ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ತೀವ್ರ ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯ ನಡೆಯನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿಯು ಜ. 29ರಂದು ʻರಸ್ತೆ ಗುಂಡಿಗಳಿಗೆ ರಂಗೋಲಿʼ ಕಾರ್ಯಕ್ರಮ ಹಮ್ಮಿಕೊಂಡಿದೆ.
ಈ ಕುರಿತು ಮಾಹಿತಿ ನೀಡಿದ ಎಎಪಿಯ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, “ರಸ್ತೆ ಗುಂಡಿಗಳಿಗೆ ಸಂಬಂಧಿಸಿ ಹೈಕೋರ್ಟ್ ಪದೇಪದೇ ಬಿಬಿಎಂಪಿ ಹಾಗೂ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ. ಕಳೆದ ಒಂದು ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಜನರು ರಸ್ತೆ ಗುಂಡಿಗಳಿಗೆ ಬಲಿಯಾಗಿದ್ದಾರೆ. ಲೆಕ್ಕವಿಲ್ಲದಷ್ಟು ಅಪಘಾತಗಳು ಸಂಭವಿಸಿವೆ. ಆದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ. ಆದ್ದರಿಂದ ಗುಂಡಿಗಳಲ್ಲಿ ರಂಗೋಲಿ ಬಿಡಿಸಿ ಬೆಂಗಳೂರಿನಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ” ಎಂದು ತಿಳಿಸಿದರು.
“ಪಾಲಿಕೆಯು ಹೈಕೋರ್ಟ್‌ಗೆ ನೀಡಿರುವ ಮಾಹಿತಿಯಲ್ಲೇ ಒಟ್ಟು 482 ಕಿಲೋಮೀಟರ್ ಉದ್ದದ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲಾಗಿಲ್ಲ ಎಂದು ಹೇಳಲಾಗಿದೆ. ವಾಸ್ತವವಾಗಿ ಅದಕ್ಕಿಂತಲೂ ಹೆಚ್ಚಿನ ರಸ್ತೆಗಳಲ್ಲಿ ಯಮಸ್ವರೂಪಿ ಗುಂಡಿಗಳು ಬಾಯ್ದೆರೆದಿವೆ. ಕಳಪೆ ಕಾಮಗಾರಿಯಿಂದಾಗಿ, ದುರಸ್ತಿಪಡಿಸಲಾದ ರಸ್ತೆಗಳಲ್ಲೂ ಮತ್ತೆ ಗುಂಡಿಗಳಾಗಿವೆ. ಹಾಕಲಾಗಿದ್ದ ತೇಪೆಯು ಒಂದೇ ಮಳೆಗೆ ಕಿತ್ತುಹೋಗಿದೆ. ಒಂದೆಡೆ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ರಸ್ತೆ ಕಾಮಗಾರಿ ಹೆಸರಿನಲ್ಲಿ ಸಾವಿರಾರು ಕೋಟಿ ತೆರಿಗೆ ಹಣವು ಜನಪ್ರತಿನಿಧಿಗಳ ಜೇಬು ಸೇರಿದೆ. ಇವೆರಡನ್ನೂ ನೋಡಿ ಎಎಪಿಯು ಸುಮ್ಮನಿರುವ ಪ್ರಶ್ನೆಯೇ ಇಲ್ಲ” ಎಂದು ದರ್ಶನ್ ಜೈನ್ ಹೇಳಿದರು.
“ಜನವರಿ 29ರಂದು ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಹಲವು ವಾರ್ಡ್‌ಗಳಲ್ಲಿ “ರಸ್ತೆ ಗುಂಡಿಗಳಿಗೆ ರಂಗೋಲಿ” ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ಗುಂಡಿಗಳ ಸುತ್ತ ರಂಗೋಲಿ ಬಿಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಲಿದ್ದಾರೆ. ಉತ್ತಮ ರಸ್ತೆಗಳನ್ನು ಪಡೆಯುವುದು ಬೆಂಗಳೂರಿನ ಜನರ ಹಕ್ಕಾಗಿದ್ದು, ಅದು ಸಿಗುವವರೆಗೂ ಒಂದಿಲ್ಲೊಂದು ರೀತಿಯ ಪ್ರತಿಭಟನೆಯನ್ನು ಆಮ್ ಆದ್ಮಿ ಪಾರ್ಟಿ ಮಾಡುತ್ತಲೇ ಇರುತ್ತದೆ” ಎಂದು ದರ್ಶನ್ ಜೈನ್ ಹೇಳಿದರು.
0 Comments