರು ಎಂಬ ಕಾರಣಕ್ಕೇ ಇಷ್ಟೊಂದು ಕೀಳು ಭಾಷೆಯನ್ನು ಬಳಸಿದ್ದಾರೆ ಎಂದು ಖಂಡಿಸಿದ್ದಾರೆ.
ಬೇರೆ ಯಾರಾದರೂ ಇದ್ದರೆ ಕೀಳು ಭಾಷೆ ಬಳಸುತ್ತಿರಲಿಲ್ಲ. ಇವರ ದಡ್ಡತನಕ್ಕೆ ರಾಜ್ಯ ಉತ್ತರ ಕೊಡಬೇಕಾಗಿದೆ. ತಮ್ಮ ವೈಫಲ್ಯ ಮುಚ್ಚಿಡಲು ಬಿಜೆಪಿಯ ವಿರುದ್ಧ ಟೀಕಿಸುತ್ತಿದ್ದಾರೆ. ಇದು ಅತ್ಯಂತ ಹಾಸ್ಯಾಸ್ಪದ. ಕಾರಜೋಳ ಅವರು ಉತ್ತಮ ಮತ್ತು ದೂರದೃಷ್ಟಿಯ ಸಚಿವರು. ಆದರೆ, ಎಂ.ಬಿ.ಪಾಟೀಲರು ನಾಲಾಯಕ್ ಮಂತ್ರಿಯಾಗಿದ್ದರು ಎಂದು ಟೀಕಿಸಿದ್ದಾರೆ.
ಕಾರಜೋಳ ಅವರು ದಲಿತರಾದರೂ ದೇಶದ ಸಂವಿಧಾನಕರ್ತೃ ಡಾ.ಬಿ.ಆರ್.ಅಂಬೇಡ್ಕರ್, ಜಗಜೀವನರಾಂ, ರಾಂವಿಲಾಸ್ ಪಾಸ್ವಾನ್, ಕರ್ನಾಟಕದ ಬಸವಲಿಂಗಪ್ಪ, ಎನ್.ರಾಚಯ್ಯ, ಬಿ.ರಾಚಯ್ಯ, ಟಿ.ಎನ್.ನರಸಿಂಹಮೂರ್ತಿ ಅವರ ಮಾದರಿಯಲ್ಲೇ ದೂರದೃಷ್ಟಿಯ ರಾಜಕಾರಣಿ. ಅವರ ಕುರಿತು ನೀಚ ಭಾಷೆಯನ್ನು ಬಳಸಿ ಅವರನ್ನು ನಿಂದಿಸಿರುವುದು ದಲಿತ ಸಮುದಾಯಕ್ಕೇ ಮಾಡಿದ ನಿಂದನೆ ಮತ್ತು ಅವಮಾನ ಎಂದು ತಿಳಿಸಿದ್ದಾರೆ.
ಎಂ.ಬಿ.ಪಾಟೀಲರಿಗೆ ಯಾವ ರೀತಿ ನಡೆದುಕೊಳ್ಳಬೇಕೆಂಬ ಸೌಜನ್ಯವೇ ಇಲ್ಲ. ಸಿದ್ದರಾಮಯ್ಯನವರು ದಲಿತರು ಹೊಟ್ಟೆಪಾಡಿನವರು ಎನ್ನುತ್ತಾರೆ. ಅದೇ ಕಾಂಗ್ರೆಸ್ ಪಕ್ಷದ ಎಂ.ಬಿ.ಪಾಟೀಲರು ದಲಿತರನ್ನು ಅಯೋಗ್ಯರು ಎನ್ನುತ್ತಾರೆ. ದಲಿತರು ಕಾಂಗ್ರೆಸ್ ಪಕ್ಷದವರಿಗೆ ಅಯೋಗ್ಯರಾಗಿ ಕಾಣುತ್ತಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಮೇಕೆದಾಟು ಯೋಜನೆ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಸರಕಾರ ಮೊದಲ ಬಾರಿ ಅಧಿಕಾರದಲ್ಲಿ ಇದ್ದಾಗ ಚಾಲನೆಗೆ ಬಂದಿದೆ. ಬಳಿಕ 2014ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಈ ಯೋಜನೆಗೆ ಚಾಲನೆ ಕೊಡಬೇಕಿತ್ತು. ಆದರೆ, ಆಗ ನೀರಾವರಿ ಸಚಿವರಾಗಿದ್ದ ಎಂ.ಬಿ.ಪಾಟೀಲರು ನಿದ್ದೆ ಮಾಡಿದ್ದರಿಂದ ಯೋಜನೆ ವಿಳಂಬವಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿಯವರು ಆಕ್ಷೇಪಿಸಿದ್ದಾರೆ.
ಎಂ.ಬಿ.ಪಾಟೀಲರು ತಕ್ಷಣ ದಲಿತ ಸಮುದಾಯ ಮತ್ತು ರಾಜ್ಯದ ಜನರ ಕ್ಷಮೆ ಕೇಳಬೇಕು. ಇಲ್ಲವಾದರೆ ಅವರ ವಿರುದ್ಧ ರಾಜ್ಯಾದ್ಯಂತ ಹೋರಾಟ ಸಂಘಟಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
0 Comments